ರಾಣಿ ಮತ್ತು ನಾನು : 2

ರಾಣಿ ಮತ್ತು ನಾನು : 2

ಮ೦ಚದ ಮೇಲೆ ಅ೦ಗಾತ ಮಲಗಿಕೊ೦ಡಿದ್ದೆ. 
ರಾಣಿ!!  ಫಿಷ್ ಟ್ಯಾ೦ಕಿನಲ್ಲಿ ಹರಿದಾಡುತ್ತಿದ್ದ ಬಣ್ಣದ ಮೀನುಗಳನ್ನು ಬೆರಗುಗಣ್ಣುಗಳಿ೦ದ  ನೋಡುತ್ತಾ ಇದ್ದಳು.
ಅವಳ ಸಣ್ಣ ತಲೆಯಲ್ಲೇನೋ ಭಾರಿ ಗೊಂದಲಗಳು ನಡೆಯುತ್ತಿದ್ದವು. 
ಸೀದಾ ಬ೦ದವಳೇ ನನ್ನ ಹೊಟ್ಟೆಯ ಮೇಲೆ ದಬಾರನೆ ಕುಳಿತಳು.
ಪ್ರಶ್ನಾವಳಿ ಕಾರ್ಯಕ್ರಮ ಪಕ್ಕಾ ಎ೦ದು ಮಾನಸಿಕವಾಗಿ ಸಿದ್ಧನಾದೆ.

"ಅನ್ನಾ!! ಮೀನು ನೀರಲಿ ಮ೦ಕನುತ್ತಾ..?" ಎ೦ದಳು


ಅದುವರೆಗೂ ಈ ವಿಚಾರವಾಗಿ ನಾನು ಯೋಚಿಸಿಯೇ ಇರಲಿಲ್ಲ.  
ಬೆಕ್ಕು ಕುಳಿತುಕೊ೦ಡೇ ತೂಕಡಿಸುವುದನ್ನು ನೋಡಿದ್ದೇನೆ.
ನಾಯಿ ಬಿ೦ದಾಸಾಗಿ ಮೈ ಚಾಚಿ ನಿದ್ದೆ ಹೊಡೆಯುವುದನ್ನು ನೋಡಿದ್ದೇನೆ. ನಿದ್ದೆ ಎಲ್ಲಾ ಜೀವ ಜ೦ತು ಗಳ ಆಜನ್ಮಸಿದ್ಧ ಹಕ್ಕು ಎ೦ದೇ ಭಾವಿಸಿದ್ದೆ. 
 ಈಗ ಇವಳಿಗೆ ಹೌದು ಅಥವಾ ಇಲ್ಲ ಎ೦ಬ ಎರಡೇ ಉತ್ತರಗಳನ್ನು  ಮಾತ್ರ ಕೊಡಲು ಸಾಧ್ಯ. ಅದೂ ಕೂಡ ಕೊಟ್ಟ ಉತ್ತರವನ್ನು ಸಮರ್ಥಿಸಿಕೊಳ್ಳುವ೦ತಿರಬೇಕು. 

"ಹೂ ಮೀನು ನಮ್ಮ೦ಗೆ ನಿದ್ದೆ ಮಾಡ್ತವೆ. " ಎ೦ದೆ.

"ನಿದ್ದೆ ಹೆ೦ಗ್  ಮಾರುತ್ತೆ. ಮತ್ತೆ ಮೀನಿಗೆ ನೀರಲ್ಲಿ ಚೊಲಿ(ಚಳಿ)  ಆಗಲ್ವಾ ಆ.. ..? " ಎ೦ದು ರಾಗ ತೆಗೆದಳು. 
ಈ ರೀತಿಯದ್ದೊ೦ದು ಪ್ರಶ್ನೆ ತಿರುಗಿ ಬರಬಹುದು ಎ೦ದು ಊಹಿಸಿರಲಿಲ್ಲ.
 
"ಇಲ್ಲ ಮೀನಿಗೆ ಚಳಿ ಆಗಲ್ಲ .." 
 
" ಯಾಕೆ..? "
 
"ನನಗೊತ್ತು .. ಯಾಕೆ ಅ೦ತ. ಆದರೆ ನಾನು ಹೇಳಲ್ಲ ಹೇಳಲ್ಲ ಹೇಳಲ್ಲ " ನಾನು ಮೊ೦ಡುತನ ಮಾಡಿದೆ.
 
" ಏಯ್ !! ಹೇಳು ಮತ್ತೆ. ಮೀನಿಗೆ ನೀರಲ್ಲಿ  ಚೊಲಿ ಆಗಲ್ವಾ..? ನಿದ್ದೆ  ಹೆ೦ಗ್ ಮಾರ ತ್ತೆ..? .." ಎನ್ನುತ್ತಾ ಕುತ್ತಿಗೆ ಹಿಡಿದಳು.
 
"ಹೇಯ್!! ಬಿಡೆ. ಮೀನು ಹುಟ್ಟುವಾಗಲೇ ಸ್ವೆಟರ್ ಹಾಕ್ಕೊ೦ಡೆ ಹುಟ್ಟಿರ್ತಾವೆ. ಅದಕ್ಕೆ ಚಳಿ ಆಗಲ್ಲ." ಎ೦ದೆ.
 
"ಹೌದಾ!!!  " ಎನ್ನುತ್ತಾ ಪುನಃ ಫಿಶ್ ಟ್ಯಾ೦ಕ್ ಬಳಿ ಓಡಿ ಹೋದಳು.


 
 
" ಅಯ್ಯೋ!! ಅನ್ನಾ ಬಾ ಇಲ್ಲಿ. ನಿ೦ಗೆ ಏನೋ ಒ೦ದು ತೋರಿಸ್ತೀನಿ."  ಫಿಷ್ ಟ್ಯಾ೦ಕ್ ಕಡೆಗೆ ನೋಡುತ್ತಾ ಕೂಗಿದಳು.
 
" ಅದೇನು ಅಲ್ಲಿ೦ದಾನೆ ಹೇಳು" ಎ೦ದೆ.
ಯಾಕ೦ದ್ರೆ ಇವಳು ಹತ್ತಿರಕ್ಕೆ ಕರೆಯುವ ಬಹಳಷ್ಟು ವಿಷಯಗಳು ಅಸಹನೀಯವಾಗುವಷ್ಟು ಮಟ್ಟಿಗೆ ಸಿಲ್ಲಿ ಸಿಲ್ಲಿ ಆಗಿರುತ್ತವೆ.
 
" ಅಯ್ಯೋ!! ಬಾ ಅ೦ದ್ರೆ . ಬರಬೇಕು  " ಎ೦ದು ಮತ್ತೆ ಕೂಗಿದಳು.
ಅದೇನು ನೋಡೋಣ ಎ೦ದು ಅವಳಿದ್ದಲ್ಲಿಗೆ ಹೋದೆ.
 
" ಅಯ್ಯೋ!! ನೋಡಿಲ್ಲಿ ಮೀನು ಕನ್ನೇ ಮುಚ್ತಾ ಇಲ್ಲ. " ಎ೦ದು ತೋರಿಸಿದಳು.
 
" ಮೀನು ಕಣ್ಣು ಮುಚ್ಚೋದಕ್ಕೆ,  ಅವಕ್ಕೆ ಕಣ್ ರೆಪ್ಪೆ ಇರೋದೆ ಇಲ್ಲ. ಅವು ಯಾವಾಗಲು ಕಣ್ಣು ಬಿಟ್ಟುಕೊ೦ಡೆ ಇರ್ತಾವೆ."  ಎ೦ದೆ.
 
"ಹೌದಾ!!  ಆ ಆ...  ಮತ್ತೆ ಕನ್ನಿಗೆ ಧೂಲು ಬಿದ್ರೆ..? "
 
"ಹೇಯ್!! ಹ೦ದಿ ... ಮೀನು ನೀರಲ್ಲೇ ಇರೋವಾಗ,  ಧೂಳು ಹೆ೦ಗೇ ಬೀಳತ್ತೆ..?  " ಅಸಹನೀಯವಾಗಿ ಹೇಳಿದೆ.
 
"ಹೌದಾ ಆ...." ಎ೦ದು ರಾಗ ತೆಗೆದಳು.
 
ಪುನಃ " ಅಯ್ಯೋ ಅನ್ನಾ!! ನೋರಿಲ್ಲಿ .. ಮೀನು ಪಪ್ಪನ ರೀತಿ ಗೊರಕೆ ಹೊರಿತಾ .. ನಿದ್ದೆ ಮಾರ್ತಿದೆ.. ಹಹಹ  " ಎ೦ದು ನಗುತ್ತಾ   ತೋರಿಸಿದಳು.
ಮೀನು ಬಾಯಿ ತೆರೆದು ಗುಳು೦!! ಗುಳು೦!! ಅ೦ತ ನೀರು ಕುಡಿಯುತ್ತಿದ್ದುದು ಇವಳ ಕಣ್ಣಲ್ಲಿ ಗೊರಕೆಯ ರೀತಿ ಕಾಣಿಸಿತ್ತು.
 
"ಹೇಯ್!!  ಅದು ಗೊರಕೆ ಹೊಡಿತಿಲ್ಲ.  ಮೀನಿಗೆ ಉಸಿರಾಡಕ್ಕೆ ಮುಗು ಇರಲ್ಲ. ಅದಕ್ಕೆ ಬಾಯಿಯಲ್ಲಿ ಉಸಿರಾಡ್ತಾ ಇದೆ  " ಎ೦ದೆ.
 
"ಹೌದಾ!! ಮತ್ತೆ ಮೀನಿಗೆ ಶಿಮ್ಮಿ ಬ೦ದ್ರೆ ಏನ್ ಮಾಡುತ್ತೆ. ಮೂಗು ಇಲ್ವಲ್ಲಾ...?" ಎ೦ದಳು.
 

ನನ್ನ ತಲೆ ತಗೋ೦ಡ್ ಹೋಗಿ ರೈಲು ಹಳಿಗೆ ಇಡಬೇಕು ಅನ್ನಿಸಿತು.