"ರಾತ್ರಿ ಬ್ಯಾಟ್ರಿ ಇಲ್ದೆ ನಡೀತೀವಿ…”

ಅವರನ್ನು ಹಲವು ಕೃಷಿಕರ ಸಭೆಗಳಲ್ಲಿ ಕಂಡಿದ್ದೆ. ಅವರು ಉತ್ಸಾಹದಿಂದ ಕೃಷಿಯ ಬಗ್ಗೆ ಮಾತಾಡುವುದನ್ನು ಕೇಳಿದ್ದೆ. ಅವರೊಂದಿಗೆ ವಿವರವಾಗಿ ಮಾತಾಡುವ ಅವಕಾಶ ಕೊನೆಗೂ ಸಿಕ್ಕಿತು - ಚಿಕ್ಕಮಗಳೂರು ಜಿಲ್ಲೆಯ ಕುನ್ನಾಳು ಗ್ರಾಮದ ರೈತರೊಂದಿಗೆ ವಿಠಲಾಪುರಕ್ಕೆ ಕೃಷಿ ಅಧ್ಯಯನ ಪ್ರವಾಸಕ್ಕೆ ಹೋದಾಗ.
ಅವರೇ ಕೆ.ಎಚ್. ಕುಮಾರಸ್ವಾಮಿ. “ನೀವು ಬಿ.ಎ. ಪದವೀಧರರು. ಕಚೇರಿ ಕೆಲಸಕ್ಕೆ ಹೋಗದೆ ಕೃಷಿಗೆ ಬಂದದ್ದು ಯಾಕೆ?" ಎಂದು ಕೇಳಿದೆ. ಅವರ ಉತ್ತರ: “ನಮ್ ಕುಟುಂಬಕ್ಕೆ ೭೫ ಎಕ್ರೆ ಜಮೀನಿತ್ತು. ಇಷ್ಟು ಜಮೀನ್ ಇರ್ ಬೇಕಾದ್ರೆ ಕೆಲಸ ಯಾಕೆ ಅನ್ನಿಸ್ತು. ಕೃಷಿ ಮಾಡೋಣ ಅಂತ ಮನಸ್ಸಾಯಿತು.”
ಕುಮಾರಸ್ವಾಮಿ ತನ್ನ ಪಾಲಿಗೆ ಬಂದಿದ್ದ ಐದೆಕ್ರೆ ಜಮೀನಿನಲ್ಲಿ ಪ್ರಯೋಗಕ್ಕಿಳಿದರು. ಅಲ್ಲಿ ಅವರು ಬೆಳೆದದ್ದು ಕಬ್ಬು. ಒಮ್ಮೆ ನೆಟ್ಟ ಕಬ್ಬಿನ ಸಸಿಗಳಿಂದ ಏಳು ಬಾರಿ ಕೂಳೆ ಬೆಳೆ ತೆಗೆದ ಸಾಧನೆ ಅವರದು. ಬರಬರುತ್ತ ಕಬ್ಬಿನ ಕೃಷಿ ಕಷ್ಟವಾಯಿತು - ನೀರಾವರಿ ಇಲ್ಲದ್ದರಿಂದ ಮತ್ತು ವಿದ್ಯುತ್ ಸರಬರಾಜು ಸರಿಯಾಗಿ ಇಲ್ಲದ್ದರಿಂದ. ಹಾಗಾಗಿ ಕಬ್ಬಿನ ಕೃಷಿ ಕೈಬಿಟ್ಟರು. ಈಗ ಅಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಚೆನ್ನಾಗಿ ಫಸಲು ಬರುತ್ತಿದೆ.
ಕುನ್ನಾಳು ಗ್ರಾಮದಲ್ಲಿಯೂ ನಾಲ್ಕೂವರೆ ಎಕ್ರೆಯಲ್ಲಿ ಅಡಿಕೆ ಮತ್ತು ತೆಂಗಿನ ತೋಟ ಬೆಳೆಸಿದ್ದಾರೆ. ಅಲ್ಲಿ ಎರಡು ವರುಷಗಳ ಮುನ್ನ ಅಡಿಕೆ ಸಸಿಗಳ ನಡುವೆ ಬಾಳೆ ಬೆಳೆಸಿದ್ದರು. ಹುಲುಸಾಗಿ ಬೆಳೆದ ಬಾಳೆ ಗಿಡಗಳಿಂದ ಗೊನೆ ಕೊಯ್ಲು ಮಾಡಿದ ನಂತರ ಇವರಿಗೊಂದು ಸಮಸ್ಯೆ. ಬಾಳೆಗಿಡಗಳ ರಾಶಿರಾಶಿ ಎಲೆ ಮತ್ತು ದಿಂಡನ್ನು ಏನು ಮಾಡೋದು? ಅದನ್ನು ಟ್ರಾಕ್ಟರಿನಲ್ಲಿ ತೋಟದಿಂದ ಹೊರಗೆ ಸಾಗಿಸಲು ಕನಿಷ್ಠ ರೂಪಾಯಿ ೪,೦೦೦ ಖರ್ಚು ಮಾಡಬೇಕಾಗಿತ್ತು. ಮೂಡಿಗೆರೆಯ ಕೃಷಿ ವಿಜ್ನಾನ ಕೇಂದ್ರದ ವಿಜ್ನಾನಿಗಳನ್ನು ಕೇಳಿದಾಗ “ಕಂಪೋಸ್ಟ್ ಮಾಡಿ" ಎಂಬ ಸಲಹೆ. ಅದಕ್ಕಾಗಿ ಹೊಂಡ ತೋಡಬೇಕೆಂದರೂ ಕನಿಷ್ಠ ರೂಪಾಯಿ ೩,೦೦೦ ವೆಚ್ಚ ಆಗುತ್ತಿತ್ತು.
ಕೊನೆಗೆ ಅವರೊಂದು ಹೊಸ ಪ್ರಯೋಗಕ್ಕೆ ಕೈಹಾಕಿದರು. ಬಾಳೆ ಎಲೆಗಳನ್ನು ತೋಟದಲ್ಲಿ ಹರಡಿ, ಸಿಹಿಗುಂಬಳ ಬೀಜ ಬಿತ್ತಿದರು. ಅದರ ಬಳ್ಳಿಗಳು ವ್ಯಾಪಿಸುತ್ತಿದ್ದಂತೆ ಬಾಳೆ ಎಲೆಗಳು ಕೊಳೆತು ಗೊಬ್ಬರವಾದವು. ಇದರ ಮೇಲೆ ಸೊಕ್ಕಿ ಬೆಳೆದ ಸಿಹಿಗುಂಬಳದ ಫಸಲು ಭರ್ಜರಿ - ೪೨ ಟನ್. ಅಲ್ಲಿ ಬೆಳೆದ ಅತಿ ದೊಡ್ಡ ಸಿಹಿಗುಂಬಳದ ತೂಕ ೩೨ ಕಿಗ್ರಾ. ಈಗ ಎದುರಾಯಿತು ಮಾರಾಟದ ಸಮಸ್ಯೆ. ಕೊನೆಗೆ ೧೦ ಟನ್ ಸಿಹಿಗುಂಬಳವನ್ನು ಮಠಗಳಿಗೆ ದಾನವಾಗಿತ್ತರು. ಉಳಿದ ೩೨ ಟನ್ ಫಸಲನ್ನು (ಕಿಲೋಗೆ ಆಗಿನ ದರ ರೂಪಾಯಿ ೨) ಮಾರಾಟ ಮಾಡಿದಾಗ ಕೈತುಂಬ ಆದಾಯ.
“ನಮ್ ಹೊಲದ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡ್ಕೊಳ್ಬೇಕು” ಅನ್ನೋದು ಕುಮಾರಸ್ವಾಮಿ ನಂಬಿಕೆ. “ನಾವ್ ತೋಟದಲ್ಲಿ ರಾತ್ರಿ ಬ್ಯಾಟ್ರಿ ಇಲ್ದೆ ನಡೀತೀವಿ. ಎಲ್ಲಿ ಗುಂಡಿ ಇದೆ, ಎಲ್ಲಿ ಗಿಡ ಇದೆ ಅನ್ನೋದು ನಮ್ಗೆ ಚೆನ್ನಾಗಿ ಗೊತ್ತು. ಬೇರೆಯವ್ರಿಗೆ ಇದೆಲ್ಲ ಏನ್ ಗೊತ್ತಾಗ್ತದೆ? ಹಂಗೇ ನಮ್ ಸಮಸ್ಯೆ ಸರಿಯಾಗಿ ಅರ್ಥ ಆಗೋದು ನಮ್ಗೇನೇ. ಹಂಗಾಗಿ ಪರಿಹಾರ ಗೊತ್ತಾಗೋದೂ ನಮ್ಗೇನೇ” ಎಂಬುದವರ ವಿವರಣೆ.
“ರೈತ ತೋಟಗಳಿಗೆ ಎಷ್ಟು ರೌಂಡ್ ಹೊಡಿತಾನೋ ಅಷ್ಟು ಹೆಚ್ಗೆ ತಿಳ್ಕತಾನೆ. ಯಾಕಂದ್ರೆ ಅಲ್ಲಿ ಏನಾಗ್ತಿದೆ, ಏನು ಬೇಕಾಗಿದೆ ಅನ್ನೋದನ್ನ ತೋಟಾನೇ ಅವಂಗೆ ಹೇಳ್ತದೆ” ಅನ್ನೋದು ಅವರ ಅನುಭವ.
ಮಧ್ಯವರ್ತಿಗಳು ಫಸಲಿನ ತೂಕದಲ್ಲಿ ಭಾರೀ ಮೋಸ ಮಾಡುತ್ತಾರೆ. ಇದರಿಂದಾಗಿಯೇ ರೈತರಿಗೆ ಸಿಗಬೇಕಾದ ಆದಾಯ ಸಿಗುತ್ತಿಲ್ಲ ಎಂದವರಿಗೆ ಅರ್ಥವಾಗಿದೆ - ಕಬ್ಬು, ಬೆಲ್ಲ, ತರಕಾರಿ, ಸೂರ್ಯಕಾಂತಿ ಬೀಜಗಳ ಮಾರಾಟದ ಅನುಭವದಿಂದ. "ನಾವು ಬೆಳೆಸಿದ್ದನ್ನ ತಗೊಂಡು ಹೋಗ್ಲಿಕ್ಕೆ ಸಂಜೆ ಬರ್ತಾರೆ. ಆ ಮೇಲೆ “ಲೇಟಾಗ್ತಿದೆ" ಅಂತ ಗಡಿಬಿಡಿ ಮಾಡ್ತಾರೆ. ಇದೆಲ್ಲ ಅವರ ಪ್ಲಾನ್. ನಾವೂ ಪ್ಲಾನ್ ಮಾಡಿದ್ರೆ ಬಚಾವ್" ಎಂದು ವಿವರಿಸಿದರು.
“ಬೆಲ್ಲ ಚೀಲಕ್ಕೆ ತುಂಬಿ ೭೫ ಕಿಲೋ ಅಂತ ತೂಕ ಮಾಡಿ ಇಡ್ತಿದ್ದೆ. ಮಾರ್ಕೆಟ್ ರೇಟಿಂದ ೫೦ ರೂಪಾಯಿ ಕಡಿಮೆ ಇಸ್ಕಳ್ತಿದ್ದೆ. ತಕರಾರಿಲ್ದೆ ತಗಳ್ತಿದ್ರು” ಎಂದು ಅನುಭವ ಬಿಚ್ಚಿಟ್ಟರು. “ಕಬ್ಬಿನಲ್ಲಿ ನಮ್ ಲಾರಿ ಲೋಡಿಗೆ ಒಂದು ಕ್ವಿಂಟಾಲ್ ತೂಕ ಕಡಿಮೆ ಹೇಳ್ತಾರೆ. ಫ್ಯಾಕ್ಟರೀನಲ್ಲಿ ವೆಯಿಂಗ್ ಬ್ರಿಜ್ನವರೂ ಈ ಮೋಸದಲ್ಲಿ ಷಾಮೀಲು. ಅದಕ್ಕೆ ನಾನು ಇಲ್ಲಿಂದ ಕಳಿಸುವಾಗಲೇ ವೆಯಿಂಗ್ ಬ್ರಿಜ್ನಲ್ಲಿ ತೂಕ ಮಾಡಿ, ಆ ಚೀಟಿ ಲಾರಿ ಡ್ರೈವರಿಗೆ ಕೊಟ್ಟು ಕಳಿಸ್ತಿದ್ದೆ” ಎಂದು ತಮ್ಮ ಪ್ಲಾನ್ ತಿಳಿಸಿದರು.
ಕುನ್ನಾಳು ಗ್ರಾಮದಲ್ಲಿ ಹಳ್ಳಿಗರನ್ನು ಸಂಘಟಿಸಿ, ಹಾಲಿನ ಸೊಸೈಟಿ ಕಟ್ಟಿ ಬೆಳೆಸಿದವರು ಕುಮಾರಸ್ವಾಮಿ. ಅದಕ್ಕೆ “ಜಿಲ್ಲೆಯ ಅತ್ಯುತ್ತಮ ಹಾಲಿನ ಸೊಸೈಟಿ" ಪ್ರಶಸ್ತಿಯ ಗರಿ. ಅದಲ್ಲದೆ, ಹಳ್ಳಿಗರ ಜೊತೆಗೂಡಿ ಮೂಡಲ ವಾಹಿನಿ ವಿಕಾಸ ವಾಲಿಂಟರಿ ವಾಹಿನಿ ಕಟ್ಟಿದ್ದಾರೆ. ನಬಾರ್ಡ್ ಪ್ರಾಯೋಜಿಸಿದ ಈ ಬ್ಯಾಂಕ್-ರೈತ ಮಿತ್ರಕೂಟ “ಕರ್ನಾಟಕದ ಅತ್ಯುತ್ತಮ ಕ್ಲಬ್” ಪ್ರಶಸ್ತಿಯನ್ನು ಎರಡು ವರುಷ ಗಳಿಸಿದೆ. ಇವರ ಎಲ್ಲ ಕೆಲಸಕಾರ್ಯಗಳಿಗೆ ಉದ್ಯೋಗದಲ್ಲಿರುವ ಪತ್ನಿ ವೀಣಾರ ಬೆಂಬಲ.
ವಿಠಲಾಪುರದಿಂದ ಅವತ್ತು ಹಿಂತಿರುಗುವಾಗ, ಕುಮಾರಸ್ವಾಮಿ ಹೇಳಿದ ಈ ಮಾತುಗಳಲ್ಲಿದೆ ಅವರ ಎರಡು ದಶಕಗಳ ಕೃಷಿಯ ಅನುಭವದ ಸಾರ: "ಈಗಿನ ಕಾಲದಲ್ಲಿ ಕೃಷಿ ಮಾಡಿದ್ರೆ ನಷ್ಟ ಅನ್ನೋದು ಸುಳ್ಳು. ನಮ್ ತೋಟದಲ್ಲಿ ನಾವೇ ಕೆಲ್ಸ ಮಾಡ್ಬೇಕು. ಅಗತ್ಯ ಇದ್ದಾಗ ಮಾತ್ರ ಆಳು ಬಿಡ್ಬೇಕು. ಸರಿಯಾಗಿ ಬೆಳೆ ಮಾಡಿದ್ರೆ ಕೈತುಂಬ ಹಣ ಬರ್ತದೆ. ಯಾವ ಚಿಂತೇನೂ ಇಲ್ದೆ ಜೀವನ ನಡೆಸ್ಬೋದು.”
ಸಾಂದರ್ಭಿಕ ಫೋಟೋ: ನೂರಾರು ಕುಂಬಳಕಾಯಿಗಳು