ರಾಜಧಾನಿಯಲ್ಲಿ ನಡೆದ ಅತ್ಯಾಚಾರಕ್ಕೆ ಕಾರಣ ಯಾರು?

ರಾಜಧಾನಿಯಲ್ಲಿ ನಡೆದ ಅತ್ಯಾಚಾರಕ್ಕೆ ಕಾರಣ ಯಾರು?

ವದೆಹಲಿಯಲ್ಲಿ ನಡೆದ ಅಮಾನುಷ ಅತ್ಯಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ರೀತಿಯಲ್ಲಿ ಪ್ರತಿಭಟನೆಗಳು ನಡೆದವು,  ಮಹಿಳೆಯರು ಮಾನವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾದುದಕ್ಕೆ ನ್ಯಾಯಾಲಯಗಳನ್ನೂ, ರಾಜಕಾರಣಿ, ಪೊಲೀಸರನ್ನು ನೇರವಾಗಿ ದೂರಿದ ಜನ ಅತ್ಯಾಚಾರಿಗಳಿಗೆ ಗಲ್ಲಿನ ಶಿಕ್ಷೆ ಕೊಡಲು ಆಗ್ರಹಿಸಿದರು. ಕಾಮಪಿಪಾಸು ಪಶುಗಳ ಕೈಗೆ ಸಿಕ್ಕು ಜರ್ಜರಿತಳಾದ ಯುವತಿ ಸಾವಿನೊಂದಿಗೆ ವ್ಯರ್ಥವಾಗಿ ಸೆಣಸಿ ಕೊನೆಯುಸಿರೆಳೆದಳು.

ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ (why Indian men rape – Anand Soondas) ಓದಲು ಸಿಕ್ಕಿತು. ‘ಭಾರತೀಯ ಗಂಡು ಅತ್ಯಾಚಾರವನ್ನೇಕೆ ಎಸಗುತ್ತಾನೆ?’ ರೈಲಿನಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ಅಸ್ಸಾಮಿನಲ್ಲಿ ನಡೆದ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ನಡೆದ ವಿದ್ಯಾವಂತರ ಚರ್ಚೆಯಲ್ಲಿ ಒಬ್ಬ ಹೆಣ್ಣಿನ ಕುರಿತು ಹಗುರವಾಗಿ ಮಾತನಾಡಿದ ಬಗ್ಗೆ ಬರೆದಿದ್ದರು ಲೇಖಕರು. ಹಲ್ಲೆಯ ಬಗ್ಗೆ ಮಾತನಾಡುತ್ತಾ ವಾಯು ಸೇನೆಯ ಅಧಿಕಾರಿ ಕೇಳಿದ್ದು ಆಕೆಗೆ ರಾತ್ರಿಯಲ್ಲಿ ಹೊರಗೇನು ಕೆಲಸ ಎಂದು. ಆ ಯುವತಿ ಮದ್ಯ ಸೇವಿಸುತ್ತಿದಳು ಮತ್ತು ಕೆಲವು ಪುರುಷರೊಂದಿಗೆ ಆಕೆ ಚೆಲ್ಲಾಟ ವಾಡುತ್ತಿದ್ದಳು, ಅದಕೆ ತಕ್ಕ ಶಾಸ್ತಿ ಯಾಯಿತು ಎಂದು ಆತ ಹೇಳಿದಾಗ ಕ್ರುದ್ಧನಾದ ಸಹ ಪ್ರಯಾಣಿಕ ಅಧಿಕಾರಿಯನ್ನು ಉದ್ದೇಶಿಸಿ. ಮುಂದಿನ ಸಲ ನಿನ್ನ ಸೋದರಿಯ ಪೃಷ್ಠಗಳನ್ನು ಯಾರಾದರೂ ಹಿಂಡಿದಾಗ ನಿನ್ನ ಸೋದರಿ ಎಷ್ಟು ಮರ್ಯಾದಸ್ಥಳು ಎನ್ನುವುದರ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಲಿ ಎಂದು ಹೇಳಿದನಂತೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳ ಬಗೆಗಿನ ಆ ಅಧಿಕಾರಿಯ ಅಭಿಪ್ರಾಯ ನೋಡಿದಿರಲ್ಲ, ಇದು ವಿದ್ಯಾವಂತರ ಕಥೆ.    

ಸಮಾಜವನ್ನು, ದೇಶವನ್ನು ಕಂಗೆಡಿಸುವ ಅತ್ಯಾಚಾರದಂಥ ಘಟನೆಗಳನ್ನು ತಡೆಯಲು ಸಮಾಜ ತನ್ನ ಯುವಜನರ ನೈತಿಕ ಮೌಲ್ಯಗಳು ಪತನಗೊಳ್ಳುತ್ತಿರುವ ಕಡೆ ಗಮನ ನೀಡಬೇಕು. ಗತಿಸಿಹೋದ ವೈಭವದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದರಿಂದಲೋ, ಉತ್ಸವಗಳನ್ನು ಆಚರಿಸುವುದರಿಂದಲೋ ಸಮಾಜದ ಏಳಿಗೆ ಅಥವಾ ಸುರಕ್ಷತೆ ಅಸಾಧ್ಯ.

ನವ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ನಮ್ಮ ದೇಶದಲ್ಲಿ ಅತ್ಯಚಾರದ ಕುರಿತು ಬಹು ದೊಡ್ಡ ಚರ್ಚೆಯನ್ನೇ ಆರಂಭಿಸಿದೆ. “ನಿರ್ಭಯ” ಎನ್ನುವ ಯುವತಿಯ ದಾರುಣ ಅಂತ್ಯದ ನಂತರ ಸಮಾಜ ಎಚ್ಚೆತ್ತು ಕೊಳ್ಳಲು ಆರಂಭಿಸುತ್ತಿದೆ. ಅದರ ನಡುವೆಯೇ ಮಹಿಳೆ ಲಕ್ಷ್ಮಣ ರೇಖೆಯನ್ನು ದಾಟಬಾರದ, ದಾಟಿದರೆ ಆಗುವ ದುಷ್ಪರಿಣಾಮಗಳ ಕುರಿತ ಬೋಧನೆಗಳು (ಮಧ್ಯ ಪ್ರದೇಶದ ಮಂತ್ರಿ ಮಹೋದಯ ಹೇಳಿದ್ದು) ಕೇಳಿ ಬರುತ್ತಿವೆ. ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಮಹಿಳೆಯನ್ನು ಹೊಣೆಗಾರಳನ್ನಾಗಿಸುವ ಮಾತುಗಳೂ ಕೇಳಿ ಬರುತ್ತಿವೆ.

ರಾಜಧಾನಿಯಲ್ಲಿ ಅಮಾಯಕ ಯುವತಿಯ ಮೇಲಿನ ಅತ್ಯಾಚಾರ ನಡೆದ ನಂತರ ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳನ್ನು ಚರ್ಚಿಸ ತೊಡಗಿದ ದೇಶಕ್ಕೆ ಮತ್ತೊಂದು ರೀತಿಯ ಆಘಾತ ರಾಜಕಾರಣಿಗಳ ಮಾತಿನಿಂದ. ಹಿಂದುತ್ವ ರಾಷ್ಟ್ರವಾದೀ ಸಂಘಟನೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಈ ಚರ್ಚೆಗೆ ಮತ್ತಷ್ಟು ಬಿಸಿ ಹೆಚ್ಚಿಸಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ. ಪತಿ ಮತ್ತು ಪತ್ನಿ ಸಾಮಾಜಿಕ ಕರಾರಿನ ಕಟ್ಟುಪಾಡಿನ ಒಳಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಪತಿ ಹೊರಗೆ ದುಡಿದರೆ ಮಹಿಳೆ ಮನೆಯೊಳಗಿದ್ದು ತನ್ನ ಜವಾಬ್ದಾರಿ ಪೂರೈಸಬೇಕು. ಈ ಜವಾಬ್ದಾರಿಗಳು ಅದಲು ಬದಲಾದಾಗ ಅಥವಾ ಮಹಿಳೆ ತನ್ನ ಜವಾದ್ಬಾರಿ ಮರೆತು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ನಿರತಳಾದಾಗ ಆಗುವ ಪರಿಣಾಮಗಳನ್ನು ವಿಶ್ಲೇಷಿಸಿ ವಿವಾದದ ಸೃಷ್ಟಿಗೆ ಕಾರಣರಾದರು. ಅತ್ಯಾಚಾರ ನಡೆಯುತ್ತಿರುವುದು ವಿದೇಶೀ ಸಂಸ್ಕಾರ ಪ್ರೇರಿತ ‘ಇಂಡಿಯಾ’ ದಲ್ಲಿ, ಸಂಪ್ರದಾಯಸ್ಥ ‘ಭಾರತ’ದಲ್ಲಿ ಅಲ್ಲ ಎನ್ನುವ ಮಾತಿನೊಂದಿಗೆ ದೇಶದೊಳಗೇ ಮತ್ತೊಂದು ದೇಶವನ್ನು ಕಾಣುವ ವ್ಯರ್ಥ ಪ್ರಯತ್ನ ಸಹ ಮಾಡಿದರು ಭಾಗವತ್. ಮಾಧ್ಯಮಗಳು, ಸಾಮಾಜಿಕ ವೆಬ್ ತಾಣಗಳ ಮೂಲಕ ನಗರಗಳಲ್ಲಿ ನಡೆಯುತ್ತಿರುವ ಅತ್ಯಾಚಾರದ ವರದಿಯಾದರೂ ಓದಲಿಕ್ಕೆ ಸಿಗುತ್ತಿದೆ. ವರದಿಯಾಗದ, ಬೆಳಕಿಗೆ ಬಾರದ ಕಾರಣಕ್ಕಾಗಿ ಗ್ರಾಮಾಂತರ ಪ್ರದೇಶಗಳು ಸುರಕ್ಷಿತ ಎನ್ನುವ ಭಾವನೆ ಒಂದು ಭ್ರಮೆ ಅಷ್ಟೇ.

ಸಾಹಿತ್ಯ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಮುಕ್ತತೆಯನ್ನು ಬಯಸುವ ನಾವು ನಮ್ಮ ಯುವಜನರ ನಡತೆಗೆ ಏಕೆ ಕಡಿವಾಣ ತೊಡಿಸಬೇಕು? ಕಥೆ ಕಾದಂಬರಿ, ಜಾಹೀರಾತು, ಸಿನೆಮಾಗಳಲ್ಲಿ ಎಗ್ಗಿಲ್ಲದೆ ಲೈಂಗಿಕತೆ ತುರುಕಿ ಮಜಾ ಕಾಣುವ ಜನ ಅತ್ಯಾಚಾರದಂತಹ ಘಟನೆಗಳು ಸಂಭವಿಸಿದಾಗ ಹೈರಾಣಾಗುವುದಾದರೂ ಏಕೆ ಎನ್ನುವುದೇ ಅರ್ಥವಾಗುವುದಿಲ್ಲ. ಎಲ್ಲೇ ಕಣ್ಣಾಡಿಸಿದರೂ ಲೈಂಗಿಕತೆ, ನಗ್ನತೆಯ ದರ್ಶನ ವಾದಾಗ ಆಗುವ ಅನಾಹುತಕ್ಕೆ ಸಮಾಜ ಹೊಣೆ ಹೊರಬೇಕು. ಅಥವಾ ಮುಕ್ತತೆ, ಕ್ರಿಯಾಶೀಲತೆ ಹೆಸರಿನಲ್ಲಿ ನಗ್ನತೆ, ಅಶ್ಲೀಲತೆ  ಸೆಕ್ಸ್ ಅನ್ನು ವೈಭವೀಕರಿಸುವುದಾದರೆ ಅಂಥ ಚಿತ್ರ ಗಳನ್ನು ನೋಡಿದ ನಂತರ ಉಂಟಾಗುವ ಉದ್ದೀಪನಕ್ಕೂ ಒಂದು ಔಟ್ ಲೆಟ್ ಸಮಾಜ ನಿರ್ಮಿಸಬೇಕು. ನಮ್ಮ ಚಿತ್ರಗಳಲ್ಲಿ ಕಾಣ ಸಿಗುವ ನರ್ತನ ವನ್ನಾದರೂ ನೋಡಿ, ವಾತ್ಸಾಯನನ ಎಲ್ಲಾ ಭಂಗಿಗಳೂ ಒಂದೆರಡು ಹಾಡುಗಳಲ್ಲಿ ಕಾಣಲು ಲಭ್ಯ. ಗಂಡಿನ ಒಳ ಉಡುಪಿನಿಂದ ಹಿಡಿದು ಕಾರಿನ ಟೈರ್ ಗಳ ಜಾಹೀರಾತಿಗೂ ಬೇಕು ಹೆಣ್ಣು.  ಒಂದು ಕಡೆ ನಗ್ನತೆಯ ನಗ್ನ ಪ್ರದರ್ಶನ ಮತ್ತೊಂದು ಕಡೆ ಹುಡಗರು ಹುಡುಗಿಯರು ದಾರಿ ತಪ್ಪ ಬಾರದು ಎನ್ನುವ ಕಡಿವಾಣ, ಹೆಣ್ಣಿನ ಕನ್ಯತ್ವ ಕಾಪಾಡಿಕೊಳ್ಳಬೇಕಾದ ಕುರಿತು ವಿಪರೀತ ಕಾಳಜಿ.  ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾತ್ರ ಕಾಣಲು ಸಮಾಜ ಉತ್ಸುಕತೆ ತೋರಿಸಿದರೆ ನವ ದೆಹಲಿಯಲ್ಲಿ ನಡೆದಂಥ ಅಮಾನುಷ, ದುರದೃಷ್ಟಕರ ಘಟನೆಗಳಿಗೂ ಸಾಕ್ಷಿ ನಿಲ್ಲಬೇಕಾಗುತ್ತದೆ.      

ಸಮಾಜ ಗಂಡಿನ ಪ್ರಾಮುಖ್ಯತೆ ಬಗ್ಗೆ ಅತೀವ ಗಮನ ನೀಡುತ್ತಿರುವುದೂ ಸಹ ಮಹಿಳೆಯ ದಾರುಣ ಅವಸ್ಥೆಗೆ ಮತ್ತೊಂದು ಕಾರಣ. ಹುಟ್ಟುವ ಮಗು ಹೆಣ್ಣು ಎಂದು ಖಾತ್ರಿಯಾದ ಕೂಡಲೇ  ಭ್ರೂಣ ಹತ್ಯೆ ಮೂಲಕ ಹೆಣ್ಣು ಮಗಳನ್ನು ಕೊಲೆಗೈಯ್ಯಲು ಹೇಸದ ಸಮಾಜದಿಂದ ಒಳ್ಳೆಯತನವನ್ನು ನಿರೀಕ್ಷಿಸುವುದು ಕಷ್ಟಕರವಾದ ಕೆಲಸವೇ. ಇನ್ನು ಭ್ರೂಣಾವಸ್ಥೆಯಿಂದ ಭಡ್ತಿ ಪಡೆದು ಧರಿತ್ರಿ ಮುಟ್ಟಿದ ಕೂಡಲೇ ತನ್ನ ಹುಟ್ಟನ್ನು ಪ್ರಪಂಚಕ್ಕೆ ತಿಳಿಸಲು ತಂದೆ ತಾಯಿಗಳಿಗೂ, ಆ ಶುಭ ವಾರ್ತೆಯನ್ನು ಕೇಳುವ ಜನರಿಗೂ ಒಂದು ತೆರನಾದ ಸಂಕಟ... ಅಯ್ಯೋ, ಹೆಣ್ಣಾ?

ಹೆಣ್ಣು ಅಬಲೆ, ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಮುಂತಾದ ಮಾತುಗಳನ್ನು ಕೇಳುತ್ತಾ ಬೆಳೆಯುವ ಗಂಡು ಮಕ್ಕಳಿಗೆ ಹೆಣ್ಣಿನ ಮೇಲೆ ಗೌರವ ತೋರುವುದಾದರೂ ಹೇಗೆ? ಹೆಣ್ಣಿನ ಬುದ್ಧಿ ಮೊಳ ಕಾಲ ಕೆಳಗೆ, ಮುಂತಾದ ಮಾತುಗಳ ಮೂಲಕ ಹೆಣ್ಣಿನ ಅಸ್ತಿತ್ವದ ಕುರಿತು ಕೀಳರಿಮೆ ಬರುವಂಥ ನಡತೆಗಳೂ ಸಹ ಕಾರಣ ಮಹಿಳೆಯ ವಿರುದ್ಧ ನಡೆಯುತ್ತಿರುವ ಹಿಂಸೆ, ಅತ್ಯಾಚಾರ. ಹೆಣ್ಣನ್ನು ದೇವಿ, ‘ಮಾತಾ ಶ್ರೀ’  ಎಂದು ಪೂಜಿಸುವ, ಆದರಿಸುವ ಸಮಾಜವೇ ಸಂದರ್ಭ ಬಂದಾಗ ಮಹಿಳೆ ವಿರುದ್ಧ ಹೇಸಿಗೆ ಹುಟ್ಟಿಸುವ ಕೆಲಸಕ್ಕೂ ಮುಂದಾಗುವುದು ಅರ್ಥವಾಗದ ಒಗಟು. ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ಬೇಸತ್ತ ಒಬ್ಬ ಮಹಿಳೆ ಹೇಳುವುದು, “ಹೆಣ್ಣು ಮಕ್ಕಳನ್ನು, ಸಂಗೀತ ಕಲಿಯಲಿಕ್ಕೋ, ನೃತ್ಯ ಕಲಿಯಲಿಕ್ಕೋ ಕಳಿಸಬೇಡಿ, ಬದಲಿಗೆ ಕರಾಟೆ, ಜೂಡೋ ಕಲಿಯಲು ಪ್ರೋತ್ಸಾಹಿಸಿ” ಇಂಥ ಮಾತು ಓರ್ವ ಹೆಣ್ಣು ಮಗಳ ಬಾಯಿಂದ ಬರಬೇಕಾದರೆ ಗಂಡಿನ ಕುರಿತ ಆಕೆಯ ಅಪನಂಬಿಕೆ ನಮಗೆ ವೇದ್ಯವಾಗುತ್ತದೆ.

ಬಹುಶಃ ವಿಶ್ವದಲ್ಲೇ ಅತೀ ಹೆಚ್ಚು ಪ್ರಭಾವೀ ಮಹಿಳಾ ರಾಜಕಾರಣಿಗಳು ಇರುವ ದೇಶ ನಮ್ಮದು. ಸರಕಾರವನ್ನು ಮುನ್ನಡೆಸುತ್ತಿರುವ ಮಹಿಳೆಯಿಂದ ಹಿಡಿದು, ವಿರೋಧ ಪಕ್ಷದ ನಾಯಕಿ. ಮುಖ್ಯ ಮಂತ್ರಿ, ಉನ್ನತ ಮಂತ್ರಿ ಪದವಿಗಳನ್ನು ಅಲಂಕರಿಸಿ ಕೂತ ಮಹಿಳೆಯರಿಗೆ ಅವರದೇ ಸಮಸ್ಯೆಗಳ ಅರಿವು ಇಲ್ಲದಿರುವುದು ಆಶ್ಚರ್ಯಕರ. ಇಷ್ಟೊಂದು ಮಹಿಳಾ ರಾಜಕಾರಣಿಗಳು ವಿಜ್ರಂಭಿಸುವ ದೇಶದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಾದರೆ?

ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಹಿಂಸೆ ಅತ್ಯಚಾರ ಗಳನ್ನು ವ್ಯವಸ್ಥೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆ ಯನ್ನು ಫಾಸ್ಟ್ ಟ್ರಾಕ್ ಕೋರ್ಟ್ ಗಳ ಮೂಲಕ ಕೊಡ ಮಾಡಿಸಬೇಕು. ಅತ್ಯಾಚಾರವೆಸಗುವ ಗಂಡಿನ ವಯಸ್ಸಿನ ಮಿತಿಯನ್ನು ಹದಿನೆಂಟರಿಂದ ಹದಿನೈದಕ್ಕೆ ಇಳಿಸಬೇಕು. ನವ ದೆಹಲಿಯಲ್ಲಿ ಅತ್ಯಾಚಾರವೆಸಗಿದ ಪುರುಷರ ಪೈಕಿ ಹದಿನೇಳು ವಯಸ್ಸಿನ ಹುಡುಗನ ಪಾತ್ರ ಅತ್ಯಂತ ಕ್ರೂರವಂತೆ. ಚಿಕ್ಕ ವಯಸ್ಸಿನಲ್ಲೇ ಹಡಬೆ ಕೆಲಸಕ್ಕೆ ಕೈ ಹಚ್ಚುತ್ತಿರುವ ಸಮೂಹಕ್ಕೆ ಶಿಕ್ಷೆಗೆ ಅವಶ್ಯವಾದ ಪರಿಮಿತಿಯನ್ನು ಕೆಳಕ್ಕಿಳಿಸಿದಾಗಲೇ ಇತರರಿಗೆ ಎಚ್ಚರಿಕೆಯ ಘಂಟೆ. ಅತ್ಯಾಚಾರಿಗೆ ನೇಣಿನ ಶಿಕ್ಷೆಯನ್ನಲ್ಲದೆ ಬೇರಾವುದೇ ಶಿಕ್ಷೆಗೂ ಒಳಪಡಿಸಬಾರದು. ಏಕೆಂದರೆ, ಮಹಿಳೆಯ ವಿರುದ್ಧ ನಡೆಯುವ ಅತ್ಯಾಚಾರ ಒಂದು ರೀತಿಯ crime against humanity.    

pic courtesy: www.womenundersiege.org   

  

Comments

Submitted by kavinagaraj Tue, 01/08/2013 - 10:45

ಒಳ್ಳೆಯ ಕಳಕಳಿಯ ಲೇಖನಕ್ಕೆ ಅಭಿನಂದನೆಗಳು, ಅಬ್ದುಲ್. ನೈತಿಕ ಶಿಕ್ಷಣದ ಕೊರತೆ ಈ ಎಲ್ಲಾ ದುರಾಚಾರಗಳ ಮೂಲ.
Submitted by venkatb83 Tue, 01/08/2013 - 19:45

In reply to by kavinagaraj

ಸಕಾಲಿಕ ಬರಹ- ಯಾವುದೇ ಒಂದು ಘಟನೆಯ -ಸನ್ನಿವೇಶಗಳ ಬಗ್ಗೆ ನಾವ್ ನಾವೇ ಏನೇನೋ ಹೇಳಬಹ್ದು-ಆದರೆ ಅದರಲ್ಲಿ ಒಪ್ಪತಕ್ಕದ್ದು ಇದೆಯೇ ಮುಖ್ಯ.... ಈ ಘಟನೆಯ ನಂತರ ದಿನ ನಿತ್ಯ ಪ್ರತಿ ಒಬ್ಬರೂ ಮುಗಿ ಬಿದ್ದು ನೀಡುತ್ತಿರುವ ಹೇಳಿಕೆಗಳು-ನೀಡುವ ಸಲಹೆಗಳು ವಿವಾದಾಸ್ಪದವಾಗಿದ್ದು ಸಮಸ್ಯೆ ಪರಿಹಾರ ಸಾಧ್ಯವಾಗದೆ ಇನ್ನಸ್ಟು ಜಟಿಲವಾಗುತ್ತಿದೆ.:(((((( ಮುಖ್ಯ ವಿಷ್ಯ ಬದಲಾಗಿ ಇನ್ಯಾವುದೋ ವಿಷ್ಯ ಹೇಳಿಕೆಗಳ ಬಗ್ಗೆ ವ್ಯರ್ಥ ಪ್ರಚಾರದ ಚರ್ಚೆ ಆಗುತ್ತಿದೆ.:((( ಈ ಘಟನೆಯ ನಂತರ ಹುಡುಗ ಹುಡುಗಿಯರ ಭಾವನಾತ್ಮಕ ಅಂಶಗಳ ಬಗ್ಗೆ ಒಳ್ಳೆಯದ್ದು ಕೆಟ್ಟದ್ದರ ಬಗ್ಗೆ ಯುವಕ ಯುವತಿಯರ ಜೊತೆ ಹಿರಿಯರು ಸಮಾಲೋಚಿಸಿ ಸಲಹೆ-ಸೂಚನೆ ನೀಡಬೇಕಿದೆ.. ತಪ್ಪು ತಿದ್ದಿ ಮುಂದೆಂದೂ ಈ ತರಹದ ಅಹಿತಕರ -ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ... ಶುಭವಾಗಲಿ.. \|
Submitted by Manjunatha D G Wed, 01/09/2013 - 18:45

ಸಾಮೂಹಿಕವಾಗಿ ಇ0ತಹ‌ ಹೀನಾಯ‌ ಕ್ರೂರತನದಲ್ಲಿ ತೊಡಗುವವರು ಸಮೂಹ‌ ಸನ್ನಿಯ‌ ತರಹ‌ ಮಾನಸಿಕ‌ ಅಸಮತೋಲನೆಗೆ ಒಳಗಾಗಿರುತ್ತಾರೆನಿಸುತ್ತದೆ. ಇ0ತಹವರಿಗೆ ದ0ಡನೆ ಹೇಗೂ ಸರಿ. ಮು0ದೆ ಹೀಗಾಗದ್0ತೆ ಸಮಾಜವನ್ನು ತಿದ್ದ‌ ಬೇಕಾಗಿರುವುದು ವಿದ್ಯೆ. ನಮ್ಮ‌ ವಿದ್ಯಾಭ್ಯಾಸ‌ ಒಣಗಿದ‌ ದರಗೆಲೆಯ0ತಾಗಿದೆ. ಶಕ್ತಿಯುತ‌ ವಿದ್ಯೆ ಮಾತ್ರ‌ ಎಲ್ಲರ‌ ಮನಸ್ಸನ್ನೂ ಶುದ್ದವಾಗಿಸಬಲ್ಲದು.