ರಾಜಕುಮಾರ ಮತ್ತು ಹಕ್ಕಿಗಳು
ಒಂದಾನೊಂದು ಕಾಲದಲ್ಲಿ ಸ್ಪೇಯ್ನ್ ದೇಶದ ಗ್ರಾನಡಾ ಎಂಬಲ್ಲಿ ಎರಡು ದೊಡ್ಡ ಅರಮನೆಗಳಿದ್ದವು. ನಗರದಿಂದ ದೂರದ ಎರಡು ಗುಡ್ಡಗಳಲ್ಲಿದ್ದ ಆ ಅರಮನೆಗಳಲ್ಲಿ ಒಂದನ್ನು ಕೆಂಪು ಕಲ್ಲುಗಳಿಂದ ಇನ್ನೊಂದನ್ನು ಹಳದಿ ಕಲ್ಲುಗಳಿಂದ ಕಟ್ಟಲಾಗಿತ್ತು.
ಹಳದಿ ಕಲ್ಲಿನ ಅರಮನೆಯಲ್ಲಿದ್ದ ಮೂರಿಷ್ ವಂಶದ ರಾಜಕುಮಾರನ ಹೆಸರು ಅಹ್ಮದ್. ಅವನು ಅರಮನೆಯಿಂದ ಹೊರಗೆ ಹೋಗಿರಲೇ ಇಲ್ಲ. ಯಾಕೆಂದರೆ, ಅವನ ತಂದೆಗೆ ಆಸ್ಥಾನದ ಮಾಂತ್ರಿಕರು ಹೀಗೆಂದು ತಿಳಿಸಿದ್ದರು: ಅಹ್ಮದ್ ದೊಡ್ಡವನಾದಾಗ, ಅವನು ರೂಪವತಿ ರಾಜಕುಮಾರಿಯೊಬ್ಬಳನ್ನು ಹುಡುಕುತ್ತಾ ದೂರದ ದೇಶಕ್ಕೆ ಹೋಗುತ್ತಾನೆ; ಹಾಗೆ ಹೋದರೆ ಅವನು ಹಿಂತಿರುಗಿ ಬರಲಿಕ್ಕಿಲ್ಲ. ಅಹ್ಮದ್ ಒಬ್ಬನೇ ಮಗನಾದ್ದರಿಂದ, ಅವನು ಅರಮನೆಯಿಂದ ಹೊರಗೆ ಹೋಗದಂತೆ ರಾಜ ಎಚ್ಚರ ವಹಿಸಿದ್ದ. ಅರಮನೆಯಲ್ಲಿ ರಾಜಕುಮಾರನ ಜೊತೆಗೆ ಇದ್ದದ್ದು ಅವನ ಅಧ್ಯಾಪಕ ಮಾತ್ರ.
ಅಹ್ಮದನಿಗೆ ಯಾರೂ ಗೆಳೆಯರು ಇರಲಿಲ್ಲ. ಅರಮನೆಗೆ ಯಾವ ಹುಡುಗಿಯೂ ಬಾರದಂತೆ ರಾಜ ತಾಕೀತು ಮಾಡಿದ್ದ. ಅಹ್ಮದ್ ಯಾವುದೇ ಹುಡುಗಿಯನ್ನು ನೋಡದಿದ್ದರೆ, ಅವನು “ಪ್ರೀತಿ"ಯಲ್ಲಿ ಸಿಲುಕಲಾರ ಎಂಬುದು ರಾಜನ ಯೋಚನೆ.
ಅಹ್ಮದ್ ಬುದ್ಧಿವಂತ ಯುವಕನಾಗಿ ಬೆಳೆದ. ಯಾಕೆಂದರೆ ಅವನಿಗೆ ಅಧ್ಯಯನ ಮಾಡುವುದಲ್ಲದೆ, ಬೇರೆ ಯಾವ ಕೆಲಸವೂ ಇರಲಿಲ್ಲ. ಆದರೆ ಗೆಳೆಯರಿಲ್ಲದ ಕಾರಣ ಅವನನ್ನು ಒಂಟಿತನ ಕಾಡುತ್ತಿತ್ತು. ಅವನು ಆಗಾಗ ದೂರದ ಕೆಂಪುಕಲ್ಲಿನ ಅರಮನೆಯನ್ನು ತನ್ನ ಅರಮನೆಯ ಕಿಟಕಿಯಿಂದ ನೋಡುತ್ತಿದ್ದ. ಅಲ್ಲಿಗೆ ಹೋಗಬೇಕೆಂದು ಅವನಿಗೆ ಆಶೆಯಾಗುತ್ತಿತ್ತು. ಅದು ಯಾವಾಗಲೂ ಜನರಿಂದ ತುಂಬಿರುತ್ತಿತ್ತು. ಅಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತಿದ್ದವು. ಕೆಲವೊಮ್ಮೆ ರಾಜಕುಮಾರ ಅಹ್ಮದ್ ಹೊರಜಗತ್ತಿನ ಬಗ್ಗೆ ತನ್ನ ಅಧ್ಯಾಪಕನಲ್ಲಿ ಪ್ರಶ್ನಿಸುತ್ತಿದ್ದ. ಆದರೆ ರಾಜನ ಆಣತಿಯಂತೆ ಅವನು ರಾಜಕುಮಾರನಿಗೆ ಏನನ್ನೂ ತಿಳಿಸುತ್ತಿರಲಿಲ್ಲ.
ಅದೊಂದು ದಿನ ಪಾರಿವಾಳವೊಂದು ಅಹ್ಮದನ ಕೋಣೆಯ ಕಿಟಕಿಯಿಂದ ಒಳಕ್ಕೆ ಹಾರಿ ಬಂದು ಅವನ ಹಾಸಿಗೆಯಲ್ಲಿ ಬಿತ್ತು. ಅದು ನಿಶ್ಶಕ್ತಿಯಿಂದ ಬಳಲಿತ್ತು. ಅಹ್ಮದ್ ಅದನ್ನು ಎತ್ತಿಕೊಂಡು ಅದಕ್ಕೆ ನೀರು ಮತ್ತು ಕಾಳು ತಿನ್ನಿಸಿದಾಗ ಅದು ಚೇತರಿಸಿಕೊಂಡಿತು. ಆಗ ಅಹ್ಮದ್ ಅದನ್ನು ಒಂದು ಬಂಗಾರದ ಗೂಡಿನಲ್ಲಿ ಹಾಕಿದ.
ಆ ದಿನ ಸಂಜೆ ಗೂಡಿನ ಹತ್ತಿರ ಹೋದಾಗ, ಪಾರಿವಾಳ ಕಣ್ಣೀರು ಹಾಕುತ್ತಿದ್ದುದನ್ನು ಅಹ್ಮದ್ ಕಂಡ. “ಅಯ್ಯೋ, ಯಾಕೆ ನೀನು ಅಳುತ್ತಿದ್ದಿ?” ಎಂದು ಅಹ್ಮದ್ ಕೇಳಿದ. “ಯಾಕೆಂದರೆ ನಾನು ಬಹಳ ಪ್ರೀತಿಸುವ ನನ್ನ ಪ್ರೇಯಸಿ ಪಾರಿವಾಳ ಈಗ ನನ್ನ ಜೊತೆಗಿಲ್ಲ. ಹಲವಾರು ದಿನಗಳಾದರೂ ನನಗೆ ಮನೆಗೆ ಹೋಗಲು ಆಗಲಿಲ್ಲ. ಆಹಾರವಿಲ್ಲದೆ ಆಯಾಸವಾದ ಕಾರಣ ನಾನು ನಿನ್ನ ಕೋಣೆಗೆ ಬಂದೆ. ನನಗೀಗ ನನ್ನ ಮನೆಗೆ ಹೋಗಲೇ ಬೇಕಾಗಿದೆ. ಇದು ಬೆಲೆಬಾಳುವ ಬಂಗಾರದ ಗೂಡು ಆಗಿದ್ದರೂ ನನಗೆ ಇದು ಬೇಕಾಗಿಲ್ಲ" ಎಂದು ಉತ್ತರಿಸಿತು.
ಅಹ್ಮದ್ ನಿಟ್ಟುಸಿರು ಬಿಡುತ್ತಾ ಹೇಳಿದ, “ನಾನಾದರೆ ಸಂತೋಷದಿಂದ ಹಲವಾರು ದಿನ ಮನೆಯಿಂದ ದೂರ ಇರುತ್ತಿದ್ದೆ. ಆದರೆ ನನಗೆ ಅರಮನೆಯಿಂದ ಹೊರಗೆ ಹೋಗಲು ಬಿಡುತ್ತಿಲ್ಲ. ನಾನಿಲ್ಲಿ ಒಬ್ಬಂಟಿಯಾಗಿ ದುಃಖಿಸುತ್ತಿದ್ದೇನೆ.” ಇದನ್ನು ಕೇಳಿದ ಪಾರಿವಾಳ “ಯಾಕೆಂದರೆ ನಿನಗೆ ಪ್ರೀತಿ ಮಾಡಲು ಯಾರೂ ಇಲ್ಲ” ಎಂದಿತು.
ರಾಜಕುಮಾರನಿಗೆ ಕಣ್ಣುಕಣ್ಣು ಬಿಡುತ್ತ ಪ್ರಶ್ನೆಸಿದ, “ಪ್ರೀತಿಯೇ? ಹಾಗೆಂದರೇನು?” ಆಗ ಪಾರಿವಾಳ ಕೊರಳು ಕೊಂಕಿಸಿ ಉತ್ತರಿಸಿತು, "ಒಬ್ಬನಿಂದ ಪ್ರೀತಿ ಸಾಧ್ಯವೇ ಇಲ್ಲ; ಇಬ್ಬರಿದ್ದರೆ ಪ್ರೀತಿ ಬಹಳ ಸಂತೋಷ ಕೊಡುತ್ತದೆ.” ರಾಜಕುಮಾರ ಕಣ್ಣರಳಿಸಿ ಕೇಳಿದ, "ಹೌದೇನು? ಈ ಪ್ರೀತಿ ಅನ್ನೋದನ್ನು ನಾನು ಹೇಗೆ ಪಡೆಯಲಿ?" ಪಾರಿವಾಳ “ನನಗೆ ಇಲ್ಲಿಂದ ಹಾರಿ ಹೋಗಲು ಬಿಡು. ನಿನಗೆ ನಾನು ಸಹಾಯ ಮಾಡಬಲ್ಲೆ” ಎನ್ನುತ್ತಿದ್ದಂತೆ ರಾಜಕುಮಾರ ಬಂಗಾರದ ಗೂಡಿನ ಬಾಗಿಲು ತೆಗೆದ. ತಕ್ಷಣವೇ ಪಾರಿವಾಳ ಹಾರಿ ಹೋಯಿತು.
ಅದಾಗಿ ಕೆಲವೇ ವಾರಗಳಲ್ಲಿ ಆ ಪಾರಿವಾಳ ಮರಳಿ ಬಂತು. ದೂರದ ದೇಶದಲ್ಲಿರುವ ಒಬ್ಬಳು ರಾಜಕುಮಾರಿಯ ಬಗ್ಗೆ ಅಹ್ಮದನಿಗೆ ಪಾರಿವಾಳ ತಿಳಿಸಿತು. ಅಹ್ಮದ್ ರಾಜಕುಮಾರಿಗೊಂದು ಪತ್ರ ಬರೆದು ಪಾರಿವಾಳಕ್ಕೆ ಕೊಟ್ಟ. ಅದನ್ನು ಒಯ್ದ ಪಾರಿವಾಳ ಕೆಲವೇ ದಿನಗಳಲ್ಲಿ ಹಿಂತಿರುಗಿತು. ಈಗ ಪಾರಿವಾಳದ ಬಾಯಿಯಲ್ಲಿ ರಾಜಕುಮಾರಿಯ ಚಿತ್ರವಿತ್ತು! ಅದನ್ನು ನೋಡಿದ ರಾಜಕುಮಾರ ಅವಳ ರೂಪಕ್ಕೆ ಮಾರುಹೋದ. ತಕ್ಷಣವೇ ಅವಳ ದೇಶಕ್ಕೆ ಹೊರಡಬೇಕೆಂದು ನಿರ್ಧರಿಸಿದ.
ಆದರೆ ಅರಮನೆಯಿಂದ ಹೊರಗೆ ಹೇಗೆ ಹೋಗುವುದೆಂದು ರಾಜಕುಮಾರ ಅಹ್ಮದನಿಗೆ ತಿಳಿದಿರಲಿಲ್ಲ. ಅವನು ಉದ್ಯಾನದ ಹಳೆಯ ಓಕ್ ಮರದಲ್ಲಿದ್ದ ಬುದ್ಧಿವಂತ ಗೂಬೆಯ ಬಳಿ ಕೇಳಿದ. ಓಕ್ ಮರಕ್ಕೆ ಹಗ್ಗವೊಂದನ್ನು ಕಟ್ಟಿ, ಅರಮನೆಯ ಆವರಣ ಗೋಡೆಯ ಮೇಲೆ ಅದನ್ನು ಹಾಯಿಸಿ, ಅದನ್ನು ಹಿಡಿದುಕೊಂಡು ಅರಮನೆಯಿಂದ ಪಾರಾಗಬಹುದೆಂದು ಗೂಬೆ ತಿಳಿಸಿತು.
ಅಂತೆಯೇ ಅರಮನೆಯಿಂದ ಯಾರಿಗೂ ತಿಳಿಯದಂತೆ ಪಾರಾದ ರಾಜಕುಮಾರ ಅಹ್ಮದ್. ಗೂಬೆಯೊಂದಿಗೆ ಹಲವಾರು ದಿನ ಪ್ರಯಾಣಿಸಿದ ನಂತರ ಅವರು ಕೊರ್ಡೊವಾ ಎಂಬ ಊರು ತಲಪಿದರು. ಅಲ್ಲಿದ್ದ ನೂರಾರು ವರುಷ ವಯಸ್ಸಿನ ಗಿಳಿಯನ್ನು ರಾಜಕುಮಾರನಿಗೆ ಗೂಬೆ ಪರಿಚಯಿಸಿತು. ಅಹ್ಮದ್ ತೋರಿಸಿದ ರಾಜಕುಮಾರಿಯ ಚಿತ್ರ ನೋಡಿದ ಗಿಳಿ ಹೇಳಿತು, "ಇವಳು ಅಲ್ಡೆಗುಂಡಾದ ರಾಜಕುಮಾರಿ. ಟೊಲೆಡೋ ಎಂಬ ಊರಿನಲ್ಲಿ ಒಂದು ಎತ್ತರದ ಗೋಪುರದಲ್ಲಿ ಇವಳು ವಾಸ ಮಾಡುತ್ತಾಳೆ. ಇವಳನ್ನು ಮದುವೆಯಾಗಲು ಅನುರೂಪನಾದ ರಾಜಕುಮಾರನನ್ನು ರಾಜ ಹುಡುಕುವ ತನಕ ಅವಳು ಅಲ್ಲಿಯೇ ಇರುತ್ತಾಳೆ.”
ಅನಂತರ ರಾಜಕುಮಾರ ಟೊಲೆಡೋ ತಲಪಿದ. ರಾಜಕುಮಾರಿಯಿದ್ದ ಗೋಪುರದ ದೊಡ್ಡ ಆವರಣ ಗೋಡೆಯನ್ನು ಹೇಗೆ ದಾಟುವುದೆಂದು ಅವನಿಗೆ ಗೊತ್ತಾಗಲಿಲ್ಲ. ಹಾಗಾಗಿ ಅವನು ಗೂಬೆಯ ಮೂಲಕ ರಾಜಕುಮಾರಿಗೆ ಸಂದೇಶ ಕಳುಹಿಸಿದ. ಅದನ್ನು ಓದಿದ ರಾಜಕುಮಾರಿ ಸಂತೋಷದಿಂದ ಅವನಿಗೆ ಮಾರೋಲೆಯಲ್ಲಿ ಈ ಸಂದೇಶ ಕಳುಹಿಸಿದಳು: "ನಾಳೆ ನನ್ನ ಹುಟ್ಟುಹಬ್ಬ. ಅದಕ್ಕಾಗಿ ನನ್ನ ಅಪ್ಪ ಒಂದು ಸ್ಪರ್ಧೆ ನಡೆಸುತ್ತಾರೆ. ಸ್ಪರ್ಧೆಯಲ್ಲಿ ಗೆದ್ದವನಿಗೆ ನನ್ನನ್ನು ಕೊಟ್ಟು ಮದುವೆ ಮಾಡ್ತಾರೆ.”
ರಾಜಕುಮಾರ ಅಹ್ಮದನಿಗೆ ನಿರಾಶೆಯಾಯಿತು. ಯಾಕೆಂದರೆ ಅವನ ಬಳಿ ಕುದುರೆಯಾಗಲೀ, ಸ್ಪರ್ಧೆಯಲ್ಲಿ ಹೋರಾಡಲಿಕ್ಕಾಗಿ ಆಯುಧಗಳಾಗಲೀ ಇರಲಿಲ್ಲ. ಅದಲ್ಲದೆ ಅವನಿಗೆ ಪಳಗಿದ ಯೋಧರೊಂದಿಗೆ ಹೋರಾಡಿದ ಅನುಭವವೂ ಇರಲಿಲ್ಲ. ಆಗ ಗೂಬೆ ಅಲ್ಲಿಂದ ಹಾರಿ ಹೋಗಿ ಒಂದು ಕೊಕ್ಕರೆಯನ್ನು ಕರೆತಂದಿತು. ಅನಂತರ ಎಲ್ಲರೂ ದೂರದ ಕಾಡಿನತ್ತ ಪ್ರಯಾಣಿಸಿದರು.
ಅಲ್ಲೊಂದು ಗವಿಯಿತ್ತು. ಅದರ ಬಾಗಿಲಿಗೆ ಕೊಕ್ಕರೆ ತನ್ನ ಕೊಕ್ಕಿನಿಂದ ಕುಕ್ಕಿತು. ಆಗ ಆ ಬಾಗಿಲು ತೆರೆದುಕೊಂಡಿತು. "ನಿನಗೆ ಬೇಕಾದ ಕುದುರೆ, ಖಡ್ಗ, ಗುರಾಣಿ ಎಲ್ಲವೂ ಇಲ್ಲಿವೆ” ಎಂದಿತು ಗೂಬೆ. "ನೂರು ವರುಷ ದಾಟಿದ ಈ ಕೊಕ್ಕರೆಗೆ ಎಲ್ಲವೂ ನೆನಪಿದೆ. ಹತ್ತಾರು ವರುಷ ಮುಂಚೆ ಸ್ಪಾನಿಯಾರ್ಡರು ನಿನ್ನ ಮೂರಿಷ್ ವಂಶದವರನ್ನು ಯುದ್ಧದಲ್ಲಿ ಸೋಲಿಸಿ ಇಲ್ಲಿಂದ ಓಡಿಸಿದರು. ಒಬ್ಬ ಮೂರ್ ತಾನು ಯುದ್ಧ ಮಾಡಲು ಹಿಂತಿರುಗಿ ಬರುತ್ತೇನೆಂದು ತನ್ನ ಕುದುರೆ ಮತ್ತು ಆಯುಧಗಳನ್ನು ಇಲ್ಲಿ ಬಚ್ಚಿಟ್ಟು ಹೋಗಿದ್ದಾನೆ. ಈ ಆಯುಧಗಳಿಗೆ ದೈವಿಕ ಶಕ್ತಿಯಿದೆ. ಅವನ್ನು ಹಾಕಿಕೊಂಡರೆ ನಿನಗೆ ರಕ್ಷಣೆ ಇರುತ್ತದೆ. ಈ ಖಡ್ಗ ಶತ್ರುಗಳನ್ನು ಚಚ್ಚಿ ಹಾಕುತ್ತದೆ. ಆದರೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಆ ಶಕ್ತಿ ಮಾಯವಾಗ್ತದೆ” ಎಂದು ವಿವರಿಸಿತು ಗೂಬೆ.
ರಾಜಕುಮಾರ ಅಹ್ಮದ್ ಆಯುಧಗಳನ್ನು ಧರಿಸಿ, ಕುದುರೆಯ ಮೇಲೇರಿ ಹೊರಟ. ಆ ಕುದುರೆ ಕೆಲವೇ ಕ್ಷಣಗಳಲ್ಲಿ ಅಹ್ಮದನನ್ನು ಸ್ಪರ್ಧಾ ಕಣಕ್ಕೆ ಕರೆದೊಯ್ದಿತು. ಅಲ್ಲಿ ತನ್ನ ಹೆಸರು ಘೋಷಿಸಿದ ಅಹ್ಮದ್ ಮೊದಲನೇ ಸ್ಪರ್ಧಿಯನ್ನು ಎದುರಿಸಲು ಸಿದ್ಧನಾದ. ಆತ ನುಗ್ಗಿ ಬಂದಾಗ, ಅಹ್ಮದ್ ಖಡ್ಗ ಝಳಪಿಸಿದ. ಅದರ ಏಟಿಗೆ ಆ ಸ್ಪರ್ಧಿ ಕುದುರೆಯಿಂದ ಉರುಳಿ ಬಿದ್ದ. ಆಗ ಹತ್ತಾರು ಯೋಧರು ಅಹ್ಮದನ ಮೇಲೆ ಧಾಳಿ ಮಾಡಿದರು. ಆದರೆ ಅಹ್ಮದನ ಖಡ್ಗದ ಏಟಿಗೆ ಅವರೆಲ್ಲರೂ ತತ್ತರಿಸಿ ಹೋದರು.
ಆಗ ರಾಜಕುಮಾರಿಯ ತಂದೆಯೇ ಅಹ್ಮದನತ್ತ ಕುದುರೆಯೇರಿ ಬಂದ. ರಾಜಕುಮಾರ ಗೊಂದಲಕ್ಕೆ ಬಿದ್ದ. ಆದರೆ ಅವನ ಮ್ಯಾಜಿಕ್ ಖಡ್ಗ ರಾಜನನ್ನೂ ಕುದುರೆಯಿಂದ ಕೆಳಕ್ಕೆ ಉರುಳಿಸಿತು. ಆಗ ಒಂದು ಬಾಣ ಅಹ್ಮದನ ಗುರಾಣಿಯನ್ನೇ ಸೀಳಿತು. ಅಹ್ಮದ್ ತಲೆಯೆತ್ತಿ ನೋಡಿದಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ತಕ್ಷಣವೇ ಅಹ್ಮದ್ ಕುದುರೆಯನ್ನು ರಾಜಕುಮಾರಿಯತ್ತ ಓಡಿಸಿ, ಆಕೆಯನ್ನು ಕರೆದ; ಆಕೆಯೊಂದಿಗೆ ಕುದುರೆಯನ್ನೇರಿ, ಅಲ್ಲಿಂದ ಗ್ರಾನಡಾಕ್ಕೆ ದೌಡಾಯಿಸಿದ. ಅನಂತರ ರಾಜಕುಮಾರ ಅಹ್ಮದ್ ಮತ್ತು ರಾಜಕುಮಾರಿ ಮದುವೆಯಾಗಿ, ಹಳದಿ ಕಲ್ಲುಗಳ ಅರಮನೆಯಲ್ಲಿ ಸುಖಸಂತೋಷದಿಂದ ಬಾಳಿದರು.