ರಾಜಕುಮಾರ್ ರ ಚಿತ್ರವೊಂದು ಅರ್ಧಕ್ಕೇ ನಿಂತು ಹೋಗಿತ್ತು !

ರಾಜಕುಮಾರ್ ರ ಚಿತ್ರವೊಂದು ಅರ್ಧಕ್ಕೇ ನಿಂತು ಹೋಗಿತ್ತು !

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಡಾ. ರಾಜಕುಮಾರ್ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ರಾಜಕುಮಾರ್ ಅವರ ಚಲನಚಿತ್ರವೊಂದರ ಚಿತ್ರೀಕರಣ ಆರ್ಥಿಕ ಸಂಕಷ್ಟದ ಕಾರಣ ಅರ್ಧದಲ್ಲೇ ನಿಂತು ಹೋದ ಅಪರೂಪದ ಸಂಗತಿ ನಿಮಗೆ ಗೊತ್ತೇ? ಇಲ್ಲವಾದಲ್ಲಿ ಈ ಲೇಖನವನ್ನು ಅವಶ್ಯ ಓದಿ. ಚಿತ್ರೀಕರಣ ಅರ್ಧದಲ್ಲಿ ನಿಂತರೂ, ನಂತರ ಆರಂಭವಾಗಿ ಈ ಚಿತ್ರವು ಜಯಭೇರಿ ಬಾರಿಸಿದ್ದು ಈಗ ಇತಿಹಾಸ. 

ಈ ಚಿತ್ರದ ತಾರಾಗಣದಲ್ಲಿ ಇದ್ದವರೂ ಖ್ಯಾತನಾಮರೇ, ರಾಜ್ ಜೊತೆ ಭಾರತಿ, ದ್ವಾರಕೀಶ್, ಬಿ ವಿ ರಾಧಾ, ಎಂ ಪಿ ಶಂಕರ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ರಾಜಾನಂದ ಮೊದಲಾದವರು. ರಾಜನ್ ನಾಗೇಂದ್ರ ಸಂಗೀತ, ಸಿದ್ದಲಿಂಗಯ್ಯನವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಎಚ್ ಆರ್ ಭಾರ್ಗವ ಅವರು ಸಹ ನಿರ್ದೇಶಕರಾಗಿದ್ದರು. ಈ ಚಿತ್ರದ ಚಿತ್ರೀಕರಣ ಅರ್ಧಕ್ಕೇ ನಿಂತು ಹೋಗಲು ಪ್ರಮುಖ ಕಾರಣವೆಂದರೆ ಹಣದ ಕೊರತೆ. ಇದಕ್ಕೆ ಕಾರಣ ಇದರ ನಿರ್ಮಾಪಕರು. ಈ ಚಿತ್ರದ ನಿರ್ಮಾಪಕರು ಯಾರು ಗೊತ್ತೇ? ‘ಪ್ರಚಂಡ ಕುಳ್ಳ' ಎಂದು ಹೆಸರುವಾಸಿಯಾಗಿದ್ದ ದ್ವಾರಕೀಶ್ ಅವರು. 

ಈ ಚಿತ್ರ ಯಾವುದು ಎಂದರೆ ನಿಮಗೆ ಅಚ್ಚರಿಯಾಗಬಹುದು. ೧೯೬೯ರಲ್ಲಿ ತೆರೆಕಂಡ ಈ ಚಲನಚಿತ್ರದ ಹೆಸರು ‘ಮೇಯರ್ ಮುತ್ತಣ್ಣ', ಹಳ್ಳಿಯಿಂದ ಬೆಂಗಳೂರು ನಗರಕ್ಕೆ ಬರುವ ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಕಳಕಳಿ ಹಾಗೂ ಪ್ರೀತ್ಯಾದರಗಳಿಂದ ಜನರ ಮನಸ್ಸನ್ನು ಗೆದ್ದು ನಗರದ ಮೊದಲ ಪ್ರಜೆ (ಮೇಯರ್) ಹುದ್ದೆಯನ್ನು ಅಲಂಕರಿಸುವ ಒಂದು ಸುಂದರ ಚಿತ್ರವಿದು. ರಾಜಕುಮಾರ್ ಅವರು ಹಳ್ಳಿಯ ವ್ಯಕ್ತಿಯಾಗಿ ನಂತರ ಮೇಯರ್ ಆಗಿ ನಟಿಸಿದ ಅಭಿನಯಕ್ಕೆ ನೂರಕ್ಕೆ ನೂರು ಅಂಕ ನೀಡಬಹುದು. ಅಷ್ಟು ಸೊಗಸಾದ ಅಭಿನಯ. ಇದರೊಂದಿಗೆ ಭಾರತಿ, ದ್ವಾರಕೀಶ್ ಅಭಿನಯವೂ ಸೊಗಸಾಗಿತ್ತು. ಚಿ. ಉದಯಶಂಕರ್ ಅವರು ಬರೆದ ಚಿತ್ರದ ಹಾಡುಗಳು ಮತ್ತು ಸಂಭಾಷಣೆಯೂ ಅತ್ಯದ್ಭುತ.  

ಹಳ್ಳಿಯಾದರೇನು ಶಿವ, ಒಂದೇ ನಾಡು ಒಂದೇ ಕುಲವು..., ಅಯ್ಯಯ್ಯೋ ಹಳ್ಳಿಮುಕ್ಕ... ಮೊದಲಾದ ಸೂಪರ್ ಹಿಟ್ ಹಾಡುಗಳು ಆ ಚಿತ್ರದ ಹೈಲೈಟ್ ಆಗಿದ್ದವು. ಈ ಹಾಡುಗಳು ಈಗಲೂ ಜನರ ಮನಃಪಟಲದಿಂದ ಮಾಸಿಲ್ಲ. ಈ ಚಿತ್ರದ ಮೂಲಕ ತಮ್ಮ ನಿರ್ದೇಶನದ ಪ್ರಯಾಣವನ್ನು ಆರಂಭಿಸಿದ ಸಿದ್ಧಲಿಂಗಯ್ಯನವರು ನಂತರದ ದಿನಗಳಲ್ಲಿ ಹಲವಾರು ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು. ಆದರೆ ಅವರ ಈ ಪ್ರಯಾಣದ ಆರಂಭಿಕ ಚಿತ್ರವೇ ಆರ್ಥಿಕ ಸಂಪನ್ಮೂಲಕದ ಕೊರತೆಯ ಕಾರಣದಿಂದ ಮುಗ್ಗರಿಸಿತ್ತು ಎಂಬುವುದು ವಿಪರ್ಯಾಸ.

ಈ ಚಿತ್ರದ ಚಿತ್ರೀಕರಣ ನಿಂತು ಹೋಗಲು ಪ್ರಮುಖ ಕಾರಣ ದ್ವಾರಕೀಶ್. ಆ ಸಮಯ ದ್ವಾರಕೀಶ್ ಬಹು ಬೇಡಿಕೆಯ ಹಾಸ್ಯ ನಟರಾಗಿದ್ದರು. ಆದರೆ ಅವರಿಗೆ ಚಿತ್ರ ನಿರ್ಮಾಣ ಮಾಡಬೇಕು, ಹಣ ಗಳಿಸಬೇಕು ಎನ್ನುವ ಆಸೆ. ಅದಕ್ಕಾಗಿ ತಮ್ಮ ನಟನೆಯಿಂದ ಸಿಗುತ್ತಿದ್ದ ಸಂಭಾವನೆಯ ಒಂದು ಪಾಲನ್ನು ಕೂಡಿ ಇಡುತ್ತಿದ್ದರಂತೆ. ರಾಜಕುಮಾರ್ ಜೊತೆ ಅವರಿಗೆ ಉತ್ತಮ ಗೆಳೆತನದ ಬಾಂಧವ್ಯ ಇದ್ದರೂ ಅವರ ಕಾಲ್ ಶೀಟ್ ಕೇಳಲು ಸಂಕೋಚವಾಗುತ್ತಿತ್ತಂತೆ. ಆ ಸಮಯದಲ್ಲಿ ರಾಜಕುಮಾರ್ ಬಹುಬೇಡಿಕೆಯ ನಟರಾಗಿದ್ದರು. ಹಾಗಾಗಿ ಹಣ ಒಟ್ಟು ಮಾಡಿ ಇಟ್ಟಿದ್ದರೂ ಬಹು ಸಮಯದ ಕಾಲ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲೇ ಇಲ್ಲ. 

ಕಡೆಗೆ ಒಂದು ದಿನ ನಿರ್ದೇಶಕ ಬಿ ವಿಠಲಾಚಾರ್ಯರ ಶಿಷ್ಯರಾಗಿದ್ದ ಸಿದ್ಧಲಿಂಗಯ್ಯವನವರನ್ನು ತಮ್ಮ ಚಿತ್ರದ ನಿರ್ದೇಶಕರನ್ನಾಗಿ ದ್ವಾರಕೀಶ್ ಆಯ್ಕೆ ಮಾಡಿಕೊಂಡರು. ಆಗ ಈ ಚಿತ್ರದ ಕನಸಿಗೆ ರೆಕ್ಕೆಪುಕ್ಕ ಮೂಡಲು ಪ್ರಾರಂಭವಾಯಿತು. ಈ ಸಮಯದಲ್ಲೇ ಅನಿರೀಕ್ಷಿತವಾಗಿ ರಾಜಕುಮಾರ್ ಅವರೂ ತಮ್ಮ ಕಾಲ್ ಶೀಟ್ ಅನ್ನು ದ್ವಾರಕೀಶ್ ಅವರಿಗೆ ನೀಡಿದರು. ದ್ವಾರಕೀಶ್ ಅವರು ತಮ್ಮ ಸಂಗ್ರಹದಲ್ಲಿದ್ದ ಹಣವನ್ನು ಬಳಸಿ ಅದ್ದೂರಿಯಾಗಿ ಮುಹೂರ್ತ ನಂತರ ಚಿತ್ರೀಕರಣ ಪ್ರಾರಂಭ ಮಾಡಿದರು. ಆದರೆ ಅವರ ಬಳಿ ಇದ್ದ ಹಣ ಮುಗಿದಾಗ ಚಿತ್ರದ ಅರ್ಧ ಭಾಗವಷ್ಟೇ ಚಿತ್ರೀಕರಣಗೊಂಡಿತ್ತು. ಈ ಕಾರಣದಿಂದ ‘ಮೇಯರ್ ಮುತ್ತಣ್ಣ' ಸ್ವಲ್ಪ ಸಮಯ ನಿಂತೇ ಹೋಯಿತು. 

ರಾಜಕುಮಾರ್ ಆ ಸಮಯದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದುದರಿಂದ ಅವರು ವ್ಯಸ್ತರಾಗಿಯೇ ಇದ್ದರು. ದ್ವಾರಕೀಶ್ ಏನೋ ಮಾಡಿ ಹಣವನ್ನು ಹೊಂದಿಸಿಕೊಂಡು ಚಿತ್ರೀಕರಣ ಪ್ರಾರಂಭಿಸಬೇಕೆನ್ನುವಾಗ ರಾಜ್ ಇನ್ನಿಲ್ಲದ್ದಂತೆ ಬಿಜಿಯಾಗಿ ಬಿಟ್ಟರು. ಅವರ ಕಾಲ್ ಶೀಟ್ ಹೊಂದಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಚಿತ್ರೀಕರಣ ಇನ್ನಷ್ಟು ತಡವಾಗತೊಡಗಿತು. ಕಡೆಗೊಂದು ದಿನ ರಾಜಕುಮಾರ್ ಹೇಗೋ ಕಾಲ್ ಶೀಟ್ ಹೊಂದಿಸಿಕೊಂಡು ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದರು. ರಾಜಕುಮಾರ್ ನಟಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ದ್ವಾರಕೀಶ್ ಅವರ ಕೆಲವು ಮಂದಿ ಗೆಳೆಯರು ಈ ಚಿತ್ರಕ್ಕೆ ಹಣ ಹಾಕಿದರು. ಆ ಕಾಲದ ಯಶಸ್ವೀ ಹಂಚಿಕೆದಾರರಾಗಿದ್ದ ಎಚ್ ಎನ್ ಮುದ್ದುಕೃಷ್ಣನವರು ಈ ಚಿತ್ರದ ಚಿತ್ರೀಕರಣವನ್ನು ನೋಡಿ, ಅದರ ಕಥೆಯನ್ನು ಆಲಿಸಿ ಸಂಪೂರ್ಣ ಹಕ್ಕನ್ನು ಮೊದಲೇ ಖರೀದಿಸಿಬಿಟ್ಟರು. ಹೀಗೆ ಚಿತ್ರ ಬಿಡುಗಡೆಯಾಗುವ ಮೊದಲೇ ಐವತ್ತು ಸಾವಿರದಷ್ಟು ಲಾಭದ ಹಣವು ದ್ವಾರಕೀಶ್ ಅವರಿಗೆ ಬಂದುಬಿಟ್ಟಿತು. ಆ ಸಮಯ ಐವತ್ತು ಸಾವಿರ ರೂಪಾಯಿ ಬಹಳ ದೊಡ್ದ ಮೊತ್ತವಾಗಿತ್ತು. ಚಿತ್ರದ ಬಿಡುಗಡೆ ನಂತರ ಮುದ್ದುಕೃಷ್ಣ ಅವರು ಇನ್ನಷ್ಟು ಲಾಭ ಮಾಡಿಕೊಂಡರು. 

ಕಿಸೆಯಲ್ಲಿ ಹೆಚ್ಚಿನ ಹಣವಿಲ್ಲದೇ ಹೋದರೂ ಭಂಡ ಧೈರ್ಯದಿಂದ ಚಿತ್ರೀಕರಣ ಪ್ರಾರಂಭಿಸಿ, ಮುಗ್ಗರಿಸಿ ಅರ್ಧಕ್ಕೇ ನಿಲ್ಲಿಸಿ, ನಂತರ ಮತ್ತೆ ಪ್ರಾರಂಭಿಸಿ ಲಾಭ ಗಳಿಸಿದ ಕೀರ್ತಿ ದ್ವಾರಕೀಶ್ ಗೆ ಸಲ್ಲಬೇಕು. ಈ ಚಿತ್ರದ ಯಶಸ್ಸು ದ್ವಾರಕೀಶ್ ಅವರನ್ನು ಮತ್ತಷ್ಟು ಚಿತ್ರಗಳನ್ನು ತಯಾರಿಸಲು ಪ್ರೋತ್ಸಾಹಿಸಿತು. ಕನ್ನಡ ಚಿತ್ರರಂಗದ ಉತ್ತಮ ನಟನ ಜೊತೆ ಯಶಸ್ವಿ ನಿರ್ಮಾಪಕನಾಗಿಯೂ ದ್ವಾರಕೀಶ್ ಹೆಸರು ಮಾಡಿಕೊಂಡರು. ರಾಜಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ' ಚಿತ್ರವು ಬಿಡುಗಡೆಯಾಗಿ ಇತಿಹಾಸ ನಿರ್ಮಿಸಿತು.

(ಆಧಾರ- ಪತ್ರಕರ್ತ ಗಣೇಶ್ ಕಾಸರಗೋಡು ಅವರ ಬರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ