ರಾಜ್ಯಪಾಲರ ತನಕ ದೂರು

ರಾಜ್ಯಪಾಲರ ತನಕ ದೂರು

ಕೃಷಿ ಸಚಿವ ಚೆಲುವರಾಯಸ್ವಾಮಿ ಮೇಲಿನ ಲಂಚದ ಆರೋಪಗಳ ಬೆನ್ನ ಹಿಂದೆಯೇ ಬಿಬಿಎಂಪಿ ಗುತ್ತಿಗೆದಾರರೀಗ ರಾಜಭವನದ ಮೆಟ್ಟಿಲು ತುಳಿದು ಅಹವಾಲು ಸಲ್ಲಿಸಿದ್ದಾರೆ. ಸಚಿವರ ಮೇಲೆ ಕೇಳಿ ಬಂದಿರುವ ಆರೋಪಗಳನ್ನೀಗ ರಾಜ್ಯಪಾಲರು ಗಂಭೀರವಾಗಿಯೇ ಪರಿಗಣಿಸಿ ಇದನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿರುವುದು ಪ್ರಮುಖಾಂಶ. ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಪ್ರಕರಣದ ಪೋಲೀಸ್ ತನಿಖೆಗೆ ಆದೇಶಿಸಿ ಇಡೀ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದಾರೆ.

ಈ ಮಧ್ಯೆ ಬಿಬಿಎಂಪಿ ಕಳಪೆ ಕಾಮಗಾರಿಗಳು ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಲಾಗಿದೆ ಎನ್ನಲಾದ ವಿವಿಧ ಗುತ್ತಿಗೆಗಳನ್ನು ಬೊಟ್ಟು ಮಾಡಿ ಕೆಲವರು ರಾಜ್ಯಪಾಲರಿಗೆ ದೂರು ಸಲ್ಲಿಸಿ ತನಿಖೆಗೆ ಮನವಿ ಮಾಡಿದ್ದಾರೆ. ಈ ಅಹವಾಲಿಗೆ ರಾಜ್ಯಪಾಲರು ಇನ್ನೂ ಉತ್ರರಿಸಿಲ್ಲ. ಒಟ್ಟಿನಲ್ಲಿ ಸಾರ್ವಜನಿಕರೀಗ ನೇರವಾಗಿ ತಮ್ಮ ಅಹವಾಲುಗಳನ್ನು ರಾಜ್ಯಪಾಲರಿಗೇ ಸಲ್ಲಿಸಲು ಮುಂದಾಗಿರುವುದು ಗಂಭೀರವಾದ ಸಂಗತಿ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗಿ ಇನ್ನೂ ಮೂರು ತಿಂಗಳು ಆಗಿಲ್ಲ. ಆಗಲೇ ಕೆಲ ಸಚಿವರು, ಕಾಮಗಾರಿಗಳು ಮತ್ತು ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿ ಜನತೆ ರಾಜ್ಯಪಾಲರಿಗೆ ಮೂಗರ್ಜಿ ಬರೆದಿರುವುದು ಚರ್ಚಾಸ್ಪದ ಸಂಗತಿ.

ಚೆಲುವರಾಯಸ್ವಾಮಿ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಆದೇಶ ಮತ್ತು ರಾಜಭವನದ ಸಂದೇಶವನ್ನು ಅಧಿಕಾರ ವರ್ಗ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡಲು ಥಾವರ್ ಚಂದ್ ಗೆಹ್ಲೋಟ್ ಅವರು ನೀಡಿರುವ ಆದೇಶದ ಪ್ರಕಾರ, ಮುಖ್ಯ ಕಾರ್ಯದರ್ಶಿ ಅವರೀಗ ಪ್ರತ್ಯೇಕ ತನಿಖೆಗೆ ಆದೇಶಿಸುವರೇ ಅಥವಾ ತನಿಖೆ ನಡೆಸಲು ಮುಂದಾಗುವರೇ ಎಂಬುದು ಪ್ರಶ್ನೆ. ಒಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಅವರೇನಾದರೂ ತನಿಖೆಗೆ ಅದೇಶಿಸಿದಲ್ಲಿ ಚೆಲುವರಾಯಸ್ವಾಮಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟವಾದೀತು. ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದರ ಪೋಲೀಸ್ ತನಿಖೆಗೆ ಡಿಢೀರ್ ಆದೇಶ ನೀಡಿರುವುದು ಗಮನಾರ್ಹ. ಒಂದು ಕಡೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ನೀಡಿರುವ ಹುಕುಂ ಮತ್ತೊಂದು ಕಡೆ ಮುಖ್ಯಮಂತ್ರಿ ಪೋಲೀಸ್ ತನಿಖೆಗೆ ನೀಡಿರುವ ಆದೇಶ, ಈ ವಿದ್ಯಮಾನಗಳನ್ನು ಗಮನಿಸಿದಾಗ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ತಲೆದೋರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಸರ್ಕಾರಗಳಾದರೂ ತನಗೆ ರಕ್ಷಣಾತ್ಮಕವಾಗುವ ರೀತಿಯಲ್ಲಿ ಸರ್ಕಾರದ ಮೇಲಿನ ಆರೋಪಗಳ ತನಿಖೆಗೆ ಮುಂದಾಗಿರುವುದು ಕಟು ಸತ್ಯ. ಈ ಹಿಂದೆ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾಗ ಪೋಲೀಸ್ ಅಧಿಕಾರಿ ಗಣಪತಿ, ಐ ಎ ಎಸ್ ಅಧಿಕಾರಿ ರವಿ ಸಾವಿನ ಪ್ರಕರಣ ಮತ್ತು ಸಚಿವ ಜಾರ್ಜ್ ಮೇಲೆ ಎಸಗಲಾಗಿದ್ದ ಸ್ಟೀಲ್ ಬ್ರಿಡ್ಜ್ ಗುತ್ತಿಗೆ ಆರೋಪಗಳೆಲ್ಲವೂ ಬೆಲೂನಿನಂತೆ ಠುಸ್ ಆದವು. ಒಟ್ಟಿನಲ್ಲಿ ಜನತೆಯೀಗ ದೂರುಗಳನ್ನು ವಿಧಾನಸೌಧವನ್ನು ದಾಟಿ ರಾಜಭವನದವರೆಗೂ ತೆಗೆದುಕೊಂಡು ಹೋಗಿರುವುದನ್ನು ಕಂಡಾಗ ಸಿದ್ಧರಾಮಯ್ಯ ಸರ್ಕಾರದಲ್ಲೀಗ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೯-೦೮-೨೦೨೩ 

ಚಿತ್ರ ಕೃಪೆ: ಇಂಟರ್ನೆಟ್ ತಾಣ