ರಾಜ್ಯಸಭೆ : ಸೋತವರಾರು - ಗೆದ್ದವರಾರು?
ದೇಶದ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಫಲಿತಾಂಶವೀಗ ರಾಜಕೀಯ ಮೊಗಸಾಲೆಯ ನಾನಾ ಬಗೆಯ ಚರ್ಚೆ ಮತ್ತು ವ್ಯಾಖ್ಯಾನಕ್ಕೆ ಗ್ರಾಸವಾಗಿದೆ. ಎನ್ ಡಿ ಎ ಮೈತ್ರಿಕೂಟಕ್ಕೆ ರಾಜ್ಯಸಭೆಯಲ್ಲಿ ಅತ್ಯಧಿಕ ಸ್ಥಾನ ಗಳಿಸುವುದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ.
ದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುನಾಯಾಸವಾಗಿ ಗೆಲ್ಲಬೇಕೆಂಬ ಆಶಯಗಳ ಹಿನ್ನಲೆಯಲ್ಲಿ ಬಿಜೆಪಿ ಈ ಸಾರಿ ತೆರೆಮರೆ ಹಿಂದೆ ನಡೆಸಿದ ತೆರೆಮರೆ ಕಸರತ್ತು ಹೆಚ್ಚೂ ಕಡಿಮೆ ಫಲಿಸಿದಂತಿದೆ. ಕರ್ನಾಟಕದಲ್ಲಿ ಮೂರನೆ ಅಭ್ಯರ್ಥಿಯಾಗಿ ಬಿಜೆಪಿಯ ಲೆಹರ್ ಸಿಂಗ್ ಗೆದ್ದಿರುವುದು ಗಮನಾರ್ಹ. ಅಸಲಿಗೆ ಈ ಗೆಲುವು ದಳ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಮುರಿದು ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿಯಾಗಿದೆ. ಅವರಿಬ್ಬರ ಜಗಳದ ಸಂಪೂರ್ಣ ಲಾಭ ಪಡೆದ ಬಿಜೆಪಿ ತನ್ನ ಮೂರನೆ ಅಭ್ಯರ್ಥಿಯ ಗೆಲುವಿಗಾಗಿ ಜಾಣ ರಣತಂತ್ರ ಈಗ ಡೆಲ್ಲಿ ಕಮಲಪತಿಗಳ ಮೆಚ್ಚುಗೆಗೂ ಪಾತ್ರವಾಗಿದೆ.
ಈ ಫಲಿತಾಂಶದಿಂದ ಜೆಡಿಎಸ್ ಜಾತ್ಯಾತೀತ ಮುಖವಾಡವೂ ಕಳಚಿದೆ. ಜೆಡಿಎಸ್ ಅಲ್ಪಸಂಖ್ಯಾತರ ಪರವಾಗಿ ನಿಂತ ಪಕ್ಷ ಎಂದು ಹೇಳಿಕೊಳ್ಳುವ ನಾಯಕರು ಕಾಂಗ್ರೆಸ್ ಪಕ್ಷದ ಮನ್ಸೂರ್ ಆಲಿಖಾನ್ ಅವರನ್ನು ಬೆಂಬಲಿಸದೆ ಕುಪೇಂದ್ರ ರೆಡ್ಡಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇಕೆ ಎಂಬುದೂ ಗಂಭೀರ ಪ್ರಶ್ನೆ. ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಟ ಮಂಡಳಿಯನ್ನು ಒಪ್ಪಿಸಿ ಜೆಡಿಎಸ್ ಪರವಾಗಿ ನಿಂತರೂ ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇದನ್ನು ಸುತರಾಂ ಒಪ್ಪಲಿಲ್ಲ. ಬದಲಾಗಿ ಓರ್ವ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂಬ ಬಿಗಿ ಪಟ್ಟು ಹಿಡಿದರು! ಕೈ ನಾಯಕರಿಗೆ ಖಾನ್ ಸೋಲು ನಿರೀಕ್ಷಿತ. ಆದರೆ ಮುಂದಿನ ಚುನಾವಣೆಗೆ ರಾಜ್ಯದಲ್ಲಿ ದಳ ವಿರುದ್ಧ ರಣಕಹಳೆ ಊದಲು ಈ ಸೋಲು ಒಂದು ಬ್ರಹ್ಮಾಸ್ತ್ರ! ಮಿಗಿಲಾಗಿ ಪಕ್ಷದಲ್ಲಿಯೇ ಉತ್ತರ, ದಕ್ಷಿಣ ಮುಖವಿಟ್ಟುಕೊಂಡು ಒಳಗೊಳಗೆ ಕುದಿಯುತ್ತಿರುವ ಸಿದ್ದು, ಡಿಕೆಶಿ ಭಿನ್ನಮತ ಮತ್ತು ಸಿಟ್ಟು ಮರೆತು ಒಂದಾಗಲು ಈ ಚುನಾವಣೆಯೊಂದು ನೆರವಾಯಿತು. ಕಾಂಗ್ರೆಸ್ ಪಕ್ಷದಿಂದ ಬೇರೆ ಬೇರೆ ಪಕ್ಷಗಳಿಗೆ ಪ್ರಮುಖ ನಾಯಕರ ಮಹಾವಲಸೆ ಶುರುವಾಗಿದೆ. ಇಂತಹ ಪರ್ವಕಾಲದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಬಲ ನಾಯಕರಾದ ಸಿದ್ಧರಾಮಯ್ಯ ಮತ್ತು ಶಿವಕುಮಾರ್ ವಿಶ್ವಾಸ ಮತ್ತು ನಂಬಿಕೆ ಕಳೆದುಕೊಳ್ಳದೆ ಕೆಲಸ ಮಾಡುತ್ತಿರುವುದು ಗಮನಾರ್ಹ. ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಕೊನೆಗಳಿಗೆಯಲ್ಲಿ ಪಕ್ಷದ ಸಂಪ್ರದಾಯವನ್ನೇ ಮುರಿದು ಆತ್ಮಸಾಕ್ಷಿ ಮತ ಚಲಾಯಿಸಿರುವುದು ಗಮನಾರ್ಹ. ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಪರವಾಗಿ ಮತಚಲಾಯಿಸಿರುವುದರ ಹಿಂದೆ ಓಟ್ ಬ್ಯಾಂಕಿನ ಸಂಪೂರ್ಣ ಗಣಿತ ಅಡಗಿದೆ. ತಮ್ಮ ಪಕ್ಷದ ಶಾಸಕರೊಬ್ಬರು ಕಾಂಗ್ರೆಸ್ ಗೆ ಓಟು ಮಾಡಿದ್ದಕ್ಕೆ ಮಾಜಿ ಸಿಎಂ ಕುಮಾರ ಸ್ವಾಮಿ ಅಷ್ಟು ಕಟುವಾಗಿ ಹೇಳಿಕೆ ನೀಡಬಾರದಿತ್ತು. ಎಚ್ಡಿಕೆ ಆವೇಶದ ಮಾತುಗಳು ಮುಂದಿನ ಚುನಾವಣೆಯಲ್ಲಿ ಒಂದು ವರ್ಗದ ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲವೇ? ಏಕೆಂದರೆ ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ ತಮ್ಮ ಗೆಲುವಿಗೆ ಸೋಪಾನ ಮಾಡಿಕೊಂಡಿರುವುದೇ ರಾಮನಗರ ಮತ್ತು ಕೋಲಾರದ ಮುಸ್ಲಿಂ ಬಾಂಧವರನ್ನೇ!
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೩-೦೬-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ