ರಾಜನ ಸಾಮ್ರಾಜ್ಯ ದಾಹ

ರಾಜನ ಸಾಮ್ರಾಜ್ಯ ದಾಹ

ಪಕ್ಕದ ರಾಜ್ಯದ ಸನ್ಯಾಸಿಯೊಬ್ಬರು ಹಂಪೆಯನ್ನು ನೋಡಲು ಬಂದರು. ಆಗಿನ ದಿನಗಳಲ್ಲಿ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿತ್ತು. ಬೀದಿಗಳಲ್ಲಿ ಮುತ್ತು, ರತ್ನಗಳನ್ನು ಮಾರುತ್ತಿದ್ದರು. ಹಲವು ಮಹಡಿಯ ಮಹಲುಗಳು ಅಲ್ಲಿದ್ದವು. ಹಂಪೆಯ ಬೀದಿಯಲ್ಲಿ ಸನ್ಯಾಸಿಯು ನಡೆಯುತ್ತಾ, ಹಂಪೆಯ ವೈಭವವನ್ನು ನೋಡುತ್ತಾ ಸಾಗುತ್ತಿದ್ದರು.

ಅವರಿಗೆ ಬೀದಿಯಲ್ಲಿ ಒಂದು ಚಿನ್ನದ ನಾಣ್ಯ ದೊರಕಿತು. ಕೆಲವು ಕ್ಷಣಗಳ ಕಾಲ ಅದನ್ನೇ ನೋಡುತ್ತಾ ನಿಂತರು. ಬೀದಿಯಲ್ಲಿ ದೊರಕಿದ ನಾಣ್ಯವನ್ನು ತೆಗೆದುಕೊಳ್ಳಬಾರದು ಎಂಬ ನಂಬಿಕೆ ಆಗಿನ ದಿನಗಳಲ್ಲಿ ಇತ್ತು. ಕೊನೆಗೆ, ಚಿನ್ನದ ನಾಣ್ಯವನ್ನು ಕೈಗೆತ್ತಿಕೊಂಡು ‘ಯಾರಿಗಾದರೂ ಅವಶ್ಯಕತೆ ಇದ್ದರೆ ಅವರಿಗೆ ಕೊಡಲು ಆಗುತ್ತದೆ ‘ ಎಂದು ತಮ್ಮ ಜೋಳಿಗೆಗೆ ಹಾಕಿಕೊಂಡರು. ತಾನು ಎಂತಿದ್ದರೂ ಸನ್ಯಾಸಿ, ತನಗೆ ಈ ನಾಣ್ಯ ಬೇಕಾಗಿಲ್ಲ, ಬಡವರಿಗೋ, ಕಷ್ಟದಲ್ಲಿರುವವರಿಗೋ ಕೊಟ್ಟರಾಯಿತು ಎಂದು ನಡೆಯುತ್ತಾ ಹೊರಟರು.

ಅವರ ದೃಷ್ಟಿಯಲ್ಲಿ ಆ ನಾಣ್ಯವನ್ನು ಸ್ವೀಕರಿಸುವ ಅರ್ಹತೆ ಉಳ್ಳವರು ಯಾರೂ ದೊರಕಲಿಲ್ಲ. ಎಲ್ಲರೂ ಅವರವರ ಪಾಡಿಗೆ ನೆಮ್ಮದಿಯಿಂದ ಇದ್ದರು. ಒಂದೆರಡು ಬೀದಿಯನ್ನು ಸುತ್ತಿದ ನಂತರ, ಸನ್ಯಾಸಿಯು ತನ್ನ ಎದುರು ಬಂದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಕರೆದರು. ಮೇಲ್ನೋಟಕ್ಕೆ ಆ ವ್ಯಕ್ತಿ ಬಡವನ ರೀತಿ ಕಾಣಿಸುತ್ತಿದ್ದ. ‘ಈ ಚಿನ್ನದ ನಾಣ್ಯ ತೆಗೆದುಕೋ; ಊಟ ತಿಂಡಿ ಮಾಡಲು ಅನುಕೂಲವಾಗುತ್ತದೆ' ಎಂದು ಆತನಿಗೆ ನಾಣ್ಯ ನೀಡಲು ಹೋದರು.

‘ಸ್ವಾಮಿ, ನಿಮಗೆ ನನ್ನ ನಮಸ್ಕಾರಗಳು. ಇದೇಕೆ ಈ ನಾಣ್ಯವನ್ನು ನನಗೆ ಕೊಡುವಿರಿ? ‘ ಎಂದು ಆ ವ್ಯಕ್ತಿ ಕೇಳಿದ. ‘ನಿನ್ನನ್ನು ಕಂಡರೆ ಕಷ್ಟದಲ್ಲಿರುವಂತೆ ಕಾಣುತ್ತಿದೆ. ಅದಕ್ಕೇ ಈ ಚಿನ್ನದ ನಾಣ್ಯ ತೆಗೆದುಕೋ’ ಎಂದರು ಸನ್ಯಾಸಿ.

‘ಹಾಗೇನಿಲ್ಲ. ಈಗ ತಾನೇ ಆನೆಗೊಂದಿಯಿಂದ ನಡೆದುಕೊಂಡು ಬಂದೆ. ತುಸು ಆಯಾಸವಾಗಿದೆ. ಊಟ ತಿಂಡಿಗೆ ಈ ಹಂಪಿಯಲ್ಲಿ ಕೊರತೆಯಿಲ್ಲ. ಮಧ್ಯಾಹ್ನ ಅರವಟ್ಟಿಯಲ್ಲಿ ಏನಾದರೂ ಸೇವಿಸುತ್ತೇನೆ. ಸಂಜೆಗೆ ಆನೆಗೊಂದಿಗೆ ಹೋಗುತ್ತೇನೆ. ಅಲ್ಲಿ ನನ್ನ ಜಮೀನಿದೆ. ದೇವರು ನೆಮ್ಮದಿಯಾಗಿ ಇಟ್ಟಿದ್ದಾನೆ. ಈ ಚಿನ್ನದ ನಾಣ್ಯ ನನಗೆ ಬೇಡಪ್ಪ... ಆ ರೀತಿ ಸುಮ್ಮನೆ ತೆಗೆದುಕೊಳ್ಳಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ' ಎಂದು ಆ ವ್ಯಕ್ತಿ ಹೊರಟು ಹೋದ.

ಸನ್ಯಾಸಿಗೆ ಅಚ್ಚರಿ ! ಚಿನ್ನದ ನಾಣ್ಯ ನೀಡಿದರೂ, ಹಂಪೆಯ ಜನ ಬೇಡ ಎನ್ನುತ್ತಾರಲ್ಲ ಎಂಬ ವಿಸ್ಮಯ. ಇನ್ನೂ ಒಂದಿಬ್ಬರಿಗೆ ಆ ನಾಣ್ಯ ನೀಡಲು ಹೋದರು. ಅವರು ಸಹ ಬೇಡ ಎಂದರು.

ಸಂಜೆಯಾಯಿತು. ಸನ್ಯಾಸಿಯು ಹಂಪಿಯಲ್ಲಿದ್ದ ಒಂದು ಧರ್ಮಛತ್ರದಲ್ಲಿ ರಾತ್ರಿ ಕಳೆದರು. ಮರುದಿನ ಬೆಳಿಗ್ಗೆ ಎದ್ದು, ಮುಂದಿನ ಊರಿಗೆ ಹೋಗೋಣ ಎಂದು ಸನ್ಯಾಸಿ ಹೊರಟರು. ಸ್ವಲ್ಪ ದೂರ ಸಾಗಿದಾಗ ರಾಜನು ತನ್ನ ಸೈನಿಕರೊಂದಿಗೆ ಬರುತ್ತಿರುವುದು ಕಾಣಿಸಿತು. ಸನ್ಯಾಸಿಯನ್ನು ಕಂಡು, ರಾಜನು ಕುದುರೆಯಿಂದ ಕೆಳಗಿಳಿದು, ನಮಸ್ಕರಿಸಿದ. ‘ಸನ್ಯಾಸಿಗಳೇ, ನೀವು ಎದುರಾದದ್ದು ತುಂಬಾ ಒಳ್ಳೆಯದಾಯಿತು. ಸಾಮ್ರಾಜ್ಯ ವಿಸ್ತರಣೆಗಾಗಿ, ನಾನು ಪಕ್ಕದ ರಾಜ್ಯದ ಮೇಲೆ ಯುದ್ಧಕ್ಕೆ ಹೊರಟಿದ್ದೇನೆ. ವಿಜಯಿಯಾಗು ಎಂದು ತಾವು ಆಶೀರ್ವಾದ ಮಾಡಬೇಕು' ಎಂದು ರಾಜನು ಸನ್ಯಾಸಿಯ ಕಾಲಿಗೆರಗಿದ.

ಸನ್ಯಾಸಿಯು ರಾಜನಿಗೆ ಆಶೀರ್ವದಿಸಿ, ತನ್ನ ಜೋಳಿಗೆಯಿಂದ ತನಗೆ ಸಿಕ್ಕ ಚಿನ್ನದ ನಾಣ್ಯವನ್ನು ತೆಗೆದು ರಾಜನಿಗೆ ನೀಡಿದರು. ರಾಜನಿಗೆ ಅಚ್ಚರಿ. ಸನ್ಯಾಸಿ ನೀಡಿದ ಚಿನ್ನದ ನಾಣ್ಯವು ಆ ರಾಜನೇ ತನ್ನ ಟಂಕಸಾಲೆಯಲ್ಲಿ ಅಚ್ಚು ಹಾಕಿಸಿದ ನಾಣ್ಯ. ‘ಸ್ವಾಮಿ, ಈ ನಾಣ್ಯವನ್ನು ನನಗೆ ನೀಡಿದ್ದರ ಹಿಂದಿನ ಮರ್ಮವೇನು?’ ಎಂದು ವಿನಯದಿಂದ ರಾಜ ಕೇಳಿದ. 

‘ಮಹಾರಾಜರೇ, ಈ ನಾಣ್ಯವು ನಿನ್ನೆ ಇದೇ ಊರಿನ ಬೀದಿಯಲ್ಲಿ ನನಗೆ ಸಿಕ್ಕಿತು. ಯಾರಾದರೂ ಕಷ್ಟದಲ್ಲಿರುವವರಿಗೆ, ಅಗತ್ಯ ಇರುವವರಿಗೆ ಕೊಡೋಣ ಎಂದು ಇಟ್ಟುಕೊಂಡೆ. ನೋಡಿದರೆ, ನಿಮ್ಮ ರಾಜ್ಯದಲ್ಲಿ ಎಲ್ಲರೂ ನೆಮ್ಮದಿಯಿಂದ ಇದ್ದಾರೆ. ಆದ್ದರಿಂದ ನಾಣ್ಯ ನನ್ನ ಬಳಿಯೇ ಉಳಿಯಿತು. ಈಗ ನೀನು ಎದುರಾದೆ. ಈ ಊರಿನಲ್ಲಿ ಇದೇ ಮೊದಲ ಬಾರಿ ‘ಇನ್ನೂ ಬೇಕು' ಎಂಬ ವ್ಯಕ್ತಿಯಾಗಿ ನೀನು ನನಗೆ ಸಿಕ್ಕಿದ್ದೀಯಾ. ಅದಕ್ಕೇ ನಿನಗೆ ಕೊಟ್ಟೆ' ಎಂದು ಸನ್ಯಾಸಿ ನಕ್ಕರು.

ತನಗಿದ್ದ ಸಾಮ್ರಾಜ್ಯ ದಾಹವು ರಾಜನಿಗೆ ಅರ್ಥವಾಯಿತು. ಆತ ತನ್ನ ಅರಮನೆಗೆ ವಾಪಾಸಾದ ಮತ್ತು ಯುದ್ಧಕ್ಕೆ ಹೋಗುವುದನ್ನು ರದ್ದು ಮಾಡಿದ.

-ಶಶಾಂಕ್ ಮುದೂರಿ (ವೇದಾಂತಿ ಹೇಳಿದ ಕಥೆ, ವಿಶ್ವವಾಣಿ ಕೃಪೆಯಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ