ರಾಜಘಾಟ್ ನ ಒಂದು ಸಮಾಧಿಯ ಮುಂದೆ ಜಿ 21 ನಾಯಕರು !
ರಾಜ್ ಘಾಟ್ ಗೆ ಭೇಟಿ ನೀಡಿದ ಜಿ 21 ಎಂಬ ಸಂಘಟನೆಯ ಬಲಿಷ್ಠ ದೇಶಗಳ ವಿಶ್ವ ನಾಯಕರು. ಯಾಕೆ ಇವರು ರಾಜ್ ಘಾಟ್ ಗೆ ಭೇಟಿ ನೀಡಿದರು. ಏನಿದೆ ಅಲ್ಲಿ. ಅದು ಸೆವೆನ್ ಸ್ಟಾರ್ ಹೋಟಲ್ ಅಲ್ಲ, ಭದ್ರ ಸೇನಾ ನೆಲೆಯಲ್ಲ, ಯಾವುದೇ ಧರ್ಮದ ದೇವ ಮಂದಿರವಲ್ಲ, ಮನಮೋಹಕ ಸುಂದರ ಪ್ರವಾಸ ಸ್ಥಳವಲ್ಲ. ಕಲಾತ್ಮಕ ಭವನವೂ ಅಲ್ಲ. ಆದರೂ ಭೇಟಿ ನೀಡಿದರು. ಬಹುಶಃ ಆ ನಾಯಕರಿಗೆ ಹುಚ್ಚು ಇರಬಹುದೇ ಅಥವಾ ಅವರಿಗೆ ಸುಳ್ಳು ಮಾಹಿತಿ ನೀಡಿ ಆ ಸ್ಥಳಕ್ಕೆ ಕರೆದೊಯ್ಯಲಾಗಿದೆಯೇ?
ಅಲ್ಲಿ ಒಬ್ಬ ಬಡಕಲು ಶರೀರದ ಭಾರತೀಯ ವೃದ್ದನನ್ನು ಗುಂಡಿಕ್ಕಿ ಕೊಂದು ಮಲಗಿಸಲಾಗಿದೆ. ಅದೊಂದು ಸಮಾಧಿ ಅಷ್ಟೇ. ಸಾಧಾರಣ ಉದ್ಯಾನದ ರೀತಿ ನಿರ್ವಹಣೆ ಮಾಡಲಾಗುತ್ತದೆ. ಭಾರತದ ಈಗಿನ ಜನಪ್ರಿಯ ಸಿನಿಮಾ ತಾರೆಯರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ, ಅಥವಾ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅಥವಾ ಉದ್ಯಮಿ ಮುಖೇಶ್ ಅಂಬಾನಿ ಅಥವಾ ಪತ್ರಕರ್ತ ಅರ್ಣಬ್ ಗೋಸ್ವಾಮಿ ಅಥವಾ ರಾಜಕೀಯ ನೇತಾರರಾದ ನರೇಂದ್ರ ಮೋದಿ - ರಾಹುಲ್ ಗಾಂಧಿ - ಮಮತಾ ಬ್ಯಾನರ್ಜಿ - ಉದಯ ನಿಧಿ ಸ್ಟಾಲಿನ್ ಅವರ ಜನಪ್ರಿಯತೆಯ ಕಾಲು ಭಾಗ ಸಹ ಇತ್ತೀಚಿನ ದಿನಗಳಲ್ಲಿ ಈ ಬರಿಮೈ ಫಕೀರನಿಗೆ ಇಲ್ಲ. ಆತನ ಹೆಸರಿಗೆ ಭಾರತದ ಯಾವುದೇ ಜಾತಿ ಧರ್ಮ ಭಾಷೆಯವರ ಬಹುದೊಡ್ಡ ಬೆಂಬಲ ಇಲ್ಲ. ಆತನ ಭಾವಚಿತ್ರಕ್ಕೆ ಗುಂಡಿಟ್ಟು ಹೊಡೆದು ರಕ್ತ ಕಾರುವ ದೃಶ್ಯ ಪ್ರಹಸನ ಮಾಡಿದರು ಯಾರೂ ಕೇಳುವುದಿಲ್ಲ. ಈಗಿನ ದಿನಗಳಲ್ಲಿ ಆತನನ್ನು ಕೊಂದ ವ್ಯಕ್ತಿಯ ದೇವಸ್ಥಾನ ಕಟ್ಟುವ ಪ್ರಯತ್ನಗಳು ಸಹ ನಡೆಯುತ್ತಿವೆ. ಚುನಾವಣೆಯಲ್ಲಿ ಆತನ ಹೆಸರು ಹೇಳುವವರು ತುಂಬಾ ಕಡಿಮೆ. ಹೇಳಿದರೂ ಮತವೇನು ಬರುವುದಿಲ್ಲ. ಆತ ಒಂದು ಬೆದರು ಬೊಂಬೆಯಂತೆ. ನೋಟಿನ ಮೇಲೆ ಮತ್ತು ಒಂದಷ್ಟು ಫೋಟೋಗಳಲ್ಲಿ ಮಾತ್ರ ಆತ ಇನ್ನೂ ಕಾಣಿಸುತ್ತಾನೆ. ಆತನನ್ನು ಏಕ ವಚನದಲ್ಲಿ ಕರೆದರು ಯಾರೂ ಕೇಳುವವರಿಲ್ಲ.
ಆತನೇ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ಹೆಸರಿನ ಸುಭಾಷ್ ಚಂದ್ರ ಬೋಸ್ ಅವರಿಂದ ನಾಮಕರಣ ಮಾಡಲ್ಪಟ್ಟ ಮಹಾತ್ಮ ಗಾಂಧಿ.. ಇಂತಹ ವ್ಯಕ್ತಿಯ ಸಮಾಧಿಯ ಮುಂದೆ ಜಿ 21 ರಾಷ್ಟ್ರಗಳ ನಾಯಕರು ಕೈ ಮುಗಿಯಲು ಕಾರಣವೇನು ? ನಮ್ಮ ದೇಶದ ಪ್ರಧಾನಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾದರು ಏಕೆ ? ಆತನಿಗಿಂತ ಪ್ರಮುಖ ವ್ಯಕ್ತಿಯ ಸಮಾಧಿ ಇರಲಿಲ್ಲವೇ ?
ಅದಕ್ಕೆಲ್ಲ ಉತ್ತರ ಆ ವ್ಯಕ್ತಿ ಎಲ್ಲಾ ದೌರ್ಬಲ್ಯಗಳ ನಡುವೆ ಭಾರತದ ಮಣ್ಣಿನ ನೈತಿಕ ಶಕ್ತಿಯ ಸಂಕೇತ. ವಿಶ್ವ ಮನುಷ್ಯ ಜನಾಂಗದ ನಾಗರಿಕ ವ್ಯಕ್ತಿತ್ವದ ಸಂಕೇತ. ಪಾರದರ್ಶಕ ಬದುಕಿನ ಮಾದರಿ. ಮನುಷ್ಯತ್ವ ನಿಜವಾದ ರಾಯಭಾರಿ. ಇದು ಅತಿಯಾದ ಹೊಗಳಿಕೆ ಎನಿಸಬಹುದು. ಅವರ ಅನೇಕ ನಿಲುವುಗಳು ಅವಾಸ್ತವಿಕ ಇರಬಹುದು, ಒಂದಷ್ಟು ಹಠಮಾರಿ ಧೋರಣೆ ಬೇಸರ ಉಂಟುಮಾಡಬಹುದು. ಅದು ಮನುಷ್ಯ ವ್ಯಕ್ತಿತ್ವದ ಭಾಗ. ಅದನ್ನು ವಿರೋಧಿಸಬಹುದು ಮತ್ತು ತಿರಸ್ಕರಿಸಬಹುದು. ಆದರೆ ಆ ವ್ಯಕ್ತಿಯ ನೈತಿಕತೆ ಮಾತ್ರ ಅತ್ಯದ್ಭುತ ಮತ್ತು ಅದು ಸತ್ವಯುತ ಬದುಕಿನ ಕೆಲವರಿಗೆ ಮಾತ್ರ ನಿಲುಕಬಹುದಾದ ವ್ಯಕ್ತಿತ್ವ ಮತ್ತು ದೃಷ್ಟಿಕೋನ.
ಭಾರತದ ನೆಲದಲ್ಲಿ ಮಾನವೀಯತೆ ಮತ್ತು ಸಮಾನತೆಯ ಸೈದ್ದಾಂತಿಕ ನಿಲುವಿನಲ್ಲಿ ಬುದ್ದ ಬಸವ ವಿವೇಕಾನಂದ ಮತ್ತು ಅಂಬೇಡ್ಕರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ತರದಲ್ಲಿ ಗಾಂಧಿಗಿಂತ ಹೆಚ್ಚು ಸ್ಪಷ್ಟತೆಯನ್ನು ಹೊಂದಿದ್ದರು ಮತ್ತು ಅದಕ್ಕಾಗಿ ಹೋರಾಡಿದರು. ಬುದ್ದ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಚಿಂತನೆ ಆಳ ಜ್ಞಾನವನ್ನು ದೇಹ ಮನಸ್ಸುಗಳ ದಂಡನೆಯ ಮೂಲಕ ಗಳಿಸಿದವರು. ಬಸವಣ್ಣ ಮತ್ತು ವಿವೇಕಾನಂದರು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾನತೆಗಾಗಿ ಅತ್ಯಂತ ಕ್ರಾಂತಿಕಾರಕ ಮತ್ತು ಪ್ರಾಯೋಗಿಕ ಕ್ರಮಗಳನ್ನು ಕೈಗೊಂಡರು. ಅದರಲ್ಲೂ ಬಸವಣ್ಣ ಜಗತ್ತಿನ ಅದ್ವಿತೀಯ ಸಾಮಾಜಿಕ ಹೋರಾಟಗಾರರು ಮತ್ತು ಚಿಂತಕರು. ಇದಕ್ಕೆಲ್ಲ ಮೂಲವಾದ ನೈತಿಕ ಪ್ರಜ್ಞೆಯನ್ನು ಎತ್ತಿ ಹಿಡಿದವರು ಮತ್ತು ಹಾಗೆ ಬದುಕಿದವರು ಗಾಂಧಿ.
ನೈತಿಕ ಪ್ರಜ್ಞೆ ಎಂದರೇನು ? ಯಾವ ಆಧಾರದಲ್ಲಿ ಯಾರಿಗೆ ಯಾವುದು ನೈತಿಕತೆ ಯಾವುದು ಅನೈತಿಕತೆ ಎಂದು ನಿರ್ಧರಿಸುವುದು ಹೇಗೆ ? ಒಬ್ಬರ ನೈತಿಕತೆ ಇನ್ನೊಬ್ಬರ ಅನೈತಿಕತೆಯೂ ಆಗಬಹುದಲ್ಲವೇ ಎಂಬ ಚರ್ಚೆಯ ವಿಷಯವೂ ಇದೆ. ನೈತಿಕತೆ ಅಷ್ಟು ಸುಲಭವಾಗಿ ಚರ್ಚೆಗೂ ನಿಲುಕುವುದಿಲ್ಲ. ಬದುಕಿನ ಅನುಭವದ ಆಳಕ್ಕೆ ಪ್ರವೇಶಿದಂತೆ ನೈತಿಕತೆ ಅರಿವಿಗೆ ಬರುತ್ತದೆ. ಅದನ್ನು ಸ್ಪಷ್ಟವಾಗಿ ವಿವರಿಸುವುದು ಸಹ ಕಷ್ಟ. ಅದೊಂದು ಆಂತರ್ಯದ ಅನುಭವ. ಮುಖವಾಡವಿಲ್ಲದ ದೈವಿಕ ಪ್ರಜ್ಞೆ. ಅದೊಂದು ಸ್ವಚ್ಛ ಕನ್ನಡಿ. ಮನಸ್ಸಿನ ಪ್ರತಿಬಿಂಬ.
ಮಹಾತ್ಮ ಗಾಂಧಿ " ಭಾರತ ರತ್ನ " ಪ್ರಶಸ್ತಿಗಿಂತ ದೊಡ್ಡವರು ಎಂದು ಸುಪ್ರೀಂಕೋರ್ಟ್ ಅವರ ಪರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಸರ್ಕಾರಕ್ಕೆ ಆದೇಶಿಸಬೇಕೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಲೇವಾರಿ ಮಾಡುವಾಗ ಹೇಳಿದ ಮಾತುಗಳು. ಹೌದು ಪ್ರಖ್ಯಾತರಾದರು ಅರ್ಹರಲ್ಲದ ಕೆಲವು ಭಾರತ ರತ್ನ ಪಡೆದ ಉದಾಹರಣೆಗಳು ಇರುವಾಗ ಮಹಾತ್ಮ ಗಾಂಧಿಯವರಿಗೆ ಅದು ಶೋಭಿಸುವುದಿಲ್ಲ. ಸರ್ವೋಚ್ಚ ನ್ಯಾಯಾಲಯ ಅದನ್ನು ಸರಿಯಾಗಿ ಮನಗಂಡಿದೆ.
ಕನ್ನಡಿಯಷ್ಟು ಪಾರದರ್ಶಕವಾದ ವ್ಯಕ್ತಿತ್ವದ ಗಾಂಧಿಯನ್ನು ಟೀಕಿಸಲು ವಿರೋಧಿಸಲು ಸಾಕಷ್ಟು ವಿಷಯಗಳಿವೆ. ಆದರೆ ಸಾರ್ವಜನಿಕ ಜೀವನದಲ್ಲಿ ಭಾರತದಂತ ವೈವಿಧ್ಯಮಯ ದೇಶದಲ್ಲಿ ಅಷ್ಟೊಂದು ಅನಕ್ಷರಸ್ಥ ಜನರ ನಡುವೆ ಒಂದು ಬೃಹತ್ ಹೋರಾಟದ ನಾಯಕತ್ವ ವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿ ಇದ್ದು ಮೆರೆದ ನೈತಿಕತೆಗೇ ಸರಿಸಾಟಿಯಿಲ್ಲ. ಇಂತಹ ವ್ಯಕ್ತಿಯ ಸಮಾಧಿಯನ್ನು ಬೇಟಿ ಮಾಡಿಸುವುದು ಭಾರತದ ಹೆಮ್ಮೆ ಮತ್ತು ವಿಶ್ವ ನಾಯಕರ ಕರ್ತವ್ಯ ಎಂದು ಭಾವಿಸಬಹುದು. ಗಾಂಧಿಯಂತ ವ್ಯಕ್ತಿ ಇದ್ದಿದ್ದರೆ ಬಹುಶಃ ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ದ ನಿಲ್ಲಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ವಿಶ್ವಸಂಸ್ಥೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ಹಿಂಜರಿಯುತ್ತಿರಲಿಲ್ಲ. ಈಗಿನ ವ್ಯಾಟಿಕನ್ ದೇಶದ ಪೋಪ್ ರಂತೆ ಬಲಿಷ್ಠವಾಗಿದ್ದು ಸಹ ಕೇವಲ ಹೇಳಿಕೆ ಕೊಟ್ಟು ಯುದ್ದವನ್ನು ನಿರ್ಲಕ್ಷಿಸುತ್ತಿರಲಿಲ್ಲ. ಹಿಂಸೆಯನ್ನು ಸಹಿಸುವ ಜಾಯಮಾನವೇ ಅಲ್ಲ. ಬಹುಶಃ ಗಾಂಧಿಯನ್ನು ಘೋಡ್ಸೆಯವರು ಕೊಂದ ನಂತರ ಅಕಸ್ಮಾತ್ ಗಾಂಧಿಯ ಅರಿವಿಗೆ ಅದು ಬಂದಿದ್ದರೆ ಖಂಡಿತ ಘೋಡ್ಸೆಯವರನ್ನು ಗಾಂಧಿ ಕ್ಷಮಿಸಿ ಬಿಡುಗಡೆ ಮಾಡಿಸುತ್ತಿದ್ದರು. ಅದು ಗಾಂಧಿ. ಸತ್ಯ ಅಹಿಂಸೆ ಸರಳತೆಯ ಬುದ್ದನ ನಿಜವಾದ ಅನುಯಾಯಿ ಗಾಂಧಿ.
ಗಾಂಧಿಯನ್ನು ಮರೆತ ಭಾರತ, ಗಾಂಧಿ ದ್ವೇಷಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಆತ್ಮವಿಲ್ಲದ ದೇಹದಂತೆ. ಇದು ಒತ್ತಾಯವಲ್ಲ ಒಂದು ಮನವಿ. ದಯವಿಟ್ಟು ಬುದ್ದ ಮಹಾವೀರ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಲೋಹಿಯಾ ಇವರನ್ನು ನೀವು ಸ್ವಲ್ಪ ಮಟ್ಟಿಗೆ ಓದಿ ಅರ್ಥಮಾಡಿಕೊಂಡರೆ ನಿಮ್ಮ ಒಟ್ಟು ವ್ಯಕ್ತಿತ್ವ ಮೇಲ್ದರ್ಜೆಗೆ ಏರುವುದರಲ್ಲಿ ಅನುಮಾನವಿಲ್ಲ. ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ನಿಮ್ಮ ಇಷ್ಟದ ಇತರರನ್ನು ಓದಬಹುದು. ಆಗ ಬದುಕೊಂದು ಸುಂದರ ಪಯಣವಾಗುತ್ತದೆ. ಪ್ರಯತ್ನಿಸಿ ಎಂದು ಮನವಿ ಮಾಡಿಕೊಳ್ಳುತ್ತಾ...
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ