ರಾಜ್ಯಪಾಲರು ವಿವಾದೀತರಾಗಿರಬೇಕು; ಮುಖ್ಯಮಂತ್ರಿ ’ಮಾನ’ ’ಮತಿ’ವಂತರಗಿರಬೇಕು!

ರಾಜ್ಯಪಾಲರು ವಿವಾದೀತರಾಗಿರಬೇಕು; ಮುಖ್ಯಮಂತ್ರಿ ’ಮಾನ’ ’ಮತಿ’ವಂತರಗಿರಬೇಕು!

’ರಾಜ್ಯಪಾಲರು ವಿವಾದಾತೀತರಾಗಿರಬೇಕು’ ಎಂದು  “ಸಂಯುಕ್ತ ಕರ್ನಾಟಕ” (ಡಿ. 26) ಸಂಪಾದಕೀಯ ಬರೆದಿದೆ. ಮುಖ್ಯಮಂತ್ರಿ ಸಹ “ಮಾನ”ವಂತರೂ, “ಮತಿ”ವಂತರೂ ಆಗಿರಬೇಕಾದ ಆವಶ್ಯಕತೆ ಸಹ ಇರುವುದಲ್ಲವೇ?


“ಕರ್ನಾಟಕದ ಮುಖ್ಯಮಂತ್ರಿ ‘ಅನೀತಿ’ ಎಸಗಿರಬಹುದು, ‘ಅಕ್ರಮ’ ಅಲ್ಲ” ಎನ್ನುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಭಿಮತವಂತೆ! ಈ ‘ಭಂಡತನ”ಕವನ್ನು, “ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಗಾದೆಯಿಂದ ಸಹಿಸಿಕೊಳ್ಳೋಣವೇ?!


ಇಂದಿನ ಇಡೀ ರಾಜಕೀಯ ವ್ಯವಸ್ಥೆಯೇ Corrupt ಆಗಿದೆ ಎಂದು ಲೊಚಗುಟ್ಟುತ್ತೇವಲ್ಲಾ, ಆ Corruption ಕೇವಲ ‘ಎಂಜಲು ಪುಡಿಗಾಸಿನ ಲಂಚ’ ಎನ್ನುವುದಕ್ಕೆ ಸೀಮಿತವಲ್ಲ; ಅದನ್ನು ಸಮಗ್ರವಾಗಿ “ಕೊಳೆತುಹೋಗಿರುವುದು”; “ಗಬ್ಬೆದ್ದುಹೋಗಿರುವುದು” ಎಂದೇ ಅದನ್ನು ಅರ್ಥ ಮಾಡಿಕೊಳ್ಳಬೇಕಗುತ್ತದೆ!


ಈಗ ರಾಜ್ಯಪಾಲರು, ಮುಖ್ಯಮಂತ್ರಿ ನಡುವಣ ವೈಮನಸ್ಯ ಹಿಂದೆಂದೂ ಇಲ್ಲದಂತೆ ಬೀದಿಗೆ ಬಂದಿದೆ. ರಾಜ್ಯಪಾಲರೂ ಅಧಿಕಾರ ಚಲಾವಣೆಯ “ರೆಕಾರ್ಡ್” ನಿರ್ಮಿಸಲು ಹೊರಟಿದ್ದಾರೆಯೋ, ಇಲ್ಲಾ ಮುಖ್ಯಮಂತ್ರಿಗಳು ಸತ್ತಾಧಿಕಾರ ಎನ್ನುವುದಕ್ಕೆ ಹೊಸ ಭಾಷ್ಯದ “ರೆಕಾರ್ಡ್” ಬರೆಯುತ್ತಾರೋ? ಕಾದು ನೊಡಬೇಕಾಗಿದೆ!


          ಈಗ ಈ ಎರಡು “ಶೃಂಗ”ಗಲ ಸಂಬಂಧ “ಎಂಥದೋ ದೇವರಿಗೆ, ಇನ್ನೆಂಥದೋ ಪೂಜಾರಿ” ಎಂಬ ಹೊಲಸು ಮಾತಿನ ಗಾದೆಯಂತಾಗಿದೆ! ಆದರೆ ಈ ಪ್ರಜಾಸತ್ತಾ ಪ್ರಹಸನದಲ್ಲಿ, ಆ “ದೇವರು”, ದೇವರಾಗಿ, “ಪೂಜಾರೀ” ಪೂಜಾರಿಯಾಗೇ ಉಳಿದಿರುವುದಿಲ್ಲ!


ಆಡಳಿತದ ಚುಕ್ಕಾಣಿ ಹಿಡಿದ ಮಹೋದಯರು, ಮತದಾರ ಮಹಾಜನತೆಯೆದುರು ಉಢಾಫೆ ಹೊಡೆಯುವುದು ಸಾಮಾನ್ಯ. ಅದೇ “ಮಲಾಮೆ”ಯನ್ನೇ ರಾಜ್ಯಪಾಲರೆಂಬ, ಲೋಕಾಯುಕ್ತವೆಂಬ ಪ್ರಾಧಿಕಾರಗಳ ಮುಂದೂ ತೋರುತ್ತಿರುವುದು ಈಗಿನ ವಿಶೇಷ. “ಹಿಂದೆ ಆಡಳಿತ ನಡೆಸಿದವರು ಮಾಡಿದ ‘ಭಕ್ಷಣೆ’ಯನ್ನೇ ನಾವೂ ಮಾಡುತ್ತೇವೆ; ಇದೇನು ಮಹಾ?; ಇದ್ದಬದ್ದ ಎಲ್ಲಾ ನೆಲವನ್ನೂ, ಅದರೊಳಗಿನ ಖನಿಜಸಂಪತ್ತನ್ನೂ ಅನಾಮತ್ತೂ ನುಂಗಿ ನೀರು ಕುಡಿಯುವುದೇ ‘ಅಧಿಕಾರ’!; ಅದು, ‘ಸಾಮಾಜಿಕ ನ್ಯಾಯ’ದಂತೆ, ಪಾಳಿ-ಪಾಳಿಯ ಮೇಲೆ ಬೇರೆ ಬೇರೆ ಪಕ್ಷಗಳಿಗೆ ಸಿಗುತ್ತದೆ; ಸಿಕ್ಕಾಗ, ತಮ್ಮ ಮನೆ, ಮನೆತನ, ಬಾಲಬಡುಕ ಚೇಲಾಗಳು ಮತ್ತು ಪರಿವಾರದ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ; ಕೇಳುವುದಕ್ಕೆ ಪ್ರತಿಪಕ್ಷದವರರ‍್ಯಾರು?” - ಇದು ಆಳುವವರ ನಿಲವು!


ದೂರು, ರಾಜ್ಯಪಾಲರಿಗೆ ಹೋಗಬೇಕು; ಹೋಗಿದೆ. ಅವರು ಏನಾದರೂ ಮಾಡಲೇಬೇಕಲ್ಲಾ? ಇದು ಸಾಂವಿಧಾನಿಕವಾಗೇ ಇರಬೇಕೆಂಬುದು, ನೈತಿಕ ನಿರೀಕ್ಷೆ. ರಾಜಕೀಯ ವ್ಯವಹಾರಸ್ಥರು ಅದರಲ್ಲಿ ಒಳಗೊಳಗೇ ಸೂಕ್ಷ್ಮ ರಾಜಕೀಯವನ್ನೂ ಕುದುರಿಸಿಕೊಂಡರೆ, “ಭಲೇ ಮುತ್ಸದ್ದಿ” ಎನ್ನಬೇಕೋ, ಹೌಹಾರಬೇಕೋ?!


ಇಂದು ರಾಜ್ಯಪಾಲರಾಗಿರುವವರು ನಾಳೆ ತಮ್ಮ ರಾಜ್ಯದ ಮುಖ್ಯಮಂತ್ರಿಯೋ, ಕೇಂದ್ರದ ಕ್ಯಾಬಿನೆಟ್ ಮಂತ್ರಿಯೋ ಆಗುವುದು ಅಸಂವಿಧಾನಿಕವೇನೂ ಅಲ್ಲವಲ್ಲಾ? ಆದ್ದರಿಂದ ಅವರು ಅದರ ಮೇಲೆ ಕಣ್ಣಿರ ತಪ್ಪೇನು? ಈ ತಪ್ಪು-ಸರಿಗಳು ಆತ್ಮವುಳ್ಳವರ “ಅಂತರಂಗಸಾಕ್ಷಿ”ಗೆ ಬಿಟ್ಟ ವಿಚಾರ. ಅವರು ಆ ಆತ್ಮಸಾಕ್ಷಿಗಿಂತಾ ಪಕ್ಷ ಹೈಕಮಂಡ್‌ಗೇ ಹೆಚ್ಚಿನ “ಪಾತಿವ್ರತ್ಯ” ತೋರಿದರೆ ನೀವೂ-ನಾವೂ ಮಾಡುವುದೇನಾದರೂ ಉಳಿದಿರುತ್ತದೆಯೇ?