ರಾಜಮಾತೆ ಕೆಂಪನಂಜಮ್ಮಣ್ಣಿ

ರಾಜಮಾತೆ ಕೆಂಪನಂಜಮ್ಮಣ್ಣಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಜಾನನ ಶರ್ಮ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೪೯೫.೦೦, ಮುದ್ರಣ: ೨೦೨೪

ಪುನರ್ವಸು, ಚೆನ್ನಭೈರಾದೇವಿ ಮುಂತಾದ ಚಾರಿತ್ರಿಕ ಕಾದಂಬರಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ ಬರಹಗಾರರಾದ ಡಾ ಗಜಾನನ ಶರ್ಮ ಅವರ ನೂತನ ಕಾದಂಬರಿ ‘ರಾಜಮಾತೆ ಕೆಂಪನಂಜಮ್ಮಣ್ಣಿ' ಇತ್ತೀಚೆಗೆ ಬಿಡುಗಡೆಯಾಗಿದೆ. ಮೈಸೂರಿನ ರಾಜ ಮನೆತನದ ಬಗ್ಗೆ ಬರೆದ ಈ ಐತಿಹಾಸಿಕ ಕಾದಂಬರಿಯ ಕುರಿತು ಸ್ವತಃ ಲೇಖಕರು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ...

“೨೦೦೨ಕ್ಕೆ ಕರ್ನಾಟಕದ ವಿದ್ಯುತ್ ಇತಿಹಾಸಕ್ಕೆ ನೂರು ವರ್ಷ ತುಂಬಿತ್ತು. ಆ ಸಂದರ್ಭದಲ್ಲಿ ನಾನು, "ಬೆಳಕಾಯಿತು ಕರ್ನಾಟಕ" ಎಂಬ, ರಾಜ್ಯದ ನೂರು ವರ್ಷಗಳ : ವಿದ್ಯುತ್ ಇತಿಹಾಸ ಕುರಿತ ಕೃತಿಯೊಂದನ್ನು ರಚಿಸಿದ್ದೆ. ಆ ಕೃತಿಯನ್ನು ರಚಿಸುವ ಸಂದರ್ಭದಲ್ಲಿ ವಿದ್ಯುತ್‌ ಇತಿಹಾಸದ ಅಧ್ಯಯನ ನಡೆಸುತ್ತಿದ್ದ ನನಗೆ ಭಾರತದಲ್ಲೇ ಮೊದಲಿಗೆ, ೧೯೦೨ರಷ್ಟು ಹಿಂದೆಯೇ ಬೃಹತ್ ವಿದ್ಯುತ್ ಸ್ಥಾವರವೊಂದನ್ನು ಸ್ಥಾಪಿಸಿದ್ದು ಮೈಸೂರು ಸಂಸ್ಥಾನ ಎಂಬ ಸಂಗತಿ ತಿಳಿದು ರೋಮಾಂಚನವಾಗಿತ್ತು. ದೇಶದಲ್ಲಿ ಕರೆಂಟ್, ವೋಲ್ವೇಜ್, ಪವರ್, ಎನರ್ಜಿ ಮುಂತಾದ ಪದಗಳ ಅರ್ಥವೇ ತಿಳಿಯದಿದ್ದ ಆ ಕಾಲಘಟ್ಟದಲ್ಲಿ ಮೈಸೂರಿನಂತಹ ಪುಟ್ಟ ಸಂಸ್ಥಾನ ವಿದ್ಯುತ್ ಸ್ಥಾವರವೊಂದನ್ನು ಕಟ್ಟಿ ನಿಲ್ಲಿಸಿದ್ದು ಹೇಗೆಂಬ ಅಚ್ಚರಿ ನನ್ನದಾಗಿತ್ತು. ಅಧ್ಯಯನ ಮುಂದುವರೆದಂತೆ, ಅದು ಸಾಧ್ಯವಾಗಿದ್ದು ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಮೈಸೂರು ಸಂಸ್ಥಾನದ ರೀಜೆಂಟ್ ಆಗಿದ್ದ ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ರವರ ದೂರದೃಷ್ಟಿಯಿಂದ ಎಂಬುದು ತಿಳಿದಿತ್ತು. ಆ ಕಾಲದಲ್ಲಿ ಇಡೀ ಜಗತ್ತಿನಲ್ಲಿ ಇದ್ದದ್ದೇ ಕೇವಲ ಬೆರಳೆಣಿಕೆಯಷ್ಟು ವಿದ್ಯುತ್ ಸ್ಥಾವರಗಳು. ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನವಂತೂ ಹೊಚ್ಚ ಹೊಸತು. ವಿದ್ಯುತ್ ಪ್ರಸರಣ ಕಲ್ಪಿಸಲಾರದ ಕ್ಲಿಷ್ಟಕಾರ್ಯ. ಅಂತಿರುವ ಕಾಲದಲ್ಲೇ ರಾಜ್ಯದಲ್ಲಿ ಶಿವನಸಮುದ್ರದಿಂದ ಕೋಲಾರಕ್ಕೆ ಪ್ರಪಂಚದಲ್ಲೇ ಉದ್ದದ ಪ್ರಸರಣ ಮಾರ್ಗದ ಮೂಲಕ ವಿದ್ಯುತ್ ರವಾನೆ ನಡೆದಿತ್ತು! ಇಂಥದ್ದೊಂದು ಸಾಹಸ ಮೈಸೂರು ರಾಜ್ಯಕ್ಕೆ ಸಾಧ್ಯವಾದದ್ದು ಹೇಗೆ? ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಪ್ರಾಂತ್ಯಗಳಾಗಿದ್ದ ಕಲ್ಕತ್ತ, ಬೊಂಬಾಯಿ ಮತ್ತು ಮದ್ರಾಸುಗಳೇ ಕೈ ಹಾಕದಿದ್ದ ಸಾಹಸಕ್ಕೆ ಮೈಸೂರು ಮುಂದಾಗಿದ್ದು ಯಾವ ಧೈರ್ಯದಿಂದ ಎಂಬ ಪ್ರಶ್ನೆ ನನ್ನದಾಗಿತ್ತು.

ಅಧ್ಯಯನ ಮುಂದುವರೆದಂತೆ, ಕೇವಲ ವಿದ್ಯುತ್ ಸ್ಥಾವರ ಮಾತ್ರವಲ್ಲ, ದೇಶದಲ್ಲಿ ವಿದ್ಯುತ್ ಇಲಾಖೆಯೊಂದನ್ನು ಹುಟ್ಟುಹಾಕಿದ ಮೊದಲ ಸಂಸ್ಥಾನವೂ ಮೈಸೂರು ಎಂಬುದು ತಿಳಿಯಿತು. ೧೯೦೨ರಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಯ ಸಂದರ್ಭದಲ್ಲಿ ರಾಜಮಾತೆಯವರು ಜನರಲ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಒಂದು ವರ್ಷ ಸ್ಥಾವರ ಮತ್ತು ಪ್ರಸರಣದ ನಿರ್ವಹಣೆ ಕಂಪನಿಗೇ ಸೇರಿತ್ತು. ಆ ಒಪ್ಪಂದ ಮುಗಿಯುವ ಹಂತದಲ್ಲಿ ಅಂದರೆ ೧೯೦೩ರ ಉತ್ತರಾರ್ಧದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು, ಸ್ಥಾವರ, ಪ್ರಸರಣ ಮತ್ತು ವಿತರಣೆಗಳ ಉಸ್ತುವಾರಿಗಾಗಿ ಸಂಸ್ಥಾನದಲ್ಲಿ ವಿದ್ಯುತ್ ಇಲಾಖೆಯನ್ನು, ಗೋಮೆಡ್ (Government of Mysore electrical department- Gomed) ಸ್ಥಾಪಿಸಿದ್ದರು. ಅಷ್ಟು ಮಾತ್ರವಲ್ಲ, ದೇಶದಲ್ಲಿ ೧೯೦೫ರಲ್ಲೇ ಸುಸ್ಥಿರ ವಿದ್ಯುತ್‌ ಪಡೆದ ಮೊದಲ ನಗರವಾಗಿತ್ತು ಬೆಂಗಳೂರು. ಇಷ್ಟು ಹೇಳಿದರೆ ಮೈಸೂರಿನ ವಿದ್ಯುತ್ ಇತಿಹಾಸದ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಮೈಸೂರು ವಿದ್ಯುತ್ ಕ್ಷೇತ್ರದ ಬಹುತೇಕ ವಿಭಾಗದಲ್ಲಿ ಸ್ವಾವಲಂಬಿಯಾಗಿತ್ತು. ಆಗಲೇ ರಾಜ್ಯದಲ್ಲಿ ವಿದ್ಯುತ್‌ ಟ್ರಾನ್ಸಫಾರ್ಮರ್, ಇನ್ಸುಲೇಟರ್, ಬಲ್ಫ್, ತಂತಿ, ಸ್ವಿಚ್ ಗೇರ್ ತಯಾರಿಸುವ ಕಾರ್ಖಾನೆಗಳಿದ್ದವು. ಇಡೀ ದೇಶದಲ್ಲಿ ವಿದ್ಯುತ್ ಎಂದರೆ ಮೈಸೂರು ಎನ್ನುವಷ್ಟು ಖ್ಯಾತಿ ಮೈಸೂರಿನದಾಗಿತ್ತು. ಮೈಸೂರು ಅರಮನೆ ಲಕ್ಷ ವಿದ್ಯುತ್ ದೀಪಗಳಿಂದ ಬೆಳಗುತ್ತಿತ್ತು. ಸ್ವಾತಂತ್ರ್ಯ ಪಡೆದ ಆರಂಭದಲ್ಲಿ ಇಡೀ ದೇಶದ ತಲಾವಾರು ಸರಾಸರಿ ವಿದ್ಯುತ್ ಬಳಕೆ ೧೦-೪೧ ಯೂನಿಟ್ಟುಗಳಾದರೆ ಮೈಸೂರು ರಾಜ್ಯದ ತಲಾವಾರು ಬಳಕೆ ಸರಾಸರಿ ೪೬.೮೧ ಯೂನಿಟ್ಟುಗಳಾಗಿತ್ತು. ಅಂದರೆ ದೇಶದ ಸರಾಸರಿಗಿಂತ ರಾಜ್ಯದ ಸರಾಸರಿ, ನಾಲ್ಕೂವರೆ ಪಟ್ಟು ಅಧಿಕವಾಗಿತ್ತು. ರಾಜ್ಯದ ಸ್ಥಾಪಿತ ವಿದ್ಯುತ್ ಸಾಮರ್ಥ್ಯ ೮೩.೨೦ ಕಿಲೋವ್ಯಾಟುಗಳಾಗಿತ್ತು. ಆ ಕಾಲಘಟ್ಟದಲ್ಲಿ ದೇಶದ ಬಹುತೇಕ ರಾಜ್ಯಗಳ ವಿದ್ಯುಚ್ಛಕ್ತಿ ಇಲಾಖೆಗಳ ಆಯಕಟ್ಟಿನ ಸ್ಥಾನಗಳನ್ನು ಮೈಸೂರಿನ ಇಂಜಿನಿಯರುಗಳೇ ತುಂಬಿದ್ದರು. ಸಿ ಎಂ ಕಾರಿಯಪ್ಪ, ಎನ್ ಎನ್ ಅಯ್ಯಂಗಾರ್, ಮಹಮದ್ ಹಯಾತ್ ಮುಂತಾದವರ ಉದಾಹರಣೆ ಕೊಡಬಹುದು. ಒಟ್ಟಿನಲ್ಲಿ ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಮಾದರಿ ಮೈಸೂರಿನ ಆಡಳಿತ ತನ್ನ ದೂರದೃಷ್ಟಿಯಿಂದ ಸ್ಥಾಪಿಸಿದ ಮೊಟ್ಟಮೊದಲ ವಿದ್ಯುತ್ ಸ್ಥಾವರ ಮುಂದೆ ಶಿಂಷಾ, ಮಹಾತ್ಮಾಗಾಂಧಿ ಮುಂತಾದ ವಿದ್ಯುತ್ ಸ್ಥಾವರಗಳವರೆಗೆ, ಮಾರಿಕಣಿವೆಯಿಂದ ಆರಂಭವಾದ ಜಲಾಶಯ ನಿರ್ಮಾಣ ಪರಂಪರೆ ಕೃಷ್ಣರಾಜ ಸಾಗರದ ಮೂಲಕ ಭದ್ರಾ ಜಲಾಶಯದವರೆಗೆ ಮುಂದುವರೆದಿತ್ತು. ಭಾರತದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಿದ ಮೊಟ್ಟಮೊದಲ ದೇಶೀಯ ಸಂಸ್ಥಾನ ಮೈಸೂರು ಆಗಿತ್ತು.

ಭಾರತೀಯ ವಿಜ್ಞಾನ ಮಂದಿರ ದೇಶದ ಮುಂಚೂಣಿ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿತ್ತು. ಬೆಂಗಳೂರು ಮೈಸೂರುಗಳಲ್ಲದೆ ಬಹುತೇಕ ಪಟ್ಟಣಗಳು ವಿದ್ಯುತ್ ಮತ್ತು ಕೊಳಾಯಿ ಕುಡಿಯುವ ನೀರು ಪಡೆದಿದ್ದವು. ರಾಜ್ಯದ ಒಂಬತ್ತೂ ಜಿಲ್ಲೆಗಳು ವಿದ್ಯುತ್‌ ಪಡೆದಿದ್ದವು. ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು, ಸಿಮೆಂಟು, ಕಾಗದ, ಸಕ್ಕರೆ ಗಂಧದೆಣ್ಣೆ ಮುಂತಾದ ಕೈಗಾರಿಕೆಗಳು ಆರಂಭಗೊಂಡಿದ್ದವು. ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡ ಹೆಚ್ ಎ ಎಲ್, ಸ್ವಾತಂತ್ರ್ಯ ಲಭಿಸಿದ ಆರಂಭದ ದಶಕದ, ಹೆಚ್ ಎಂ ಟಿ, ಐ ಟಿ ಐ, ಬಿ ಇ ಎಲ್ ಮುಂತಾದ ಕೇಂದ್ರೋದ್ಯಮಗಳಿಂದ ಬೆಂಗಳೂರು ಭಾರತದ ಕೈಗಾರಿಕಾ ಭೂಪಟದಲ್ಲಿ ಸ್ಥಾನ ಪಡೆದಿತ್ತು ಅದಕ್ಕೆ ಕಾರಣ, ೧೯೩೯ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಅಡಿಗಲ್ಲಿಟ್ಟು, ೧೯೪೮ರಲ್ಲಿ ಆರಂಭಗೊಂಡು, ೧೯೫೦ರಲ್ಲಿ ಬೆಂಗಳೂರು ತಲುಪಿದ ಜೋಗದ ಸಿರಿ ಬೆಳಕಾಗಿತ್ತು.

ಹಾಗಾಗಿ, ಕರ್ನಾಟಕ ಅದರಲ್ಲೂ ಬೆಂಗಳೂರು ಇಂದು ಹೀಗಿರುವುದಕ್ಕೆ ಅಂದು ಮಾದರಿ ಮೈಸೂರನ್ನು ತಲೆಯೆತ್ತಿ ನಿಲ್ಲುವಂತೆ ಕಟ್ಟಿ ನಿಲ್ಲಿಸಿದ ಮುತ್ಸದ್ದಿಗಳು ರಾಜಮಾತೆ ಕೆಂಪನಂಜಮ್ಮಣ್ಣಿಯಂತಹ ತಾಯಿಬೇರು ಮುಖ್ಯ ಕಾರಣ. ಮೇಲಿನ ಕಾಂಡ ಜಗತ್ತಿಗೆ ಕಾಣಿಸಿದರೂ ಭೂಮಿಯ ಆಳದಲ್ಲಿ ಹುದುಗಿರುವ ತಾಯಿಬೇರು ಹೊರಕ್ಕೆ ಕಾಣುವುದಿಲ್ಲ. ಆದರೆ ನೀರು ಸಾರ ಹೀರಿ, ಮರ ಆಕಾಶದೆತ್ತರಕ್ಕೆ ಬೆಳೆದು ನಿಲ್ಲಲು ಮತ್ತು ಅದು ಕೆಳಗುರುಳದಂತೆ ಸುಭದ್ರವಾಗಿ ನೆಲಕ್ಕೆ ಅಂಟಲು ತಾಯಿಬೇರು ಮಾತ್ರವೇ ಕಾರಣ ವಾಗಿರುತ್ತದೆ.

ಹಾಗಾಗಿಯೇ ಕೆಂಪನಂಜಮ್ಮಣ್ಣಿ ಎಂದರೆ ನನಗೊಂದು ಮಹದಚ್ಚರಿ. ತಣಿಯದ ಕುತೂಹಲ. ಮೂವತ್ತೈದು ವರ್ಷಗಳಷ್ಟು ಸುದೀರ್ಘ ಕಾಲ ನನಗೆ ಉದ್ಯೋಗವಿತ್ತ, ಸಂಬಳ ಸಾರಿಗೆ ಕೊಟ್ಟ. ಈಗಲೂ ಕೈ ತುಂಬ ನಿವೃತ್ತಿ ವೇತನ ಕೊಡುತ್ತಿರುವ ವಿದ್ಯುತ್ ಇಲಾಖೆಯ ಹುಟ್ಟಿಗೆ ಕಾರಣರಾದ ಅವರ ಮೇಲೆ ಹೇಳತೀರದ ಗೌರವ. ವಿದ್ಯುತ್ ಎಂಬ ವಿಸ್ಮಯದ ಹಿನ್ನೆಲೆಯೇ ಗೊತ್ತಿಲ್ಲದ ಆ ಕಾಲಘಟ್ಟದಲ್ಲಿ ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾದ ಆ ತಾಯಿಯ ಅಪ್ರತಿಮ ಜೀವನ ಚಿತ್ರಣವನ್ನು ಇಂದಿನ ಓದುಗರೆದುರು ತೆರೆದಿಟ್ಟು ಧನ್ಯನಾಗುವುದೇ ಈ ಕೃತಿ ರಚನೆಯ ಹಿಂದಿನ ಮೂಲ ಉದ್ದೇಶ.

ಆದರೆ ಕೆಂಪನಂಜಮ್ಮಣ್ಣಿಯವರ ಜೀವನ, ಸಾಧನೆ ಮತ್ತು ಅದನ್ನು ಸಾಧಿಸುವಲ್ಲಿ ಅವರು ಪಟ್ಟ ಪರಿಶ್ರಮ ಸಂಪೂರ್ಣ ಅರ್ಥವಾಗಲು ಅಂದಿನ ವಸಾಹತುಶಾಹಿ ಕಾಲ ಘಟ್ಟದಲ್ಲಿ ಮೈಸೂರು ರಾಜವಂಶ ಎದುರಿಸಿದ ತವಕ ತಲ್ಲಣಗಳನ್ನು ಅರ್ಥಮಾಡಿ ಕೊಳ್ಳಬೇಕು.”