ರಾಧೇಯ

ರಾಧೇಯ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ವೆಂಕೋಬರಾವ್ ಎಂ. ಹೊಸಕೋಟೆ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - ೫೬೨ ೧೨೩
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೨

ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವೆಂಕೋಬರಾವ್ ಅವರು ಹೀಗೆ ಬರೆಯುತ್ತಾರೆ. 

“ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನು ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ; ದುರ್ಯೋಧನನ ಅನ್ನವನ್ನುಂಡು ಅವನಿಗೆ ಇದುರು ಬೀಳುವ ಇವರ ಸ್ವಭಾವ ಕಂಡು ಕರ್ಣನಿಗೆ ಅಪನಂಬಿಕೆ. ಭೀಷ್ಮನಿಗೆ ಪಟ್ಟ ಕಟ್ಟಿದಾಗ, ಈ ಮುಪ್ಪಿನ ಮುದುಕನು ಶತ್ರುಗಳನ್ನು ಹೇಗೆ ಎದುರಿಸಿ ನಿಲ್ಲಬಹುದು ! ತಾನೇ ಸಾಕಿದ ಮೊಮ್ಮಕ್ಕಳೊಡನೆ ಹೇಗೆ ಮನಸಿಟ್ಟು ಕಾಡಬಹುದು - ಎಂದು ಕರ್ಣನಿಗೆ ಪ್ರಬಲವಾದ ಸಂದೇಹ; ಕುಲ ಕುಲ ಎಂದು ಮಾತೆತ್ತಿದ್ದಕ್ಕೆಲ್ಲಾ ತನ್ನ ಸೂತ ಕುಲವನ್ನು ದೂಷಿಸುವವರನ್ನು ಕಂಡು ಕರ್ಣನಿಗೆ ಸಹಿಸಲಾಗುವುದಿಲ್ಲ ! ನಿಜವಾದ ಕುಲ ಯಾವುದೆಂದು ಕರ್ಣನು ಸಾರಿದನು. ಕರ್ಣನು ತಾನು ಕಾದುವುದು ಗೆಲುವಿಗಲ್ಲ. ಛಲಕ್ಕಾಗಿ ಎಂದಾಗ ಆತನ ಹೃದಯ ಪರಿವರ್ತನೆಯಿಂದ ಭೀಷ್ಮನ ಹೃದಯ ಕರಗಿತು. ಕರ್ಣನು ತನ್ನ ಶೌರ್ಯವನ್ನು ತೋರಲು ಅವಕಾಶಕ್ಕಾಗಿ ಆತೊರೆಯುತ್ತಿದ್ದು, ವೀರನ ಉತ್ಸಾಹವನ್ನು ತೋರಿಸುತ್ತದೆ. ಜೊತೆಗೆ ಇವರಿರ್ವರ ಗುರು ಪರಶುರಾಮ ಆದುದರಿಂದ ಇವರು ಬಂಧುಗಳು “ನೀನೆ ಮಗ ಕುಂತಿಯ ಗಾಂಧಾರಿಯ ಲೆಕ್ಕದೆ ಮೊಮ್ಮನೈ” ಎಂದು ಭೀಷ್ಮನು ವಾತ್ಸಲ್ಯದ ಮಾತನ್ನಾಡಿದಾಗ, ಕರ್ಣನ ಮನಸ್ಸಿನ ದುಃಖವೆಲ್ಲವೂ ದೂರವಾಯಿತು. ಕುಲಹೀನನೆಂಬ ಅಪವಾದ ಈಗಾಗಲೇ ತನಗೆ ಬಂದಿರುವುದರಿಂದ, ಸಾವು - ಗೆಲುವುಗಳನ್ನು ಲೆಕ್ಕಿಸದೆ ನನ್ನ ಪೌರುಷದಿಂದ ನಿಮ್ಮನ್ನು ಮೆಚ್ಚಿಸುತ್ತೇನೆಂದ ಕರ್ಣನು, ಅರ್ಜುನನೊಂದಿಗೆ ನಡೆದ ಕಾಳಗದಲ್ಲಿ ಕರ್ಣನ ತೇಜಸ್ಸು ಪ್ರಜ್ವಲಿಸಿತು. ಆರುವ ಸಮಯದಲ್ಲಿ ದೀಪದ ಕುಡಿ ಮತ್ತಷ್ಟು ಉರಿದೇಳುವ ಹಾಗೆ, ಕರ್ಣನು ತನ್ನ ಅಸ್ತಮಯ ಕಾಲದಲ್ಲಿ ತೇಜಸ್ಸಿನಿಂದ ತೊಳಗಿದನು.” ಎಂದಿದ್ದಾರೆ.

ಕರ್ಣನ ಬಗ್ಗೆ ಇನ್ನಷ್ಟು ತಿಳಿಯಲು ಈ ಹೊತ್ತಗೆ ಸಹಕಾರಿ. ಮಹಾಭಾರತದ ಪಾತ್ರಗಳ ಬಗ್ಗೆ ಎಷ್ಟು ಓದಿದರೂ, ದೂರದರ್ಶನ ಧಾರಾವಾಹಿಗಳಲ್ಲಿ, ಸಿನೆಮಾಗಳಲ್ಲಿ ನೋಡಿದರೂ ಮತ್ತಷ್ಟು ಕುತೂಹಲಕಾರಿಯಾದ ವಿಷಯಗಳು ಹೊರ ಬರುತ್ತಲೇ ಇರುತ್ತದೆ. ಈ ಕುತೂಹಲವನ್ನು ತಣಿಸಲು ಈ ಪುಸ್ತಕ ಸ್ವಲ್ಪ ಮಟ್ಟಿಗೆ ಸಹಕಾರಿಯಾದೀತು.