ರಾಜ್ಯೋತ್ಸವದಂದು ನೆನಪಾದ ಗೀತೆ

ರಾಜ್ಯೋತ್ಸವದಂದು ನೆನಪಾದ ಗೀತೆ

ಬರಹ

ರಾಜ್ಯೋತ್ಸವದಂದು ಬಹುಶಃ ಸಹಜವಾಗಿ ನೆನಪು ಮಾಡಿಕೊಳ್ಳಲು ಹೊರಡುವುದು ಕನ್ನಡ ತಾಯಿಯ ಕುರಿತಾದ ಗೀತೆ. ನಮ್ಮ ಭಾಷೆಯ ಕುರಿತು ನಮಗಿರುವ ಹೆಮ್ಮೆ, ಗೌರವ ನೆನಪು ಮಾಡಿಕೊಳ್ಳುವಂತೆ ಮಾಡುತ್ತದೆ, ನಮ್ಮ ಮನಸ್ಸಿನಲ್ಲಿ ಆ ಗೀತೆಯನ್ನು ಹಾಡಿಸುತ್ತದೆ, ಕೆಲವೊಮ್ಮೆ ಜೋರಾಗಿ ಧನಿಯಿಟ್ಟು ಕೂಡ ಹಾಡಿಸುತ್ತದೆ. ಈ ದಿನದ ಸಡಗರ ನಮ್ಮಲ್ಲಿ ಹಲವರಿಗೆ ಮೊದಲಾಗಿ ಕನ್ನಡ ಪೇಪರು ಓದುವುದು ಎಂದುಕೊಳ್ಳುತ್ತೇನೆ. ಎಲ್ಲರಿಗೂ ಸಂತಸ ಕೊಡುವ ಸುದ್ದಿ ಇವತ್ತಂತೂ ಇದ್ದೇ‌ ಇದೆ. ಆದರೆ ಈ ದಿನ ಕೆಳಗಿನ ಸಾಲುಗಳೊಂದಿಗೆ ಪ್ರಾರಂಭವಾದರೆ? ನಿಜವಾದ ಕನ್ನಡದ ಮನದಿಂದ ಬಂದ ಈ ಹಾಡು ನೋಡಿ - ಆಪ್ತ ಸ್ನೇಹಿತರೊಬ್ಬರು ಹೇಳುವಂತೆ ಇದು "ವಿಶ್ವಮಾನವ ಸಂದೇಶದ ಆಶಯ ಹೊತ್ತ ಗೀತೆ":

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು |
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು ||

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು |
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ||

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ |
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು ||

ಮೈಸೂರು ಅನಂತಸ್ವಾಮಿಯವರ ಸಂಗೀತದಲ್ಲಿ ಮೂಡಿಬಂದಿರುವ ಇದೇ ಹಾಡನ್ನು ಕೇಳಿದರಂತೂ ಹೊಸ ಜಗತ್ತಿನಲ್ಲಿ ಚಾರಣ ಮಾಡುತ್ತಿರುವ ಅನುಭವ.

ನಾವು ನಮ್ಮ ಭಾಷೆಯ ಕುರಿತು ಪಡುವ ಹೆಮ್ಮೆ, ಇಟ್ಟುಕೊಂಡಿರುವ ಅಭಿಮಾನ, ಭಾವನೆ - ಇದೆಲ್ಲವುಗಳಿಗೂ ಇಂಬು ನೀಡುವ, ಅಮೂರ್ತವಾದುದೊಂದನ್ನು ಬಣ್ಣಿಸುತ್ತಲೇ ಪ್ರತಿಯೊಬ್ಬರಿಗೂ ಮೂರ್ತವಾದುದೊಂದನ್ನು ಕಾಣಿಸುವ, ಮತ್ತೆ ಮತ್ತೆ ಓದಿದಾಗಲೂ ಭಿನ್ನವಾಗಿ ಕಾಣುವ, ಭಾಷೆಯ ಶಕ್ತಿ ಮನಸ್ಸಿಗೆ ತಾಕುವಂತೆ ಮಾಡುವ ಈ ಸಾಲುಗಳು ಮೂಡಿಸುವ ಭಾವನೆ ಅಪೂರ್ವವಾದುದಲ್ಲವೆ? ಅದೂ ರಾಜ್ಯೋತ್ಸವದಂದು!

(ರಚನೆ: ಕುವೆಂಪು)