ರಾತ್ರಿ

ರಾತ್ರಿ

ಬರಹ

ದಿನಾಂಕ: ಜುಲೈ ೨೦, ೨೦೦೮

ರಾತ್ರಿ

ಕತ್ತಲು ಬದುಕ ಮುತ್ತುವ ಮೊದಲೆ
ಮನೆ, ಮನ ಮುಟ್ಟುವ ತವಕ
ಗೂಡತ್ತ ಹಾರುವ ಹಕ್ಕಿಗಳು
ಸೂರ ಹುಡುಕಿ ಹೊರಡುವತ್ತ

ಇಳಿವಯಸ್ಸಿನ ಮುದಿಯನಂತೆ
ಕಡಲಾಳದಿ ಇಳಿದ ಪಡುವಣ ರವಿ
ಬಿಸಿಲು ಕೆಂಪಾಯಿತು, ಕೆಂಪು ಕಪ್ಪಾಯಿತು
ಮತ್ತೆ ಎಲ್ಲ ತಟಸ್ಥ ಅರೆಗಳಿಗೆ

ದೂರದಿ ಜಿರ್ ಜಿರ್
ಚಿಲಿಪಿಲಿಯ ಕಲರವ ಮರೆಸಲು
ಕತ್ತಲ ಸಂದಿನಲಿ
ಜೀರುಂಡೆಗಳ ತಯಾರಿ

ಒಳಗೆಲ್ಲ ಮೌನ
ಕತ್ತಲು ಪಿಸುಗುಡುವಂತೆ
ಬೆತ್ತಲು ಮೈದುಂಬಿದಂತೆ
ಜೀವ ಬತ್ತಿಯು ನಂದಿದಂತೆ

ಒಳಗಿನ ಹಸಿವು,
ಕಾಮನೆಗಳ ಗುದ್ದಾಟ,
ನಿದಿರೆಯ ಪರಿಧಿಗೆ ಸರಿವ
ಸೋತು ಬಸವಳಿದ ದೇಹಗಳು

ಬರ್ರ್ ಅಂತೊಮ್ಮೆ ಗಾಳಿ
ಜೀರುಂಡೆಗಳ ಹಾಡಿಗೆ
ಹೆಜ್ಜೆ ಹಾಕುವ ನೋವಿಗೆ
ಅಸಹನೀಯಗೊಂಡ ಭಾವಕೆ

ದಣಿವಾಗದ ಪಯಣದಿ ಇಹೆ
ಮರೆಸುತ ಬೆಳಕಿನ ಹೊಳಪು
ಇಲ್ಲಿ ಬಣ್ಣವಿಲ್ಲ, ಕತ್ತಲೆಯ ಭಾಷೆ
ಬರಿ ಕಪ್ಪು ಕೊಂಚ ಬಿಳುಪು

ಕತ್ತಲೆಯ ಅಗಾಧತೆಯಲೂ
ಕಲಿಸುತಿದೆ, ಬದುಕಿನ ಪಾಠ
ನೋವು ದಣಿವುಗಳ ತನ್ನೊಳಗೆ ಸೆಳೆದು
ಬದುಕಿನ ಒಳಗಣ್ಣ ತೆರೆಸುತ್ತಾ
ಮರಳಿ ಹಗಲಿನ ಪುಟವ ತಿರುವುತ್ತಾ