ರಾಜ್ಯ ಸಚಿವ ಸಂಪುಟದ ಮಂತ್ರಿಗಳ ಹೆಸರುಗಳನ್ನು ನೋಡುವಾಗ...
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಹೆಸರುಗಳನ್ನು ನೋಡಿದಾಗ… ಎಲ್ಲರೂ ಹಿರಿಯರು, ಅನುಭವಿಗಳು, ಶ್ರೀಮಂತರು, ಸಮಾಜದ ಸಮಕಾಲೀನ ಸಮಸ್ಯೆಗಳನ್ನು ಅರಿತವರು, ಬದುಕನ್ನು ಅನುಭವಿಸಿದವರೇ ಆಗಿದ್ದಾರೆ. ಕೆಲವು ಹೊಸಬರು ಇದ್ದಾರೆ. ಈ ಸಚಿವರಲ್ಲಿ ಇಡೀ ರಾಜ್ಯದ ಜನತೆ ಈ ರೀತಿಯ ಒಂದು ಮನವಿ ಮಾಡಿಕೊಳ್ಳಬಹುದೇ…?
ಬದುಕಿನ ಇಳಿ ಸಂಜೆಯಲ್ಲಿರುವ ನೀವು ಮುಂದಿನ 5 ವರ್ಷಗಳ ಕಾಲ ಕಡಿಮೆ ಭ್ರಷ್ಟರಾಗುವ ಪ್ರತಿಜ್ಞೆ ಮಾಡಿ ಈ ನೆಲದ ಮತ್ತು ನಿಮ್ಮ ಹೆತ್ತ ತಂದೆ ತಾಯಿಗಳ ಋಣ ತೀರಿಸಲು ಪ್ರಯತ್ನಿಸಬಹುದೇ? ಇಲ್ಲಿ ಕಡಿಮೆ ಭ್ರಷ್ಟಾಚಾರ ಎಂದರೆ, ಸಾಮಾನ್ಯವಾಗಿ ಬಹುತೇಕ ಇಲಾಖೆಗಳಿಗೆ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಬಜೆಟ್ ನಲ್ಲಿ ಹಣ ಮೀಸಲಾಗಿರುತ್ತದೆ. ಸಂಬಳ ಸಾರಿಗೆಗೆ ಎಂದಿನಂತೆ ನಿರ್ಧಿಷ್ಟ ಮೊತ್ತ ಖರ್ಚಾಗುತ್ತದೆ. ಆದರೆ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ ಎರಡು ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ.
ಮೊದಲನೆಯದಾಗಿ, ಯಾವುದೇ ಕೆಲಸಕ್ಕೆ ಖಾಸಗಿಯವರು ಮಾಡುವ ವೆಚ್ಚಕ್ಕಿಂತ ಸುಮಾರು 30-40% ಹೆಚ್ಚು ಹಣವನ್ನು ಸರ್ಕಾರಿ ಯೋಜನೆಗಳಿಗೆ ಖರ್ಚು ಮಾಡುತ್ತಾರೆ. ಜೊತೆಗೆ ಇದರಲ್ಲಿ 20% ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಕಾರ್ಯಕ್ರಮಗಳಿಗೆ ಅನವಶ್ಯಕವಾಗಿ ಖರ್ಚು ಮಾಡುತ್ತಾರೆ. ಅದನ್ನು ನಿಲ್ಲಿಸಬೇಕು ಮತ್ತು ಉಳಿಸಬೇಕು.
ಎರಡನೆಯದಾಗಿ, ಬಹುತೇಕ ಯೋಜನೆಗಳು ಟೆಂಡರ್ ಮೂಲಕ ಪಾರದರ್ಶಕ ಎಂದು ತಾಂತ್ರಿಕವಾಗಿ ಹೇಳಿದರು ಪ್ರತಿ ಯೋಜನೆಯಲ್ಲಿ ಅಧಿಕಾರಿಗಳು ಮತ್ತು ಮಂತ್ರಿಗಳಿಗೆ ಒಂದಷ್ಟು ಪರ್ಸಂಟೇಜ್ ಸಂದಾಯವಾಗುತ್ತದೆ. ಕಡಿಮೆ ಭ್ರಷ್ಟಾಚಾರ ಎಂಬ ಪದದ ಅರ್ಥ ಈ ಕಮೀಷನ್ ಹಣವನ್ನು ಕಡಿಮೆ ಮಾಡಿ ಅದನ್ನು ಯೋಜನೆಯ ಗುಣಮಟ್ಟವನ್ನು ಏರಿಸುವ ನಿಟ್ಟಿನಲ್ಲಿ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ಕನಿಷ್ಟ ಅಷ್ಟು ಮಾಡಿದರೂ ಈ ನೆಲದ ಋಣ ತೀರಿಸಿದಂತೆ ಎಂದು ಆತ್ಮ ತೃಪ್ತಿ ಪಡೆಬಹುದು.
ಹಾಗೆಯೇ ಮಂತ್ರಿಗಳ ಮೇಲೆ ಇರುವ ಮತ್ತೊಂದು ದೊಡ್ಡ ಆಪಾದನೆ ಜಾತಿ ಪ್ರೇಮ ಮತ್ತು ಸ್ವಜನ ಪಕ್ಷಪಾತ. ಇಲ್ಲಿಯೂ ಕೂಡ ಪ್ರಜ್ಞಾಪೂರ್ವಕವಾಗಿ ಸಾಧ್ಯವಾದಷ್ಟು ಜಾತಿ ಮೀರಿದ ಮಾನವ ಪ್ರೀತಿ ಮತ್ತು ರಕ್ತ ಸಂಬಂಧ ಮೀರಿದ ದಕ್ಷತೆಗೆ ಪ್ರಾಮುಖ್ಯತೆ ನೀಡುವ ಕೆಲಸವನ್ನು ಮಾಡಬೇಕು. ಈಗಿನ ವ್ಯವಸ್ಥೆಯಲ್ಲಿ ಸಂಪೂರ್ಣ ಶುದ್ದವಾಗದಿದ್ದರು ಆ ಮೋಹವನ್ನು ಕಡಿಮೆ ಮಾಡಿಕೊಳ್ಳುತ್ತಾ ಸಾಗಬೇಕು. ಇದೇನು ಬ್ರಹ್ಮ ವಿದ್ಯೆಯಲ್ಲ. ಅತ್ಯಂತ ಕಠಿಣ ಪರಿಶ್ರಮ ಪಡಬೇಕಾಗಿಲ್ಲ. ಸ್ವಲ್ಪ ಮಟ್ಟಿಗೆ ಆತ್ಮ ವಿಮರ್ಶೆ ಮಾಡಿಕೊಂಡರೆ ಸಾಕು ಇದರಲ್ಲಿ ನೀವು ಕೊಂಚ ಯಶಸ್ವಿಯಾಗಬಹುದು.
ಮತ್ತೊಂದು ಆರೋಪ ಮತ್ತು ವಾಸ್ತವ ಏನೆಂದರೆ ಶಾಸಕರ ಅಥವಾ ಮಂತ್ರಿಗಳು ತಾವೊಬ್ಬರೇ 5-6-7-8 ಹೀಗೆ ಸತತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ ಮತ್ತು ಇಡೀ ವ್ಯವಸ್ಥೆಯಲ್ಲಿ ಹೊಸ ರಕ್ತ ಹರಿಯದೆ ಕೊಳೆಯಲಾರಂಭಿಸುತ್ತದೆ. ಒಂದು ರೀತಿಯ ಅನಧಿಕೃತ ವಂಶಾಡಳಿತ ಜಾರಿಯಲ್ಲಿರುತ್ತದೆ. ಅದರ ಪರಿಣಾಮ ತೀವ್ರ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಆವರಿಸುತ್ತದೆ. ಆದ್ದರಿಂದ ತುಂಬಾ ದುರಾಸೆ ಪಡದೇ ಇಡೀ ಬದುಕಿನಲ್ಲಿ ರಾಜಕಾರಣಿ ಮಾತ್ರವಾಗಿರದೆ ಇತರ ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಸಹ ಸ್ವಲ್ಪ ಕೆಲಸ ಮಾಡಬಹುದು.
ಹಾಗೆಯೇ ಈ ಮಂತ್ರಿಗಳು ತುಂಬಾ ತುಂಬಾ ಬ್ಯುಸಿ ಬ್ಯುಸಿ ಎಂದು ಯೋಚಿಸಲೂ ಸಾಧ್ಯವಾಗದಷ್ಟು ಕಾರ್ಯ ಒತ್ತಡಕ್ಕೆ ಒಳಗಾಗಿ ತಮ್ಮ ಇಲಾಖೆಯ ನಿಜವಾದ ಕೆಲಸಗಳ ಬಗ್ಗೆ ಗಮನಹರಿಸುವುದೇ ಇಲ್ಲ. ಸುಮ್ಮನೆ ಹೇಗೋ ಕಾರ್ಯಾಂಗದ ಮೂಲಕ ದಿನನಿತ್ಯದ ಕೆಲಸಗಳನ್ನು ಮಾಡುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಈಗಿನ ಸಂದರ್ಭದಲ್ಲಿ ಜನೋಪಯೋಗಿ ಕ್ರಾಂತಿಕಾರಕ ಬದಲಾವಣೆಯ ಅವಶ್ಯಕತೆ ಇದೆ. ಅದಕ್ಕಾಗಿ ಅಧ್ಯಯನ ಚಿಂತನೆ ಮತ್ತು ಕಾರ್ಯಯೋಜನೆಗಾಗಿ ಸಾಕಷ್ಟು ಸಮಯದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ದಯವಿಟ್ಟು ಸ್ವಲ್ಪ ಏಕಾಂತದ ಸಮಯ ಮಾಡಿಕೊಂಡು ತಮ್ಮ ತಮ್ಮ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಎಷ್ಟು ಉತ್ತಮ ಸೇವೆ ಕೊಡಬಹುದು ಎಂಬುದನ್ನು ಅರಿತು ಕಾರ್ಯೋನ್ಮುಖರಾಗಿ.
ಹೀಗೆ ಇನ್ನೂ ನಿಮಗೆ ತಿಳಿದ ರೀತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನಿಸಿ. ಕೋಟ್ಯಾಂತರ ಜನ ಪ್ರೀತಿಯಿಂದ ನಿಮ್ಮನ್ನು ಬೆಂಬಲಿಸಿದ್ದಾರೆ. ಅವರಿಗೆ ಮೋಸ ಅನ್ಯಾಯ ಮಾಡಬೇಡಿ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ