ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?

ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?

ಬರಹ

 ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಇರುವೆಗಳನ್ನು ಅಧ್ಯಯನ ಮಾಡಿದ ಬ್ರಿಸ್ಟೊಲ್ ವಿಶ್ವವಿದ್ಯಾಲಯದ ಸಂಶೋಧಕರು ಅವುಗಳ ವಿಶಿಷ್ಟ ನಡವಳಿಕೆಯನ್ನು ಗಮನಿಸಿದ್ದಾರೆ. ಇರುವೆಗಳು ಗುಂಪಿನಲ್ಲಿ ಸಾಗುವಾಗ, ದಾರಿಯು ಹೊಂಡಗಳಿಂದ ಕೂಡಿದ್ದಾಗ, ಅವುಗಳ ಯಾತ್ರೆಯ ವೇಗ ಕುಸಿಯುವುದು ಸಹಜ ತಾನೇ? ಆಗ ಕೆಲಸಗಾರ ಇರುವೆಗಳು ಅಮೋಘ ಎನ್ನಬಹುದಾದ ನಡವಳಿಕೆ ಪ್ರದರ್ಶಿಸುತ್ತವೆ. ಅವುಗಳು ಈ ಹೊಂಡಗಳಿಗೆ ಇಳಿದು, ಅವನ್ನು ಮುಚ್ಚುವಂತೆ ತಮ್ಮ ಶರೀರವನ್ನು ಮುದ್ದೆ ಮಾಡಿ ಹೊಂಡವನ್ನು ಮುಚ್ಚಿ ಬಿಡುತ್ತವೆ. ಇದರಿಂದ ಅವುಗಳ ಪಟಾಲಂ ಅಡೆ ತಡೆಯಿಲ್ಲದೆ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಹೊಂಡ ದೊಡ್ಡದಿದ್ದರೆ? ಆಗ ಹಲವು ಕೆಲಸಗಾರ ಇರುವೆಗಳು ಸೇರಿ,ಹೊಂಡವನ್ನು ಆಕ್ರಮಿಸಲು ಪ್ರಯತ್ನಿಸುತ್ತವೆ. ಯಾತ್ರೆ ಸಾಗಿದ ಬಳಿಕ, ಈ ಇರುವೆಗಳು ಎದ್ದು ಸಾಲಿನ ಹಿಂದೆ ಸೇರುತ್ತವೆ. ಗುಂಪಿನ ಅನುಕೂಲತೆಗಾಗಿ ಎಂಥಾ ತ್ಯಾಗ!ಮನುಷ್ಯರೂ ಇಂತಹದೇ ತಂತ್ರ ಬಳಸಿ, ರಸ್ತೆ ಹೊಂಡಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬಹುದೇ ಎಂದು ಸಂಶೋಧಕರು ತಲೆಕೆಡಿಸಿ ಕೊಳ್ಳುತ್ತಿರುವ ಪ್ರಶ್ನೆ.

ಮೈಕ್ರೊಸಾಫ್ಟ್‍ನಿಂದ ಮೇಜೆಂಬ ಕಂಪ್ಯೂಟರ್

"ಸರ್ಫೇಸ್" ಎನ್ನುವ ಹೊಸ ಉತ್ಪನ್ನವನ್ನು ಕಂಪ್ಯೂಟರ್ ಪ್ರಪಂಚಕ್ಕೆ ಪರಿಚಯಿಸಲಾಗಿದೆ. ಇದನ್ನು ಮಾಡಿದ್ದು ಮತ್ತ್ಯಾರೋ ಅಲ್ಲ ದಿಗ್ಗಜ ಕಂಪೆನಿ ಮೈಕ್ರೊಸಾಫ್ಟ್. ನೋಡಲು ಮೇಜಿನಂತೆ ಕಾಣಿಸುವ ಸಾಧನ ನಿಜಕ್ಕಾದರೆ ಕಂಪ್ಯೂಟರ್. ಇದರ ಮೇಲ್ಮೈಯೇ ಕಂಪ್ಯೂಟರ್ ತೆರೆ. ಇದರ ಮೇಲೆ ಕೈಯಾಡಿಸಿ, ಕಂಪ್ಯೂಟರ್ ಕೀಲಿ ಮಣೆ ಅಥವಾ ಮೌಸ್ ಕೈಯಾಡಿಸಿ ಮಾಡುವುದನ್ನು ಮಾಡಬಹುದು.ಇದು ಸಾಧ್ಯವಾಗಲು ಕಾರಣ ಇದರ ಮೇಲ್ಮೈ ಸ್ಪರ್ಶ ಸಂವೇದಿಯಾಗಿರುವುದು. ಹತ್ತು ಸಾವಿರ ಡಾಲರು ಬೆಲೆ ಇದಕ್ಕೆ ತೆರಬೇಕಾಗಿ ಬರಬಹುದು. ಮೊದಲಾಗಿ ಇದನ್ನು ಕಾರ್ಪೋರೇಟ್ ಗ್ರಾಹಕರಿಗೆ ಒದಗಿಸುವ ಆಲೋಚನೆ ಕಂಪೆನಿಯದು. ಹೋಟೆಲ್, ಪೋನ್ ಅಂಗಡಿಗಳಿಗೆ ಮತ್ತು ಜೂಜಾಟದ ಅಡ್ಡೆಗಳಿಗೆ ಮಾರಾಟ ಮಾಡಲಾಗುವುದಂತೆ. ಇದರ ಮೇಲೆ ಸೆಲ್‍ಪೋನ್ ಇಟ್ಟರೆ, ಅದರ ನಿಯಂತ್ರಣವೂ ಬೆರಳುಗಳನ್ನು ತೆರೆಯ ಮೇಲೆ ಚಲಿಸುವ ಮೂಲಕ ಸಾಧ್ಯ.ಬಹುಬೆರಳಿನ ಸ್ಪರ್ಶಕ್ಕೂ ಇದು ತೊಂದರೆ ಕೊಡದೆ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ.

ಬಯಸದ ರಾಶಿ ರಾಶಿ ಇ-ಮೇಲ್ ಕಳುಹಿಸಿ ಪೊಲೀಸ್ ಬಲೆಗೆ!

ಜನರು ಸ್ವೀಕರಿಸಲು ಬಯಸದ ಇ-ಮೇಲ್‍ಗಳನ್ನು ರಾಶಿ ರಾಶಿ ಕಳುಹಿಸಿ, ಕಿರಿಕಿರಿ ಮಾಡಿದ ಆರೋಪದಲ್ಲಿ ರಾಬರ್ಟ್ ಅನ್ನುವ ವ್ಯಕ್ತಿಯನ್ನು ವಾಶಿಂಗ್ಟನ್ ಬಳಿ ಬಂಧಿಸಲಾಗಿದೆ. ಅತ ಇತರರ ಗಮನಕ್ಕೆ ಬಾರದಂತೆ, ಅವರುಗಳ ಕಂಪ್ಯೂಟರುಗಳನ್ನು ತನ್ನ ನಿಯಂತ್ರಣಕ್ಕೆ ತಂತ್ರಾಂಶದ ಮೂಲಕ ತೆಗೆದುಕೊಂಡು, ಮಿಲಿಯಗಟ್ಟಲೆ ಇ-ಮೇಲ್‍ಗಳನ್ನು ಕಳುಹಿಸಿ, ತನ್ನ ವ್ಯವಹಾರ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.ಈ ಮೂಲಕ ಆತ ಹತ್ತಿರ ಹತ್ತಿರ ಒಂದು ಲಕ್ಷ ಪೌಂಡು ಹಣ ಗಳಿಸಿದ್ದಾನಂತೆ.ಶಿಕ್ಷೆಯಾದರೆ ಆತನ ಅಪರಾಧಕ್ಕೆ ಗರಿಷ್ಠ ಅರುವತ್ತೈದು ವರ್ಷ ಜೈಲುವಾಸ ಆಗಬಹುದಂತೆ.

 ಅಂತರ್ಜಾಲ ಇಲ್ಲದಾಗಲೂ ಆನ್‍ಲೈನ್ ಅನುಕೂಲ ಪಡೆಯಿರಿ!

 ಇ-ಮೇಲ್, ಕ್ಯಾಲೆಂಡರ್ ಮತ್ತು ಆನ್‍ಲೈನ್ ಪದಸಂಸ್ಕಾರಕ ತಂತ್ರಾಂಶವನ್ನು ಅಂತರ್ಜಾಲ ಸಂಪರ್ಕ ಹೊಂದಿದಾಗಲಷ್ಟೆ ಬಳಸಲು ಸಾಧ್ಯ. ಅದರೆ ಆಫ್‍ಲೈನ್(ಅಂತರ್ಜಾಲಕ್ಕೆ ಸಂಪರ್ಕ ಹೊಂದಿರದಿದ್ದರೆ) ಆ ಸೇವೆಗಳು ಅಲಭ್ಯವಷ್ಟೇ? ಗೂಗಲ್ ಕಂಪೆನಿಯು ಗೂಗಲ್ ಗೇರ್ಸ್ ಎನ್ನುವ ತನ್ನ ಹೊಸ ಸೇವೆಯ ಮೂಲಕ ಈ ಸೇವೆಯಲ್ಲಿನ ನ್ಯೂನ್ಯತೆಯನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ. ಗೂಗಲ್ ಗೇರ್ಸ್ ಎನ್ನುವ ಪ್ಲಗ್-ಇನ್ ತಂತ್ರಾಂಶವನ್ನು ಬ್ರೌಸರ್ ತಂತ್ರಾಂಶದಲ್ಲಿ ಅನುಸ್ಥಾಪಿಸಿದಾಗ, ಅಂತರ್ಜಾಲದಲ್ಲಿ ಇಲ್ಲದ ವೇಳೆಯೂ ನಮ್ಮ ಕಡತಗಳನ್ನು ಪಡೆಯಲು ಸಾಧ್ಯ. ಮತ್ತೆ ಅಂತರ್ಜಾಲಕ್ಕೆ ಸಂಪರ್ಕ ಪಡೆದಾಗ, ಕಡತಗಳಿಗೆ ನಾವು ಮಾಡಿದ ಬದಲಾವಣೆಗಳು ಆನ್‍ಲೈನ್‍ನ ಬಳಕೆದಾರನ ಖಾತೆಯಲ್ಲೂ ಉಳಿದು, ಆನ್‍ಲೈನ್ ಮತ್ತು ಆಫ್‍ಲೈನ್ ನಡುವಿನ ಅಂತರವನ್ನು ಇಲ್ಲವಾಗಿಸುತ್ತದೆ.ಅಂತರ್ಜಾಲ ಪುಟ:http://gears.google.com/

ತೂಕ ಇಳಿಸಲು ಸೆಲ್‍ಪೋನ್ ಸಹಾಯ

ಜಪಾನಿನ ಯುವಕ-ಯುವತಿಯರು ದಢೂತಿಗಳಾಗುತ್ತಿದ್ದಾರಂತೆ. ಅವರ ಕೊಬ್ಬಿನಂಶ ಹೆಚ್ಚಿರುವ ಆಹಾರ ಮತ್ತು ಮಾಂಸಾಹಾರ ಸೇವನೆ ಜತೆಗೆ ಜೀವನ ಶೈಲಿ ಹೀಗಾಗಲು ಕಾರಣವೆನ್ನುವುದು ಸ್ಪಷ್ಟ.ಅಸಾಹಿ ಕಸೀ ಕೊರ್ಪೊರೇಷನ್ ಎನ್ನುವ ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪೆನಿ ಇದಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಇದರಂತೆ ಕಂಪೆನಿಯ ಜತೆ ನೋಂದಾಯಿಸಿಕೊಂಡ ಗ್ರಾಹಕರು ತಮ್ಮ ಊಟದ ಬಟ್ಟಲಿನ ಚಿತ್ರ ಹಿಡಿದು ಕಂಪೆನಿಗೆ ಬಹುಮಾಧ್ಯಮ ಸಂದೇಶ ಸೇವೆ ಮೂಲಕ ಕಳುಹಿಸುತ್ತಾರೆ. ಕಂಪೆನಿಯ ಆಹಾರ ವಿಶ್ಲೇಷಕ ಈ ಚಿತ್ರವನ್ನು ಪರಿಶೀಲಿಸಿ,ಸೂಕ್ತ ಸಲಹೆ ನೀಡಿ, ಅವರ ಆಹಾರ ಅವರ ದೇಹಕ್ಕೆ ಅಗತ್ಯವಾದಷ್ಟೇ ಇರುವಂತೆ ನೋಡಿಕೊಳ್ಳುತ್ತಾನೆ.ಡಿಜಿಟಲ್ ಕ್ಯಾಮರದ ಚಿತ್ರಗಳು ಇದ್ದರೆ ಅವನ್ನು ಅಂತರ್ಜಾಲ ತಾಣಕ್ಕೂ ಇ-ಮೇಲ್ ಮೂಲಕ ಕಳುಹಿಸಬಹುದು.ತಿಂದ ಆಹಾರದ ವಿವರವನ್ನು ಬಾಯ್ದರೆ ನೀಡಿದರೆ ಅಥವಾ ಬರೆದು ನೀಡಿದಾಗ ರೋಗಿಗಳು ಕೆಲವು ಐಟಮ್‍ಗಳನ್ನು ಮರೆಯುವ ಅಥವಾ ಪ್ರಮಾಣದ ಬಗ್ಗೆ ಹುಸಿ ಮಾಹಿತಿ ನೀಡುವ ಸಮಸ್ಯೆ ಇಲ್ಲಿ ಇರದು ಎನ್ನುವುದು ಈ ವಿಧಾನದ ಅನುಕೂಲ.

*ಅಶೋಕ್‍ಕುಮಾರ್ ಎ