"ರಾಣಿ"

"ರಾಣಿ"

ಬರಹ

ಸಾಕು ಪ್ರಾಣಿಗಳನ್ನು "ಪ್ರಾಣಿ" ಎಂದು ಉಲ್ಲೇಖಿಸಬಾರದು, "ಪ್ರಾಣಿ" ಎಂದು ಹೇಳ ಹೊರಟರೆ ಎನೋ ಅದರ ನಾಮಾಂಕಿತಕ್ಕೆ ಮಸಿ ಎಳೆದಂತೆ ಮನಸಿಗೆ ಭಾಸವಾಗುತ್ತದೆ. ಅವುಗಳ ಇರುವಿಕೆಯು ಕುಟುಂಬದ ಒಬ್ಬ ಸದಸ್ಯನಿದ್ದಂತೆ. ಕುಟುಂಬದ ಕಷ್ಟ ಸುಖಗಳಲ್ಲಿ ಕೂಡ ಭಾಗಿಯಾಗುವ ಬದುಕಿಗೆ ಹೊಂದಿಕೊಳ್ಳುವ ಯಾರಿಗು ಕೇಡನ್ನು ಬಯಸದ ಅಹಂಭಾವವನ್ನು ಕಿಂಚ್ಚಿತ್ತು ತೋರಿಸದ ಉತ್ತಮ ಜೊತೆಗಾರನಾಗುವ/ಳಾಗುವ ಎಲ್ಲ ಅಹರ್ತೆಗಳು ಈ "ಸಾಕು ಪ್ರಾಣಿಗಳಿಗೆ" ಸಲ್ಲಬೇಕು.

ಹೀಗೆ ನನ್ನ ಬಾಲ್ಯದ ದಿನಗಳಲ್ಲಿ ನೂತನವಾಗಿ ಸೇರ್ಪಡೆಗೊಂಡ ಶ್ವಾನವು (ಪೊಮೆರೇನಿಯನ್ ತಳಿ) (ಕ್ಷಮಿಸಿ, ನಾಯಿ ಎಂದು ನಾಮಪದವನ್ನು ಸೂಚಿಸುವುದಕ್ಕೆ ಹಿಂಸೆ) ನೂತನ ಕುಟುಂಬದ ಸದಸ್ಯೆಯ ಹೆಸರು "ರಾಣಿ". ನೋಡಲು ರಾಣಿಯಂತೆಯೆ, ಹಾಲಿನಂತೆ ಬಿಳಿಯ ಮೈ ರೋಮಗಳು, ಬಲಗಿವಿ ಮಾತ್ರ ಕಪ್ಪು, ಬಲಗಿವಿ ಅದಕ್ಕೆ ದೃಷ್ಟಿ ಬೊಟ್ಟು ಇದ್ದಂತೆ. ಈ ಬೊಟ್ಟುನಿಂದಾಗಿಯೆ ಅದರ ತುಂಬು ಲಕ್ಷಣ ದಿನವೂ ವೃದ್ಧಿಸುತ್ತಿತ್ತು. ಅದರ ನಡಿಗೆ, ಅಂದವಾದ ಮುಗುಳುನಗೆ, ಸ್ಫುರದ್ರೂಪಿ, ಜನರೊಡನೆ ಒಡನಾಡುವುದು ಎಲ್ಲರಿಗು ಆನಂದವನ್ನೆ ನೀಡುತ್ತಿತ್ತು. ರಾಣಿ ನಮ್ಮ ಮನೆಗೆ ಬಂದಾಗ ಅವಳಿಗೆ ಒಂದು ವರ್ಷ, ಮೊದಲೆರಡು ದಿನ ಮನೆಯಲ್ಲಿ ಒಗ್ಗಿಕೊಳ್ಳುವುದಕ್ಕೆ ಅವಳು ಹಿಂಸೆಪಟ್ಟದ್ದು ಬಿಟ್ಟರೆ ತನ್ನ ಜೀವನ ಪರ್ಯಂತ ಎಂದಿಗು ಹಿಂಸೆಪಡಲಿಲ್ಲ (ಹಿಂಸೆ ಪಟ್ಟರು ಅವಳು ತೋರಗೊಡಲಿಲ್ಲವೊ ಎನೋ).
ಆ ಸಮಯದಲ್ಲಿ ಅಂದರೆ ೧೯೯೦ ರ (ಅದಕ್ಕಿಂತ ಮುಂಚಿತವಾಗಿಯೆ) ಆಸುಪಾಸಿನಲ್ಲಿ ನನ್ನ ತಾಯಿ ಶಿಶುಕೇಂದ್ರವನ್ನು ನಡೆಸುತ್ತಿದ್ದರು, ರಾಣಿಯು ಕೂಡ ಆ ಮಕ್ಕಳ ಸಮೂಹದಲ್ಲಿ ೩-೪ ವರ್ಷದ ಶಿಶುವಿನಂತೆ ವರ್ತಿಸುತ್ತಿದ್ದಳು.

ಸುಮಾರು ೨೦ ಮಕ್ಕಳ ಜಂಗುಳಿಯಲ್ಲಿ ಒಮ್ಮೆಯು ಯಾವ ಮಕ್ಕಳಿಗು ಹಿಂಸೆ ಕೊಡಲಿಲ್ಲ, ಕಚ್ಚಲೂ ಇಲ್ಲ.ಅವಳ ಪಾಡಿಗೆ ಹಜಾರದಿಂದ ಕೋಣೆಗೆ ಕೋಣೆಯಿಂದ ಹಜಾರಕ್ಕೆ ಖುಶಿಯಾಗಿ ಎಲ್ಲರೊಡನೆ ಬೆರೆಯುತ್ತಿದ್ದಳು. ನಾವೆಲ್ಲರು
ನಮ್ಮ ಎಂದಿನ ಕೆಲಸಗಳನ್ನು ಸಂಜೆಯ ಹೊತ್ತಿಗೆ ಮುಗಿಸಿಕೊಂಡು ಮನೆಗೆ ವಾಪಾಸಾಗುತ್ತಿದ್ದಂತೆ ಅವಳು ನಮಗಾಗಿ ಕಾಯುತ್ತಿದ್ದಳು. ಒಳಗೆ ಹೆಜ್ಜೆ ಇಡುತ್ತಿರುವಾಗಲೆ ಸೊಂಟವನ್ನು ಕುಣಿಸಿಕೊಂಡು
ಓಡಿ ಬಂದು ನಮ್ಮ ಕಾಲಿಗೆ ಆತುಕೊಂಡು ತನ್ನ ನಗು ಮುಖವನ್ನು ಬೀರಿಕೊಂಡು ಬಾಲವನ್ನು ಆಡಿಸಿ ನಮ್ಮನ್ನು ಸ್ವಾಗತಿಸುತ್ತಿದ್ದಳು. ಇವಳನ್ನು ನೋಡಿದಾಕ್ಷಣ ನಮ್ಮಲ್ಲಿದ್ದ ಆ ದಿನದ ಕೆಲಸದ ಮಾನಸಿಕ ಒತ್ತಡವು ನೀಗುಸುತ್ತಿದ್ದಳು. ನಮ್ಮ ಜೊತೆಯಲ್ಲಿಯೆ ಅವಳು ಕೂಡ ಊಟ ಮಾಡುತ್ತಿದ್ದಳು, ಕೆಲವು ತರಕಾರಿಗಳನ್ನು ಕೂಡ ಸೇವಿಸುತ್ತಿದ್ದಳು.

ದೂರದ ಊರಿನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳಿಗೆ ಇವಳ ಹಾಜರಿಯನ್ನು ಕಂಡು ಎಲ್ಲರು ಅಚ್ಚರಿಪಡುತ್ತಿದ್ದರು. ಎಷ್ಟು ಹೊಂದಾಣಿಕೆ ಇತ್ತೆಂದರೆ ಸಾರಿಗೆ ಬಸ್ಸಿನಲ್ಲು ಕೂಡ ನಮ್ಮ ಜೊತೆಯೆ ಕುಳಿತುಕೊಳ್ಳುತ್ತಿದ್ದಳು, ಯಾರಿಗು ಮುಜುಗರವಾಗದಂತೆ ನಡೆದುಕೊಳ್ಳುತ್ತಿದ್ದಳು. ಬಸ್ಸಿನಲ್ಲಿದ್ದವರಿಗೆ ಸಂತೋಷವಾಗುತ್ತಿತ್ತು ಇವಳ ಹೊಂದಾಣಿಕೆಯನ್ನು ಕಂಡು.

ಇವಳ ಜೊತೆ ಸಮಯ ಹೋದದ್ದೆ ಗೊತ್ತಾಗಲಿಲ್ಲ, ತುಂಬು ೧೪ ವರ್ಷ ನಮ್ಮ ಜೊತೆಯಲ್ಲಿಯೆ ಕಳೆದು ಒಂದು ದಿನ ಆಕಸ್ಮಿಕವಾಗಿ ಅತೀವ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಅಸುನೀಗಿದಳು. ನಮ್ಮನ್ನಗಲಿ ಇಂದಿಗೆ ೧೨ ವರ್ಷಗಳೆ ಕಳೆಯಿತು, ಅವಳ ಸವಿನೆನಪುಗಳು ನಮ್ಮ ಮನಸ್ಸಿನಲ್ಲಿ ಅಭಿಮಾನದಿಂದ ಪ್ರೀತಿಸುತ್ತಿದ್ದೇವೆ.

ಹೊಂದಾಣಿಕೆಯ ಪಾಠವನ್ನು ಸ್ವಲ್ಪಮಟ್ಟಿಗೆ ನಾನು ಅವಳಿಂದ ಕಲಿತು ಅವಳ ನೆನಪುಗಳನ್ನು ಆಗಾಗ ಅಭಿಮಾನಿಸುತ್ತೇನೆ. ನಿಜಕ್ಕು ರಾಣಿಯಂತಹ ಶುನಕದಿಂದ ಪಾಠವನ್ನು ಕಲಿಯಬೇಕಾದದ್ದು ಬಹಳಷ್ಟು.

----ಸಂದೀಪ ಶರ್ಮ