ರಾಜುವಿನ ಮರೆಗುಳಿತನ

ರಾಜುವಿನ ಮರೆಗುಳಿತನ

ರಾಜುವಿಗೆ ಮರೆವು ಜಾಸ್ತಿ. ಅವನು ಯಾವುದನ್ನೂ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಅದರಿಂದಾಗಿ ಅವಾಂತರಗಳು ನಡೆಯುತ್ತಿದ್ದವು.

"ರಾಜು, ನಿನಗೆ ಹೇಳಿದ್ದು ಯಾವುದೂ ನೆನಪೇ ಇರೋದಿಲ್ಲ! ಎಲ್ಲವನ್ನೂ ಮರೆತು ಬಿಡುತ್ತಿ” ಎಂದು ಅವನ ಅಮ್ಮ ಹಲವು ಸಲ ಹೇಳುತ್ತಿದ್ದಳು. “ಟೈಲರಿಗೆ ನಿನ್ನ ಹೊಸ ಷರಟು ಹೊಲಿಯಲು ನೆನಪು ಮಾಡಬೇಕಂತ ನಿನಗೆ ಮೂರು ಸಲ ಹೇಳಿರಲಿಲ್ಲವೇ? ನೀನು ಟೈಲರಿಗೆ ನೆನಪು ಮಾಡಿದಿಯಾ?” ಎಂದು ಕೇಳಿದಳು ಅಮ್ಮ.

“ಅಯ್ಯೋ, ನನಗೆ ಮರೆತೇ ಹೋಯಿತು” ಎಂಬುದು ರಾಜುವಿನ ಉತ್ತರ. “ಅದು ಹಾಗಿರಲಿ, ನೀನು ನೆನಪು ಮಾಡಿಕೊಳ್ಳಲು ಪ್ರಯತ್ನ ಮಾಡಿದಿಯಾ? ಈಗ ನೋಡು, ನೀನು ಹಳೆಯ ಷರಟು ಹಾಕಿಕೊಂಡೇ ನಿನ್ನ ಅಜ್ಜಿಯನ್ನು ಕಾಣಲು ಹೋಗಬೇಕು" ಎಂದು ಆಕ್ಷೇಪಿಸಿದಳು ಅಮ್ಮ.

ಅದೊಂದು ದಿನ ರಾಜುವಿನ ಊರಿಗೆ ಸರ್ಕಸ್ ಬಂತು. ಅದೊಂದು ಅದ್ಭುತ ಸರ್ಕಸ್. ಮುಖೇಶ್ ಕುಮಾರರ ಆ ಸರ್ಕಸಿನಲ್ಲಿ ಆನೆಗಳು, ಮಂಗಗಳು, ಜಿರಾಫೆ ಮತ್ತು ಚತುರ ವಿದೂಷಕರು ಇದ್ದರು.

ಕೆಲವು ಮಕ್ಕಳು ಸರ್ಕಸ್ ನೋಡಿ ಬಂದರು. ಸರ್ಕಸ್ ನೋಡೋದು ಎಷ್ಟು ಮಜವಾಗಿತ್ತೆಂದು ಅವರು ಗೆಳೆಯರಿಗೆಲ್ಲ ಹೇಳಿದರು. ರಾಜುವಿಗೂ ಸರ್ಕಸ್ ನೋಡಬೇಕೆಂಬ ಆಶೆ.

“ಸಾಧ್ಯವೇ ಇಲ್ಲ. ಈ ವಾರವಂತೂ ನಿನ್ನ ಮರೆಗುಳಿತನದಿಂದಾಗಿ ಹಲವು ಅವಾಂತರಗಳಾಗಿವೆ. ನಿನ್ನೆ ಶಾಲೆಗೆ ಪುಸ್ತಕಗಳನ್ನು ತಗೊಂಡು ಹೋಗೋದನ್ನೇ ಮರೆತು ಬಿಟ್ಟೆ. ಅದರಿಂದಾಗಿ ನೀನು ಒಂದು ಮಾರ್ಕ್ ಕಳೆದುಕೊಂಡೆ. ಮೊನ್ನೆ ಸೋಮವಾರ ಶಾಲೆಯ ಕ್ಯಾಂಟೀನಿನಲ್ಲೇ ಊಟ ಮಾಡು ಎಂದು ನಿನಗೆ ಹೇಳಿದ್ದೆ. ಆದರೆ ನೀನು ಮರೆತು ಮನೆಗೆ ಬಂದು, ನಿನಗೆ ಊಟ ಕೊಡಲು ಯಾರೂ ಇಲ್ಲವೆಂದು ಬಹಳ ಗಲಾಟೆ ಮಾಡಿದೆ. ನೀನು ಸರ್ಕಸ್ ನೋಡೋದು ಬೇಡವೇ ಬೇಡ" ಎಂದಳು ಅಮ್ಮ.

ಆ ಗುರುವಾರ ರಾಜು ತನ್ನ ಗೆಳೆಯನ ಮನೆಗೆ ಹೋಗಿ ಪುಸ್ತಕವೊಂದನ್ನು ತಗೊಂಡು ಹಿಂತಿರುಗುತ್ತಿದ್ದ. ಆಗ ಹಿರಿಯ ವ್ಯಕ್ತಿಯೊಬ್ಬ ಅಂಚೆಡಬ್ಬದ ಕಡೆಗೆ ಧಾವಿಸುತ್ತಿದ್ದುದನ್ನು ರಾಜು ನೋಡಿದ.

ಅಂಚೆಡಬ್ಬದ ಎದುರು ನಿಂತು ಅದರಲ್ಲಿದ್ದ “ಅಂಚೆ ತೆಗೆಯುವ ಸಮಯ”ವನ್ನು ನೋಡಿದ ಆ ಹಿರಿಯ ವ್ಯಕ್ತಿ ತಲೆ ಚಚ್ಚಿಕೊಂಡ. ಯಾಕೆಂದರೆ ಇನ್ನು ಅಂಚೆ ತೆಗೆಯುವ ಸಮಯ ಮರುದಿನ ಬೆಳಗ್ಗೆ! "ಛೇ, ನಾನೀಗ ಈ ಪತ್ರವನ್ನು ಅಂಚೆಡಬ್ಬಿಗೆ ಹಾಕಿದರೆ, ಇದು ಹೋಗಿ ತಲಪುವುದು ಶನಿವಾರ ಬೆಳಗ್ಗೆ. ಹಾಗಾಗಿ ನಾನೇ ಸ್ವತಃ ಹೋಗಿ ಈ ಪತ್ರ ಕೊಡ್ತೇನೆ” ಎಂದವನು ಗೊಣಗುಟ್ಟಿದ.

ಅಷ್ಟರಲ್ಲಿ ಅಲ್ಲಿಗೆ ಬಂದ ರಾಜುವನ್ನು ತಡೆದು ನಿಲ್ಲಿಸಿದ ಆ ಹಿರಿಯ ವ್ಯಕ್ತಿ ಕೇಳಿದ, “ಇಂಡಿಯನ್ ಸ್ಕೂಲ್ ಎಲ್ಲಿದೆ? ದೂರವಿದೆಯಾ?” ರಾಜು ಉತ್ತರಿಸಿದ, "ಹೌದು, ದೂರವಿದೆ. ಅದು ನನ್ನ ಶಾಲೆ. ನಾನು ದಿನವೂ ಅಲ್ಲಿಗೇ ಹೋಗೋದು. ಈ ರಸ್ತೆಯಲ್ಲಿ ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಿ…" ರಾಜುವಿನ ಮಾತನ್ನು ತಡೆಯುತ್ತಾ ಆ ಹಿರಿಯ ವ್ಯಕ್ತಿ ಹೇಳಿದ, "ಏನಂದೆ? ನೀನು ಇಂಡಿಯನ್ ಸ್ಕೂಲಿಗೆ ದಿನವೂ ಹೋಗುತ್ತಿ ಎಂದಿಯಾ? ಹಾಗಾದರೆ, ನಾಳೆ ಬೆಳಗ್ಗೆ ಈ ಪತ್ರವನ್ನು ನಿನ್ನ ಹೆಡ್‌ಮಾಸ್ಟರಿಗೆ ಕೊಡುತ್ತೀಯಾ? ಮರೆಯಬಾರದು.”

“ಓ, ಖಂಡಿತ ಕೊಡುತ್ತೇನೆ” ಎಂದು ಆ ಪತ್ರವನ್ನು ಹಿರಿಯ ವ್ಯಕ್ತಿಯಿಂದ ತಗೊಂಡ ರಾಜು, ಅದನ್ನು ತನ್ನ ಕೋಟಿನ ಜೇಬಿನಲ್ಲಿ ಹಾಕಿಕೊಂಡ. “ಮರೆಯಬೇಡ" ಎಂದು ಬಾರಿಬಾರಿ ಹೇಳುತ್ತಾ ಆ ಹಿರಿಯ ವ್ಯಕ್ತಿ ಹೊರಟು ಹೋದ. ಆ ಪತ್ರ ತಗೊಂಡು ಮನೆಗೆ ಹಿಂತಿರುಗಿದ ರಾಜು, ಮರುದಿನ ಅದನ್ನು ಹೆಡ್‌ಮಾಸ್ಟರಿಗೆ ಕೊಡಬೇಕೆಂಬುದನ್ನು ನೆನಪು ಮಾಡಿಕೊಳ್ಳಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದು ಅವನ ಕೋಟಿನ ಜೇಬಿನಲ್ಲೇ ಉಳಿಯಿತು.
ಮರುದಿನ ಶುಕ್ರವಾರ ಎಂದಿನಂತೆ ಬೆಳಗಾಯಿತು, ಸಂಜೆಯೂ ಆಯಿತು. ಅದಾಗಿ ಶನಿವಾರ ಬಂತು. ಅದು ಆ ಊರಿನಲ್ಲಿ ಸರ್ಕಸಿನ ಕೊನೆಯ ಪ್ರದರ್ಶನದ ದಿನ. ಆದ್ದರಿಂದ ರಾಜು ತನ್ನ ಗೆಳೆಯರೊಂದಿಗೆ ಸರ್ಕಸಿನ ಆವರಣದ ಹತ್ತಿರ ಹೋದ. ಅವರೆಲ್ಲರೂ ಸರ್ಕಸಿನ ರಕ್ಷಣಾ ಬೇಲಿಯ ಮೂಲಕ ಒಳಗೇನಿದೆ ಎಂದು ನೋಡಿದರು. ಅಲ್ಲಿದ್ದ ಪ್ರಾಣಿಗಳು, ವಿದೂಷಕರು ಎಲ್ಲವೂ ಈ ಮಕ್ಕಳಿಗೆ ಆಕರ್ಷಕವಾಗಿ ಕಾಣಿಸಿದವು.

ತಾವೂ ಸರ್ಕಸ್ ನೋಡಬೇಕಿತ್ತು ಎಂದು ಅವರೆಲ್ಲರೂ ಆಶೆ ಪಟ್ಟರು. ಅವರಲ್ಲೊಬ್ಬ ಹೇಳಿದ, “ಈ ಸರ್ಕಸಿನ ಟಿಕೇಟಿಗೆ ಜಾಸ್ತಿ ಹಣ ಕೊಡಬೇಕು. ಸಾಮಾನ್ಯವಾಗಿ ಮಕ್ಕಳಿಗೆ ಅರ್ಧ ಟಿಕೆಟ್. ಆದರೆ ಈ ಸರ್ಕಸಿನಲ್ಲಿ ಹಾಗೆ ಮಾಡಲಿಲ್ಲ.”

ಮರುದಿನ ಭಾನುವಾರ. ಸರ್ಕಸ್ ಆ ಊರಿನಲ್ಲಿ ತನ್ನ ಪ್ರದರ್ಶನಗಳನ್ನು ಮುಗಿಸಿ ಮುಂದಿನ ಊರಿಗೆ ಹೊರಟಿತು. ಕೆಲವು ಮಕ್ಕಳು ಸರ್ಕಸಿನ ಪ್ರಾಣಿಗಳೆಲ್ಲ ಸಾಲಾಗಿ ಊರಿನಿಂದ ಹೊರಗೆ ಹೋಗುವುದನ್ನು ನೋಡಿದರು. ಬಂಡಿಗಳನ್ನು ಎಳೆಯುತ್ತಾ ಸಾಗಿದ ಆನೆಗಳನ್ನು ನೋಡುವುದು ಖುಷಿ ಕೊಟ್ಟಿತು. ಆದರೆ ಬಣ್ಣಬಣ್ಣದ ಉಡುಪು ಹಾಕಿಕೊಳ್ಳದ ವಿದೂಷಕರನ್ನು ನೋಡಿ ಅವರಿಗೆ ನಿರಾಶೆಯಾಯಿತು.

ಅದಾದ ಮರುದಿನ ಸೋಮವಾರ ಮಕ್ಕಳೆಲ್ಲರೂ ಇಂಡಿಯನ್ ಸ್ಕೂಲಿನ ಬಯಲಿನಲ್ಲಿ ಬೆಳಗ್ಗೆಯ ಪ್ರಾರ್ಥನೆಗಾಗಿ ನೆರೆದರು. ಪ್ರಾರ್ಥನೆಯ ನಂತರ, ಶಾಲೆಯ ಹೆಡ್‌ಮಾಸ್ಟರ್ ಎದ್ದು ನಿಂತರು. “ಎಲ್ಲರೂ ಗಮನವಿಟ್ಟು ಕೇಳಿ. ಇವತ್ತು ಬೆಳಗ್ಗೆ ನನಗೊಂದು ಪತ್ರ ಬಂತು. ಅದು ಸರ್ಕಸಿನ ಮಾಲೀಕ ಕಳಿಸಿದ ಪತ್ರ. ನಾನು ಅದನ್ನು ಓದುತ್ತೇನೆ” ಎಂದು ಅವರು ಘೋಷಿಸಿದರು.

ಅವರು ಓದಿದ ಪತ್ರದ ಒಕ್ಕಣೆ ಹೀಗಿತ್ತು, “ಗೌರವಾನ್ವಿತ ಹೆಡ್‌ಮಾಸ್ಟರರೇ, ಶನಿವಾರ ಸಂಜೆ ನಮ್ಮ ಸರ್ಕಸಿನ ಪ್ರದರ್ಶನಕ್ಕೆ ನಿಮ್ಮ ಶಾಲೆಯ ಮಕ್ಕಳು ಬಾರದಿದ್ದುದನ್ನು ಕಂಡು ನನಗೆ ಆಶ್ಚರ್ಯವಾಯಿತು. ಯಾಕೆಂದರೆ, ನಾನು ಅವರಿಗೆ ಸರ್ಕಸ್ ಪ್ರದರ್ಶನದಲ್ಲಿ ಮುಂದಿನ ಸಾಲಿನ ಸೀಟುಗಳನ್ನು ಪುಕ್ಕಟೆಯಾಗಿ ಕಾದಿರಿಸಿದ್ದೆ. ಈ ಬಗ್ಗೆ ನಿಮಗೆ ಆಹ್ವಾನ ಪತ್ರವೊಂದನ್ನು ಕಳಿಸಿದ್ದೆ. ಅದನ್ನು ನಿಮ್ಮ ಶಾಲೆಯ ಒಬ್ಬ ಹುಡುಗನ ಕೈಯಲ್ಲಿ ನಿಮಗೆ ಕೊಡಲಿಕ್ಕಾಗಿ ಗುರುವಾರ ಸಂಜೆಯೇ ಕೊಟ್ಟಿದ್ದೆ. ಯಾಕೆಂದರೆ ನನಗೆ ಅಂಚೆಡಬ್ಬಕ್ಕೆ ಆಹ್ವಾನಪತ್ರವನ್ನು ಸರಿಯಾದ ಸಮಯಕ್ಕೆ ಹಾಕಲು ಸಾಧ್ಯವಾಗಿರಲಿಲ್ಲ. ಆ ಹುಡುಗ ನಿಮಗೆ ಆಹ್ವಾನಪತ್ರ ತಲಪಿಸುತ್ತೇನೆಂದು ನನಗೆ ಮಾತು ಕೊಟ್ಟಿದ್ದ. ನಿಮ್ಮ ವಿಶ್ವಾಸಿ, ಮುಖೇಶ್ ಕುಮಾರ್”

ಅಲ್ಲಿ ನೆರೆದಿದ್ದ ಶಾಲಾ ಮಕ್ಕಳೆಲ್ಲಾ ಗುಸುಗುಸು ಮಾತನಾಡಲು ಶುರು ಮಾಡಿದರು. “ನಮಗೆ ಸರ್ಕಸ್ ಪ್ರದರ್ಶನದಲ್ಲಿ ಎದುರಿನ ಸಾಲಿನ ಸೀಟುಗಳೇ ಸಿಗುತ್ತಿದ್ದವು” ಎಂದೊಬ್ಬ ಹೇಳಿದರೆ, “ಎಂತಹ ನಾಚಿಕೆಗೇಡಿನ ಸಂಗತಿ! ಈಗ ಸರ್ಕಸ್ ಊರಿನಿಂದ ಹೊರಟು ಹೋಗಿದೆ; ನಾವು ಯಾರದೊ ತಪ್ಪಿನಿಂದಾಗಿ ಪುಕ್ಕಟೆಯಾಗಿ ಸರ್ಕಸ್ ನೋಡುವ ಅವಕಾಶ ಕಳೆದುಕೊಂಡೆವು" ಎಂದು ಇನ್ನೊಬ್ಬ ಪಿಸುಗುಟ್ಟಿದ.

ಅವರಲ್ಲೊಬ್ಬ ಹುಡುಗನ ಮುಖ ನಾಚಿಕೆಯಿಂದ ಕೆಂಪುಕೆಂಪಾಗಿತ್ತು. ಅವನೇ ರಾಜು. ಗುರುವಾರ ಸಂಜೆ ತನಗೆ ಅಂಚೆಡಬ್ಬದ ಹತ್ತಿರ ಪತ್ರವನ್ನು ಕೊಟ್ಟ ವ್ಯಕ್ತಿ ಸರ್ಕಸಿನ ಮಾಲೀಕ ಮುಖೇಶ್ ಕುಮಾರ್ ಎಂದು ಅವನಿಗೆ ಈಗ ಅರ್ಥವಾಗಿತ್ತು. ತನ್ನ ತಪ್ಪಿನಿಂದಾಗಿ ಎಲ್ಲ ಮಕ್ಕಳಿಗೂ ಪುಕ್ಕಟೆಯಾಗಿ ಸರ್ಕಸ್ ನೋಡುವ ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಅವನಿಗೆ ಪಶ್ಚಾತ್ತಾಪವಾಯಿತು.

"ಮುಖೇಶ್ ಕುಮಾರ್ ಪತ್ರದಲ್ಲಿ ಬರೆದಂತೆ, ನಿಮ್ಮಲ್ಲೊಬ್ಬರು ಸರ್ಕಸಿಗೆ ಆಹ್ವಾನಪತ್ರವನ್ನು ಅವರಿಂದ ಪಡೆದು, ನನಗೆ ಕೊಡಲು ಮರೆತಿದ್ದೀರಿ. ಯಾರದು?” ಎಂದು ಹೆಡ್‌ಮಾಸ್ಟರ್ ಪ್ರಶ್ನಿಸಿದರು. ರಾಜುಗೆ “ಅದು ನಾನೇ" ಎಂದು ಎಲ್ಲರೆದುರು ಒಪ್ಪಿಕೊಳ್ಳಲು ಭಯವಾಯಿತು. ಹೆಡ್‌ಮಾಸ್ಟರ್ ಪುನಃ ಕೇಳಿದರು, “ಅದು ಯಾರು? ಬೇಗ ಒಪ್ಪಿಕೊಳ್ಳಿ. ಆಹ್ವಾನಪತ್ರ ನನಗೆ ಕೊಡದಿದ್ದುದು ತಪ್ಪು, ಈಗ ಅದನ್ನು ಒಪ್ಪಿಕೊಳ್ಳದಿರುವುದು ಇನ್ನೂ ದೊಡ್ಡ ತಪ್ಪು” ಎಂದರು.

ಈಗ ರಾಜುವಿಗೆ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ ಎನಿಸಿತು. ಅವನು ಹೆದರುತ್ತಾ ಕ್ಷೀಣವಾದ ಧ್ವನಿಯಲ್ಲಿ ಹೇಳಿದ, "ಹೆಡ್‌ಮಾಸ್ಟರ್ ಸರ್, ಅದು ನಾನು. ಆ ಪತ್ರವನ್ನು ನನ್ನ ಕೋಟಿನ ಜೇಬಿಗೆ ಹಾಕಿ ನಂತರ ಮರೆತೇ ಬಿಟ್ಟೆ. ಅದು ಅಲ್ಲೇ ಇದೆ.”

ಬಯಲಿನಲ್ಲಿ ನೆರೆದಿದ್ದ ಮಕ್ಕಳೆಲ್ಲರೂ ಒಂದು ಕ್ಷಣ ಮೌನವಾದರು. ಅವರು ರಾಜುವನ್ನು ಸಿಟ್ಟಿನಿಂದ ನೋಡಿದರು. ಅನಂತರ ಅವನನ್ನು ಕೆಟ್ಟಕೆಟ್ಟ ಹೆಸರುಗಳಿಂದ ಕರೆಯಲು ಶುರು ಮಾಡಿದರು. ಆಗ ಹೆಡ್‌ಮಾಸ್ಟರ್, “ನೀನು ಈಗಲೇ ಹೋಗಿ ಆ ಪತ್ರ ತಗೊಂಡು ಬಾ" ಎಂದು ರಾಜುವಿಗೆ ಆದೇಶಿಸಿದರು. ರಾಜು ಕ್ಲಾಸ್ ರೂಮಿಗೆ ಓಡಿ ಹೋಗಿ, ಕೋಟಿನ ಜೇಬಿನಲ್ಲಿದ್ದ ಆ ಪತ್ರವನ್ನು ತಂದು ಹೆಡ್‌ಮಾಸ್ಟರಿಗೆ ಕೊಟ್ಟ.

ಹೆಡ್‌ಮಾಸ್ಟರ್ ಆ ಪತ್ರವನ್ನು ಬಿಡಿಸಿ ಓದಿದರು. ಅನಂತರ ಅದರ ಒಕ್ಕಣೆಯನ್ನು ಎಲ್ಲ ಮಕ್ಕಳಿಗೂ ಓದಿ ಹೇಳಿದರು. ಅದರಲ್ಲಿ ನಿಜಕ್ಕೂ ಸರ್ಕಸಿನ ಮಾಲೀಕರಾದ ಮುಖೇಶ್ ಕುಮಾರ್ ಇಂಡಿಯನ್ ಸ್ಕೂಲಿನ ಮಕ್ಕಳಿಗೆ ಕೊನೆಯ ಪ್ರದರ್ಶನದ ಎದುರಿನ ಸೀಟುಗಳನ್ನು ಪುಕ್ಕಟೆಯಾಗಿ ಕಾದಿರಿಸಿದ್ದು, ಮಕ್ಕಳನ್ನು ಶನಿವಾರ ಎದುರು ನೋಡುವುದಾಗಿ ಬರೆದಿದ್ದರು.

ತದನಂತರ, ಹೆಡ್‌ಮಾಸ್ಟರ್ ಆ ಪತ್ರವನ್ನು ಮಡಚಿ, ತನ್ನ ಕೋಟಿನ ಜೇಬಿಗೆ ಹಾಕಿಕೊಳ್ಳುತ್ತಾ ಹೇಳಿದರು, "ರಾಜೂ, ನಿನ್ನಿಂದಾಗಿ ಶಾಲೆಯ ಎಲ್ಲ ಮಕ್ಕಳು ಒಂದು ಒಳ್ಳೆಯ ಅವಕಾಶ ಕಳೆದುಕೊಂಡರು. ನೀನು ಇವತ್ತೇ ಮುಖೇಶ್ ಕುಮಾರ್ ಅವರಿಗೆ ಒಂದು ಪತ್ರ ಬರೆಯಬೇಕು - ಅದರಲ್ಲಿ ಅವರ ಕ್ಷಮೆ ಕೇಳಿ, ಯಾಕೆ ಹೀಗಾಯಿತೆಂದು ಅವರಿಗೆ ವಿವರಿಸಬೇಕು.”

ಆ ದಿನ ರಾಜೂವಿಗೆ ಬಹಳ ಸಂಕಟದ ದಿನ. ಎಲ್ಲ ವಿದ್ಯಾರ್ಥಿಗಳೂ ಅವನ ಬಗ್ಗೆ ಸಿಟ್ಟಾಗಿದ್ದರು ಮತ್ತು ಜುಗುಪ್ಸೆ ಪಟ್ಟಿದ್ದರು. "ನಿನಗೆ ಯಾವುದನ್ನೂ ನೆನಪಿಟ್ಟು ಕೊಳ್ಳಲು ಸಾಧ್ಯವಿಲ್ಲವೇ? ನೀನು ಪೆದ್ದಗುಂಡನಲ್ಲ, ಸೋಮಾರಿ!” ಎಂದೊಬ್ಬ ಬಯ್ದ. "ನಾವು ಅವನನ್ನು ಯಾವುದೇ ಆಟಕ್ಕೂ ಸೇರಿಸಿಕೊಳ್ಳಬಾರದು. ಹಿರಿಯ ವ್ಯಕ್ತಿಯೊಬ್ಬ ಕೊಟ್ಟ ಪತ್ರವನ್ನು ಹೆಡ್‌ಮಾಸ್ಟರಿಗೆ ಕೊಡಲು ಮರೆತವನ ಜೊತೆ ಯಾರೂ ಆಟವಾಡುವುದು ಬೇಡ" ಎಂದ ಇನ್ನೊಬ್ಬ.

ಇವೆಲ್ಲ ಬೆಳವಣಿಗೆಗಳು ರಾಜೂವಿಗೆ ದೊಡ್ಡ ಆಘಾತ ನೀಡಿದವು. ಅವನು ತನ್ನ ಮರೆಗುಳಿತನವನ್ನು ಕಿತ್ತೊಗೆಯಬೇಕಾದ ಸಮಯ ಬಂದಿತ್ತು! ಸಂಗತಿಗಳನ್ನು, ಕೆಲಸಗಳನ್ನು ನೆನಪಿಟ್ಟು ಕೊಳ್ಳಲಿಕ್ಕಾಗಿ ಅವನು ಏನಾದರೂ ಮಾಡಲೇ ಬೇಕಾಗಿತ್ತು. ತನ್ನ ಕೈರುಮಾಲಿನಲ್ಲಿ ಒಂದು ಪುಟ್ಟ ಗಂಟು ಹಾಕಿಕೊಳ್ಳುವುದು, ಕಿರುಬೆರಳಿಗೆ ರಬ್ಬರ್ ಬ್ಯಾಂಡ್ ಹಾಕಿಕೊಳ್ಳುವುದು, ಚೀಟಿಗಳನ್ನು ಬರೆದುಕೊಳ್ಳುವುದು, ಪುಟ್ಟ ನೋಟ್‌ಬುಕ್ಕಿನಲ್ಲಿ ಕೆಲಸಗಳನ್ನು ಬರೆದುಕೊಳ್ಳುವುದು, ತನ್ನ ಕೋಣೆಯ ಕನ್ನಡಿಯಲ್ಲಿ ನೆನಪಿಗಾಗಿ ಚೀಟಿಗಳನ್ನು ಅಂಟಿಸುವುದು, ನೆನಪಿಡಬೇಕಾದ್ದನ್ನು ಮನಸ್ಸಿನಲ್ಲಿ ಹತ್ತು ಸಲ ಹೇಳಿಕೊಳ್ಳುವುದು, ಪ್ರಾಸಬದ್ಧ ಪದಗಳ ಮೂಲಕ ನೆನಪಿಟ್ಟುಕೊಳ್ಳುವುದು ಇಂತಹ ತಂತ್ರಗಳ ಬಳಕೆಯನ್ನು ರಾಜು ಇನ್ನಾದರೂ ಶುರು ಮಾಡಲೇ ಬೇಕಾಗಿತ್ತು.

ಯಾಕೆಂದರೆ, ನೆನಪಿಟ್ಟುಕೊಳ್ಳಲು ಅಭ್ಯಾಸ ಮಾಡದಿದ್ದರೆ ತನಗೆ ಶಾಲೆಯಲ್ಲಿ ಯಾರೊಬ್ಬರೂ ಗೆಳೆಯರಾಗಿ ಉಳಿಯೋದಿಲ್ಲ ಎಂದು ರಾಜುವಿಗೆ ಅರ್ಥವಾಗಿತ್ತು. “ನಾನಿನ್ನು ಯಾವುದನ್ನೂ ಮರೆಯೋದಿಲ್ಲ; ನನ್ನ ಮರೆಗುಳಿತನವನ್ನು ಕಿತ್ತೊಗೆಯುತ್ತೇನೆ” ಎಂದು ರಾಜು ಅವತ್ತೇ ಸಂಕಲ್ಪ ಮಾಡಿದ. ನಿಮ್ಮ ನೆನಪು ಹೇಗಿದೆ? ನೆನಪಿಟ್ಟುಕೊಳ್ಳಲು ಕಲಿಯದಿದ್ದರೆ ನಿಮ್ಮಿಂದಲೂ ಇಂತಹ ಅವಾಂತರಗಳು ಆದೀತು, ಅಲ್ಲವೇ? 

ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ