ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲಕಾರ್ಮಿಕರು

ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲಕಾರ್ಮಿಕರು

ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಕುಟುಂಬಗಳು ಆರ್ಥಿಕ ಸಂಕಟಕ್ಕೆ ಸಿಲುಕಿದ್ದು, ಸಾವಿರಾರು ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ೨೦೨೧ರ ಸಾಲಿನಲ್ಲೇ ಕಾರ್ಮಿಕ ಇಲಾಖೆಯು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿತ್ತು. ಇದಕ್ಕಾಗಿ ಆರಂಭದಲ್ಲಿ ೧.೧೦ ಕೋ ರೂ. ಅನುದಾನವನ್ನೂ ನಿಗದಿ ಮಾಡಲಾಗಿತ್ತು. ಆದರೆ, ಈವರೆಗೂ ವರದಿಯನ್ನು ಅಂತಿಮಗೊಳಿಸಲಾಗಿಲ್ಲ. ಇದು ಆಡಳಿತ ಯಂತ್ರದ ಜಡತ್ವಕ್ಕೆ ಸಾಕ್ಷಿಯಾಗಿದೆ. ಬಾಲಕ ಕಾರ್ಮಿಕರ ಪತ್ತೆಗೆ ಅಧಿಕಾರಿಗಳ ನಿರಾಸಕ್ತಿಯನ್ನು ಹೊಂದಿರುವುದನ್ನು ಇದು ಸೂಚಿಸುತ್ತದೆ.

ಮಕ್ಕಳು ಶಾಲೆಯನ್ನು ಅರ್ಧದಲ್ಲೇ ಬಿಡುವುದು ಮತ್ತು ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗುವುದು ಒಂದಕ್ಕೊಂದು ಲಿಂಕ್ ಆಗಿವೆ. ಶಾಲೆ ಬಿಡುವ (ಡ್ರಾಪೌಟ್) ಮಕ್ಕಳ ಸಂಖ್ಯೆ ಹೆಚ್ಚಿದಂತೆ, ಬಾಲ ಕಾರ್ಮಿಕರ ಸಂಖ್ಯೆಯೂ ಹೆಚ್ಚುತ್ತದೆ. ಇದಕ್ಕೆ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಸಮೀಕ್ಷೆಯು ಪುಷ್ಟಿ ನೀಡುವಂತಿದೆ. ನಗರ ವ್ಯಾಪ್ತಿಯಲ್ಲಿ ನಡೆಸಿದ ೧೮ ವರ್ಷದೊಳಗಿನ ೮೭ ಲಕ್ಷ ಮಕ್ಕಳ ಸಮೀಕ್ಷೆಯಲ್ಲಿ ೧೦ ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿಯಿಂದ ಹೊರಗುಳಿದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಆದರೆ, ಈ ಸಮೀಕ್ಷೆಯನ್ನು ಶಿಕ್ಷಣ ಇಲಾಖೆ ಒಪ್ಪಿಕೊಂಡಿಲ್ಲ. ವಾಸ್ತವದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು ಸುಳ್ಳಲ್ಲ. ಈ ನಿಟ್ಟಿನಲ್ಲಿ ಪಾರದರ್ಶಕ ಸಮೀಕ್ಷೆಯನ್ನು ಕೈಗೊಂಡರೆ, ಶಾಲೆ ಬಿಟ್ಟ ಮಕ್ಕಳೊಂದಿಗೆ ಬಾಲ ಕಾರ್ಮಿಕರ ಸಂಖ್ಯೆಯನ್ನು ನಿಖರವಾಗಿ ಗುರುತಿಸಬಹುದು.

ಕೋವಿಡ್ ನಿಂದಾಗಿ ಬಹಳಷ್ಟು  ಕುಟುಂಬಗಳ ಆದಾಯವಾಗಿ ಗಣನೀಯವಾಗಿ ಕುಸಿತವಾಗಿದೆ. ಪರಿಣಾಮ, ಕುಟುಂಬಗಳು ಉದ್ಯೋಗ ಅರಸಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮಕ್ಕಳು ಶಾಲೆಯನ್ನು ತೊರೆದಿದ್ದಾರೆ ಮತ್ತು ಅದೇ ವೇಳೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ವಾಸ್ತವ. ಸಾಮಾಜಿಕ ವಲಯದಲ್ಲಿನ ಬಡತನದ ಅನುಕಂಪ, ಮಕ್ಕಳು ಶಿಕ್ಷಕರ ಹತೋಟಿಗೆ ಸಿಗದಿರುವುದು, ಪೋಷಕರಲ್ಲಿ ಶಿಕ್ಷಣದ ಬಗ್ಗೆ ನಿರಾಸಕ್ತಿ, ಜಾಗೃತಿ ಕೊರತೆಯಿಂದಾಗಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಸತ್ಯವನ್ನು ಕಂಡುಕೊಳ್ಳಲು ಕೈಗೊಳ್ಳಬೇಕಾಗಿದ್ದ ಸಮೀಕ್ಷೆಗೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸಲ್ಲದು. ತಾಲೂಕು ಮಟ್ಟದ ಅಧಿಕಾರಿಗಳ ನಿರಾಸಕ್ತಿ, ಇಲಾಖೆಗಳ ನಡುವಿನ ಸಮನ್ವಯ ಕೊರತೆ ಮತ್ತು ನೆಪ ಮಾತ್ರದ ಮಕ್ಕಳ ರಕ್ಷಣಾ ಘಟಕ ಸ್ಥಾಪನೆಗಳಿಂದಾಗಿ ಬಾಲ ಕಾರ್ಮಿಕರ ಸಮೀಕ್ಷೆಗೆ ಹಿನ್ನಡೆಯಾಗುತ್ತಿದೆ. ಇದೊಂದು ಗಂಭೀರವಾದ ಸಮಸ್ಯೆಯಾದುದರಿಂದ ಸರಕಾರವು ನಿರ್ಲಕ್ಷ್ಯ ವಹಿಸುವಂತಿಲ್ಲ. ಈ ಕೂಡಲೇ ಸರಕಾರವು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರನ್ನು ಎಚ್ಚರಿಸಿ, ತ್ವರಿತವಾಗಿ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಸೂಚಿಸಬೇಕು.

ನಮ್ಮಲ್ಲಿ ೫ರಿಂದ ೧೪ ವರ್ಷದ ವಯೋಮಾನದವರನ್ನು ಯಾವುದೇ ದುಡಿಮೆಗೆ ತೊಡಗಿಸುವಂತಿಲ್ಲ. ಆದರೆ, ಈ ಕಾನೂನು ಪಾಲನೆ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂಬುದು ಪ್ರಶ್ನಾರ್ಥಕ. ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಹೆಚ್ಚುತ್ತಿರುವ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕೇವಲ ಕಾನೂನು ಒಂದೇ ಪರಿಹಾರವಾಗಲಾರದು. ಹೋಟೇಲ್, ಕಟ್ಟಡ ನಿರ್ಮಾಣ, ಇಟ್ಟಿಗೆ ಫ್ಯಾಕ್ಟರಿ, ಗ್ಯಾರೇಜು ಸೇರಿದಂತೆ ಹಲವು ಕಡೆ ಬಾಲ ಕಾರ್ಮಿಕರಿರುತ್ತಾರೆ. ಈ ವಿಷಯ ಅಧಿಕಾರಿಗಳವರೆಗೆ ತಲುಪುವುದೇ ಇಲ್ಲ. ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ. ಸಾಮಾಜಿಕ ಜಾಗೃತಿಯೂ ಅತ್ಯಗತ್ಯ. ಇಲ್ಲಿ ಪಾಲಕರು ಅಥವಾ ಬಾಲ ಕಾರ್ಮಿಕರನ್ನು ನೇಮಿಸಿಕೊಂಡವರಿಗೆ ಶಿಕ್ಷೆ ವಿಧಿಸುವುದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಶಾಲೆ ಸೇರಿಸಿ, ಅವರ ಭವಿಷ್ಯ ಉಜ್ವಲಗೊಳಿಸುವ ಪ್ರಯತ್ನ ಆಗಬೇಕು. ಆಗಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೦-೦೮-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ.