"ರಾಭಣನ" ಮಹತ್ತೇ ಮಹತ್ತು.

"ರಾಭಣನ" ಮಹತ್ತೇ ಮಹತ್ತು.

ಬರಹ

ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ದಿನ್ ಬೆಳಗಾದ್ರೆ ಪೇಪರ‍್ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನಂತೆ, ಅವ್ಳನ್ನ್ ಹುಡುಕ್ಕಂಡು ಇನ್ಯಾವನೋ ಹೋಗ್ತಾನಂತೆ" ಎಂಬ ಕನಕ-ವಾಣಿಯ ಸುದ್ದಿ ಬರ್ತಾನೇ ಇರುತ್ತೆ, "ರಾವಣ" ನ ಥೀಮ್ ಕೂಡ ಅದೇ, ನೋಡಲೇಬೇಕೇ ನನ್ನ ರಾಜ, ಎಂದು ಕೇಳಿದೆ. ಬಾರೋ ನಮ್ಮ ಮನೆಗೆ ಎಂದು ಅಂತೂ ಇಪ್ಪತ್ತು ಡಾಲರ್ ತೆತ್ತು ಹೊತ್ತು ತಂದೆ  "ರಾವಣ" ನನ್ನ ಮನೆಗೆ...


ರಾಮನ ಅವತಾರ - ರಾಮಾಯಣ, ಸಂಪೂರ್ಣ ರಾಮಾಯಣ ಚಿತ್ರಗಳ ಕಾಲ ಮುಗಿಯಿತು. ಇದೀಗ ರಾವಣನ ಕಾಲ...  ರಾವಣ ಮಹಿಮೆ, ಪ್ರಚಂಡ ರಾವಣ, ರಾಮಾಪುರದ ರಾವಣ-ಅತ್ತೆಗೊಂದು-ಕತ್ತೆಗೊಂದು ಎಂಬಂತೆ,  ರಾಮನಿಗೊಂದು-ರಾವಣನಿಗೊಂದು ಕಾಲ. ರಾವಣ ಬಂದ ಅಂದಾದ್ಮೇಲೆ ಕುಂಭಕರ್ಣ-ವಿಭೀಷಣರು ಏನ್ ಪಾಪ ಮಾಡಿದ್ರು, ಅವರಿಗೂ ಬರುತ್ತೆ  ಚಿತ್ರಕಾಲ...! ಹೆಸರಿನಲ್ಲೇನಿದೆ ಮಹಾ ಎಂದು ನಾನೂ ಹೇಳ್ತಾ ಇದ್ದೆ...ಆದ್ರೆ...


ಬ್ಯಾಂಕಾಕಿಗೆ ಹೋಗಿದ್ದಾಗ ಅಚ್ಚರಿ ಆದದ್ದು ಸರ್ವಂರಾಮಮಯಂ- ಅಂಗಡಿ, ಹೋಟೆಲ್ ನಾಮ ರಾಮ, ರಾಮ್ ಒನ್, ಟೂ, ಥ್ರೀ. ಥೈಲಾಂಡ್ ರಾಜ ಕೂಡ ಭೂಮಿಬೋಲ್ ಅದುಲ್ಯತೇಜ-ರಾಮ-೯. ರಾಮನಿದ್ದೆಡೆ-ರಾವಣ?  ಕಂಡದ್ದು ಹೋಟೆಲ್ ರಾವಣ.  ೨೦೦೪ರಲ್ಲಿ ಕಾಂಬೋಡಿಯಾದ ರಾಜಧಾನಿ- ನಾಮ್‌ಪೆನ್ನಿನಲ್ಲಿ ನಾ ತಂಗಿದ್ದ ಹೋಟೆಲ್ ಕುಂತಿ. ಹಾದಿಯಲಿ ಕಂಡೇ ರಾವಣ ಮಿನಿ-ಮಾರ್ಟ್.  ಕಾಳಿದಾಸ ನೆನಪಾಯಿತು- "ಕುಂತಿಸುತೋ ರಾವಣ ಕುಂಭಕರ್ಣಃ!


ಭೋಜರಾಜನ ಆಸ್ಥಾನದಲ್ಲಿದ್ದ ಕಾಳಿದಾಸನಿಗೆ ಆಗದ ಕೆಲ ಕುಹಕಿಗಳು ಅವನನ್ನು ಸೋಲಿಸಬೇಕೆಂದು ಒಮ್ಮೆ "ಕುಂತೀಸುತೋ ರಾವಣಕುಂಭಕರ್ಣಃ| ಇದನು ಅರ್ಥೈಸು ಎಂದು ಸವಾಲೊಡ್ದಿದರಂತೆ. ಕಾಳಿದಾಸ ಅರ್ಥೈಸಿದ್ದು....


ಕಾ ಪಾಂಡುಪತ್ನೀ ಗೃಹಭೂಷಣಂ ಕಿಂ|| ಕೋ ರಾಮಶತ್ರುಃ ಕಿಮಗಸ್ತ್ಯಜನ್ಮಃ|
ಕಃ ಸೂರ್ಯಪುತ್ರೋ ವಿಪರೀತಪೃಚ್ಛಾ|| ಕುಂತೀಸುತೋ ರಾವಣಕುಂಭಕರ್ಣಾಃ||


ಅರ್ಥ: ಪಾಂಡುವಿನ ಹೆಂಡತಿ ಯಾರು? ಕುಂತಿ. ಮನೆಗೆ ಶೋಭಾಯಮಾನವಾದುದು ಯಾವುದು? ಪುತ್ರಸಂತಾನ. ರಾಮನ ವೈರಿ ಯಾರು? ರಾವಣ. ಅಗಸ್ತ್ಯ ಹುಟ್ಟಿದ್ದು ಎಲ್ಲಿ? ಕುಂಭದಲ್ಲಿ. ಸೂರ್ಯಪುತ್ರ ಯಾರು? ಕರ್ಣ. ಅಸಂಬದ್ಧ ವಾಕ್ಯ ಯಾವುದು? ಕುಂತೀಸುತರು ರಾವಣ- ಕುಂಭಕರ್ಣರು! ಎಂದು ಕುಹಕಿಗಳು ನೀಡಿದ ವಾಕ್ಯದಲ್ಲಿರುವ ಒಂದೊಂದು ಪದಕ್ಕೂ ಒಂದೊಂದು ಪ್ರಶ್ನೆ ಸೃಷ್ಟಿಸಿ ಶ್ಲೋಕ ರಚಿಸಿದ ಕಾಳಿದಾಸ.


ರಾಜಕುವರಿ ವಿದ್ಯಾಧರೆಯ ಎದುರು "ರಾಭಣಾ" ಎಂದುಲಿದ ನಿರಕ್ಷರಿ (ಕಾಳಿದಾಸ). "ರಾಭಣಾ" ಅಚ್ಚರಿ ಪಟ್ಟ ವಿದ್ಯಾಧರೆಗೆ ಅರ್ಥ ವಿವರಣೆ ನೀಡದ ಮಹಾಮಂತ್ರಿ. "ರಾವಣ ಸಹೋದರರಾದ ಕುಂಭಕರ್ಣ-ವಿಭೀಷಣರ ಹೆಸರಿನಲ್ಲಿ ಭ-ಕಾರ ಅಡಗಿದೆ,  ಸಹೋದರೀರ್ವರ ಅಣ್ಣ ರಾವಣನಲ್ಲೊ ಭ-ಕಾರ ಇರಲೇಬೇಕಲ್ಲವೇ ಎಂದು.?   "ರಾಭಣಾರ್ಥ" ವಿವರಣೆ ಕೇಳಿ ಘನಪಾಂಡಿತ್ಯನೆಂದು ವರಿಸಿದಳು ರಾಜಕುವರಿ. ಯಾರೋ ಹೇಳಿದ್ದು-ಇನ್ನ್ಯಾರೋ ಅರ್ಥೈಸಿದ್ದು-ವರಿಸಿದ್ದು ರಾಜಕುವರಿ. "ರಾಭಣನ" ಮಹತ್ತೇ ಮಹತ್ತು. ಇಂತಹ ದಂಥಕಥೆಗಳ ಗಮ್ಮತ್ತೇ ಗಮ್ಮತ್ತು!


ರಾವಣ ಒಬ್ಬ ಮಹಾನ್ ಪಂಡಿತನಾಗಿದ್ದು, ಅನನ್ಯ ಶಿವಭಕ್ತ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ರಾವಣನ ವಂಶಜರು ಇದ್ದದ್ದು ಶ್ರೀಲಂಕೆಯಲ್ಲಿ ಅಲ್ಲ ಭಾರತದ ಜೋಧ್‌ಪುರದಲ್ಲಿ ಎಂದು ಓದಿದಾಗ ಅಚ್ಚರಿಪಟ್ಟೆ. ನೂರಾರು ವರುಷಗಳ ಹಿಂದೆ ಶ್ರೀಲಂಕಾದಿಂದ ಜೋಧಪುರ, ಫಲೋಡಿ ಮತ್ತು ಗುಜರಾತಿನ ಇತರ ಭಾಗಗಳಿಗೆ ವಲಸೆ ಬಂದ ಗೋಧಾ ಮತ್ತು ಶ್ರೀಮಲ್ ಸಮುದಾಯದ ಕುಟುಂಬಗಳು ಜೋಧಪುರದ ಸುತ್ತಮುತ್ತ ವಾಸಿಸುತ್ತಿದ್ದು ತಮ್ಮನ್ನು ರಾವಣ ವಂಶಜರು ಎಂದು ಹೇಳಿಕೊಳ್ಳುತ್ತಾರೆ. ನಾಡಾದ್ಯಂತ ದಸರಾ ಸಂಭ್ರಮ ಆಚರಿಸಿದರೆ ಈ ಇಲ್ಲಿನ ಸುಮಾರು ೧೦೦ ಕುಟುಂಬಗಳಿಗೆ ಶೋಕಾಚರಣೆ. ವಿಜಯದಶಮಿಯಂದು ರಾವಣ, ಕುಂಭಕರ್ಣ ಹಾಗೂ ಇಂದ್ರಜಿತು ಇವರುಗಳ ಪ್ರತಿಕೃತಿ ದಹನ ಹಾಗೂ ಉತ್ತರಕ್ರಿಯಾದಿಗಳು ಕೈಗೊಳ್ಳುತ್ತಾರೆ!


ಜೋಧ್‌ಪುರದ ಚಾಂದ್‌ಪೋಲ್ ಪ್ರದೇಶದಲ್ಲಿರುವ ಅಮರನಾಥ ಮಂದಿರದ ಆವರಣದಲ್ಲಿ ಶಿವನನ್ನು ಪೂಜಿಸುತ್ತಿರುವ ರಾವಣನ ವಿಗ್ರಹವಿರುವ ರಾವಣ ಮಂದಿರವೂ ಇದೆಯಂತೆ. ಉಜ್ಜಯನಿಯ ಚಿಖಾಲಿ ಎಂಬಲ್ಲಿ ರಾವಣನಿಗೆ ಅವಮಾನ ಮಾಡಿದರೆ ಇಡೀ ಹಳ್ಳಿಗೆ ಅಶುಭ ಶಕುನ ಎಂಬ ನಂಬಿಕೆಯಂತೆ. ಚೈತ್ರ ನವರಾತ್ರಿಯ ಸಂಪ್ರದಾಯದ ಪ್ರಕಾರ, ೧೦ನೇ ದಿನ ದಶಮಿಯಂದು ಹಳ್ಳಿಗರು ಇಲ್ಲಿ ಪೂಜಿಸುವುದು ರಾವಣನನ್ನು. ಇದೇ ಅವಧಿಯಲ್ಲಿ ರಾವಣನ ಗೌರವಾರ್ಥ ಜಾತ್ರೆಯೊಂದೂ ನಡೆಯುತ್ತದೆ. ಆ ದಿನ ಜನರು ರಾಮ-ರಾವಣ ಯುದ್ಧದ ಪ್ರಹಸನವನ್ನೂ ಮಾಡುತ್ತಾರಂತೆ.


ಭಾರತದೆಲ್ಲೆಡೆ ತ್ರೇತಾಯುಗದ ರಾಮ ದೇವನೆನಿಸಿಕೊಂಡು ಶಿಲೆಯಾಗಿ ಪೂಜೆಗೊಳ್ಳುತ್ತಿರುವಾಗ- ವೈರಿ, ಸಮಕಾಲೀನ ರಾವಣನಿಗೊಂದು ದೇಗುಲ, ಪೂಜೆ ಬೇಡವೇ? ಈ ಕಲಿಯುಗದೊಳು ತಮ್ಮೊಳಗೇ ರಾವಣ ಅವಗುಣಗಳನ್ನು ಹೊಂದಿರುವ ಜೀವಂತ ರಾಜಕಾರಣಿಗಳಿಗೆ, ಚಿತ್ರತಾರೆಯರಿಗೆ ದೇಗುಲ ಕಟ್ತಾರಂತೆ. ಹಾಗಿದ್ದಲ್ಲಿ ಮಹಾನ್ ಭಕ್ತ, ಪಂಡಿತ, ಜ್ಞಾನಿ, ವೀರ ಹಾಗೂ ಎಂದೋ ಮಡಿದ ರಾವಣನ ಪೂಜೆ ಮಾಡೋದ್ರಲ್ಲಿ ತಪ್ಪೇನಿದೆ ಬಿಡಿ.


ರಾವಣ ಬಗ್ಗೆ ಬರೆದು, ರಾವಣ ಪಿಕ್ಚರ್ ಬಗ್ಗೆ ಹೇಳ್ದಿದ್ರೆ? ಬಲವಂತ ಮಾಘಸ್ನಾನ ಎಂಬಂತೆ ಅಂತೂ "ರಾವಣ" ನೋಡಿದೆ. ಮನದಲಿ ನಿಂದದ್ದು ಕ್ಯಾಮರಾ ಮೂಡಿಸಿದ ಹಸಿರು, ಬೆಟ್ಟ, ನದಿ, ಝರಿ, ಜಲಪಾತದ ದೃಶ್ಯಗಳು. ನಟ ಗೋವಿಂದನ(ಹನುಮ) ನಟನೆ ಮಾತ್ರ.