ರಾಜಾ ಕೇರಳವರ್ಮರ ವಿಷಚಿಕಿತ್ಸೆ

ರಾಜಾ ಕೇರಳವರ್ಮರ ವಿಷಚಿಕಿತ್ಸೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ॥ ಟಿ.ವಿಶ್ವನಾಥರಾವ್
ಪ್ರಕಾಶಕರು
ಸಾಹಿತ್ಯ ಸಿಂಧು ಪ್ರಕಾಶನ, ನೃಪತುಂಗ ರಸ್ತೆ, ಬೆಂಗಳೂರು-೫೬೦೦೦೧
ಪುಸ್ತಕದ ಬೆಲೆ
ರೂ. ೫೦.೦೦ ಮುದ್ರಣ : ಎಪ್ರಿಲ್ ೨೦೧೭

ಈ ಹೊತ್ತಗೆಯು ಕೇರಳದ ಸುಪ್ರಸಿದ್ಧ ವಿಷವೈದ್ಯರಾದ ರಾಜಾ ಕೇರಳವರ್ಮರು ರಚಿಸಿರುವ ‘ವಿಷಚಿಕಿತ್ಸೆ' ಗ್ರಂಥದ ಕನ್ನಡದ ಭಾಷಾಂತರವಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ‘ಆಯುರ್ವೇದ ವಿಶಾರದ' ‘ಬಿಷಕ್' ಎಂದು ಬಿರುದಾಂಕಿತರಾದ ಡಾ॥ ವಿಶ್ವನಾಥರಾವ್ ಅವರು.

ಈ ವಿಭಾಗದಲ್ಲಿ ಮಾನವನ ಆರೋಗ್ಯಕ್ಕೆ ಹಾಗೂ ಒಮ್ಮೊಮ್ಮೆ ಪ್ರಾಣಕ್ಕೂ ಅಪಾಯವನ್ನೊಡ್ಡುವ ಅನೇಕ ವಿಷವಿರುವ ಪ್ರಾಣಿಗಳು, ಸಸ್ಯಗಳು ಹಾಗೂ ಖನಿಜಗಳ ವಿಚಾರವಾಗಿ ಸವಿಸ್ತಾರವಾದ ವರ್ಣನೆ ಮಾತ್ರವಲ್ಲದೆ, ಆಯಾ ವಿಷಗಳು ಉತ್ಪತ್ತಿ ಮಾಡುವ ಲಕ್ಷಣಗಳು ಹಾಗೂ ಅಂಥ ಸಂದರ್ಭದಲ್ಲಿ ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳನ್ನು ವಿವರಿಸಲಾಗಿದೆ.

ಆಯುರ್ವೇದದ ‘ಬ್ರಹತ್ತ್ರಯಿ'ಗಳೆಂದು ವಿಖ್ಯಾತವಾದ ಮಹರ್ಷಿ ಚರಕನಿಂದ ರಚಿಸಲ್ಪಟ್ಟ ‘ಚರಕ ಸಂಹಿತ', ಮಹರ್ಷಿ ಸುಶ್ರುತನಿಂದ ರಚಿಸಲ್ಪಟ್ಟ ‘ಸುಶ್ರುತಸಂಹಿತ', ಮತ್ತು ಆಚಾರ್ಯ ವಾಗ್ಭಟರಿಂದ ರಚಿತವಾದ ‘ಅಷ್ಟಾಂಗ ಹೃದಯ' ಗ್ರಂಥಗಳಲ್ಲಿ ಮತ್ತು ‘ಲಘುತ್ರಯಿ' ಎಂದು ಸುಪ್ರಸಿದ್ಧವಾದ ಮಾಧವಕರನ ‘ಮಾಧವನಿದಾನ'. ಭಾವಮಿಶ್ರನ ‘ಭಾವ ಪ್ರಕಾಶ'ದಲ್ಲೂ ಮತ್ತು ಶಾರಂಗಧರನ ‘ಶಾರಂಗಧರ ಸಂಹಿತ'ದಲ್ಲಿ ಮಾತ್ರವಲ್ಲದೆ ಆಯುರ್ವೇದ ವೈದ್ಯರ ಕೈಪಿಡಿಯೆಂದೇ ಪ್ರಸಿದ್ಧವಾದ ‘ಯೋಗರತ್ನಾಕರ' ದಲ್ಲೂ ಈ ವಿಷಚಿಕಿತ್ಸೆಯನ್ನು ತುಂಬಾ ವಿಶದವಾಗಿ ಪ್ರಸ್ತುತಪಡಿಸಿದ್ದಾರೆ. ಎಂದು ಮುನ್ನುಡಿ ಬರೆದಿದ್ದಾರೆ ಆಯುರ್ವೇದ ತಜ್ಞರಾದ ಡಾ॥ ವಿ.ಆರ್.ಪದ್ಮನಾಭರಾವ್ ಇವರು. 

ಲೇಖಕರಾದ ಡಾ.ಟಿ.ವಿಶ್ವನಾಥರಾವ್ ಅವರು ತಮ್ಮ ಮಾತಾದ ‘ಲೇಖಕರ ಮನೋಗತ' ದಲ್ಲಿ ಹೀಗೆ ಬರೆಯುತ್ತಾರೆ “ ...ಈ ದೃಷ್ಟಿಯಿಂದ ವಿಷ ಚಿಕಿತ್ಸೆಯ ಒಂದು ಇಲಾಖೆಯನ್ನೇ ಹೊಂದಿರುವ ಕೇರಳದ ಹೆಸರಾಂತ ಆರ್ಷೇಯ ವಿಷವೈದ್ಯರಾದ ರಾಜಾ ಕೇರಳವರ್ಮರ ‘ವಿಷಚಿಕಿತ್ಸೆ' ಎಂಬ ಚಿಕ್ಕದಾದರೂ ಅಮೂಲ್ಯವಾದ ಗ್ರಂಥವನ್ನು ಸರ್ವಜನಹಿತಕ್ಕಾಗಿ ಇಲ್ಲಿ ಅನುವಾದ ಮಾಡಿಕೊಡಲಾಗಿದೆ. ಈ ಗ್ರಂಥವನ್ನು ಕೇರಳದ ಪ್ರತಿಯೊಂದು ವಿಷಚಿಕಿತ್ಸಾ ಕೇಂದ್ರದಲ್ಲಿಯೂ ಇಡಲಾಗಿದೆ. ನಾನು ಇದನ್ನು ಮದರಾಸ್ ಎಲ್. ಐ. ಎಮ್. ಕಾಲೇಜಿನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಡಾ.ವಿಶ್ವೇಶ್ವರ ಶಾಸ್ತ್ರಿ ಇವರ ಪತ್ರಿಕಾ ಲೇಖನಗಳಿಂದ ಅನುವಾದ ಮಾಡಿ ಸರ್ವಜನಹಿತಕ್ಕೋಸ್ಕರ ಪ್ರಕಟಿಸುತ್ತಿದ್ದೇನೆ.”

ಪುಸ್ತಕದ ಪರಿವಿಡಿಯಲ್ಲಿ ೧೧ ಅಧ್ಯಾಯಗಳಿವೆ. ಹಾವು ಕಚ್ಚಿದವರಿಗೆ ಸಾಮಾನ್ಯ ಚಿಕಿತ್ಸೆ, ಉರಗಗಳ ಪ್ರಭೇದಗಳೂ, ಅವುಗಳ ದಂಶನ ಚಿಕಿತ್ಸೆಯೂ, ದಾರ್ವೀಕರ ಮತ್ತು ಇತರ ಉರಗಗಳ ದಂಶನದ ಲಕ್ಷಣಗಳೂ ವೇಗಾನುಸಾರ ಅವುಗಳ ಚಿಕಿತ್ಸೆಯೂ, ಮೂಷಿಕವಿಷ ಚಿಕಿತ್ಸಾ, ಚೇಳು ಕಡಿದದ್ದಕ್ಕೆ ಚಿಕಿತ್ಸೆ, ಜೇಡರಹುಳುವಿನ ವಿಷಕ್ಕೆ ಚಿಕಿತ್ಸೆ, ಮಾರ್ಜಾಲ ಮತ್ತು ಮುಂಗುಸಿಗಳ ವಿಷಕ್ಕೆ ಚಿಕಿತ್ಸೆ, ಅಲರ್ಕ ಚಿಕಿತ್ಸಾ, ಕುದುರೆ, ಮಂಗ ಮೊದಲಾದುವುಗಳು ಕಡಿದರೆ ಚಿಕಿತ್ಸೆ, ಸ್ಥಾವರ ವಿಷಲಕ್ಷಣಗಳೂ, ಚಿಕಿತ್ಸೆಯೂ ಹಾಗೂ ಪರಿಭಾಷಾ. 

ಪುಸ್ತಕದ ಮಾಹಿತಿಗಳು ಚೆನ್ನಾಗಿದ್ದರೂ ಅನುವಾದ ಮಾಡುವಾಗ ಬಳಸಿದ ಭಾಷೆ ಜನ ಸಾಮಾನ್ಯರಿಗೆ ಅರ್ಥವಾಗುವುದು ಬಹಳ ಕಷ್ಟ. ಉದಾಹರಣೆಗೆ ದಾರ್ವೀಕರ, ದಂಶನ, ಅಲರ್ಕ, ಸ್ಥಾವರ ವಿಷಲಕ್ಷಣ ಇತ್ಯಾದಿ. ಇವುಗಳನ್ನು ಓದುವಾಗ ಯಾವುದೋ ಭಾಷೆಯ ಪದಗಳನ್ನು ಓದುತ್ತಿದ್ದೇವೋ ಅನಿಸುತ್ತದೆ. ಸಾಮಾನ್ಯ ಆಡು ಭಾಷೆಯ ಪದಗಳನ್ನು ಬಳಸಿದ್ದರೆ ಈ ಪುಸ್ತಕ ಇನ್ನಷ್ಟು ಜನಸ್ನೇಹಿಯಾಗಬಹುದಿತ್ತು ಅನಿಸುತ್ತದೆ. ಮಾರ್ಜಾಲ ಎಂಬ ಪದದ ಬದಲು ಬೆಕ್ಕು ಎಂಬ ಸರಳ ಪದ ಬಳಕೆ ಮಾಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಹಾವು ಕಡಿತಕ್ಕೆ ಪರಿಹಾರಗಳನ್ನು ತಿಳಿಸುವಾಗಲೂ ಬಳಸಿರುವ ಕಠಿಣ ಭಾಷೆಯು ಪರಿಹಾರವನ್ನು ಇನ್ನಷ್ಟು ಜಟಿಲಗೊಳಿಸಿದೆ. 

ಸುಮಾರು ೫೫ ಪುಟಗಳ ಈ ಪುಸ್ತಕವನ್ನು ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನದವರು ಪ್ರಕಟಿಸಿದ್ದಾರೆ.