ರಾಬಿನ್ ಹುಡ್ ಕಥೆಗಳಲ್ಲಿ ಸತ್ಯ ಎಷ್ಟು?

ರಾಬಿನ್ ಹುಡ್ ಕಥೆಗಳಲ್ಲಿ ಸತ್ಯ ಎಷ್ಟು?

ಬಾಲ್ಯದಲ್ಲಿ ನಾವು ರಾಮಾಯಣ, ಮಹಾಭಾರತ ಕಥೆಗಳ ಜೊತೆಗೆ ಕೆಲವು ಇಂಗ್ಲೀಷ್ ಕಥೆಗಳನ್ನೂ ಕೇಳುತ್ತಾ ಬೆಳೆದಿದ್ದೇವೆ. ಅವುಗಳಲ್ಲಿ ಪ್ರಮುಖವಾದದ್ದು ರಾಬಿನ್ ಹುಡ್. ಇವನು ಕಾಡಿನಲ್ಲಿ ವಾಸಿಸುತ್ತಾ, ಶ್ರೀಮಂತರ ಸಂಪತ್ತನ್ನು ದರೋಡೆ ಮಾಡುತ್ತಾ ಅವುಗಳನ್ನು ಬಡವರಿಗೆ ಹಂಚುತ್ತಿದ್ದ ದಯಾಮಯಿ. ಆದರೆ ಯಾವತ್ತೂ ರಾಜನ ಸೈನಿಕರಿಗೆ ಅಥವಾ ಕೋತ್ವಾಲರ ಕೈಗೆ ಸಿಗುತ್ತಲೇ ಇರಲಿಲ್ಲ. ರಾಬಿನ್ ಹುಡ್ ಕಥಾನಕವನ್ನು ಕೇಳುವಾಗ ಈಗಲೂ ರೋಮಾಂಚನವಾಗುತ್ತದೆ. ನಿಜವಾಗಿಯೂ ರಾಬಿನ್ ಹುಡ್ ಎಂಬ ವ್ಯಕ್ತಿ ಜೀವಂತವಾಗಿದ್ದನೇ? ಅಥವಾ ಕಲ್ಪನಾ ಲೋಕದ ವ್ಯಕ್ತಿಯೇ? ಹಲವಾರು ಗೊಂದಲಗಳಿವೆ. ಕೆಲವರು ರಾಬಿನ್ ಹುಡ್ ಎಂಬುದು ಅವನ ನಿಜನಾಮಧೇಯವಲ್ಲ. ನಿಜ ಹೆಸರು ಬೇರೆಯೇ ಇರಬೇಕು. ಬಡ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಅವನು ತನ್ನ ಹೆಸರನ್ನು ಮರೆಮಾಚುತ್ತಿದ್ದಾನೆ ಎಂದು ಬರೆದಿದ್ದಾರೆ. ಕೆಲವು ಆಧಾರಗಳ ಮೇಲೆ ಸತ್ಯ-ಸುಳ್ಳುಗಳನ್ನು ನಾವಿಂದು ವಿಶ್ಲೇಷಣೆ ಮಾಡೋಣ.

ರಾಬಿನ್ ಹುಡ್ ಇಂಗ್ಲೆಂಡ್ ನ ಶೇರ್ವುಡ್ ಎಂಬ ಊರಿನ ಕಾಡುಗಳಲ್ಲಿ ಅಡಗಿಕೊಂಡಿದ್ದ ಎಂದು ಬಹುತೇಕರು  ನಂಬುತ್ತಾರೆ. ಕೈಯಲ್ಲಿ ಬಿಲ್ಲು ಬಾಣ, ಸೊಂಟದಲ್ಲಿ ಕತ್ತಿಯನ್ನು ಹೊಂದಿರುವ ರಾಬಿನ್ ಹುಡ್ ಕುದುರೆ ಮೇಲೆ ಏರಿ ಬರುತ್ತಾನೆ ಎಂದು ಬಹುಜನರ ನಂಬಿಕೆ. ಇವನು ಮೆರ್ರಿಮೆನ್ ಎನ್ನುವ ಒಂದು ಪುಂಡರ ಗುಂಪನ್ನು ಕಟ್ಟಿಕೊಂಡಿದ್ದು, ಶ್ರೀಮಂತರ, ಕೆಟ್ಟ ಆಡಳಿತ ನಡೆಸುವವರ ವಿರುದ್ಧ ದನಿ ಎತ್ತಿ, ಅವರ ದಬ್ಬಾಳಿಕೆಯನ್ನು ಕೊನೆಗೊಳಿಸುತ್ತಿದ್ದ. ಅವರ ಸಂಪತ್ತನ್ನು ಲೂಟಿ ಮಾಡಿ ಬಡ ಬಗ್ಗರಿಗೆ ಹಂಚಿ ಬಿಡುತ್ತಿದ್ದ. ಆ ಕಾರಣದಿಂದ ಶ್ರೀಮಂತರು ಕೋತ್ವಾಲರಿಗೆ ದೂರು ನೀಡಿದರೂ ಯಾರೂ ರಾಬಿನ್ ಹುಡ್ ಬಗ್ಗೆ ಸುಳಿವು ನೀಡುತ್ತಿರಲಿಲ್ಲ. ರಾಬಿನ್ ಹುಡ್ ಶ್ರೀಮಂತರಿಂದ ಹಣ, ಬಂಗಾರ, ದವಸ ಧಾನ್ಯವನ್ನು ದೋಚಿ ನಿರ್ಗತಿಕರಿಗೆ, ಬಡವರಿಗೆ ಹಂಚುತ್ತಿದ್ದ ಪರೋಪಕಾರಿ. ಅಪರೂಪಕ್ಕೊಮ್ಮೆ ಸೈನಿಕರ ಕೈಗೆ ಸಿಕ್ಕಿಬಿದ್ದರೂ ಅವನು ಉಪಾಯದಿಂದ ಜೈಲಿನ ಬಂಧನವನ್ನು ತಪ್ಪಿಸಿಕೊಂಡು ಹೊರ ಬರುತ್ತಿದ್ದ ಚಾಣಾಕ್ಷ. ಬಡವರ ಪಾಲಿನ ಸಾಕ್ಷಾತ್ ದೇವರ ರೂಪಿಯಾದ ರಾಬಿನ್ ಹುಡ್ ನನ್ನು ರಾಜನ ಸೈನಿಕರು ಸದಾ ಕಾಲ ಹುಡುಕಾಡುತ್ತಲೇ ಇರುತ್ತಿದ್ದರು.

ಒಮ್ಮೆ ರಾಬಿನ್ ಹುಡ್ ನನ್ನು ಸೆರೆಹಿಡಿಯಲು ಉಪಾಯವೊಂದನ್ನು ಮಾಡಲಾಯಿತು. ರಾಬಿನ್ ಹುಡ್ ಬಿಲ್ವಿದ್ದೆಯಲ್ಲಿ ಮಹಾ ಪ್ರವೀಣ. ಆ ಕಾರಣದಿಂದ ರಾಜ ಒಂದು ಬಿಲ್ಲು ವಿದ್ಯೆಯ ಸ್ಪರ್ಧೆಯನ್ನು ಏರ್ಪಡಿಸುತ್ತಾನೆ. ಯಾರು ಬಿಲ್ವಿದ್ದೆಯಲ್ಲಿ ಉತ್ತಮ ಸಾಹಸ ಪ್ರದರ್ಶನ ತೋರಿಸುತ್ತಾರೋ ಅವರಿಗೆ ಅಪಾರವಾದ ಸಂಪತ್ತಿನ ಬಹುಮಾನ ನೀಡಲಾಗುತ್ತದೆ ಎಂದು ರಾಜ್ಯದಾದ್ಯಂತ ಡಂಗುರ ಸಾರಲಾಗುತ್ತದೆ. ಸಂಪತ್ತಿನ ಆಸೆಗೆ ರಾಬಿನ್ ಹುಡ್ ಖಂಡಿತಾ ಈ ಸ್ಪರ್ಧೆಗೆ ಬರುತ್ತಾನೆ ಎಂದು ರಾಜನ ನಂಬಿಕೆಯಾಗಿತ್ತು. ಆಗ ಅವನನ್ನು ಸೆರೆ ಹಿಡಿಯಬಹುದೆಂದು ಯೋಜನೆಯಾಗಿತ್ತು. ಆದರೆ ರಾಜನ ಉಪಾಯ ತಲೆಕೆಳಗಾಗುತ್ತದೆ. ಏಕೆಂದರೆ ರಾಬಿನ್ ಹುಡ್ ಆ ಸ್ಪರ್ಧೆಗೆ ಮಾರು ವೇಷದಿಂದ ಬಂದು, ಸ್ಪರ್ಧೆಯನ್ನು ಗೆದ್ದು ರಾಜನ ಸೈನಿಕರಿಗೆ ಸಿಗದೇ ಪರಾರಿಯಾಗುತ್ತಾನೆ. ಈ ರೀತಿಯ ಅಸಂಖ್ಯ ಕಥೆಗಳು ಇಂಗ್ಲೆಂಡ್ ನಲ್ಲಿ ಜನಪ್ರಿಯವಾಗಿವೆ. ಆದರೆ ರಾಬಿನ್ ಹುಡ್ ಎಂಬ ವ್ಯಕ್ತಿ ಇದ್ದನೇ ಎಂಬುದರ ಬಗ್ಗೆ ಸ್ಪಷ್ಟವಾದ ಉಲ್ಲೇಖಗಳು ಸಿಗುವುದಿಲ್ಲ.

ರಾಬಿನ್ ಹುಡ್ ಕಥೆಯ ಹಿನ್ನಲೆ ಸುಮಾರು ಕ್ರಿ.ಶ. ೧೩ನೇ ಶತಮಾನದ್ದೆಂದು ಅಂದಾಜಿಸಲಾಗಿದೆ. ಆ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ರಾಬಿನ್ ಹುಡ್ ಕಥೆಗಳು ಹಾಗೂ ಅವನ ಬಗ್ಗೆ ಜಾನಪದ ಶೈಲಿಯ ಹಾಡುಗಳು ಜನಜನಿತವಾಗಿದ್ದವು. ಒಂದು ಅಂದಾಜಿನ ಪ್ರಕಾರ ೧೨೨೮ರಲ್ಲಿ ಬದುಕಿದ್ದ ರಾಬರ್ಟ್ ಹುಡ್ ಎಂಬಾತನೇ ರಾಬಿನ್ ಹುಡ್ ಎಂದು. ಏಕೆಂದರೆ ರಾಬರ್ಟ್ ಹುಡ್ ಶ್ರೀಮಂತರ ದಬ್ಬಳಿಕೆಯ ವಿರುದ್ಧ ಸದಾ ಕಾಲ ದನಿ ಎತ್ತುತ್ತಿದ್ದ ವ್ಯಕ್ತಿ, ಅವನು ಶ್ರೀಮಂತರ ಶೋಷಣೆಯ ವಿರುದ್ಧ ಹೋರಾಡುತ್ತಿದ್ದ. ಬಹಳಷ್ಟು ಮಂದಿ ಅವನನ್ನೇ ರಾಬಿನ್ ಹುಡ್ ಎನ್ನುತ್ತಾರೆ. ಆದರೆ ಅಧಿಕೃತ ದಾಖಲೆಗಳು ಎಲ್ಲೂ ಕಂಡು ಬರುವುದಿಲ್ಲ. ಆದರೆ ರಾಬರ್ಟ್ ಹುಡ್ ಎಂಬ ವ್ಯಕ್ತಿ ಜೀವಂತವಿದ್ದ ಎಂಬುದಕ್ಕೆ ೧೨೨೮-೩೦ರ ಸುಮಾರಿನ ಚರ್ಚ್ ದಾಖಲೆಗಳಲ್ಲಿ ಉಲ್ಲೇಖಗಳು ದೊರೆಯುತ್ತವೆ. 

ಇನ್ನೊಂದು ಚಾಲ್ತಿಯಲ್ಲಿರುವ ಕಥೆಯ ಪ್ರಕಾರ ೧೧೬೦ರಲ್ಲಿ ಹುಟ್ಟಿ ೧೨೪೭ರಲ್ಲಿ ನಿಧನ ಹೊಂದಿದ ರಾಬರ್ಟ್ ಫಿಟ್ಟೂತ್ ಎಂಬ ಹಂಟಿಂಗ್ಟನ್ ಪ್ರಾಂತ್ಯದ ವ್ಯಕ್ತಿಯೇ ರಾಬಿನ್ ಹುಡ್. ಏಕೆಂದರೆ ಈ ವ್ಯಕ್ತಿಯೂ ರಾಜ ಪ್ರಮುಖರ ವಿರುದ್ಧ ಸಿಡಿದು ನಿಂತು, ಅವರ ದಬ್ಬಾಳಿಕೆ ಹಾಗೂ ಅವರು ಬಡವರ ಮೇಲೆ ಮಾಡುತ್ತಿದ್ದ ನಿರಂತರ ಕಿರುಕುಳವನ್ನು ದಮನಿಸಲು ಪ್ರಯತ್ನ ಮಾಡಿದ್ದ. ಶ್ರೀಮಂತರಿಂದ ಲೂಟಿ ಮಾಡಿದ ಎಲ್ಲವನ್ನೂ ಬಡವರಿಗೆ ಮತ್ತು ನಿರ್ಗತಿಕರಿಗೆ ಹಂಚುತ್ತಿದ್ದ. ರಾಜನ ಸೈನಿಕರು ಇವನನ್ನು ಹಿಡಿಯಲು ಬಂದಾಗ ಕಾಡಿನಲ್ಲಿ ಅಡಗಿ ಕುಳಿತು ಬಚಾವಾಗುತ್ತಿದ್ದ. ಇಂತಹ ಸಂದರ್ಭದಲ್ಲಿ ಬಡ ಜನರು ಇವನಿಗೆ ಸಹಾಯ ಮಾಡುತ್ತಿದ್ದರು . ಈ ವಿಚಾರ ತಿಳಿದ ರಾಜನು ಬಡವರಿಗೆ ನಗರದಲ್ಲಿ ಬಾಳುವುದಕ್ಕೆ ಅಸಾಧ್ಯವಾಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ. ಇದರಿಂದ ಬಡ ಜನರು ಅನಿವಾರ್ಯವಾಗಿ ಕಾಡಿನತ್ತ ಮುಖ ಮಾಡಬೇಕಾಯಿತು. ಈ ಅವಿವಾರ್ಯ ಪರಿಸ್ಥಿತಿಯಲ್ಲಿ ರಾಬರ್ಟ್ ತನ್ನ ಜನರಿಗೆ ಸಹಾಯ ಮಾಡಿದ. ಕಾಡಿನಲ್ಲೇ ಬಡವರಿಗಾಗಿ ಒಂದು ಪುಟ್ಟ ಗ್ರಾಮವನ್ನು ನಿರ್ಮಿಸಿದ. ಇವನ ಇಂತಹ ಸಾಹಸಗಳ ಕಾರಣದಿಂದಲೇ ಇವನನ್ನು ಜನರು ರಾಬಿನ್ ಹುಡ್ ಎಂದು ಕರೆದರು ಎಂದು ಕೆಲವು ಕಥೆಗಳು ಹೇಳುತ್ತವೆ. ರಾಬರ್ಟ್ ಫಿಟ್ಟೂತ್ ಎಂಬ ವ್ಯಕ್ತಿಯು ಇಂಗ್ಲೆಂಡ್ ನ ರಾಜ ರಿಚರ್ಡ್ ಮತ್ತು ಜಾನ್ ಸಮಯದಲ್ಲಿ  ಬದುಕಿದ್ದ ಎಂಬುದಕ್ಕೆ ದಾಖಲೆಗಳು ಸಿಗುತ್ತವೆ.

ಮತ್ತೊಂದು ಮೂಲಗಳ ಪ್ರಕಾರ ೧೨೬೫ರಲ್ಲಿ ಬದುಕಿದ್ದ ರಾಬರ್ಟ್ ಥ್ವಿಂಗ್ ಎಂಬಾತನೇ ನಿಜವಾದ ರಾಬಿನ್ ಹುಡ್ ಎಂದು ಹಲವರ ನಂಬಿಕೆ. ಇಂಗ್ಲೆಂಡಿನ ದೊರೆ ಮೂರನೇ ಹೆನ್ರಿಯ ವಿರುದ್ಧ ಬಡವರ ಪರವಾಗಿ ಹೋರಾಟ ಮಾಡಿದ ಧೀಮಂತ ವ್ಯಕ್ತಿ ಈತ. ರಾಜನ ದಬ್ಬಾಳಿಕೆಯ ವಿರುದ್ಧವೇ ಹೋರಾಟ ಮಾಡುತ್ತಿದ್ದರೂ ಆತ ಅದೇ ರಾಜನ ಆಸ್ಥಾನದಲ್ಲಿ ರಾಜನ ಪರಮಾಪ್ತ ಸ್ಥಾನದಲ್ಲಿದ್ದ ಎಂಬುದೇ ಚೋದ್ಯವಾಗಿದೆ. ಇವನೇ ತನ್ನ ನಿಜ ನಾಮಧೇಯವನ್ನು ಮರೆಮಾಚಿ ರಾಬಿನ್ ಹುಡ್ ಆಗಿದ್ದನಂತೆ. ಮುಂದಿನ ದಿನಗಳಲ್ಲಿ ಎರಡನೇ ಎಡ್ವರ್ಡ್ ದೊರೆಯ ವಿರುದ್ಧ ೧೩೨೨ರಲ್ಲಿ ದಂಗೆ ಎದ್ದ ರಾಬರ್ಟ್ ಹುಡ್ ಎಂಬ ವ್ಯಕ್ತಿಯೂ ರಾಬಿನ್ ಹುಡ್ ಆಗಿರ ಬಹುದಂತೆ. ಹೀಗೆ ಇತಿಹಾಸ ಗಮನಿಸಿದಾಗ ಬಡವರ, ನಿರ್ಗತಿಕರ ಪರವಾಗಿ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯೂ ಜನರ ಪಾಲಿಗೆ ರಾಬಿನ್ ಹುಡ್ ಆಗಿಯೇ ಹೋಗಿದ್ದಾರೆ.

ಭಾರತದಲ್ಲೂ ಈ ರೀತಿಯ ಹಲವಾರು ರಾಬಿನ್ ಹುಡ್ ಗಳು ಇದ್ದಾರೆ. ಭಾರತೀಯ ರಾಬಿನ್ ಹುಡ್ ಪೈಕಿ ಮೊಹರ್ ಸಿಂಗ್ ಎಂಬಾತನ ಹೆಸರು ತುಂಬಾನೇ ಕುಖ್ಯಾತಿಗೊಳಗಾಗಿದೆ. ೧೯೫೦ರ ದಶಕದಲ್ಲಿ ಇವನು ಮಾಡಿದ ದರೋಡೆ, ಕೊಲೆ ಮುಂತಾದುವುಗಳಿಗೆ ಲೆಕ್ಕವಿಲ್ಲ. ಆದರೆ ಅವನು ಮಾಡಿದ ದರೋಡೆಯಲ್ಲಿ ದೊರೆತ ಸಂಪತ್ತನ್ನು ಬಡವರಿಗೆ ಹಂಚಿ ಬಿಡುತ್ತಾನೆ. ಆ ಕಾರಣದಿಂದಲೇ ಅವನು ‘ಇಂಡಿಯನ್ ರಾಬಿನ್ ಹುಡ್' ಎಂದು ಖ್ಯಾತಿ ಪಡೆದಿದ್ದ. ಮಧ್ಯಪ್ರದೇಶ ರಾಜ್ಯದ ವಾಸಿಯಾಗಿದ್ದ ಇವನು ಬಡ ಹೆಣ್ಣು ಮಕ್ಕಳ ಮದುವೆಯ ವೆಚ್ಚವನ್ನು ತಾನು ಲೂಟಿದ ಹಣದಿಂದ ಮಾಡುತ್ತಿದ್ದ. ಈ ಕಾರಣದಿಂದ ಬಡ ಜನರಿಗೆ ಇವನು ಸಾಕ್ಷಾತ್ ಪರಮಾತ್ಮನ ಸ್ವರೂಪವೇ ಆಗಿ ಹೋಗಿದ್ದನಂತೆ. ತನ್ನ ೯೩ನೇ ವಯಸ್ಸಿನಲ್ಲಿ ಇತ್ತೀಚೆಗೆ ಮೇ, ೨೦೨೦ರಂದು ನಿಧನ ಹೊಂದಿದ.

ರಾಬಿನ್ ಹುಡ್ ಬಗ್ಗೆ ಬಾಲಿವುಡ್ ನಲ್ಲಿ ಹಲವಾರು ಚಲನ ಚಿತ್ರಗಳು ತೆರೆ ಕಂಡಿವೆ. ಮಕ್ಕಳಿಗಾಗಿ ಕಾರ್ಟೂನ್ ಚಿತ್ರಗಳನ್ನೂ ವಾಲ್ಟ್ ಡಿಸ್ನಿ ಸಂಸ್ಥೆ ನಿರ್ಮಿಸಿದೆ. ನಿಜವಾಗಿ ರಾಬಿನ್ ಹುಡ್ ಎಂಬ ವ್ಯಕ್ತಿ ಇದ್ದನೋ ಅಥವಾ ಬೇರೆ ನಿಜವಾದ ಹೆಸರು ಇದ್ದು, ಅದನ್ನು ಮರೆಮಾಚಿ ಬಡ ಜನರಿಗೆ ಸಹಾಯ ಮಾಡುವುದಕೋಸ್ಕರ ರಾಬಿನ್ ಹುಡ್ ಎಂಬ ಹೆಸರು ಇಟ್ಟುಕೊಂಡನೋ ಯಾರಿಗೂ ತಿಳಿಯದು. ನೂರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಕಥೆ ಬಾಯಿಂದ ಬಾಯಿಗೆ ಹರಡಿ, ಅದಕ್ಕೆ ರೆಕ್ಕೆಪುಕ್ಕ ಬೆಳೆದು ಈ ರೀತಿಯಾಗಿರಲೂ ಬಹುದು. ಆದರೂ ಅವನು ತುಳಿದ ದಾರಿ ತಪ್ಪಾದರೂ ಬಡವರ ಪರ ಅವನ ಕಳಕಳಿ ಮೆಚ್ಚುವಂಥದ್ದೇ ಆಗಿದೆ. ಅಲ್ಲವೇ?        

ಚಿತ್ರ ಕೃಪೆ: ಅಂತರ್ಜಾಲ ತಾಣ