ರಾಗಗಳನ್ನೇ ಉಸಿರಾಗಿಸಿಕೊಂಡಿದ್ದ ಪಂಡಿತ್ ರಾಜೀವ್ ತಾರಾನಾಥ್

ರಾಗಗಳನ್ನೇ ಉಸಿರಾಗಿಸಿಕೊಂಡಿದ್ದ ಪಂಡಿತ್ ರಾಜೀವ್ ತಾರಾನಾಥ್

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಇನ್ನಿಲ್ಲವೆಂಬ ಸುದ್ದಿ ತಿಳಿದು ಬಹಳ ನೋವಾಯಿತು. ತಮ್ಮ ಜೀವನ ಪೂರ್ತಿ ಸಂಗೀತದ ರಾಗಗಳನ್ನೇ ಉಸಿರಾಗಿಸಿಕೊಂಡಿದ್ದ ರಾಜೀವ್ ತಾರಾನಾಥ್ ಅವರು ಬದುಕಿನ ಕೊನೆಯ ಕ್ಷಣದವರೆಗೂ ಸಂಗೀತವನ್ನೇ ಧ್ಯಾನಿಸಿದ್ದರು. ಅವರ ನಿಧನ ಸರೋದ್ ವಾದಕರ ನಡುವೆ ಒಂದು ದೊಡ್ಡ ಕುಹರವನ್ನೇ ಉಂಟು ಮಾಡಿದೆ ಎನ್ನ ಬಹುದು. ನೇರ ಹಾಗೂ ನಿಷ್ಟುರವಾದಿಯಾಗಿದ್ದ ರಾಜೀವ್ ತಾರಾನಾಥರು ತಮ್ಮ ಬದುಕಿನ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲೇ ಕಳೆಯಬೇಕಾಗಿ ಬಂದರೂ ಸಂಗೀತವನ್ನೇ ಬದುಕಿನ ಉಸಿರಾಗಿಸಿಕೊಂಡರು. ತಮ್ಮ ಆತ್ಮೀಯರು ಬಂದಾಗ ಅವರಿಗಾಗಿ ಸರೋದ್ ನುಡಿಸಿದರು, ಅವರ ಹಾಡಿಗೆ ಸಾಥ್ ಕೊಟ್ಟರು. ೯೨ರ ಇಳಿ ವಯಸ್ಸಿನಲ್ಲಿ ಆಸ್ಪತ್ರೆಯನ್ನೇ ಸಂಗೀತ ಕಚೇರಿಯ ತಾಣವನ್ನಾಗಿ ಮಾಡಿದ್ದು ಅವರಿಗೆ ಸಂಗೀತದ ಮೇಲೆ ಇದ್ದ ಅಪ್ರತಿಮ ಪ್ರೀತಿ. ವಿಶ್ವದಾದ್ಯಂತ ಶಿಷ್ಯ ವೃಂದ ಹಾಗೂ ಸಂಗೀತ ಪ್ರೇಮಿಗಳನ್ನು ಹೊಂದಿದ್ದ ರಾಜೀವ್ ತಾರಾನಾಥ್ ಅವರು ಕರ್ನಾಟಕದವರೆಂಬುದು ನಮಗೆ ಹೆಮ್ಮೆಯ ಸಂಗತಿ.

ಅಕ್ಟೋಬರ್ ೧೭, ೧೯೩೨ರಂದು ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿರುವ ಪ್ರೇಮಾತನಯ ಆಶ್ರಮದಲ್ಲಿ ರಾಜೀವ್ ತಾರಾನಾಥ್ ಅವರು ಜನಿಸಿದರು. ಸಂಗೀತದ ಪ್ರಾಥಮಿಕ ಪಾಠಗಳನ್ನು ರಾಜೀವ್ ಅವರು ತಮ್ಮ ತಂದೆ ತಾರಾನಾಥ್ ಬಳಿಯೇ ಕಲಿತುಕೊಂಡರು. ತಾರಾನಾಥ್ ಅವರೂ ಉತ್ತಮ ಸರೋದ್ ವಾದಕರಾಗಿದ್ದರು. ಕೇವಲ ಒಂಬತ್ತನೇ ವಯಸ್ಸಿನಲ್ಲೇ ಸಂಗೀತ ಕಚೇರಿ ನಡೆಸಿ ಸೈ ಅನಿಸಿಕೊಂಡಿದ್ದರು ರಾಜೀವ್. ಇಪ್ಪತ್ತರ ಹರೆಯದಲ್ಲಿ ಇವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡುವ ಮೂಲಕ ಉತ್ತಮ ಸಂಗೀತಕಾರರಾಗಿ ಗುರುತಿಸಿಕೊಂಡರು. ಆ ಸಮಯದಲ್ಲಿ ರಾಜೀವ್ ಅವರು ನಿಯಮಿತವಾಗಿ ಆಕಾಶವಾಣಿಯಲ್ಲಿ ಹಾಡುತ್ತಿದ್ದರು. 

ರಾಜೀವ್ ತಾರಾನಾಥ್ ಅವರು ಕೇವಲ ಸಂಗೀತದಲ್ಲಿ ಮಾತ್ರವಲ್ಲದೇ ಕಲಿಕೆಯಲ್ಲೂ ಮುಂದಿದ್ದರು. ಅವರು ಸಾಹಿತ್ಯದಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆದಿದ್ದರು. ಸಂಗೀತದ ಮೇಲಿನ ಪ್ರೀತಿಗಾಗಿ ಅವರು ತಮ್ಮ ಇಂಗ್ಲೀಷ್ ಪ್ರಾಧ್ಯಾಪಕ ಹುದ್ದೆಯನ್ನೂ ತ್ಯಜಿಸಿದರು. ಆ ಬಳಿಕ ಸಂಗೀತವನ್ನೇ ಜೀವವನ್ನಾಗಿಸಿದ ಅವರು ಅಧಿಕ ಜ್ಞಾನ ಸಂಪಾದನೆಗಾಗಿ ಕಲ್ಕತ್ತಾಗೆ ತೆರಳಿ ಅಲ್ಲಿ ಖ್ಯಾತ ಕಲಾವಿದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಶಿಷ್ಯರಾದರು. ಈ ಗುರು ಶಿಷ್ಯರ ಜುಗಲ್ ಬಂದಿ ೨೦೦೯ರಲ್ಲಿ ಅಲಿ ಅಕ್ಬರ್ ಖಾನ್ ನಿಧನರಾಗುವ ತನಕ ಮುಂದುವರಿದಿತ್ತು ಎಂದರೆ ಅವರಿಬ್ಬರು ಎಷ್ಟೊಂದು ಉತ್ತಮ ತಾಳಮೇಳವನ್ನು ಹೊಂದಿದ್ದರು ಎಂದು ಅರ್ಥವಾಗುತ್ತದೆ. ರಾಜೀವ್ ತಾರಾನಾಥ್ ಅವರು ಪಂಡಿತ್ ರವಿಶಂಕರ್, ಅನ್ನಪೂರ್ಣಾ ದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನ್ ಅವರ ಮಾರ್ಗದರ್ಶನವನ್ನೂ ಕಾಲಕಾಲಕ್ಕೆ ಪಡೆದುಕೊಂಡಿದ್ದರು. 

೧೯೯೫ರಿಂದ ೨೦೦೫ರ ತನಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕಲಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಮೈಸೂರಿಗೆ ಹಿಂದಿರುಗಿದ ರಾಜೀವ್ ತಾರಾನಾಥ್ ಅವರು ನಮ್ಮ ಸಂಗೀತ ಜ್ಞಾನವನ್ನು ಹಲವಾರು ಶಿಷ್ಯಂದಿರಿಗೆ ದಾನ ಮಾಡಿದರು. ದೇಶ ವಿದೇಶಗಳಲ್ಲಿ ರಾಜೀವ್ ಅವರು ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಯೆಮನ್, ಅಮೇರಿಕ, ಯುರೋಪ್, ಕೆನಡಾ ಮುಂತಾದೆಡೆ ಅವರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂಗೀತ ಕಚೇರಿಗಳು ಮಾತ್ರವಲ್ಲದೇ ಹಲವಾರು ಚಲನ ಚಿತ್ರಗಳಿಗೂ ಇವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಶೃಂಗಾರ ಮಾಸ, ಪೇಪರ್ ಬೋಟ್, ಸಂಸ್ಕಾರ, ಪಲ್ಲವಿ, ಅನುರೂಪ ಮೊದಲಾದ ಕನ್ನಡ ಚಿತ್ರಗಳ ಜೊತೆ, ಮಲಯಾಳಂ ನ ಸೀತಾ ಮತ್ತು ಕಟವ್ ಚಿತ್ರಗಳಿಗೆ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ. 

ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಕಾರ್ ಡ್ರೈವಿಂಗ್ ಎಂದರೆ ಬಹಳ ಇಷ್ಟ. ಬೆಂಗಳೂರು ಬೆಳೆದಂತೆ ಟ್ರಾಫಿಕ್ ಕಿರಿಕಿರಿಗೆ ಅಂಜಿ ತಮ್ಮ ಡ್ರೈವಿಂಗ್ ಪ್ರೇಮವನ್ನು ಕಡಿಮೆ ಮಾಡಿಕೊಂಡಿದ್ದರು. ಬೆಂಗಳೂರಿನ ಟ್ರಾಫಿಕ್ ಜಾಮ್ ಗೆ ಬೇಸರಗೊಂಡು ಅವರು ತಮ್ಮ ಮನೆಯನ್ನು ಮೈಸೂರಿಗೆ ಬದಲಾಯಿಸಿದ್ದರು. ಮೈಸೂರಿನ ಪ್ರಶಾಂತ ಮತ್ತು ಶಾಂತ ವಾತಾವರಣ ಅವರಿಗೆ ಬಹಳ ಖುಷಿ ನೀಡುತ್ತಿತ್ತು. ಇವರು ತಮ್ಮ ಸಂಗೀತ ಪ್ರೀತಿಗಾಗಿ ಕನಿಷ್ಟ ೧೮ ಕೆಲಸಗಳನ್ನು ಬಿಟ್ಟು ಬಿಟ್ಟಿದ್ದರು. ಆಸ್ಟ್ರೇಲಿಯಾದ ಸಿಡ್ನಿ ಒಪೆರಾ ಹೌಸ್ ನಲ್ಲಿ ಸಂಗೀತ ಪ್ರದರ್ಶನ ನೀಡಿದ ಮೊದಲ ಭಾರತೀಯ ರಾಜೀವ್ ತಾರಾನಾಥ್. ತಮ್ಮ ೯೦ರ ಇಳಿ ವಯಸ್ಸಿನಲ್ಲೂ ನಿತ್ಯ ಬೆಳಿಗ್ಗೆ ಸಂಗೀತ ಅಭ್ಯಾಸ ಮಾಡುತ್ತಿದ್ದರು. ಯಾವುದೇ ವಿರಾಮ ತೆಗೆದುಕೊಳ್ಳದೇ ಸುಮಾರು ೮ ಗಂಟೆ ಸರೋದ್ ನಡೆಸುತ್ತಿದ್ದರು. ಕಳೆದ ವರ್ಷ ತಮ್ಮ ೯೧ನೇ ವಯಸ್ಸಿನಲ್ಲಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಅರಮನೆ ಮುಂಭಾಗದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮ ನೀಡಲು ಇಬ್ಬರು ವ್ಯಕ್ತಿಗಳು ಕಮೀಷನ್ ಕೇಳಿದ್ದರು ಎಂದು ರಾಜೀವ್ ತಾರಾನಾಥ್ ಅವರು ನೇರವಾಗಿ ಆರೋಪ ಮಾಡಿದ್ದರು. ತಮಗೆ ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳುವ ನಿಷ್ಟುರತನವನ್ನು ಹೊಂದಿದ್ದರು. ಈ ಕಾರಣಕ್ಕಾಗಿ ಕೆಲವು ಮಂದಿಗೆ ಇವರು ಇಷ್ಟವಾಗದಿದ್ದರೂ ಬಹಳಷ್ಟು ಮಂದಿ ಇವರ ನೇರ ನುಡಿಗಳನ್ನು ಮೆಚ್ಚಿಕೊಂಡಿದ್ದರು. ಪಂಡಿತ್ ರಾಜೀವ್ ತಾರಾನಾಥ್ ಅವರು ಸುಮಾರು ಎಂಟು ಭಾಷೆಗಳನ್ನು ಬಲ್ಲವರಾಗಿದ್ದರು. ತಮ್ಮ ೯೨ರ ವಯಸ್ಸಿನಲ್ಲೂ ಯಾವುದೇ ರಾಗಕ್ಕೆ ಭಂಗಬಾರದ ರೀತಿಯಲ್ಲಿ ಸರೋದ್ ನುಡಿಸುತ್ತಿದ್ದರು.

ರಾಜೀವ್ ತಾರಾನಾಥರು ಆಸ್ಪತ್ರೆಯಲ್ಲಿದ್ದಾಗ ನಡೆದ ಘಟನೆಯಿದು. ಅವರನ್ನು ಕಾಣಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಅವರು ಬಂದಿದ್ದರು. ಆಗ ರಾಜೀವ್ ತಾರಾನಾಥ್ ಅವರು ದರ್ಬಾರಿ ಕಾನಡ ರಾಗವನ್ನು ಹಾಡಿ ಖುಷಿಪಟ್ಟಿದ್ದರು. “ಸಂಗೀತದ ಸಲುವಾಗಿ ನೀವು ಇನ್ನೂ ೧೦೧ ವರ್ಷ ಬದುಕ ಬೇಕ್ರಿ" ಎಂದು ವೆಂಕಟೇಶ ಕುಮಾರ್ ಹಾರೈಸಿದ್ದರು. ಆಸ್ಪತ್ರೆಯನ್ನೇ ಸಂಗೀತ ಕಚೇರಿಯನ್ನಾಗಿಸಿಕೊಂಡಿದ್ದ ರಾಜೀವ್ ತಾರಾನಾಥರು ಸಂಗೀತ ವಿದ್ವಾಂಸರು ತಮ್ಮನ್ನು ನೋಡಲು ಬಂದರೆ ಹಾಡುವಂತೆ ವಿನಂತಿಸಿಕೊಳ್ಳುತ್ತಿದರಂತೆ. ಅವರ ಜೊತೆ ಹಾಡನ್ನೂ ಹಾಡುತ್ತಿದ್ದರು. ಜೀವನ ಪೂರ್ತಿ ಸಂಗೀತ, ರಾಗಗಳಲ್ಲೇ ಬದುಕಿದ ರಾಜೀವ ತಾರಾನಾಥರು ತಮ್ಮ ಬದುಕಿನ ಕೊನೆಯ ಕ್ಷಣದವರೆಗೆ ಅವುಗಳನ್ನು ಮನಸಾರೆ ಪ್ರೀತಿಸಿದರು. ಪಂಡಿತ್ ರಾಜೀವ್ ತಾರಾನಾಥರು ತಮ್ಮ ಬದುಕಿನ ರಾಗವನ್ನು ಜೂನ್ ೧೧, ೨೦೨೪ರಲ್ಲಿ ನಿಲ್ಲಿಸಿ ಗಾನಸುಧೆಯಲ್ಲಿ ಲೀನರಾದರು.

ಪ್ರಶಸ್ತಿ ಮತ್ತು ಗೌರವಗಳು: ೧೯೯೩ರಲ್ಲಿ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೯೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೮ರಲ್ಲಿ ಸಂಗೀತ ರತ್ನ ಮೈಸೂರು ಟಿ ಚೌಡಯ್ಯ ಸ್ಮಾರಕ ಪ್ರಶಸ್ತಿ, ೧೯೯೯ರಲ್ಲಿ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ೨೦೦೬ರಲ್ಲಿ ಕೆಂಪೇಗೌಡ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ, ೨೦೧೯ರಲ್ಲಿ ಪದ್ಮಶ್ರೀ ಪ್ರಶಸ್ತಿ, ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ಗೌರವಗಳು ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ದೊರೆತಿದೆ.

(ಮಾಹಿತಿ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ