ರಾತ್ರಿಗಳು ಯಾಕೆ ಕಾಣೆಯಾಗಿವೆ.

ರಾತ್ರಿಗಳು ಯಾಕೆ ಕಾಣೆಯಾಗಿವೆ.

ಮೊದಲಿದ್ದಂತೆ ಈಗ ಧೀರ್ಘ ರಾತ್ರಿಗಳು ಸಿಗುತ್ತಿಲ್ಲ ಕೈಗೆ,

ಕತ್ತಲಾಗಿ ನಿದ್ದೆ ಹತ್ತಿ ಇನ್ನೇನು ಗಾಢ ಮಂಪರಿಗೆ ಜಾರಿ

ಕನಸೊಂದು ಮೈತುಂಬ ಹಬ್ಬಿಕೊಳ್ಳಬೇಕು,,,,,,,,,,,

ಆಗಲೇ ಬೆಳಕಿನ ಕಿರಣವೊಂದು ಚುಚ್ಚಿ ಎಬ್ಬಿಸಿಬಿಡುತ್ತದೆ.

ಕಣ್ ತೆರೆದರೆ, ಬೆಳಕು ಎಲ್ಲೆಡೆಯೂ ಹಬ್ಬಿ

ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿರುತ್ತದೆ.

ಆಗ ಬೀದಿ ದೀಪಗಳಿರಲಿಲ್ಲ,

ದೂರದಲ್ಲಿ ಯಾವುದೋ ಹಳೇ ಗಾಡಿಯ ಹಾಯಿದೀಪ ಅಷ್ಟೇ,

ಅದು ರಸ್ತೆಯಿಂದ ಬೇಗ ಸರಿದು ಹೋಗುತ್ತಿತ್ತು,,,,,,,,,

ಅದಕ್ಕೇ ಇರಬೇಕು, ಕತ್ತಲೆ ನಮಗೆ ವಿಸ್ಮಯವಾಗಿ ತೋರುತ್ತಿತ್ತು.

ಆಗೆಲ್ಲ ಅಜ್ಜಿ ನಮ್ಮನ್ನು ಬೇಗ ಮಲಗಿಸುತ್ತಿದ್ದಳು,

ಬುಡ್ಡಿ ದೀಪಕ್ಕೆ ಎಣ್ಣೆ ಕಮ್ಮಿಯಾಗಬಾರದಲ್ಲ,

ಇಂದು ಉಳಿದ ಎಣ್ಣೆಯೇ ನಾಳಿನ ರಾತ್ರಿಯ ಬೆಳಕು.

ಅಬ್ಬಾ, ಅಜ್ಜಿ ಬೆಳಕನ್ನು ನಾಳೆಗೆ ಹೇಗೆ ಉಳಿಸಿ ಇಡುತ್ತಿದ್ದಳು ನೋಡಿ!!

ಮಲಗಿ ಕಣ್ ಮುಚ್ಚಿಕೊಂಡೇ ಕಥೆ ಹೇಳುತ್ತಿದ್ದಳು.

ಅವಳ ಧ್ವನಿಯ ಕಥೆಯಿಂದ ನಮಗೆ ಅಂತರಂಗದಲ್ಲಿ ಬೆಳಕು ಹೊತ್ತಿಕೊಳ್ಳುತ್ತಿತ್ತು.

ಅವಳ ಕಥೆಯ ಪಾತ್ರಗಳು ಅವುಗಳ ಜೊತೆ ನಮ್ಮನ್ನೂ ಎಳೆದು ಲೋಕ ಸುತ್ತಿಸುತ್ತಿದ್ದವು.

ಅದ್ಯಾವಾಗ ನಿದ್ದೆ ಹತ್ತಿರುತ್ತಿತ್ತೋ ನೆನಪಿಲ್ಲ,

ಮುಂಜಾನೆ ಬೆಳಕಾದರೂ, ಅಜ್ಜಿ, ಮನೆಯಲ್ಲಿ ಬೆಳಕು ನಮಗೆ ಸೋಕದಂತೆ

ಇದ್ದ ಚಿಕ್ಕ ಕಿಟಕಿಗೆ ತಾನು ಹೊದ್ದ ಕವದಿಯನ್ನು ಮುಚ್ಚಿ ಇಟ್ಟು.

ಬೆಳಗಿನ ಉಪಹಾರಕ್ಕೆ ಸಾಸಿವೆ ಸಿಡಿಸುತ್ತಿದ್ದಳು.

ಬೆಳಕೇನು ಇಡೀ ದಿನ ಇರುತ್ತದೆ,

ಮೊಮ್ಮಕ್ಕಳು ಕತ್ತಲೆಯ ತಂಪಲ್ಲಿ ಒಂದಷ್ಟು ಮಲಗಲಿ ಎನ್ನುವುದು ಆಕೆಯ ಕನಸಾಗಿದ್ದಿರಬಹುದು.

ಪಕ್ಕದ ಮನೆಯ ಗಂಡ ಹೆಂಡಿರು ಜಗಳವಾಡಿದಾಗ,

ಒಂದು ಘಾಡ ಕತ್ತಲೆ ಸಾಕಿತ್ತು ಅವರ ನಡುವಿನ ಮುನಿಸು ಮರೆಸಲು.

ಮರುದಿನ ಎದ್ದಾಗ, ಹಿಂದಿನ ದಿನ ಏನೂ ನಡೆದೇ ಇಲ್ಲವೇನೋ ಎನ್ನುವಷ್ಟು ಸಲೀಸು

ಅರೇ! ಕತ್ತಲಿಗೆ ಇಷ್ಟೊಂದು ಸಂಬಂಧ ಸರಿಪಡಿಸುವ ಶಕ್ತಿ ಇದೆಯೇ ಎನಿಸುತ್ತಿತ್ತು ನನಗೆ ಆಗೆಲ್ಲ,

ಹಾಗಂತ ಕತ್ತಲೇನು ಹೆದರಿಸದೆ ಸುಮ್ಮನೇ ಬಿಡುತ್ತಿರಲಿಲ್ಲ ನಮಗೆ.

ಹಗಲು ಕಂಡ ಮನೆಯ ಪಕ್ಕದ ಮರವೇ, ಕತ್ತಲಲ್ಲಿ ಇನ್ನೂ ಭಯಂಕರವಾಗಿ ನಗುವಂತೆ ತೋರುತ್ತಿತ್ತು.

ಕತ್ತಲೊಳಗಿನ ಶಬ್ಧಗಳಿಗೆ ನಾವು ಬಗೆ ಬಗೆಯ ಹೆಸರಿಟ್ಟು ಕರೆಯುತ್ತಾ ಒಳಗೊಳಗೇ ನಡುಗಿದ್ದೂ ಇದೆ.

ಆ ಭಯವೇ ಎಷ್ಟೋ ಸಲ ನಮಗೆ ಬೆಳಕಿನ ಜೊತೆಗಿನ ಆಪ್ತತೆಯನು ಹೆಚ್ಚಿಸಿಬಿಡುತ್ತಿತ್ತು.

ಹೊಸದೊಂದು ಟಾರ್ಚು ತಂದು, ಅದರ ಬ್ಯಾಟರಿಗಳನು ತೆಗೆದು ಒಲೆಯ ಬುಡದಲ್ಲಿ ಇಟ್ಟು.

ರಾತ್ರಿ ಎಷ್ಟು ದೂರ ಬೆಳಕು ಚೆಲ್ಲುತ್ತದೆ ಎಂದು ಬೆರಗು ಗಣ್ಣಿನಲಿ ನೋಡುವಾಗ.

ಟಾರ್ಚ್ ಬೆಳಕಿಗೆ ದೂರದಲ್ಲಿ ಯಾವುದೋ ಹಸುವಿನ ಕಣ್ಣು ಹೊಳೆದರೆ ಒಂಥರಹ ಭಯದ ಪುಳಕ,

ಈಗ ಯಾರ ಮನೆಯಲ್ಲಿ ಟಾರ್ಚ್ ಇದೆ? ಕತ್ತಲಿಗೆ ಹೆದರುವವರು ಯಾರು?

ಯಾವಾಗ ಕತ್ತಲೆಯ ಭಯ ಕಮ್ಮಿ ಆಯಿತೋ, ಆಗಲೇ ಬೆಳಕಿನ ಜೊತೆಗೆ ಬದುಕು ಸಹ್ಯ ಎನಿಸಲೇ ಇಲ್ಲ.

ನೋಡೀ ಈಗೀಗ ಸಂಬಂಧಗಳು ಎಷ್ಟು ಪೇಲವವಾಗಿವೆ. ಇದಕ್ಕೆಲ್ಲ ಕತ್ತಲೆ ಮಾಯವಾಗಿದ್ದೇ ಕಾರಣವಿರಬಹುದೇ?

ಕೃತಕ ಬೆಳಕಿನ ಅಹಂಕಾರ ಇಡೀ ಪ್ರಪಂಚವನೇ ಸುತ್ತಿಕೊಂಡಿದೆ.

ಕತ್ತಲೆಗೆ ಹೆದರಿ ಪಕ್ಕದ ರೂಮಿಗೆ ಹೋಗಲು ಅಕ್ಕಳ ಕೈ ಹಿಡಿಯಬೇಕಿತ್ತು,

ಈಗ ಸ್ವಿಚ್ ಒತ್ತಿದರೆ ಎಲ್ಲವೂ ಬಟಾಬಯಲು,

ಯಾರದೂ ಹಂಗಿಲ್ಲದೇ ಬದುಕಲು ಹೊರಡುವ ಮನುಷ್ಯರು ನಾವೀಗ.

ಕತ್ತಲನ್ನು ಬೆಳಕಲ್ಲಿ ಮೀಯಿಸಿ, ತೋಯಿಸಿ, ಕೊನೆಗೆ ನಮ್ಮನ್ನು ನಾವು ಬೆಳಕಿನ ಬಿಸಿಯಲ್ಲಿ ಬೇಯಿಸಿಕೊಂಡಿದ್ದೇವೆಯೇ?

ಕತ್ತಲ ಮುಸುಕಿನೊಳಗೆ ಅತ್ತು ಹಗುರಾಗುತ್ತಿದ್ದ ಎಷ್ಟೋ ಮಂದಿ.

ಮರುದಿನ ಏನೂ ಆಗೇ ಇಲ್ಲ ಅನ್ನುವ ಹಾಗೆ ಚೈತನ್ಯಯುತವಾಗಿ ಬೆಳಕಿನಲ್ಲಿ ನಕ್ಕಿದ್ದು ನಾನು ನೋಡಿದ್ದೆ.

ಆಗ ಮುಂಜಾನೆಗೂ ಒಂದು ಮುದ್ದಾದ ಸ್ವಾಗತವಿರುತ್ತಿತ್ತು,

ಬೆಳಗಿನ ಮಂದ ಬೆಳಕು ಚೆಲ್ಲಿದರೆ ಎಲೆಗಳು ಮುದಗೊಂಡು ನಗುತ್ತಿದ್ದವು, ಇಬ್ಬನಿ ಪುಟಿಯುತ್ತಿದ್ದವು

ಚಳಿ ಮೆಲ್ಲಗೆ ಜಾಗ ಖಾಲಿ ಮಾಡುತ್ತಿತ್ತು,

ಈಗ ನಾವು ಮುಂಜಾವು ನೋಡದೆ ಎಷ್ಟೋ ಸಮಯ ಆಯ್ತು.

ಮುಂಜಾವು ಪಲ್ಲವಿಯಂತೆ, ದಿನದ ಇತರೇ ಕ್ಷಣಗಳು ಚರಣದಂತೆ, ಬದುಕು ಸಂಗೀತದಂತೆ

ಮಧುರವಾಗಿ, ಮೆಲುವಾಗಿ, ಒಂಥರಹ ಆಹ್ಲಾದದಲಿ ಸವರಿ ಹೋಗುತ್ತಿತ್ತು,

ಯಾವುದೇ ಭಾವಗಳನು ಗಟ್ಟಿಯಾಗಿ ಆಸ್ವಾಧಿಸಿ ನಗಲು ಅಳಲು ಮುದ್ದು ಕತ್ತಲೆಯೊಂದಿತ್ತು.

ಆ ಕತ್ತಲೆಯ ಆಳ ನಮ್ಮೊಳಗಿನ, ಕಹಿ, ದ್ವೇಷ ಎಲ್ಲವನೂ ಸೆಳೆದು ಬಿಸಾಕಿ, ಮರು ದಿನಕ್ಕೆ ಮುದ ತುಂಬಿರುತ್ತಿತ್ತು

ಮನಸು ತಿಳಿಯಾಗಿ ಹನಿದ ನೀರಿನಂತಾಗಿರುತ್ತಿತ್ತು.

ಈಗ ?

ಬೆಳಕಿಗೆ ನಾವು ವಿಪರೀತ ಒಗ್ಗಿಕೊಂಡಿದ್ದೇವೆ, ಬೆಳಕಿಲ್ಲದೇ ನಮಗೆ ಬದುಕು ದುರ್ಭರ,

ಹಾಗೆ ಸುಮ್ಮನೆ ಒಂದಷ್ಟು ರಾತ್ರಿಗಳನು ಕೃತಕ ಬೆಳಕಿನ ಕೋಳ ತೊಡಿಸದೆ ಹಾಗೆ ಅದರಷ್ಟಕ್ಕೆ ಬಿಡಬೇಕು.

ಕತ್ತಲೊಳಗೆ ಕುಳಿತು, ಕತ್ತಲನು ಭರಪೂರ ಆಸ್ವಾಧಿಸಿ, ಅದರ ಆಳಕ್ಕಿಳಿಯಬೇಕು

ಆಗ ಒಳಗಿನಿಂದ ಒಂದು ಮೃಧು ಭಾವ ಆವರಿಸುತ್ತದೆ, ಆ ಭಾವ ಬಹುಷಃ ನಮಗೇ ನಮ್ಮನ್ನು ಪರಿಚಯಿಸಬಹುದು.

ಆ ಭಾವದೊಳಗೆ ಬೇರೆಯವರ ಮೇಲಿನ ದ್ವೇಷವಿರುವುದಿಲ್ಲ, ನಮಗೆ ನಮ್ಮ ಜೊತೆಗಿನ ಪ್ರೇಮ ಮಾತ್ರ ಇರುತ್ತದೆ.

ಬಣ್ಣ ಬಣ್ಣದ ಲಾಲಸೆಗಳ ಸುಳಿವಿರದೆ, ಅಂತರಂಗದ ಬಣ್ಣ ನಮ್ಮನ್ನು ಸ್ಪರ್ಶಿಸಿ ತೇಜಸ್ಸನ್ನು ತುಂಬಬಹುದು.

ಒಲವು ಹೆಚ್ಚಾಗಬಹುದು, ಮನುಷ್ಯ ಸಂಬಂಧ ಬೇಕು ಎನಿಸಬಹುದು.

ಮತ್ತೆ ನಮಗೆ ನಾವೇ ಸಿಗಬಹುದು. ಹೌದು ನಮಗೆ ನಾವೇ.

ಅಯ್ಯೊ! ಜಗತ್ತು ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವಾಗ, ಇವನ್ಯಾರು ಕತ್ತಲೊಳಗೆ ಕುಳಿತಿರಲು ಹೇಳುವವ

ಎಂದೆಲ್ಲ ಬೈದುಕೊಳ್ಳಬೇಡಿ.

ನಾನು ಬೆಳಕಿನ ವಿರೋಧಿಯಲ್ಲ, ಆದರೆ ಕತ್ತಲಿನ ತಂಪು, ಅದರ ಮೌನ, ಅದರ ಸುಂದರ ಶೃಂಗಾರ ನೋಡದೇ,

ಬರಿಯ ಬೆಳಕಿನ ಹಿಂದೆ ಓಡಿ ಓಡಿ ದಣಿಯುವುದರ ವಿರೋಧಿ ಅಷ್ಟೇ,

ಕತ್ತಲೆ ಎನ್ನುವುದೊಂದು ಗಣಿ,

ಅದರೊಳಗೆ ನಿಜವಾಗಿಯೂ ನಾವು ನಮ್ಮ ಅಂತರಂಗವನು ಸಮೀಕರಿಸಿಕೊಳ್ಳಬೇಕು.

ಆಗ ಒಳಗೊಂದು ಬೆಳಕು ಮಿಂಚುತ್ತದೆ.

ನಿಮಗೆ ಹಾಗಾದಾಗ, ನನಗೂ ಹೇಳಿ.

-Naveen Kumar GK (GKN)

All reactions:

41Annapoorna Hegde, ಸುಷಿರಾ ಭಟ್ and 39 others