ರಾಜ್ಯಾದ್ಯಂತ ರಸ್ತೆ ಗುಂಡಿಗಳ ಸಮಸ್ಯೆ: ತ್ವರಿತ ಕ್ರಮ ಕೈಗೊಳ್ಳಿ
ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಮಹಿಳೆಯೊಬ್ಬರ ಜೀವ ಹಾನಿಯಾಗಿದೆ. ಮಗಳ ಜೊತೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು, ಹಿಂದಿನಿಂದ ಬಂದ ಇನ್ನೊಂದು ವಾಹನ ಹರಿದು ಆಕೆ ಮೃತಪಟ್ಟಿದ್ದಾರೆ. ಕಳೆದ ವರ್ಷವೂ ಇಂತಹ ಘಟನೆ ನಡೆದಿತ್ತು. ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿಮಯವಾಗಿರುವ ಹಿನ್ನಲೆಯಲ್ಲಿ ನಿತ್ಯ ದ್ವಿಚಕ್ರ ವಾಹನ ಸವಾರರು ಬೀಳುವುದು, ಇತರ ವಾಹನಗಳು ಅಪಘಾತಕ್ಕೀಡಾಗುವುದು ನಡೆಯುತ್ತಲೇ ಇದೆ. ಇದು ಬಿಬಿಎಂಪಿ ಹಾಗೂ ಸರ್ಕಾರ ಹೇಳುತ್ತಿರುವಂತೆ ಕೇವಲ ಮಳೆಗಾಲದಲ್ಲಿ ಸೃಷ್ಟಿಯಾದ ಸಮಸ್ಯೆಯೇನೂ ಅಲ್ಲ. ಕಳೆದ ವರ್ಷದ ಮಳೆಗಾಲದ ನಂತರ ಗುಂಡಿ ಬಿದ್ದ ರಸ್ತೆಗಳು ಬೆಂಗಳೂರಿನಲ್ಲಿ ದುರಸ್ತಿಯಾಗಿಲ್ಲ. ಜನಾಕ್ರೋಶ ತೀವ್ರವಾದಾಗ ಬಿಬಿಎಂಪಿ ಅಧಿಕಾರಿಗಳು ಕೆಲವೆಡೆ ಗುಂಡಿ ಮುಚ್ಚಿದ ಶಾಸ್ತ್ರ ಮುಗಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಈ ವರ್ಷ ಭಾರಿ ಮಳೆಯಾದ ಹಿನ್ನಲೆಯಲ್ಲಿ ಗುಂಡಿಗಳು ಇನ್ನಷ್ಟು ಹೆಚ್ಚಾಗಿವೆ ಹಾಗೂ ಆಳವಾಗಿದೆ. ಅವು ದ್ವಿಚಕ್ರ ವಾಹನ ಸವಾರರಿಗೆ ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸಿವೆ.
ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದೆಲ್ಲೆಡೆ ಈ ವರ್ಷ ಮಳೆ ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ರಸ್ತೆ ಗುಂಡಿ ಸಮಸ್ಯೆ ಉಲ್ಬಣಿಸಿದೆ. ಆದರೆ ಜಿಲ್ಲಾಡಳಿತ, ನಿರ್ವಹಣೆಯ ಹೊಣೆಹೊತ್ತಿರುವ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ರಸ್ತೆಗಳ ದುರಸ್ತಿ ಮತ್ತು ಗುಂಡಿ ಮುಚ್ಚುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಅಪಘಾತಗಳು ಹೆಚ್ಚಾಗಲು ಇದೂ ಒಂದು ಪ್ರಮುಖ ಕಾರಣ. ಬೆಂಗಳೂರಿನಲ್ಲಿ ರಸ್ತೆಗಳು ಟಾರು ಕಾಣಲು ಪಾಲಿಕೆ ಚುನಾವಣೆ ಅಥವಾ ವಿಧಾನಸಭೆ ಚುನಾವಣೆ ಬರಬೇಕು ಎಂಬ ಟೀಕೆ ಮೊದಲಿನಿಂದಲೂ ಇದೆ. ಅದನ್ನು ನಿಜವಾಗಿಸುವಂತೆ ಆಡಳಿತ ವ್ಯವಸ್ಥೆ ಕೂಡ ವರ್ತಿಸುತ್ತಿದೆ. ಜನರಿಂದ ರಸ್ತೆ ತೆರಿಗೆ ಸಂಗ್ರಹಿಸುವ ಹಾಗೂ ಪ್ರತಿ ಬಜೆಟ್ ನಲ್ಲೂ ರಸ್ತೆ ನಿರ್ಮಾಣಕ್ಕೆ ಅಪಾರ ಪ್ರಮಾಣದಲ್ಲಿ ತೆರಿಗೆ ಹಣ ವ್ಯಯಿಸುವುದಾಗಿ ಹೇಳುವ ಸರ್ಕಾರ ನಂತರ ಮಾತಿಗೆ ತಪ್ಪುವುದು ಸರಿಯಲ್ಲ. ರಸ್ತೆ ನಿರ್ಮಾಣ ಹಾಗೂ ಗುಂಡಿ ಮುಚ್ಚುವ ಕಾಮಗಾರಿಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕಂತೂ ಎಲ್ಲೆಯೇ ಇಲ್ಲ. ಬೆಂಗಳೂರಿನಲ್ಲಿ ಇಂತಿಷ್ಟೇ ಗುಂಡಿಗಳಿವೆ ಎಂದು ಲೆಕ್ಕ ಹಾಕಿ ಹೇಳುವ ಸರಕಾರ ನಂತರ ಇಂತಿಷ್ಟು ಗುಂಡಿಗಳನ್ನು ಮುಚ್ಚಿ ದ್ದೇವೆ, ಅದಕ್ಕೆ ಇಷ್ಟು ಕೋಟಿ ಖರ್ಚು ಆಗಿದೆ ಎಂದು ಬಿಬಿಎಂಪಿ ನೀಡುವ ಲೆಕ್ಕವಂತೂ ಸದಾ ಹಾಸ್ಯಾಸ್ಪದ ವಾಗಿರುತ್ತದೆ. ಅದನ್ನು ಯಾರು ನಂಬೋದಿಲ್ಲ.. ಮುಖ್ಯಮಂತ್ರಿಗಳೇ ಖುದ್ದಾಗಿ ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ತುರ್ತು ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ...
ಕೃಪೆ: ಕನ್ನಡಪ್ರಭ, ಸಂಪಾದಕೀಯ,ದಿ:೧೯-೧೦-೨೦೨೨