ರಾಜ್ಯದಲ್ಲಿ ಮತ್ತೆ ಮಗ್ಗುಲು ಬದಲಿಸೀತೆ ಪ್ರಜಾಪ್ರಭುತ್ವ?
ನಾಳೆ (ಮೇ ೧೩) ಬೆಳಗಾದರೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯ ರಾಜಕೀಯ ಬಗ್ಗೆ ಭಾರೀ ಕುತೂಹಲವನ್ನುಂಟು ಮಾಡಿವೆ. ಕೆಲ ಸಮೀಕ್ಷೆಗಳು ಬಿಜೆಪಿ, ಇನ್ನು ಕೆಲವು ಕಾಂಗ್ರೆಸ್ ಪರ ಅಭಿಮತವನ್ನು ವ್ಯಕ್ತಪಡಿಸಿವೆ. ಇವೆಲ್ಲದರ ನಡುವೆ ಮತ್ತೊಮ್ಮೆ ರಾಜ್ಯದಲ್ಲಿ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣಗೊಳ್ಳುವ ಶಂಕೆ ವ್ಯಕ್ತವಾಗಿದೆ. ಒಂದೊಮ್ಮೆ ಒಟ್ಟಾರೆ ಸಮೀಕ್ಷೆಗಳ ಪ್ರಕಾರ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಹೋದಲ್ಲಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಸಹಜವಾಗಿ ಮಗ್ಗುಲು ಬದಲಿಸುವ ಎಲ್ಲ ಸಾಧ್ಯತೆಗಳಿವೆ. ಆಡಳಿತಾರೂಢ ಬಿಜೆಪಿ ನಾಯಕರು ಶತಾಯಗತಾಯ ಅಧಿಕಾರದಲ್ಲಿ ಉಳಿದುಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದಲ್ಲಿ, ಮಹಾರಾಷ್ಟ್ರದಲ್ಲಿದ್ದಂತೆ ರಾಜಕೀಯ ಧೃವೀಕರಣದ ಸಂಭವವೂ ಇಲ್ಲದ್ದಿಲ್ಲ. ಅಷ್ಟಕ್ಕೂ ಸಮೀಕ್ಷೆಗಳ ಆಧಾರದ ಮೇಲೆ ಮಾತನಾಡುವುದಾದರೆ ಬಿಜೆಪಿಗೆ ಮತದಾರರು ಈ ಪರಿಯ ಅಘಾತವನ್ನು ಕೊಟ್ಟದ್ದಾದರೂ ಯಾಕೆಂಬ ಚರ್ಚೆ ಜೋರಾಗಿದೆ. ಸರಕಾರದ ಮೇಲಿನ ೪೦% ಕಮೀಷನ್ ಸೇರಿದಂತೆ ಭ್ರಷ್ಟಾಚಾರದ ಆರೋಪಗಳನ್ನು ನಿರ್ಲಕ್ಷಿಸಿದ್ದು ಸ್ವಯಂಕೃತ ಅಪರಾಧ ಎನಿಸಿಕೊಳ್ಳುತ್ತದೆ. ಇವುಗಳನ್ನೆಲ್ಲಾ ಮರೆಮಾಚಿ ರಾಜ್ಯ ಬಿಜೆಪಿ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಂಡು ಅಧಿಕಾರದ ಏಣಿ ಹತ್ತಲು ಹವಣಿಸಿತಷ್ಟೇ. ಮೋದಿಯವರ ಬಾಯಲ್ಲಿ, ಕೇಂದ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಗಮನದಲ್ಲಿಟ್ಟುಕೊಂಡು ದಾಳಿ ಮಾಡಿಸಲಾಯಿತೇ ವಿನಾ ಸ್ಥಳೀಯವಾಗಿ ಪಕ್ಷದ ವಿರುದ್ಧ ಹೇಳಿಕೊಳ್ಳುವಂಥ ಪ್ರಬಲ ಅಸ್ತ್ರಗಳಿಲ್ಲದೇ ಹೋದದ್ದು ಸತ್ಯ. ಮುಖ್ಯವಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ವರ್ಚಸ್ಸು, ಈ ಹಿಂದಿನ ಸರಕಾರದಲ್ಲಿ ಅವರು ಕೊಟ್ಟ ಯೋಜನೆಗಳ ಜತೆಗೆ ಡಿಕೆಶಿ-ಸಿದ್ದು ಜೋಡಿಯ ಸುದೀರ್ಘ ಕಾರ್ಯತಂತ್ರ, ಈ ಬಾರಿಯ ಗ್ಯಾರಂಟಿ ಘೋಷಣೆಗಳು ಮತದಾರರನ್ನು ತಲುಪಿವೆ ಎಂದೇ ಅರ್ಥೈಸಿಕೊಳ್ಳಬೇಕು. ಕಳೆದ ಬಾರಿ ಕಾಂಗ್ರೆಸ್ ಗೆ ಮುಳುವಾಗಿದ್ದ ಜಾತಿ ಸಮೀಕ್ಷೆ, ಲಿಂಗಾಯತ ಧರ್ಮ ವಿಭಜನೆಯ ವಿಚಾರಗಳೇ ಈ ಬಾರಿ ಮೀಸಲು ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಅಸ್ತ್ರವಾಗಿತ್ತು. ಆದರೆ ಸಮೀಕ್ಷೆಗಳೇ ಸತ್ಯವಾದರೆ ಆ ವಿಚಾರಗಳು ಬಿಜೆಪಿಗೆ ಲಾಭ ತಂದುಕೊಟ್ಟಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ನಂಬಿಕೊಂಡಿದ್ದ ಮೋದಿ ಮ್ಯಾಜಿಕ್ ಲೋಕಸಭಾ ಚುನಾವಣೆಗೆ ಸಿದ್ಧತೆ ಆಗಿದ್ದಷ್ಟೇ ಸಮಾಧಾನದ ಸಂಗತಿ. ಸಾಮಾನ್ಯ ಕಾರ್ಯಕರ್ತರಂತೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನಿರಂತರ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ‘ಪವರ್' ಅನ್ನು ಮತ್ತೆ ಬಿಜೆಪಿಗರು ಅರ್ಥಮಾಡಿಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋದಂತಿದೆ. ಯಾವುದಕ್ಕೂ ಇನ್ನೊಂದು ದಿನ ಕಾಯಲೇ ಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೨-೦೫-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ