ರಾಜಕೀಯ ಮಿಸಳಭಾಜಿ
* ಕಾಲುಕುಪ್ಪಸದವರು ಮೇಲೆ ಟೊಪ್ಪಿಗೆಯವರು
ಬಾಲೆಯರ ಮುಖದ ಕಪಿಗಳು ಶ್ರೀರಂಗವ
ಆಳಹೋದಾರು ಸರ್ವಜ್ಞ
- ಡೊಳ್ಳುಹೊಟ್ಟೆಯ ಜನರು ಕಳ್ಳಜೇಬಿನ ಖಳರು
ಸುಳ್ಳುಹೇಳುವ ಮಂದಿ ಆಳಿ ಈ ದೇಶವನು
ಕೊಳ್ಳೆಹೊಡೆಯುವರು ಸರ್ವಘ್ನ
* ಕೇಳುವವರಿದ್ದರೇ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
ಹೇಳಿ ಫಲವೇನು ಸರ್ವಜ್ಞ
- ಹೇಳುವುದು ಯಾರು ಈ ನೀಚರಿಗೆ ಬುದ್ಧಿಯನು
ಕೇಳುವರೆ ಇವರು ಪ್ರಜೆ ಹೇಳ್ವ ಬುದ್ಧಿಯನು
ಖೂಳರಿವರಯ್ಯ ಸರ್ವಘ್ನ
* ಬೇವಿನ ಬೀಜವ ಬಿತ್ತಿ
ಬೆಲ್ಲದ ಕಟ್ಟೆಯ ಕಟ್ಟಿ
ಆಕಳ ಹಾಲನೆರೆದು
ಜೇನುತುಪ್ಪವ ಹೊಯ್ದಡೆ
ಸಿಹಿಯಾಗಬಲ್ಲುದೆ,
ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡೆ
ನುಡಿಯಲಾಗದು ಕೂಡಲ ಸಂಗಮದೇವಾ
- ನೀಚರು ಕಣಕ್ಕಿಳಿದು
ಸಾಚಾ ಪೋಸು ಕೊಟ್ಟು
ವಾಚಾಳಿತನ ತೋರಿ
ದೋಚಿ ಮತಗಳ ಗೆದ್ದಡೆ
ಒಳ್ಳಿತಾಗಬಲ್ಲುದೆ,
ಕೆಡುಕಾಗ್ವುದಲ್ಲದೆ?
ಆತ್ಮಶುದ್ಧಿಯಿಲ್ಲದವರ ಕೈಗೆ
ಆಡಳಿತ ಸಲ್ಲದು ಆನಂದರಾಮದೇವಾ
* ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ
ನುಡಿಸಲು ಬಾರದು ನೋಡಯ್ಯಾ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ ಕೂಡಲ ಸಂಗಮದೇವಾ
- ರೋಗ ಹಿಡಿದವರ ಸರಿಪಡಿಸಬಹುದು
ಚಟ ಹತ್ತಿದವರ ಸರಿಪಡಿಸಬಹುದು
ಭೋಗಲಾಲಸೆಗಿಳಿದವರ
ಸರಿಪಡಿಸಲಾಗದು ನೋಡಯ್ಯಾ
ಸೋಲೆಂಬ ಫಲಿತಾಂಶ ಸಿಗಲು
ಒಡನೆ ತಣ್ಣಗಾಗುವರಯ್ಯಾ ಆನಂದರಾಮದೇವಾ
* ಉರಿಗಂಜೆ ಸಿರಿಗಂಜೆ ಶರೀರದ ಭಯಕಂಜೆ
ಪರಧನ ಪರಸತಿ ಎರಡಕ್ಕಂಜುವೆನಯ್ಯ
ಹಿಂದೆ ಮಾಡಿದ ರಾವಣನೇನಾಗಿ ಪೋದನು
ಮುಂದೆನ್ನ ಸಲಹಯ್ಯ ಪುರಂದರ ವಿಠಲ
- ಮಾನಕ್ಕಂಜೆವು ಮರ್ಯಾದೆಗಂಜೆವು
ಶಾಸ್ತ್ರಿಯಂಥವರ ಮಾತಿಗಂಜುವೆವೇನಯ್ಯ?
ಹಿಂದೆ ಮಾಡಿಕೊಂಡವರಿಹರು ಲೇಸಾಗಿ ಕಾಸು
ಮುಂದೆ ಮಂತ್ರಿಗಳಾಗಿ ನಾವೂ ಜೈ ವಿಠಲ
* ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ
ಜೀವಕ್ಕೆ ಎಂದಿಗೂ ತನುಗಳ ಕೊರತಿಲ್ಲ
ಸಾವು ಹುಟ್ಟು ಎಂಬೊ ಸಹಜ ಲೋಕದೊಳಗೆ
ಕಾಲಕಾಲದಿ ಹರಿ ಕಲ್ಯಾಣ ಗುಣಗಳ
ಕೇಳದವನ ಜನ್ಮ ವ್ಯರ್ಥ ಪುರಂದರ ವಿಠಲ
- ಅಧಿಕಾರ ಇದ್ದರೆ ಗಳಿಕೆಗೆ ಕೊರತಿಲ್ಲ
ಮದವೇರಿದಂತಹ ಭೋಗಕ್ಕು ಕೊರತಿಲ್ಲ
ಅದಕೆಂದೆ ಮಂತ್ರಿಗಿರಿ ಕೇಳುವುದು ನಾವೆಲ್ಲ
ಇದ ಕಂಡು ಶಾಸ್ತ್ರಿಯಂಥವರು ಟೀಕಿಸಿದಾಗ
ಕದ ಹಾಕಿಕೊಂಡು ಕೂರುವರು ನಾವಲ್ಲ
* ಸಾಧು ಸಜ್ಜನ ಸತ್ಯಕಿದಿರುಂಟೆ?
ಆದಿಕೇಶವನ ಹೋಲುವ ದೈವವುಂಟೆ?
- ಶಾಸಕರ ಕುಟಿಲ ಆಟಕೆಣೆಯುಂಟೆ?
ಶಾಸ್ತ್ರಿಯಾ ಕೂರಂಬು ಸಹಿಸಲಿಕ್ಕುಂಟೆ?
* ಆವ ಬಲವಿದ್ದರೇನು ದೈವಬಲವಿಲ್ಲದವಗೆ
ಶ್ರೀ ವಾಸುದೇವನ ಬಲ ನಿಜವಾಗಿ ಇಲ್ಲದನಕ.
ದೇಶದಧಿಕ ಕಾಗಿನೆಲೆಯಾದಿಕೇಶವನ
ಲೇಸಾದ ಚರಣಕಮಲದ ಬಲವು ಇಲ್ಲದನಕ.
- ಆವ ಬಲವಿದ್ದರೇನು ಜನಬಲವಿಲ್ಲದವಗೆ
ಶ್ರೀಸಾಮಾನ್ಯರೊಲವಿನ ಬಲ ಇಲ್ಲದನಕ.
ಶಾಸಕನಾದರೇನು, ಶಾಸ್ತ್ರಿಯಂಥವರಿಂದ
ಲೇಸಾದ ಮಾತುಗಳ ಬಲ ಇಲ್ಲದನಕ.
(ಪ್ರಿಯ ಸಂಪದಿಗ ಮಿತ್ರರೇ, ಇನ್ನು ಕೊಂಚ ಕಾಲ ನಾನು ಅನ್ಯತ್ರ ಬ್ಯುಸಿ.)