ರಾಜಕೀಯ ಅನಿಶ್ಚಿತತೆಗೆ ಯಾರು ಹೊಣೆ?
ರಾಜ್ಯದಲ್ಲಿ ಇದೀಗ ಮತದಾರ ‘ಪಕ್ಷ ಹಾಗೂ ವ್ಯಕ್ತಿ' ಯ ಆಯ್ಕೆ ಗೊಂದಲದಲ್ಲಿದ್ದಾನೆ. ರಾಷ್ಟ್ರದ ವಿಚಾರ ಬಂದಾಗ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತದಾರನ ಆಯ್ಕೆಯಾಗುತ್ತಿರುವುದಕ್ಕೆ ಕಾರಣ ‘ಮತ್ತೊಮ್ಮೆ ಮೋದಿ' ಎಂಬುದು. ಆದರೆ, ವಿಧಾನಸಭೆ ಚುನಾವಣೆಯ ವಿಚಾರ ಬಂದಾಗ ಕ್ಷೇತ್ರದಲ್ಲಿನ ಅಭ್ಯರ್ಥಿಯೇ ಇಂದಿಗೂ ಮುಖ್ಯವಾಗುತ್ತಿದ್ದಾನೆ. ಈ ಕಾರಣಕ್ಕೇ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಾವುದೇ ಪಕ್ಷ ಸಫಲವಾಗುತ್ತಿಲ್ಲ. ಕಳೆದೆರಡು ದಶಕಗಳಿಂದಲೂ ಸಿದ್ಧರಾಮಯ್ಯ ಸರಕಾರವನ್ನು ಹೊರತುಪಡಿಸಿ ರಾಜ್ಯ, ರಾಜಕೀಯ ಅನಿಶ್ಚಿತತೆ ಕಂಡದ್ದೇ ಹೆಚ್ಚು. ಇದಕ್ಕೆ ರಾಜ್ಯದಲ್ಲಿ ಸ್ಪಷ್ಟ ನಾಯಕತ್ವದ ಕೊರತೆ. ಇಂಥವರೇ ಮುಂದಿನ ಮುಖ್ಯಮಂತ್ರಿ ಎಂಬುದನ್ನು ಪ್ರಕಟಿಸಲಾರದ ಮನೋಭಾವದಲ್ಲಿ ಪಕ್ಷಗಳು ಇರುವುದೇ ಕಾರಣ. ಈ ಹಿನ್ನಲೆಯಲ್ಲಿ ಮತದಾರ ಮತ್ತೆ ಗೊಂದಲದಲ್ಲಿದ್ದಾನೆ. ಪಕ್ಷ ರಾಜಕೀಯ ಮೇಲಾಟದಲ್ಲಿ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ ಸೇರಿದಂತೆ ರಾಜಕಾರಣದ ದೃಷ್ಟಿಯಿಂದ ಅತ್ಯಂತ ಮಹತ್ವದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪಕ್ಷ ಬದಲಿಸಿಬಿಟ್ಟಿದ್ದಾರೆ. ಇವತ್ತಿನ ಸನ್ನಿವೇಶದಲ್ಲಿ ಸಿದ್ಧಾಂತ-ಪಕ್ಷಗಳನ್ನೂ ಮೀರಿ ಅಧಿಕಾರವೇ ಮುಖ್ಯವಾಗಿರುವುದರಿಂದ ಹಾಗೂ ಚುನಾವಣೆ ಸಂದರ್ಭದಲ್ಲಿ ಸಹಜ ಧ್ರುವೀಕರಣದ ಹಿನ್ನಲೆಯಲ್ಲಿ ಪಕ್ಷಾಂತರಗಳು ಅಪರಾಧ ಎನಿಸಿಕೊಳ್ಳುವುದಿಲ್ಲ. ಆದರೆ ಇಂಥವುಗಳ ನೇರ ಪರಿಣಾಮ ಆಗುವುದು ಕಾರ್ಯಕರ್ತರು ಹಾಗೂ ಬಹು ವರ್ಷಗಳಿಂದ ಆಯ್ಕೆ ಮಾಡಿಕೊಂಡು ಬಂದಿದ್ದ ಮತದಾರರ ಮೇಲೆ. ಇದೀಗ ೧೯೯೪ರಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶೆಟ್ಟರ್ ಗೆ ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ಸವಾಲು, ಪ್ರತಿಷ್ಟೆ ಎದುರು ನಿಂತಿದೆ. ಹೀಗಾಗಿ ಬಿಜೆಪಿಯ ಪ್ರಬಲ ಸಂಘಟನಾ ಶಕ್ತಿ ಮತ್ತು ಶೆಟ್ಟರ್ ಅವರ ವೈಯಕ್ತಿಕ ರಾಜಕೀಯ ಪ್ರಭಾವದ ನಡುವಿನಲ್ಲಿ ಮತದಾರರಿಗೆ ಯಾವುದನ್ನು ಬೆಂಬಲಿಸಬೇಕೆಂಬುದೇ ಸ್ಪಷ್ಟವಾಗುತ್ತಿಲ್ಲ. ಶೆಟ್ಟರ್ ಬಿಜೆಪಿ ತೊರೆದುದನ್ನು ಎಲ್ಲರೂ ಒಪ್ಪಿಕೊಳ್ಳದಿದ್ದರೂ ತಮ್ಮ ನಾಯಕನೊಂದಿಗಿನ ಸಂಬಂಧವನ್ನು ಮುರಿಯುವುದೂ ಅವರಿಗೆ ಸುಲಭವಲ್ಲ. ಇಂಥದ್ದೇ ಗೊಂದಲ ರಾಜ್ಯಾದ್ಯಂತ ಹಲವು ಕ್ಷೇತ್ರಗಳಲ್ಲಿದೆ. ಹೀಗಾಗಿ ನಾಯಕರು ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸುವ ಮೊದಲು ಮತದಾರರನ್ನು ಗಮನದಲ್ಲಿಟ್ಟುಕೊಳ್ಳುವ ಪ್ರಭುದ್ಧತೆ, ವಿವೇಚನೆ ಬಳಸದಿದ್ದಲ್ಲಿ ರಾಜಕೀಯ ಅನಿಶ್ಚಿತತೆ ರಾಜ್ಯಕ್ಕೆ ತಪ್ಪಿದ್ದಲ್ಲ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ೨೮-೦೪-೨೦೨೩