ರಾತ್ರಿರಾಣಿ ಹೂವು

ರಾತ್ರಿರಾಣಿ ಹೂವು

ಬರಹ

ಕೆಲವು ತಿಂಗಳ ಹಿಂದೆ ಬ್ರಹ್ಮಕಮಲ ಹೂವಿನ ಚಿತ್ರವನ್ನು ಪ್ರಕಟಿಸಿದಾಗ, ಆ ಹೂವನ್ನು ರಾತ್ರಿರಾಣಿ ಎಂದೂ ಕರೆಯುವರು ಎಂಬ ಅಭಿಪ್ರಾಯ ಸಂಪದೋದುಗರಲ್ಲಿ ಮೂಡಿ ಬಂತು. ನಾನು ಅಂತರ್ಜಾಲವನ್ನು ಜಾಲಾಡಿದಾಗ ಅಲ್ಲಿಯೂ ಅದೇ ವಿಷಯ ತಿಳಿಯಿತು. ಆದರೆ, ನನ್ನ ಮನಸ್ಸಿನಲ್ಲಿ ನಾನು ಚಿಕ್ಕಂದಿನಿಂದ ನೋಡಿದ್ದ ರಾತ್ರಿರಾಣಿ ಹೂವು ಅಚ್ಚಳಿಯದೆ ಮೂಡಿದ್ದು, ಅದಕ್ಕೂ ಬ್ರಹ್ಮಕಮಲಕ್ಕೂ ಸಂಬಂಧವಿಲ್ಲವೆಂಬುದನ್ನು ಹೇಗೆ ವಿವರಿಸೋಣ ಎಂದು ಆಲೋಚಿಸುತ್ತಿದ್ದಾಗ, ರಾತ್ರಿರಾಣಿ ಹೂವು ಕಣ್ಣಿಗೆ ಬಿತ್ತು.
ಬ್ರಹ್ಮಕಮಲ ತಾವರೆ ಹೂವನ್ನು ಹೋಲುವುದಾದರೆ, ರಾತ್ರಿರಾಣಿ ಸುಗಂಧರಾಜ ಹೂವನ್ನು ಹೋಲುತ್ತದೆ. ರಾತ್ರಿರಾಣಿ ಪುಷ್ಪವು ಅರಳಿ, ಸಂಜೆಯಾದೊಡನೆ ತನ್ನ ಸುಗಂಧವನ್ನು ರಸ್ತೆಗೆಲ್ಲಾ ಹರಡಿರುತ್ತದೆ. ಬ್ರಹ್ಮಕಮಲ ಮಂದ ಸುಗಂಧವನ್ನು ಹೊಂದಿದ್ದರೆ, ಈ ಪುಷ್ಪ ತೀಕ್ಷ್ಣವಾದ ಸುಗಂಧವನ್ನು ಬೀರುತ್ತದೆ. ರಾತ್ರಿರಾಣಿ ಹೂವು ಎರಡು ದಿನಗಳವರೆಗೂ ಅರಳಿ ನಿಂತಿದ್ದು, ನಂತರ ಮುದುರಿ ಹೋಗುತ್ತದೆ.

ಬ್ರಹ್ಮಕಮಲಕ್ಕೆ ಪುರಾಣದ ಹಿನ್ನೆಲೆಯಿದ್ದರೆ, ಇದಕ್ಕೆ ಅಂತಹ ಯಾವುದೇ ಪುರಾಣವಿಲ್ಲ. ಆದರೆ ಈ ಎರಡೂ ಹೂವುಗಳನ್ನು ಪೂಜೆಗೆ ಬಳಸುವುದಿಲ್ಲ.
ಎ.ವಿ. ನಾಗರಾಜು