ರಾಧೆಯ ಕರೆ

ರಾಧೆಯ ಕರೆ

ಕವನ

ಮೆಲ್ಲ ಮೆಲ್ಲನೆ ಹೆಜ್ಜೆಯನಿಡುತ
ನಲ್ಲನಂತೆ ನನ್ನ ಸುತ್ತ ಸುತ್ತುತ
ಕಣ್ಣಿನಲ್ಲೆ ಸಮ್ಮೋಹನ ಮಾಡುತ
ಸೆಳೆವಾ ಓ ಮೋಹನ ಬಾ
ಹೋ..ಸೆಳೆವಾ ಓ ಮೋಹನ ಬಾ

ಕೊಳಲ ಧನಿಯಲ್ಲಿಹುದು ಸೃಷ್ಠಿಯ ಸುಳುವು
ನವಿಲ ಗರಿಯಲ್ಲಿಹುದು ಭಾವಗಳ ನಲಿವು
ನಿನ್ನ ಧ್ಯಾನದಲ್ಲೆ ನನಗೀಗ ಒಲವು
ಮಧುಸೂದನ ಓಡಿ ಬಾ
ಹೋ..ಮಧುಸೂದನ ಓಡಿ ಬಾ

ಸಾವಿರ ಸಾವಿರ ಗೋಪಿಕೆಯರಲ್ಲಿ
ನಾನೊಬ್ಬಳು ನಿನ್ನ ದಾಸಿಯ ದಾಸಿ
ನಿನ್ನ ಸಖ್ಯವೇ ನನಗಾತ್ಮ ತೃಪ್ತಿ
ಗೋಪಾಲ ಓಡೋಡಿ ಬಾ
ಹೋ..ಗೋಪಾಲ ಓಡೋಡಿ ಬಾ

ನಾನು ಬಲ್ಲೆ ನೀನು ಬಂದೇ ಬರುವೆ
ಕೈಯ ಹಿಡಿದು ನಿನ್ನ ಸಾಮಿಪ್ಯ ಕೊಡುವೆ
ರಾಧೆಯ ಜೀವನವ ಪಾವನ ಮಾಡುವೆ
ಆತ್ಮ ಸಖನೇ ಓಡಿ ಬಾ
ಹೋ..ಶ್ರೀಕೃಷ್ಣ ಓಡೋಡಿ ಬಾ

ನೀನೆದುರು ಬರಲು ನಾ ಮರೆವೆ ನನ್ನನೆ
ಬೆರೆವೆ ನಿನ್ನಲಿ ನಾ ಕರೆವೆ ನಿನ್ನನೆ
ಲೌಕಿಕ ಬಂಧವ ನೀ ಕಡೆದುಬಿಡುವೆ
ಪರಮಾತ್ಮ ನಿನ್ನೇ ನೆನೆವೆ
ಹೋ..ದಯೆಯಿದ್ದರೆ ಬಳಿಸುಳಿದು ಬಾ

ನಿನ್ನೊಲವಿನ ಬೆಳಕಿಹುದು ನನ್ನ ಹಾದಿಯಲಿ
ನಿನ್ನೆಡೆಗೆ ನಡೆದಿಹೆನು ಹರುಷದ ಠೀವಿಯಲಿ
ದರುಶನವ ನೀಡೊಮ್ಮೆ ನಾಕಾಯುತಿಹೆನು
ಓ ನನ್ನ ಚೇತನನೇ ಬಾ
ಹೋ..ಭಗವಂತನೆ ಕೃಪೆ ತೋರಿ ಬಾ
 

Comments