ರಾಜನಾದ ಜಾಣ ಕಳ್ಳ

ರಾಜನಾದ ಜಾಣ ಕಳ್ಳ

ಮೂರು ಸಾವಿರ ವರುಷಗಳ ಹಿಂದೆ, ಎರಡನೇ ರಾಮೆಸೆಸ್ ಈಜಿಪ್ಟಿನ ಫಾರೋ (ರಾಜ) ಆಗಿದ್ದ. ಅವನ ಆಡಳಿತದಲ್ಲಿ ಈಜಿಪ್ಟ್ ಸಂಪತ್ತು ತುಂಬಿದ ದೇಶವಾಯಿತು. ಫಾರೋ ಹೇರಳ ಸಂಪತ್ತು ಶೇಖರಿಸಿದ; ಅವನ ಖಜಾನೆ ತುಂಬಿ ತುಳುಕಿತು.

ಚಿನ್ನ, ಮುತ್ತುರತ್ನಗಳ ಆ ಸಂಪತ್ತನ್ನು ರಕ್ಷಿಸುವುದೇ ದೊಡ್ಡ ಸವಾಲಾಯಿತು. ರಾಮೆಸೆಸ್ ತನ್ನ ಕಟ್ಟಡ ವಿನ್ಯಾಸಗಾರನಿಗೆ ಭದ್ರವಾದ ಮತ್ತು ಅಭೇದ್ಯವಾದ ಖಜಾನೆಯನ್ನು ಕಟ್ಟಲು ಆಜ್ನಾಪಿಸಿದ. ಹಲವಾರು ವರುಷ ನೂರಾರು ಗುಲಾಮರನ್ನು ದುಡಿಸಿ ಆತ ಖಜಾನೆಯನ್ನು ನಿರ್ಮಿಸಿದ. ಅದು ಭಾರೀ ಕಲ್ಲುಗಳಿಂದ ಕಟ್ಟಲಾದ ಸುಭದ್ರ ಗೋಡೆಗಳ ಖಜಾನೆ. ಅದಕ್ಕೆ ಒಂದೇ ಒಂದು ಪ್ರವೇಶ ದ್ವಾರ; ಅದನ್ನು ಫಾರೋ ಮಾತ್ರ ತೆರೆಯಲು ಸಾಧ್ಯ.

ಆದರೆ ಬುದ್ಧಿವಂತ ವಿನ್ಯಾಸಕಾರ ಆ ಖಜಾನೆಗೆ ಒಂದು ರಹಸ್ಯ ದ್ವಾರವನ್ನೂ ನಿರ್ಮಿಸಿಕೊಂಡಿದ್ದ. ಯಾವಾಗಾದರೊಮ್ಮೆಅದನ್ನು ಗುಟ್ಟಾಗಿ ತೆರೆದು, ಖಜಾನೆಯಿಂದ ಕೆಲವು ಚಿನ್ನದ ತುಂಡುಗಳನ್ನೂ ವಜ್ರಗಳನ್ನೂ ಕದ್ದು ತಂದು ಮಾರುತ್ತಿದ್ದ. ಹೀಗಿರುವಾಗ ಒಂದು ದಿನ ವಿನ್ಯಾಸಕಾರ ರೋಗಪೀಡಿತನಾದ. ತನ್ನ ಅಂತ್ಯ ಸಮೀಪಿಸಿತೆಂದು ಅವನಿಗೆ ತಿಳಿಯಿತು. ತನ್ನ ಮಗಂದಿರಿಬ್ಬರನ್ನೂ ಕರೆದು, ರಾಜನ ಖಜಾನೆಯ ರಹಸ್ಯದ್ವಾರದ ಬಗ್ಗೆ ತಿಳಿಸಿದ. ಅದನ್ನು ಬಳಸುವಾಗ ಅತ್ಯಂತ ಎಚ್ಚರದಿಂದ ಇರಬೇಕೆಂದ.

ಇಬ್ಬರು ಮಗಂದಿರೂ ಫಾರೋನ ಖಜಾನೆಯಿಂದ ಕದಿಯ ತೊಡಗಿದರು. ಅವರ ದುರಾಸೆಯಿಂದಾಗಿ, ಫಾರೋಗೆ ತನ್ನ ಖಜನೆಯಿಂದ ಬೆಲೆಬಾಳುವ ವಸ್ತುಗಳು ಕಳವಾಗುತ್ತಿರುವುದು ತಿಳಿಯಿತು. ಆತ ಸಾವಿರ ಸೈನಿಕರನ್ನು ಕರೆಸಿ, ಒಂದೇ ದಿನದಲ್ಲಿ ಖಜಾನೆಯ ಸುತ್ತಲೂ ಕಳ್ಳನನ್ನು ಹಿಡಿಯಲು ಕಂದಕಗಳನ್ನು ನಿರ್ಮಿಸಿದ. ಆ ಕಂದಕಗಳಲ್ಲಿ ಖಡ್ಗಗಳನ್ನು ಹೂಳಲಾಗಿತ್ತು. ಅವುಗಳಿಗೆ ಸಿಕ್ಕಿಬಿದ್ದವರು ಪಾರಾಗಲು ಸಾಧ್ಯವೇ ಇರಲಿಲ್ಲ.

ಅದೇ ವಾರದಲ್ಲಿ ಇಬ್ಬರು ಸೋದರರು ಪುನಃ ಖಜಾನೆಗೆ ಗುಟ್ಟಾಗಿ ಹೋದರು. ಆದರೆ ರಹಸ್ಯದ್ವಾರ ತಲಪುವ ಮುನ್ನ, ಹಿರಿಯವನು ಕಂದಕಕ್ಕೆ ಬಿದ್ದ. ಏನು ಮಾಡಿದರೂ ಅವನನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಆತ ತಮ್ಮನಿಗೆ ನೋವಿನಿಂದ ಪಿಸುಗುಟ್ಟಿದ, “ಗಮನವಿಟ್ಟು ಕೇಳು. ಈಗ ನೀನು ಪತ್ತೆಯಾಗದಂತೆ ಮಾಡಲು ಒಂದೇ ಒಂದು ದಾರಿ ಇದೆ. ನನ್ನ ತಲೆ ಕಡಿದು, ನನ್ನ ಉಡುಪನ್ನು ತಗೊಂಡು ಇಲ್ಲಿಂದ ಹೊರಟು ಬಿಡು. ಫಾರೋನ ಕಾವಲುಗಾರರಿಗೆ ತಲೆಯಿಲ್ಲದ ದೇಹದ ಗುರುತು ಹಿಡಿಯಲು ಸಾಧ್ಯವಿಲ್ಲ.” ವಿಧಿಯಿಲ್ಲದೆ, ಅಣ್ಣನ ತಲೆ ಕಡಿದು, ಅದನ್ನು ಆತನ ಉಡುಪಿನಲ್ಲಿ ಸುತ್ತಿಕೊಂಡು ತಮ್ಮ ಮನೆಗೆ ಧಾವಿಸಿದ. ಅಮ್ಮನಿಗೆ ದುಃಖದಿಂದ ಎಲ್ಲ ಸಂಗತಿ ತಿಳಿಸಿದ.

ಮರುದಿನ ಫಾರೋನ ಕಾವಲುಗಾರರು ತಲೆಯಿಲ್ಲದ ದೇಹವನ್ನು ಕಂಡು, ಫಾರೋಗೆ ವಿಷಯ ತಿಳಿಸಿದರು. ತಲೆಕಡಿದಾತ ಅಪರಾಧದಲ್ಲಿ ಷಾಮೀಲಾಗಿದ್ದ ಎಂದು ಅರ್ಥ ಮಾಡಿಕೊಂಡ ಫಾರೋ ಅವನನ್ನು ಹಿಡಿಯಲೇ ಬೇಕೆಂದು ನಿರ್ಧರಿಸಿದ. “ಈ ದೇಹವನ್ನು ಅರಮನೆಯ ಆವರಣ ಗೋಡೆಯಿಂದ ನೇತಾಡಿಸಿ. ಯಾರಾದರೂ ಇದನ್ನು ತೆಗೆಯಲು ಪ್ರಯತ್ನಿಸಿದರೆ ಅಥವಾ ಇದನ್ನು ಕಂಡು ದುಃಖಿಸಿದರೆ ತಕ್ಷಣವೇ ಅವರನ್ನು ಬಂಧಿಸಿ” ಎಂದು ಆಜ್ನಾಪಿಸಿದ.

ಸೋದರರ ತಾಯಿಗೆ ಈ ವಿಷಯ ತಿಳಿದು ದುಃಖ ತಡೆಯಲಾಗಲಿಲ್ಲ. ಅಣ್ಣನ ದೇಹವನ್ನು ತಂದು ಅಂತ್ಯಸಂಸ್ಕಾರ ಮಾಡಲೇ ಬೇಕೆಂದು ದುಂಬಾಲು ಬಿದ್ದಳು. ಅದನ್ನು ಮುಟ್ಟಿದರೂ ತನ್ನ ಜೀವಕ್ಕೇ ಅಪಾಯವಿದೆ ಮತ್ತು ಅಣ್ಣನ ತಲೆಗೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಮ್ಮ ಎಷ್ಟು ಹೇಳಿದರೂ ಅಮ್ಮ ಕೇಳಲಿಲ್ಲ. ಕೊನೆಗೆ ಅಣ್ಣನ ದೇಹ ತರಲು ತಮ್ಮ ಹೊರಟ.

ಮುದುಕನಂತೆ ವೇಷಪಲ್ಲಟ ಮಾಡಿ, ಒಂದು ಕತ್ತೆಯ ಬೆನ್ನಿಗೆ ವೈನ್ ತುಂಬಿದ ಎರಡು ಚರ್ಮದ ಚೀಲಗಳನ್ನು ನೇತು ಹಾಕಿದ
ತಮ್ಮ ಅರಮನೆಯ ಆವರಣ ಗೋಡೆಯ ಪಕ್ಕದಲ್ಲಿ ಸಾಗಿದ. ಅಣ್ಣನ ರುಂಡವಿಲ್ಲದ ದೇಹ ನೇತಾಡಿಸಿದಲ್ಲಿಗೆ ಬಂದ. ಆಗ, ಒಂದು ಚೀಲದ ತಳದಲ್ಲಿ ಒಂದು ತೂತು ಮಾಡಿದ. ಅದರಿಂದ ವೈನ್ ಹೊರ ಚೆಲ್ಲ ತೊಡಗಿತು. ಆಗ ತಮ್ಮ ಜೋರಾಗಿ ಗೋಳಾಡತೊಡಗಿದ, “ಅಯ್ಯೋ, ಬೆಲೆಬಾಳುವ ವೈನ್ ಚೆಲ್ಲುತ್ತಿದೆ. ನನ್ನ ಸರ್ವನಾಶವಾಯಿತು.”
ಈ ಗಲಾಟೆ ಕೇಳಿದ ಕಾವಲುಗಾರರು ಅವನ ಬಳಿಗೆ ಬಂದು ಏನಾಯಿತೆಂದು ಕೇಳಿದರು. ತಮ್ಮ ಗೋಳಾಡುತ್ತಾ ಹೇಳಿದ, “ನೋಡಿ, ನನ್ನ ದುಬಾರಿ ವೈನ್ ರಸ್ತೆಗೆ ಬಿದ್ದು ಹಾಳಾಗುತ್ತಿದೆ. ನಾನು ಸರ್ವನಾಶವಾದೆ. ನೀವಾದರೂ ಇದನ್ನು ಕುಡಿಯಿರಿ.”

ಕಾವಲುಗಾರರಿಗೆ ಖುಷಿಯೋ ಖುಷಿ. ಆ ಚೀಲದ ವೈನ್ ಬೇಗನೇ ಖಾಲಿಯಾಯಿತು. ಆಗ ತಮ್ಮ ಅವರಿಗೆ ಹೇಳಿದ, “ಇನ್ನೊಂದು ಚೀಲದಲ್ಲಿರುವ ವೈನನ್ನು ನನ್ನ ಕತ್ತೆ ಹೊತ್ತೊಯ್ಯಲು ಸಾಧ್ಯವಿಲ್ಲ. ಯಾಕೆಂದರೆ ಅದಕ್ಕೆ ಸಮತೋಲನ ತಪ್ಪುತ್ತದೆ. ಹಾಗಾಗಿ ಅದನ್ನೂ ನೀವು ಕುಡಿಯಿರಿ.” ಅಂತೂ ಎರಡನೇ ಚರ್ಮದ ಚೀಲದ ವೈನ್ ಕೂಡ ಬೇಗನೇ ಖಾಲಿಯಾಯಿತು. ಅದನ್ನು ಕುಡಿದ ಕಾವಲುಗಾರರೆಲ್ಲರೂ ಪ್ರಜ್ನೆ ತಪ್ಪಿ ನೆಲಕ್ಕೆ ಬಿದ್ದರು. ಯಾಕೆಂದರೆ ಆ ವೈನಿಗೆ ತಮ್ಮ ಆಫೀಮ್ ಬೆರೆಸಿದ್ದ.

ತಕ್ಷಣವೇ ಅರಮನೆಯ ಆವರಣ ಗೋಡೆಯನ್ನೇರಿದ ತಮ್ಮ. ನೇತಾಡುತ್ತಿದ್ದ ಅಣ್ಣನ ರುಂಡವಿಲ್ಲದ ದೇಹವನ್ನು ಇಳಿಸಿ, ಕತ್ತೆಯ ಬೆನ್ನಿನಲ್ಲಿ ಹಾಕಿಕೊಂಡು ಮನೆಗೆ ಮರಳಿದ. ಇದನ್ನು ತಿಳಿದಾಗ ಫಾರೋನಿಗೆ ತಲೆಕೆಟ್ಟು ಹೋಯಿತು. ಅಲ್ಲಿದ್ದ ಕಾವಲುಗಾರರಿಗೆ ಛಡಿಯೇಟಿನ ಶಿಕ್ಷೆ ನೀಡಿದ.

ಕಳ್ಳನನ್ನು ಹಿಡಿಯಲಿಕ್ಕಾಗಿ ಫಾರೋ ಇನ್ನೊಂದು ಉಪಾಯ ಮಾಡಿದ. ರೂಪವತಿ ರಾಜಕುಮಾರಿಯನ್ನು ವಿದೇಶಿ ಯುವತಿಯಂತೆ ವೇಷಪಲ್ಲಟ ಮಾಡಿಸಿ, ಅರಮನೆಯ ಹೊರಗೆ ಒಂದು ಡೇರೆಯಲ್ಲಿ ಕೂರಿಸಿದ. ಅನಂತರ ರಾಜಧಾನಿಯಲ್ಲಿ ಹೀಗೆಂದು ಡಂಗುರ ಹೊಡೆಸಲಾಯಿತು: “ಶ್ರೀಮಂತ ವಿದೇಶಿ ಯುವತಿಯನ್ನು ಮದುವೆಯಾಗುವ ಗಂಡು ಬೇಕಾಗಿದೆ. ಅತ್ಯಂತ ಧೈರ್ಯದ ಮತ್ತು ಮೋಸದ ಕೆಲಸ ಮಾಡಿದಾತನನ್ನು ಅವಳು ಮದುವೆಯಾಗುತ್ತಾಳೆ.”

ಇದು ತನ್ನನ್ನು ಪತ್ತೆ ಮಾಡಲು ಹೂಡಿದ ಸಂಚು ಎಂದು ತಮ್ಮನಿಗೆ ಅರ್ಥವಾಯಿತು. ಆದರೂ ಅವನು ಸವಾಲನ್ನು ಎದುರಿಸಲು ಸಿದ್ಧನಾದ. ತಾನು ಫಾರೋನಿಗಿಂತ ಜಾಣ ಎಂಬುದನ್ನು ತೋರಿಸಲು ನಿರ್ಧರಿಸಿದ.

ಅರಮನೆಗೆ ಹೋಗುವ ಹಾದಿಯಲ್ಲಿ ಗಲ್ಲುಗಂಬಗಳನ್ನು ಹಾದುಹೋದ ತಮ್ಮ. ಅಲ್ಲಿ ನೇತಾಡುತ್ತಿದ್ದ ಒಂದು ಶವದ ಕೈಯನ್ನು ಕತ್ತರಿಸಿ, ತನ್ನ ಉಡುಪಿನೊಳಗೆ ಅಡಗಿಸಿಕೊಂಡ. ಅನಂತರ ಆ ಡೇರೆಯನ್ನು ಧೈರ್ಯದಿಂದ ಪ್ರವೇಶಿಸಿ, ತಾನು ಸವಾಲು ಎದುರಿಸಲು ಬಂದಿದ್ದೇನೆಂದು ತಿಳಿಸಿದ.

“ನಿನ್ನ ಕತೆಯನ್ನೆಲ್ಲ ಹೇಳು” ಎಂದಳು ಅಲ್ಲಿದ್ದ ಯುವತಿ (ರಾಜಕುಮಾರಿ). ತಮ್ಮ ತನ್ನ ಸಾಹಸಗಳನ್ನೆಲ್ಲ ತಿಳಿಸಿದ. ಆಕೆಗೆ ತನ್ನ ತಂದೆ ಹುಡುಕುತ್ತಿರುವ ಆಸಾಮಿ ಇವನೇ ಎಂದು ಸ್ಪಷ್ಟವಾಯಿತು. "ಸರಿ. ನಾನು ನಿನ್ನವಳು. ನಿನ್ನ ಕೈ ಕೊಡು” ಎಂದಳು.

ತನ್ನ ಕೈಯನ್ನು ಅವಳಿಗೆ ಕೊಡುವ ಬದಲಾಗಿ, ತಮ್ಮ ತಾನು ಕತ್ತರಿಸಿ ತಂದಿದ್ದ ಕೈಯನ್ನು ಅವಳಿಗಿತ್ತ. ಅದನ್ನು ಬಲವಾಗಿ ಹಿಡಿದುಕೊಂಡ ರಾಜಕುಮಾರಿ, “ಕಾವಲುಗಾರರೇ ಬನ್ನಿ. ನಾನು ಕಳ್ಳನನ್ನು ಹಿಡಿದಿದ್ದೇನೆ” ಎಂದು ಕೂಗಿದಳು. ಆದರೆ, ತಮ್ಮ ಡೇರೆಯಿಂದ ಹೊರ ನುಗ್ಗಿ, ಕಾವಲುಗಾರರು ಒಳಬರುವ ಮುಂಚೆ ಓಡಿ ಹೋದ.

ಈಗ ಫಾರೋ ತಮ್ಮನ ಧೈರ್ಯವನ್ನೂ ಜಾಣ್ಮೆಯನ್ನೂ ಮೆಚ್ಚಲೇ ಬೇಕಾಯಿತು. ಇವೆಲ್ಲ ಸಾಹಸ ಮಾಡಿದ ಯುವಕನನ್ನು ಕ್ಷಮಿಸಲಾಗಿದೆ ಮತ್ತು ಆತನಿಗೆ ರಾಜಕುಮಾರಿಯನ್ನು ಕೊಟ್ಟು ಮದುವೆ ಮಾಡಲಾಗುವುದು ಎಂದು ಆತ ರಾಜ-ಘೋಷಣೆ ಹೊರಡಿಸಿದ.

ಆದ್ದರಿಂದ ತಮ್ಮ ರಾಜನ ಆಸ್ಥಾನಕ್ಕೆ ಹೋಗಿ, ರಾಜನೆದುರು ತನ್ನನ್ನು ಸಮರ್ಪಿಸಿಕೊಂಡ. ತಕ್ಷಣವೇ ಆತನನ್ನು ಗೌರವಿಸಿ, ರಾಜಕುಮಾರಿಯೊಂದಿಗೆ ಮದುವೆ ಮಾಡಲಾಯಿತು. ಮುಂದೆ, ಎರಡನೇ ಫಾರೋನ ಮರಣಾನಂತರ ಆತನೇ ಈಜಿಪ್ಟಿನ ಫಾರೋ ಆಗಿ ರಾಜ್ಯವಾಳಿದ.