ರಾಜಾ ರವಿವರ್ಮರ ಕುಂಚದ ಚಮತ್ಕಾರ!

ರಾಜಾ ರವಿವರ್ಮರ ಕುಂಚದ ಚಮತ್ಕಾರ!

ರಾವಣನು ಖಡ್ಗದಿಂದ ಜಟಾಯುವಿನ ರೆಕ್ಕೆಯನ್ನು ಕತ್ತರಿಸುತ್ತಿರುವ ಚಿತ್ರವನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಸೀತಾ ಮಾತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯು ತಡೆಯೊಡ್ಡಿದಾಗ ರಾವಣ ಜಟಾಯುವಿನ ರೆಕ್ಕೆ ಕತ್ತರಿಸುವ ಈ ಚಿತ್ರವು ಎಷ್ಟೊಂದು ನೈಜವಾಗಿದೆ. ಸೀತೆಯ ಮುಖದಲ್ಲಿನ ದಿಗಿಲು, ರಾವಣ ರೌದ್ರಾವತಾರ, ಜಟಾಯುವಿನ ಅಸಹಾಯತೆ ಎಲ್ಲವೂ ಎಷ್ಟೊಂದು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿದೆಯಲ್ಲವೇ? ಈ ಚಿತ್ರದ ರಚನೆಕಾರ ಯಾರೆಂದು ನಿಮಗೆ ತಿಳಿದಿರಲೂ ಬಹುದು. ಅವರೇ ಖ್ಯಾತ ಕಲಾವಿದ, ಕೇರಳ ರಾಜ್ಯದ ತಿರುವಾಂಕೂರು ರಾಜ ವಂಶಸ್ಥ ರಾಜಾ ರವಿವರ್ಮ (೧೮೪೮- ೧೯೦೬) ಇವರು.

ರಾಜಾ ರವಿವರ್ಮ ಹುಟ್ಟಿದ್ದು ೧೮೪೮ರ ಎಪ್ರಿಲ್ ೨೯ರಂದು, ಈಗ ಕೇರಳ ರಾಜ್ಯದಲ್ಲಿರುವ ತಿರುವಾಂಕೂರಿನ ಕಿಲ್ಲಿಮನೂರು ಎಂಬ ಊರಿನಲ್ಲಿ. ಇವರ ತಂದೆ ಎಝುಮಾವಿಲ್ ನೀಲಕಂಠನ್ ಭಟ್ಟತಿರಿಪಾದ ಹಾಗೂ ತಾಯಿ ಉಮಯಾಂಬ ಥಂಪುರಾಟ್ಟಿ. ಇವರದ್ದು ರಾಜ ಮನೆತನ. ಬಾಲ್ಯದಿಂದಲೇ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರವಿವರ್ಮರು ಚಿತ್ರಕಲೆಯ ಪ್ರಾಥಮಿಕ ಪಾಠಗಳನ್ನು ಮಧುರೈನಲ್ಲಿ ಕಲಿತು, ನಂತರ ಡಚ್ ಚಿತ್ರಕಾರ ಥಿಯೋಡೋರ್ ಜೆನ್ಸನ್ ಇವರಿಂದ ಕಲಿತರು. ನಿಧಾನವಾಗಿ ಚಿತ್ರಕಲೆಯಲ್ಲಿ ಪರಿಣತಿಯನ್ನು ಸಾಧಿಸುತ್ತಾ ಬಂದರು. ಅತ್ಯಂತ ಸಹಜ ಹಾಗೂ ಭಾವನಾ ಭರಿತ ಚಿತ್ರಗಳು ನೋಡುಗರ ಕಣ್ಮನ ಸೆಳೆಯಲು ಪ್ರಾರಂಭಿಸಿದವು. 

ಪೌರಾಣಿಕ ಪಾತ್ರಗಳಾದ ತಿಲೋತ್ತಮೆ, ಶಕುಂತಲೆ, ಶಂತನು ಹಾಗೂ ಸತ್ಯವತಿ, ದ್ರೌಪದಿ ಹಾಗೂ ಕೀಚಕ, ರಾಮ ಹಾಗೂ ವರುಣ ಮುಂತಾದ ಚಿತ್ರಗಳು ಜೀವತುಂಬಿದ ರೀತಿಯಲ್ಲಿತ್ತು. ಅದೇ ರೀತಿ ದೇವರುಗಳಾದ ಸರಸ್ವತಿ, ಲಕ್ಷ್ಮಿ, ಶ್ರೀಕೃಷ್ಣ, ಕಾಳಿ ಯ ಚಿತ್ರಗಳನ್ನೂ ಅತ್ಯಂತ ಆಕರ್ಷಕವಾಗಿ ಚಿತ್ರಿಸಿದ್ದರು. ೧೯ನೆಯ ಶತಮಾನದಲ್ಲಿ ಬಹುತೇಕ ಕ್ಯಾಲೆಂಡರ್ ಗಳಲ್ಲಿ ರವಿವರ್ಮರ ಚಿತ್ರಗಳೇ ರಾರಾಜಿಸುತ್ತಿದ್ದವು. ೫೦೦ ಕ್ಕೂ ಮೀರಿದ ಚಿತ್ರಗಳನ್ನು ರವಿವರ್ಮರು ರಚಿಸಿದ್ದಾರೆಂದು ಅಂದಾಜಿಸಲಾಗಿದೆ.

ತಿರುವಾಂಕೂರು ಸಂಸ್ಥಾನದ ದಿವಾನರಾಗಿದ್ದ ಟಿ.ಮಾಧವ ರಾವ್ ಅವರು ರವಿವರ್ಮರಿಗೆ ಮುದ್ರಣಾಲಯವನ್ನು ಸ್ಥಾಪಿಸುವಂತೆ ಸಲಹೆ ನೀಡುತ್ತಾರೆ. ಅದರಂತೆ ರವಿವರ್ಮರು ೧೮೯೪ರಲ್ಲಿ ಮುಂಬೈನ ಘಾಟ್ ಕೋಪರ್ ನಲ್ಲಿ ಲಿಥೋಗ್ರಾಫಿಕ್ ಪ್ರೆಸ್ ಆರಂಭಿಸುತ್ತಾರೆ. ಮಹಾಭಾರತ, ರಾಮಾಯಣ ಮತ್ತು ಪುರಾಣ ಕಥೆಗಳ ಚಿತ್ರಗಳನ್ನು ಈ ಮುದ್ರಣಾಲಯದಲ್ಲಿ ಕಲ್ಲಚ್ಚಿನಲ್ಲಿ ಮುದ್ರಿಸಲಾಗುತ್ತಿತ್ತು. ಆದರೆ ಮುದ್ರಣಾಲಯ ತೀವ್ರ ನಷ್ಟಹೊಂದಿದ ಕಾರಣ ರವಿವರ್ಮರು ಅದನ್ನು ೧೯೦೧ರಲ್ಲಿ ಮಾರಾಟ ಮಾಡಿಬಿಡುತ್ತಾರೆ. ರವಿವರ್ಮರ ಮುದ್ರಣಾಲಯದಂತೆಯೇ ಹೆಸರನ್ನು ಹೊಂದಿದ ಹಲವಾರು ಮುದ್ರಣಾಲಯಗಳು ಆ ಸಮಯದಲ್ಲಿ ಹುಟ್ಟಿಕೊಂಡಿದ್ದವು. ಅಲ್ಲಿ ಕೃತಿ ಚೌರ್ಯದಂತಹ ಕಾರ್ಯ ಮಾಡಲಾಗುತ್ತಿತ್ತು. ಈ ಬಗ್ಗೆ ರವಿವರ್ಮರು ಬಹಳ ನೊಂದುಕೊಂಡಿದ್ದರು. ಕೃತಿ ಚೌರ್ಯದ ಬಗ್ಗೆ ಕಾನೂನನ್ನು ತರಬೇಕೆಂದು ಅವರು ಗೋಪಾಲಕೃಷ್ಣ ಗೋಖಲೆಯವರಲ್ಲಿ ಮನವಿ ಮಾಡಿಕೊಂಡಿದ್ದರಂತೆ.

೧೯೦೬ರ ಅಕ್ಟೋಬರ್ ೨ರಂದು ರವಿವರ್ಮರು ನಿಧನ ಹೊಂದುತ್ತಾರೆ. ಅವರ ನಿಧನದ ಬಳಿಕ ಅವರ ಚಿತ್ರಗಳು ಒಂದೊಂದಾಗಿ ಖ್ಯಾತಿಯನ್ನು ಪಡೆಯಲಾರಂಬಿಸುತ್ತವೆ. ೧೯೧೧ರಲ್ಲಿ ಅವರು ಬಿಡಿಸಿದ ಹಸುವಿನ ಮೇಲೆ ಕುಳಿತಿದ್ದ ಅಷ್ಟಭುಜದ ದೇವಿಯ ಚಿತ್ರವನ್ನು ಬಾಂಬೆ ಸರಕಾರ ಮಾರಾಟ ನಿಷೇಧ ಮಾಡಿತ್ತು. ಅವರ ಪ್ರಕಾರ ಈ ಚಿತ್ರ ಗೋಹತ್ಯೆಯ ವಿರುದ್ಧ ಜನರನ್ನು ಪ್ರಚೋದಿಸುತ್ತದೆ ಎಂದಾಗಿತ್ತು. ರವಿವರ್ಮರ ದಮಯಂತಿ ಮತ್ತು ಗೆಳತಿಯ ಚಿತ್ರ ೧೧ ಕೋಟಿ ಬೆಲೆ ನೀಡಲಾಗಿತ್ತು. ತಿಲೋತ್ತಮೆಯ ಚಿತ್ರ ೫.೫ ಕೋಟಿ ಬೆಲೆ ನಿಗದಿಯಾಗಿತ್ತು. ಇವರ ಸುಮಾರು ೧೧ ಚಿತ್ರಗಳನ್ನು ಸೀರೆಯ ಮೇಲೆ ನೇಯ್ದು ಅದನ್ನು ೪೦ ಲಕ್ಷಕ್ಕೆ ಮಾರಾಟ ಮಾಡಿದ್ದು ಆ ಸಮಯಕ್ಕೆ ಗಿನ್ನೆಸ್ ದಾಖಲೆಯಾಗಿತ್ತು. ಈ ಸೀರೆ ೮ ಕಿಲೋ ತೂಕವಿತ್ತಂತೆ. ಅದನ್ನು ತಯಾರಿಸಲು ೩೬ ಕಲಾವಿದರು ಒಂದು ವರ್ಷ ಶ್ರಮಪಟ್ಟಿದ್ದರು. 

ರಾಜಾ ರವಿವರ್ಮರ ಚಿತ್ರಗಳಲ್ಲಿ ಸ್ವಲ್ಪ ೧೯೭೨ರಲ್ಲಿ ನಡೆದ ಅಗ್ನಿ ಅವಘಡದಲ್ಲಿ ಸುಟ್ಟುಹೋಗಿವೆ. ಸುಮಾರು ೭೫ ತೈಲ ಚಿತ್ರಗಳು ಅವರ ಹುಟ್ಟೂರಾದ ಕಿಲ್ಲಿಮನೂರಿನಲ್ಲಿರುವ ಚಿತ್ರ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಆಸಕ್ತ ಕಲಾಭಿಮಾನಿಗಳು ಅಲ್ಲಿಗೆ ಭೇಟಿ ನೀಡಿ ಅವರ ಕಲೆಯ ಮಹಿಮೆಯನ್ನು ಅರಿಯಬಹುದಾಗಿದೆ. ೧೯೦೪ರಲ್ಲಿ ರಾಜಾ ರವಿವರ್ಮರ ಚಿತ್ರಕಲಾ ಪ್ರತಿಭೆಯನ್ನು ಗಮನಿಸಿ ಅಂದಿನ ವೈಸರಾಯ್ ಲಾರ್ಡ್ ಕರ್ಜನ್ ಅವರಿಗೆ ಕೈಸರ್-ಇ- ಹಿಂದ್ ಚಿನ್ನದ ಮೆಡಲ್ ನೀಡಿ ಗೌರವಿಸಿದ್ದರು. ಭಾರತೀಯ ಅಂಚೆ ಇಲಾಖೆ ಅವರ ನೆನಪಿನಲ್ಲಿ ೧೯೭೧ರಲ್ಲಿ ಅಂಚೆ ಚೀಟಿಯೊಂದನ್ನು ಹೊರತಂದಿದೆ. 

ಭಾರತ ಕಂಡ ಅಪ್ರತಿಮ ಕಲಾವಿದರಲ್ಲಿ ರಾಜಾ ರವಿವರ್ಮ ಒಬ್ಬರು. ಇವರು ಶತಮಾನದ ಹಿಂದೆ ಬಿಡಿಸಿದ ಶ್ವೇತ ವಸ್ತ್ರಧಾರಿಣಿ, ವೀಣಾಪಾಣಿಯಾಗಿರುವ ಶಾರದಾ ದೇವಿಯ ಚಿತ್ರಗಳು ಈಗಲೂ ಹಳೆ ಮನೆಯ ಗೋಡೆಗಳಲ್ಲಿ ನೇತಾಡುತ್ತಿರಬಹುದು. ಅವರ ಚಿತ್ರಗಳಲ್ಲಿನ ಜೀವಂತಿಕೆಯ ಕಳೆ ಎಂದೂ ಮಾಸಲಾರದು. ಇಂತಹ ಓರ್ವ ಕಲಾವಿದರು ನಮ್ಮ ಭಾರತ ದೇಶದಲ್ಲಿ ಹುಟ್ಟಿದ್ದರು ಎಂಬುವುದು ನಮ್ಮ ಹೆಮ್ಮೆ ಅಲ್ಲವೇ?

ಚಿತ್ರ: ಅಂತರ್ಜಾಲ ತಾಣ