ರಾಣಿ ಎಲಿಜಬೆತ್ ಅಸ್ತಂಗತ ಮತ್ತು ಲಿಜ್ ಟ್ರಸ್ ಎಂಬ ಹೊಸ ಪ್ರಧಾನಿ....

ರಾಣಿ ಎಲಿಜಬೆತ್ ಅಸ್ತಂಗತ ಮತ್ತು ಲಿಜ್ ಟ್ರಸ್ ಎಂಬ ಹೊಸ ಪ್ರಧಾನಿ....

ಇಂಗ್ಲೆಂಡ್ ವಿಶ್ವ ಸಮುದಾಯದಲ್ಲಿ ಸದ್ದು ಮಾಡುತ್ತಿದೆ ಎರಡು ಕಾರಣಗಳಿಗಾಗಿ... ಸ್ವಲ್ಪ ಮಟ್ಟಿಗೆ ಭಾರತದ ರಾಷ್ಟ್ರಪತಿ ಸ್ಥಾನ ಎಂದು ಹೇಳಬಹುದಾದರೂ ಅದಕ್ಕಿಂತ ಹೆಚ್ಚಿನ ಭಾವನಾತ್ಮಕ ಸಂಬಂಧವನ್ನು ದೇಶದ ಜನತೆಯೊಂದಿಗೆ ಹೊಂದಿರುವ  ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ಒಂದು ಗೌರವಯುತ ಸ್ಥಾನ ಅಲ್ಲಿನ ಮುಖ್ಯಸ್ಥರಾದ ರಾಜ ಅಥವಾ ರಾಣಿಯ ಹುದ್ದೆ.

ಸುಮಾರು ‌70 ವರ್ಷಗಳ ಸುದೀರ್ಘ ಕಾಲ ರಾಣಿಯಾಗಿ ಇರುವುದು ಮನುಷ್ಯ ಜೀವಿಯೊಂದರ ಸಾರ್ಥಕ ಬದುಕಿನ ಅದೃಷ್ಟದ ದಿನಗಳು ಎಂದು ಸಾಮಾನ್ಯರಾದ ನಮಗೆ ಅನಿಸುತ್ತದೆ. ಏಕೆಂದರೆ ತೀರಾ ಗಂಭೀರವಾದ ಯಾವುದೇ ಸಮಸ್ಯೆ ಇಲ್ಲದೇ ಇಷ್ಟ ಪಟ್ಟ ಆಹಾರ, ಬಟ್ಟೆ, ಪ್ರವಾಸ, ಭದ್ರತೆ, ಅಧಿಕಾರ, ಸಂಬಂಧಗಳು, ಗೌರವ, ಸೇವಕರು ಎಲ್ಲವೂ ದೊರೆತಿರುತ್ತದೆ. ಕೆಲವೊಂದು ಮಾನಸಿಕ ಮತ್ತು ದೈಹಿಕ ಒತ್ತಡಗಳು ದೀರ್ಘ ಬದುಕಿನಲ್ಲಿ ಸಹಜವಾಗಿ ಕಾಡಿರಬಹುದು. ಅದನ್ನು ಹೊರತುಪಡಿಸಿ ಬಹುತೇಕ ಆರಾಮದಾಯಕ ಎಂದು ಇಷ್ಟು ದೂರದಿಂದ ನೋಡಿದಾಗ ಅನಿಸುತ್ತದೆ. ಒಂದು ಕಾಲದಲ್ಲಿ ಸುಮಾರು ‌75 ಕ್ಕೂ ಹೆಚ್ಚು ಕಾಮನ್‌ವೆಲ್ತ್ ರಾಷ್ಟ್ರಗಳನ್ನು ತನ್ನ ಆಡಳಿತಕ್ಕೆ ಒಳಪಡಿಸಿಕೊಂಡಿದ್ದ ಅತ್ಯಂತ ಬಲಿಷ್ಠ ರಾಷ್ಟ್ರದ ಮಹಾರಾಣಿ ಕೂಡ ಕಾಲನ ಕರೆಗೆ ಶರಣಾದರು. ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ....

ಹಾಗೆಯೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಪ್ರಧಾನಿ ಪಟ್ಟ ಮಾರ್ಗರೆಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಲಿಜ್ ಟ್ರಸ್ ಎಂಬ ಮಹಿಳೆಗೆ  ಒಲಿದಿದೆ. ಭಾರತೀಯ ಮೂಲ ಮತ್ತು ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಅಳಿಯ ಎಂಬ ಕಾರಣದಿಂದಾಗಿ ಆಕೆಯ ವಿರುದ್ಧ ಸ್ಪರ್ಧಿಸಿದ್ದ ರಿಷಿ ಸುನಾಕ್ ಅವರ ಸ್ಪರ್ಧೆ ನಮ್ಮಲ್ಲಿ ಹೆಚ್ಚು ಕುತೂಹಲ ಮೂಡಿಸಿತ್ತು.

ಪ್ರಾರಂಭಿಕ ಹಂತದಲ್ಲಿ ರಿಷಿ ಸುನಾಕ್ ಎಲ್ಲರಿಗಿಂತ ತುಂಬಾ ಮುಂದೆ ಇದ್ದರು. ವೈಯಕ್ತಿಕವಾಗಿ ಇದು ನನಗೂ ಆಶ್ಚರ್ಯಕರವಾಗಿತ್ತು. ನನ್ನ ಊಹೆಗೆ ವಿರುದ್ದವಾಗಿತ್ತು. ಆದರೆ ಅಂತಿಮ ಹಂತದಲ್ಲಿ ನನ್ನ ಊಹೆ ನಿಜವಾಗಿ ಅವರು ಸ್ಪರ್ಧೆಯಲ್ಲಿ ಸೋತರು. ಏಕೆಂದರೆ ನನ್ನ ಊಹೆಯ ಪ್ರಕಾರ ಇಂಗ್ಲೆಂಡ್ ನಂತ ದೇಶದಲ್ಲಿ ಕೂಡ ಮಾನವ ಸಹಜ - ಸಮುದಾಯ ಸಹಜ ಜನಾಂಗೀಯ ತಾರತಮ್ಯ ಈಗಲೂ ಹೊಗೆಯಾಡುತ್ತಲೇ ಇದೆ. ನನ್ನ ಊಹೆ ಜನಾಂಗೀಯ ತಾರತಮ್ಯದ ಕಾರಣದಿಂದ ಸುನಾಕ್ ಅವರಿಗೆ ಪ್ರಧಾನಿ ಪದವಿ ಸಿಗುವುದು ಕಷ್ಟ ಎಂದಾಗಿತ್ತು.

ಆತ್ಮ ವಿಮರ್ಶೆ ಮಾಡಿಕೊಂಡರೆ ಆಂತರ್ಯದಲ್ಲಿ ಇದು‌ ಗೋಚರಿಸುತ್ತದೆ. ಭಾರತದಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರ ವಿಷಯದಲ್ಲಿ ಸಹ ಜನಾಂಗೀಯ ತಾರತಮ್ಯ ಕಾಣಬಹುದು. ತಾಂತ್ರಿಕವಾಗಿ ಸೋನಿಯಾ ಗಾಂಧಿ ಮತ್ತು ‌ರಿಷಿ ಸುನಾಕ್ ಆಯಾ ದೇಶದ ಎಲ್ಲ ಹಕ್ಕುಗಳುಳ್ಳ ಪ್ರಜೆಗಳಾಗಿದ್ದರೂ ದೇಶದ ಪ್ರಧಾನಿಯಾಗುವ ಸಾಂವಿಧಾನಿಕ ಅವಕಾಶ ಇದ್ದರೂ ಜನಾಂಗೀಯ ಕಾರಣಕ್ಕಾಗಿ ಅಥವಾ ವಿದೇಶಿ ಮೂಲದವರು ಎಂಬ ಕಾರಣದಿಂದ ಅವರನ್ನು ವಿರೋಧಿಸಲಾಯಿತು.

ರಿಷಿ ಸುನಾಕ್ ಗೆ ಪ್ರಧಾನಿ ಪದವಿ ತಪ್ಪಿದಾಗ ಭಾರತೀಯರಿಗೆ ನಿರಾಸೆಯಾದಂತೆ ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಪಟ್ಟ ಸಿಗದಿದ್ದಾಗ ಇಟಲಿಯನ್ನರಿಗೂ ಹಾಗೇ ನಿರಾಸೆಯಾಗಿರಬಹುದಲ್ಲವೇ..? ತೆಲುಗಿನಲ್ಲಿ ಒಂದು ಗಾದೆ ಮಾತಿನ ಅರ್ಥ ಹೀಗಿದೆ. " ಅಯ್ಯಗಾರಿಕಿ ಅಯ್ಯಿಂದಿ ಜಂಗಮಯ್ಯಕ್ಕೂ ಅಯ್ಯಿಂದಿ " ಅಂದರೆ....

ಒಮ್ಮೆ ಒಂದು ಊರಿನಲ್ಲಿ ಅಯ್ಯ ಮತ್ತು ಜಂಗಮಯ್ಯ ಎಂಬ ಇಬ್ಬರು ವ್ಯಕ್ತಿಗಳು ಇರುತ್ತಾರೆ. ಒಂದು ದಿನ ಅಯ್ಯ ಏನೋ ವಸ್ತುವನ್ನು ತೆಗೆದುಕೊಳ್ಳಲು ಒಂದು ಗೂಡಿಗೆ ಕೈ ಹಾಕುತ್ತಾನೆ. ಆಗ ಆತನಿಗೆ ‌ಚೇಳು ಕುಟುಕುತ್ತದೆ. ಆದರೆ ಅಯ್ಯ ಅದನ್ನು ಹೇಳುವುದಿಲ್ಲ. ಸ್ವಲ್ಪ ಸಮಯದ ನಂತರ ಇನ್ನೇನೋ ತೆಗೆದುಕೊಳ್ಳಲು ಜಂಗಮಯ್ಯ ಅದೇ ಗೂಡಿನಲ್ಲಿ ಕೈ ಇಡುತ್ತಾನೆ. ಆಗ ಚೇಳು ಅವನಿಗೂ ಕುಟುಕುತ್ತದೆ. ಅದನ್ನು ನೋಡಿ ಅಯ್ಯ ಒಳಗೊಳಗೆ ಮುಸಿ ಮುಸಿ ನಗುತ್ತಾನೆ. ಹೀಗಿದೆ ಮಾನವ ಜನಾಂಗದ ಮಾನಸಿಕ ಸ್ಥಿತಿ. ಹೇಳುವುದು ವಿಶ್ವ ಮಾನವತೆ. ಮಾಡುವುದು ಸಂಕುಚಿತತೆ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ