"ರಾಮನ ಅವತಾರ, ರಘುಕುಲ ಸೋಮನ ಅವತಾರದ ಬಗ್ಗೆ ಅಲ್ಪ ಅರಿಯೋಣ"...ವಾಣಿ ರಾಮದಾಸ್.
"ರಾಮನ ಅವತಾರ, ರಘುಕುಲ ಸೋಮನ ಅವತಾರದ ಬಗ್ಗೆ ಅಲ್ಪ ಅರಿಯೋಣ"...ವಾಣಿ ರಾಮದಾಸ್.
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ....ಇಂದು ರಾಮನವಮಿ ಪ್ರಯುಕ್ತ....ಬನ್ನಿ ನಮ್ಮ ರಾಮ ದಕ್ಷೀಣ ಪೂರ್ವ ಏಶಿಯಾದಲ್ಲೂ "ರಾಮನ ಅವತಾರ, ರಘುಕುಲ ಸೋಮನ ಅವತಾರದ ಬಗ್ಗೆ ಸ್ವಲ್ಪ"...
ಮಲೇಶಿಯಾದ ಹಕಾಯತ್ ಸೆರಿ ರಾಮ (ರಾಮಾಯಣ)ದಲ್ಲಿ ಅದು ವಯಾಂಗ್ ನೆರಳು ಬೊಂಬೆಯಾಟದ ಕಥೆಗಳಲ್ಲಿ ಸೀತೆ, ರಾಮನಿಗೆ ರಾವಣನ ಚಿತ್ರ ತೋರಿಸುತ್ತಾಳೆ. ಅದನ್ನು ಕಂಡ ರಾಮ ಫಟಾರನೆ ಸೀತೆ ಕೆನ್ನೆಗೆ ಬಾರಿಸುತ್ತಾನೆ. ಇದೇನಿದು ಮರ್ಯಾದಾ ಪುರುಷೋತ್ತಮ ರಾಮ, ಸೀತೆಗೆ ಹೊಡೆಯುವುದೇ? ಆದರೆ ಈತ ಭಾರತೀಯ ರಾಮನಲ್ಲ, ಮಲೇಶಿಯಾದ ಕಥಾಧಾರಿ ರಾಮ. ಆಶ್ಚರ್ಯವಲ್ಲವೇ?
ಮಲೇಷಿಯಾ, ದಕ್ಷಿಣ ಪೂರ್ವ ಏಷ್ಯಾದಲ್ಲಿ ರಾಮಾಯಣ : ಶತಮಾನಗಳ ಹಿಂದೆ ಭಾರತದಿಂದ ವ್ಯಾಪಾರಕ್ಕಾಗಿ ಹೋದ ವ್ಯಾಪಾರಿಗಳು, ಬೌದ್ಧ ಧರ್ಮ ಪ್ರಚಾರಕರು ಹೋದಲ್ಲೆಲ್ಲಾ ಭಾರತೀಯ ಸಂಸ್ಕೃತಿ, ಭಾಷೆ, ಕಲಾಚಾರ, ಕಲೆಗಳ ಜೊತೆಗೆ ರಾಮಾಯಣ, ಮಹಾಭಾರತಗಳನ್ನೂ ಕೊಂಡೊಯ್ದರು. ವ್ಯಾಪಾರಕ್ಕಾಗಿ, ಧರ್ಮ ಪ್ರಚಾರಕ್ಕಾಗಿ ನೆಲೆ ನಿಂತ ಪ್ರದೇಶಗಳಲ್ಲಿ ಭಾರತೀಯ ಸಂಸ್ಕೃತಿ, ಕಲಾಚಾರಗಳನ್ನು ಬಿತ್ತಿ ಅಲ್ಲಿನ ಮೂಲ ನಿವಾಸಿಗಳೊಡನೆ ಬೆರೆತು ಅಲ್ಲಿನ ಪಂಗಡಗಳ ಸಂಸ್ಕೃತಿ, ಭಾಷೆ, ಕಲಾಚಾರಗಳೊಂದಿಗೆ ನಮ್ಮ ಸಂಸ್ಕೃತಿಯನ್ನೂ ಮಿಳಿತಗೊಳಿಸಿದರು. ಅನೇಕ ಜನರು ಬೌದ್ಧ ಮತದಿಂದ ಪ್ರಭಾವಗೊಂಡು ಬೌದ್ಧ ಮತಾವಲಂಬಿಗಳಾದರು. ಈ ಕಾರಣಗಳಿಂದ ದಕ್ಷಿಣ ಪೂರ್ವ ಏಷಿಯಾದ ನಾಡುಗಳಲ್ಲಿ ಬುದ್ಧನೂ ಇದ್ದಾನೆ, ರಾಮನೂ ಇದ್ದಾನೆ, ಕೃಷ್ಣನೂ ಇದ್ದಾನೆ. ರಾಮನಿದ್ದ ಮೇಲೆ ಹನುಮ- Monkey God ಇರಬೇಡವೇ?
ವಿವಾಹಿತ ಹನುಮ : ಕಾಂಬೋಡಿಯಾದಲ್ಲಿ ಭಜರಂಗ್ಬಲಿ ಸಂಸಾರಿ- ಇದು ಎಂಟನೇ ಅದ್ಭುತ. ಹನುಮಂತ ಎಂದಾಕ್ಷಣ ನೆನಪಿಗೆ ಬಂದದ್ದು, ನಾವು ಕಾಂಬೋಡಿಯಾದ ನಾಮ್ಪೆನ್ ಮ್ಯೂಸಿಯಂನಲ್ಲಿ ನೋಡಿದ Monkey God and his wife. ಹನುಮನ ಪತ್ನಿ ಮತ್ಸ್ಯಕನ್ಯೆ- Mermaid... ಮತ್ತೆಮತ್ತೆ, ಅವರಿಬ್ಬರ ಶಿಲ್ಪಗಳನ್ನು ನಾನು ನೋಡಿದೆ. ಮಚಲಿಂದ ನಮ್ಮ ಹನುಮಂತನೇ. ಮತ್ಸ್ಯ ಕನ್ಯೆ ಸೋವನ್ಮಚ, ಸುಂದರಿ(ಮೊಂಡು ಮೂಗು, ಗುಂಗುರು ಕೂದಲು- ಕ್ಯಾಮರ್ ಶಿಲ್ಪ, ಮ್ಯೂಸಿಯಂನಲ್ಲಿ ಫೋಟೋ ತೆಗೆಯಲು ಅನುಮತಿ ಇರಲಿಲ್ಲ). ಕ್ಯಾಮರ್ ರಾಮಾಯಣದಲ್ಲಿ ಮಚಲಿಂದ(ಮಚ-ಮೀನು, ಇಂದ-ಇಂದ್ರ= ಮೀನನ್ನು ಗೆದ್ದವನು)ನದು Love Marriage. ಪ್ರೇಮಪಾಶದಲ್ಲಿ ಹನುಮಂತ ಬಿದ್ದಿದ್ದಾನೆ. ಆದರೆ ನಮ್ಮಲ್ಲಿರುವ ಬ್ರಹ್ಮಚಾರಿಗಳೇ ಹುಷಾರಾಗಿರಿ!
ಹನುಮಂತ ಕಾಂಭೋಜದಲ್ಲಿ ರಸಿಕ-ಪ್ರೇಮಿ, ಪತ್ನಿವ್ರತ. ಪ್ರೀತಿ, ಪ್ರೇಮ ಅವನನ್ನೂ ಬಿಟ್ಟಿಲ್ಲ. ಹನುಮಂತ ನೀ ಭಾರತದಲ್ಲಿ ಬ್ರಹ್ಮಚಾರಿ, ಕಾಂಭೋಜದಲ್ಲಿ ಸಂಸಾರಿ! ಇದೇನು ನಿನ್ನ ಮಾಯೆ, ಎತ್ತಣಿಂದೆತ್ತ ಸಂಬಂಧವಯ್ಯಾ?
ದಕ್ಷಿಣ ಪೂರ್ವ ಏಷ್ಯಾದ ನಾಡುಗಳಲ್ಲಿ ರಾಮಾಯಣ ಜನಪ್ರಿಯವಾದಷ್ಟು ಮಹಾಭಾರತ ಜನಪ್ರಿಯವಾಗಿಲ್ಲ. ಲಾವೋಸ್, ಕಾಂಬೋಡಿಯಾ, ಇಂಡೋನೇಷಿಯಾ, ಥೈಲಾಂಡ್, ಮಲೇಷಿಯಾ, ಮಯನ್ಮಾರ್ಗಳಲ್ಲಿ ರಾಮಾಯಣ ಅವರದ್ದೇ ಆದ ಮಹಾಕಾವ್ಯ.
ರಾಮನೊಬ್ಬನೇ ಆದ್ರೆ? : ರಾಮಾಯಣದ ಮೂಲ ಕಥೆ ಎಲ್ಲೆಡೆ ಒಂದೇ. ಈ ಎಲ್ಲ ದೇಶಗಳ ಕಥೆಗಳಲ್ಲಿ, ನಾಟಕ, ರೂಪಕ, ಸೂತ್ರದ ಬೊಂಬೆಯಾಟ, ನೃತ್ಯಗಳಲ್ಲಿ ರಾಮಾಯಣಕ್ಕೆ ಹೆಚ್ಚಿನ ಪ್ರಾಧಾನ್ಯ. ರಾಮನೇ ನಾಯಕ. ಆಯಾ ನಾಡು, ಭಾಷೆ, ಜನ, ಪರಿಸರಗಳಿಗೆ ತಕ್ಕಂತೆ ಹೆಸರು. ಹಲವು ಪಾತ್ರಗಳ ಅಳವಡಿಕೆ, ಕಥೆಯಲ್ಲಿ ಕುತೂಹಲ ಘಟನೆಗಳು, ಇಂದಿನ ಕಾಲಕ್ಕೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಗಳು ಕಂಡು ಬರುತ್ತದೆ. ಆದರೆ ಮೂಲ ಕಥೆ ಎಲ್ಲೆಡೆ ಒಂದೇ. ಇನ್ನೊಂದು ಗಮನಾರ್ಹ ಅಂಶವೆಂದರೆ ಈ ಎಲ್ಲ ದೇಶಗಳಲ್ಲಿ ರಾಮಾಯಣ ನಾಟಕ, ನೃತ್ಯ ಅವರದ್ದೇ ಆದ ಒಂದು ಮಹಾನ್ ಕಾವ್ಯ. ನಮ್ಮಲ್ಲೂ ರಾಮಾಯಣ ಇದೆ ಎಂಬ ಹೆಮ್ಮೆ, ಅಭಿಮಾನಗಳಿವೆ. ರಾಮಾಯಣದಲ್ಲಿ ಬರುವ ಪಾತ್ರಗಳ ವೈಶಿಷ್ಟ್ಯತೆ, ಗುಣಗಳು, ಶೌರ್ಯ, ಮಾನವೀಯತೆಯಿಂದ ರಾಮಾಯಣ ಎಲ್ಲೆಡೆಯಲ್ಲಿ ಅಮರವಾಗಿದೆ.
ASEAN ದೇಶಗಳ ರಾಮಾಯಣದ ಕಿರು ಪರಿಚಯ
ಕಾಂಬೋಡಿಯಾ - Monkey God, in love : ಭಾರತೀಯ ಸಂಸ್ಕೃತಿಯ ಕುರುಹು ಬಹಳಷ್ಟು ಕಂಡು ಬರುವ ದೇಶ. ನಾಗ, ಗರುಡ, ರಾಮಾಯಣ, ಮಹಾಭಾರತದ ಹೆಸರುಗಳು ಸ್ವಲ್ಪ ಅಪಭ್ರಂಶಗೊಂಡಿವೆ. ಅಲ್ಲಿನ ಭಾಷೆಗೆ ಅದು ಸರಿ ಇರಬಹುದು. (ಹೋಟೆಲ್ ಹೆಸರು ನೋಡಿದ್ದು ಸೊಚೇತಾ -ಬಹುಶಃ ಸುಚೇತ). ಆಂಕೋರ್ವಾಟ್ ಮತ್ತು ಅಂಕೋರ್ಥಾಂ, ಬಯಾನ್ ದೇಗುಲಗಳ ಕಂಡಾಗ ಹಂಪಿ, ಬೇಲೂರು, ಹಳೇಬೀಡಿನ ಶಿಲ್ಪಗಳು ಕಣ್ಣ ಮುಂದೆ ಬರುತ್ತದೆ.
ರಿಯಾಮ್ ಅಥವಾ ರೀಮ್ಕರ್ ಎನ್ನುವುದು ಕಾಂಬೋಡಿಯಾದ ರಾಮಾಯಣ. ಸುಮಾರು ಆರನೇ ಶತಮಾನದಿಂದ ಕಾಂಬೋಡಿಯಾದಲ್ಲಿ ಹಿಂದು ಸಂಸ್ಕೃತಿ ನೆಲೆಗೊಂಡಿತ್ತು. ಪ್ರಸಿದ್ಧ ಅಂಕೋರ್ವಾಟ್ ದೇಗುಲದಲ್ಲಿ, ನಾಮ್ಪೆನ್ ಅರಮನೆಯಲ್ಲಿ ರಾಮಾಯಣ, ಮಹಾಭಾರತದ ಕೆತ್ತನೆಗಳು, ಚಿತ್ರಗಳು ಇವೆ. ನಮ್ಮ ಕಾಂಬೋಡಿಯಾ ಪ್ರವಾಸದಲ್ಲಿ ಶಾಲೆಗೆ ಭೇಟಿ ನೀಡಿದಾಗ ರಾಮಾಯಣ ಪಠನ ಹೇಳುತ್ತಿದ್ದುದು ಕಂಡೆವು. ರಾಮಾಯಣದ ನಾಟಕ, ನೃತ್ಯ ರೂಪಕಗಳು ಕಾಂಬೋಡಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಳಗೊಂಡಿವೆ. ಅಹಿಂಸಾ ವೃತ್ತಿ ಪಾಲಿಸಿದ ರಾಮ ಮುಂದೆ ಬುದ್ಧನಾಗಿ ಜನ್ಮತಾಳಿದ ಎಂಬ ನಂಬಿಕೆ ಇವರಲ್ಲಿ ಬಲವಾಗಿದೆ.
ನಾಮ್ಪೆನ್ನಲ್ಲಿರುವ ಹನುಮ ಜೋಡಿಯ ಪುರಾಣ ತುಂಬಾ ಆಸಕ್ತಿದಾಯಕವಾಗಿದೆ. ಸೇತುಬಂಧದ ವೇಳೆಯಲ್ಲಿ ಸಮುದ್ರದ ದಡದಲ್ಲಿ ಸೇತುವೆ ಸರಿಯಾಗಿ ನಿಲ್ಲುತ್ತಿದೆಯೇ ಎಂದು ಒಂದು ರಾತ್ರಿ ಹನುಮಂತ ಸೇತುವೆ- ಪರಿಶೀಲನೆಗೆ ಹೊರಟ. ಬೆಳಿಗ್ಗೆ ಸರಿಯಾಗಿ ಇದ್ದ ಸೇತುವೆ ರಾತ್ರಿ ಮುರಿದಿತ್ತು. ಕಲ್ಲು, ಬಂಡೆಗಳು ಚೆಲ್ಲಾಪಿಲ್ಲಿಯಾಗಿ ನೀರಿನಲ್ಲಿ ತೇಲುತ್ತಿತ್ತು. ಇದೇನಿದು, ಇದು ರಾಕ್ಷಸರ ಹಾವಳಿ ಇರಬೇಕೆಂದು ಊಹಿಸಿ, ಶಬ್ದ ಮಾಡದೆ, ರಾಕ್ಷಸರಿಗೆ ಬುದ್ಧಿ ಕಲಿಸಲು ನೀರಿನಲ್ಲಿ ಮುಳುಗಿದ ವೀರೇಕ್(ವೀರ) ಮಚಲಿಂದ.
ಹನುಮ ನೀರಿನಲ್ಲಿ ಕಂಡದ್ದು : ಒಬ್ಬ ತುಂಟ, ಸುಂದರ, ಸೋವನ್ಮಚ (ಸುಂದರ ಮತ್ಸ್ಯ ಕನ್ಯೆ) ಬಂಡೆಗಳನ್ನು ದೂರ ಸರಿಸುತ್ತಿದ್ದಳು. ಅವಳನ್ನು ಗದರಿಸಿ, ಹಿಡಿಯಲು ಹೋಗುತ್ತಿದ್ದಂತೆ ನುಣುಚಿಕೊಂಡು, ನಗುತ್ತಾ, ಹನುಮಂತನನ್ನು ಅಣಕಿಸಿ ಈಜಿ ದೂರ ಸರೆದಳು. ಹಿಂಬಾಲಿಸಿ ಹೋದ ಹನುಮ ಸೋವನ್ಮಚಳ ತುಂಟತನಕ್ಕೆ ಮರುಳಾದ. ಇಬ್ಬರಲ್ಲಿ ಪ್ರೇಮಾಂಕುರವಾಯಿತು. ಅಲ್ಲೇ ಸಮುದ್ರ ದಡದಲ್ಲಿ ಆಗಲೇ ಮದುವೆಯೂ ಆಯಿತು. ಕಲ್ಲು ದೊಡ್ಡ ಸೈನ್ಯದ ಭಾರ ತಾಳಲಾರದು, ಶಕ್ತಿವಂತ, ಬಲವಂತ ಮುಚಲಿಂದ, ನೀನೇ ಸೇತುಬಂಧವಾಗು ಎಂದ ಮತ್ಸಕನ್ಯೆಯ ಕೋರಿಕೆಯ ಮೇರೆಗೆ ಹನುಮಂತ ತನ್ನ ದೇಹವನ್ನು ಬೆಳೆಸಿಕೊಂಡು ಸಮುದ್ರಕ್ಕೆ ತಾನೇ ಸೇತುವಾಗಿ ಮಲಗಿದ. ಇವನ ಮೇಲೆ ನಡೆದ ರಾಮ, ಲಕ್ಷ್ಮಣ, ವಾನರ ಸೈನಿಕರ ಚಿತ್ರಣದ ಕೆತ್ತನೆ ಕಾಂಬೋಡಿಯಾದ ದೇಗುಲದಲ್ಲಿದೆ. ಕಾಂಭೋಜದ ಹನುಮ 6ನೇ ಶತಮಾನಕ್ಕೇ ಸಂಸಾರಿ, ಪತ್ನಿ ವಾಕ್ಯ ಪರಿಪಾಲಕ. ಇವರ ಪ್ರೇಮಗಾಥೆಯ ನೃತ್ಯ ರೂಪಕ ಕಾಂಬೋಡಿಯಾದಲ್ಲಿ ಬಹಳ ಪ್ರಸಿದ್ಧಿ.
ಉತ್ತರಕಾಂಡದಲ್ಲಿ ‘ಲವ’ ಒಬ್ಬನೇ ಸೀತೆಗೆ ಹುಟ್ಟಿದ ಮಗು.‘ಕುಶ’ ಭೂಮಿಪುತ್ರ. ಸೀತೆ ತನ್ನಂತೆಯೇ ಭೂಮಿಯಲ್ಲಿ ಸಿಕ್ಕ ಮಗುವನ್ನು ತಂದು ಸಾಕುತ್ತಾಳೆ. ಈ ದೇಶದಲ್ಲಿ ಸೀತೆಯನ್ನು ಫಲವತ್ತಾದ ಬೆಳೆಗಾಗಿ, ರಾಮಾಯಣವನ್ನು ವರುಣನ ಕೃಪೆಗೆ, ಹೆಚ್ಚು ಕೃಷಿ ಉತ್ಪನ್ನತೆ ಪಡೆಯಲು ಪಠಿಸುತ್ತಾರೆ. ನಾಯಕ, ದಯಾಳು, ಮಾನವತ್ವ ತುಂಬಿದ ಶ್ರೀರಾಮ-ಏನನ್ನಾದರೂ ಕೊಡಬಲ್ಲ ಎಂಬ --ದೃಢ ನಂಬಿಕೆ ಇವರಲ್ಲಿದೆ.
ಮಯನ್ಮಾರ್(ಬರ್ಮಾ) : ಇಲ್ಲಿ ಬೌದ್ಧ ಧರ್ಮದ ಅನುಕರಣೆ ಹೆಚ್ಚು. ಆದ್ದರಿಂದ ಜಾತಕ ಕಥೆಗಳ, ರಾಮಾಯಣ ದೃಶ್ಯಗಳ ಚಿತ್ರಣ ಮಯನ್ಮಾರಿನ ಬಗನ್ ಪಗೋಡಗಳಲ್ಲಿ ಕಂಡುಬರುತ್ತದೆ. ಮಯನ್ಮಾರಿನಲ್ಲಿ ರಾಮಾಯಣ ಬ್ಯಾಲೆ(Yama Zatdaw) ಬಹಳ ಪ್ರಸಿದ್ಧಿ. ಸುಮಾರು ಮೂರು ಗಂಟೆಗಳ ಕಾಲ ನಡೆಯುವ ರಾಮಾಯಣ ಬ್ಯಾಲೆ ಯಲ್ಲಿ ರಾಮ(Yama), ಸೀತಾ(teeda), ಲಕ್ಕನ, ಸೀತಾ, ದಶಶಿರ(Datthigiri) ಮತ್ತು ಹನುಮಂತನ ಪಾತ್ರಗಳಿಗೆ ಬಹಳ ಮಹತ್ವವಿದೆ. ದಶಕಂಠನನ್ನು Loser of Love ಎಂದು ಅವನ ಮೇಲೆ ಕನಿಕರ ಜಾಸ್ತಿ. ಪ್ರಸಿದ್ಧವಾದ ಈ ಬ್ಯಾಲೆಯನ್ನು ನೋಡಲು ಕಿಕ್ಕಿರಿದು ಜನ ಸೇರುತ್ತಾರೆ. ನಮ್ಮಲ್ಲಿಯೂ ರಾಮಾಯಣ ಇದೆ ಎಂದು ಅಭಿಮಾನದಿಂದ ಹೇಳುತ್ತಾರೆ.
ಇಂಡೋನೇಷಿಯಾ : ಇವರ ರಾಮಾಯಣದಲ್ಲಿ ಕೌಸಲ್ಯೆ ಪಾರ್ಶ್ವವಾಯು ಪೀಡಿತಳು. ರಾಮಾಯಣದಲ್ಲಿ ಶತ್ರುಘ್ನನ ಪಾತ್ರವೇ ಇಲ್ಲ. ವಾನರರು ಸಹಾ ಮಾನವರಂತೆಯೇ ಇದ್ದರು ಎಂಬುದು ಅವರ ನಂಬಿಕೆ. ಅವರ ಮುಖ ಕಪಿಯದಾಗಿರಲಿಲ್ಲ, ಬುದ್ಧಿ ಮಾತ್ರ ಕಪಿಯಂತೆ ಚಂಚಲತೆಯಿಂದ ಕೂಡಿತ್ತು ಎಂದು ಅವರು ಹೇಳುತ್ತಾರೆ. ಕುಚೇಷ್ಟೆಯಿಂದ ಪಾನಮತ್ತರಾಗಿ ಒಮ್ಮೆ ಯಕ್ಷಿಣಿ ಸೃಷ್ಟಿಸಿದ ಕೊಳದಲ್ಲಿ ಬಿದ್ದ ಕಾರಣ ಕಪಿ-ಮುಖಗಳಾದರು. ರಾವಣ ಅಲ್ಲಿ ರಾಹ್ವಣ. ಇಲ್ಲಿ ರಾಮಾಯಣ ಸುಮಾರು ಎಂಟು/ಒಂಬತ್ತನೇ ಶತಮಾನದಲ್ಲಿ ಜಾವಾನೀಸ್ ಭಾಷೆಯಲ್ಲಿ ಅನುವಾದಗೊಂಡಿತು ಎನ್ನಲಾಗಿದೆ. ಸ್ಥಳೀಯ ಭಾಷೆಯಲ್ಲಿ ಅನುವಾದಿತಗೊಂಡ ಕಾರಣ ಹೆಚ್ಚು ಪ್ರಚಲಿತಕ್ಕೆ ಬಂದಿರಬೇಕು.
ಇಂಡೋನೇಶಿಯಾದ ಬ್ಯಾಲೆಯಲ್ಲಿ(ಬಲಿ) ಹಿಂದೂ ಸಂಸ್ಕೃತಿ ಇಂದೂ ಚಾಲ್ತಿಯಲ್ಲಿದೆ. ಇಲ್ಲಿ ಹಿಂದುಗಳಲ್ಲಿ ಮಗುವಿನ ಜನನವಾದಾಗ ‘ಮೊಚೊಪತ್’ ಎಂಬ ಶುಭಕಾರ್ಯ ನಡೆಯುತ್ತದೆ. ಪಂಡಿತನನ್ನು ಕರೆಸಿ ಮನೆಯಲ್ಲಿ ರಾಮಾಯಣ ಪ್ರವಚನವನ್ನು ಮಾಡಿಸುತ್ತಾರೆ. ಮಗು ಗಂಡಾದಲ್ಲಿ ರಾಮನ ಶೌರ್ಯ, ಸಾಹಸ, ಶ್ರದ್ಧೆ, ಭಕ್ತಿ, ಉದ್ದಾತ್ತ ಗುಣಗಳು, ಹೆಣ್ಣು ಮಗುವಾದಲ್ಲಿ ಸೀತೆಯ ತಾಳ್ಮೆ, ನಿಷ್ಠೆ, ಪ್ರೀತಿಯ ಗುಣಗಳು ಮಗುವಿಗೆ ಬರಲಿ ಎಂದು ರಾಮಾಯಣ ಪಠನ ನಡೆಸುತ್ತಾರೆ. ಬೇಬಾಚಾನ್ ಎಂದರೇ ತಾಳೆಗರಿಯಲ್ಲಿ ಇರುವ ರಾಮಾಯಣ ಪಠನ ಇಲ್ಲಿ ಸಾಮಾನ್ಯ. ಇದನ್ನು ಇಬ್ಬರು ಓದುತ್ತಾರೆ. ಹಬ್ಬ, ವಿಶೇಷ ದಿನಗಳಲ್ಲಿ ರಾಮಾಯಣ ಪಠನ ಮುಖ್ಯ ಹಾಗೂ ಶುಭದಾಯಕ ಕಾರ್ಯ.
ಮಧ್ಯ ಜಾವಾದಲ್ಲಿ ಯೋಗ್ಯಕರ್ತ(Jogjakarta) ಎಂಬಲ್ಲಿ ಒಂದು ದೊಡ್ಡ ಪ್ರಾಂಗಣದಲ್ಲಿ ರಾಮಾಯಣ ಸಂಗೀತ ಪ್ರಧಾನ ನಾಟಕ ನಡೆಯುತ್ತದೆ. ಇದನ್ನು ನೋಡಲು ವಿಶ್ವದೆಲ್ಲೆಡೆಯಿಂದ ಜನರು ಆಗಮಿಸುತ್ತಾರೆ. ಈ ಬ್ಯಾಲೆಗಾಗಿ ನೂರಾರು ಪಾತ್ರಧಾರಿಗಳು ತಿಂಗಳಾನುಗಟ್ಟಲೆ ಶ್ರಮವಹಿಸುತ್ತಾರೆ. ಬಾಲಿ, ಸುಮಾತ್ರ, ಜಾವಾಗಳಲ್ಲಿ ರಾಮಾಯಣದ ತೊಗಲು ಬೊಂಬೆಯಾಟ, ವಯಾಂಗ್-ನೆರಳು ಬೊಂಬೆಯಾಟ, ಸೂತ್ರದ ಬೊಂಬೆಯಾಟ, ಮುಖವಾಡಗಳನ್ನು ಧರಿಸಿ ಹಬ್ಬಹರಿದಿನಗಳಲ್ಲಿ ಬ್ಯಾಲೆ ನಡೆಸುತ್ತಾರೆ. ನಿಮ್ಮಲ್ಲೂ ರಾಮಾಯಣ ಇದೆಯೇ ಎಂದು ಆಶ್ಚರ್ಯಪಡುತ್ತಾರೆ. ಜಾವಾದಲ್ಲಿ ತೊಗಲು ಬೊಂಬೆಯಾಟ ನಡೆಸುವವರು ಮುಸ್ಲಿಂಮರು. ಅವರ ಪ್ರಕಾರ allah is our God, rama is our Hero.
ಥೈಲ್ಯಾಂಡ್ : ಥೈಲಾಂಡಿನಲ್ಲಿ ರಸ್ತೆ, ರಸ್ತೆಗಳಲ್ಲೂ ರಾಮ. ರಾಜವಂಶದ ಹೆಸರು ‘ರಾಮಾಥಿಬೋಧಿ’. ಈಗಿನ ರಾಜರು ಭೂಮಿಪಾಲ್ ಅತ್ಯುಲ್ಯ ತೇಜ ರಾಮ. ಇಲ್ಲಿನ ರಾಜ ಪರಂಪರೆಯಲ್ಲಿ ಎಲ್ಲರ ಹೆಸರೂ ‘ರಾಮ’ ಎಂದೇ ಕೊನೆಗೊಳ್ಳುತ್ತದೆ. ಥೈಲ್ಯಾಂಡಿನ ಹಿಂದಿನ ರಾಜಧಾನಿ ಆಯುಥಯಾ. (ಈಗಿನ ರಾಜಧಾನಿ ಬ್ಯಾಂಕಾಕ್).
ರಾಮ್ಕೀನ್(ರಾಮಾಯಣ) ಥೈಲ್ಯಾಂಡಿನ ವೀರಕಾವ್ಯ. ಬ್ಯಾಂಕಾಕಿನಲ್ಲಿರುವ ಅರಮನೆಯಲ್ಲಿ ರಾಮಾಯಣ ದೃಶ್ಯಗಳನ್ನು ಒಳಗೊಂಡ ಹಲವಾರು ತೈಲ ಚಿತ್ರಗಳಿವೆ. ಮುಖಾಲಂಕಾರ, ಕೇಶಾಲಂಕಾರ, ವಸ್ತ್ರ ವಿನ್ಯಾಸ ಎಲ್ಲವೂ ಥೈ ಶೈಲಿಯಲ್ಲಿದೆ.
ಇವರ ರಾಮಾಯಣದಲ್ಲಿ ರಾಮ(Phra Ram), ಸೀತೆ(Nang Sida), ರಾವಣ(ToTsakan). ರಾಮ-ರಾವಣರ ಯುದ್ಧ(ತೋತ್ಸಕನ್- ದಶಕಂಠ- ಲಾಮ್) ಬಹಳ ಮುಖ್ಯವಾದ್ದದ್ದು. ಥೈ ನೃತ್ಯ ರೂಪಕದಲ್ಲಿ ಈ ಯುದ್ಧ ಸಂಭವ ವಿಶಿಷ್ಟವಾದದ್ದು. ಉತ್ತರಕಾಂಡದಲ್ಲಿ ಲವ ಸೀತೆಯ ಪುತ್ರ. ಲವನ ಜನನದ ನಂತರ ಅವನ ಜೊತೆಗೆ ಇನ್ನೊಬ್ಬ ಮಗು ಇರಲೆಂದು ವಾಲ್ಮೀಕಿ ಹುಲ್ಲನ್ನು ತೆಗೆದುಕೊಂಡು ಕುಶನನ್ನು ಸೃಷ್ಟಿಸಿದರು. ಸೀತೆ ಅವನನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಿದಳು. ಅವತಾರ ಪುರುಷ ರಾಮನ ಅಂಶವೇ ಗೌತಮ ಬುದ್ಧ. ಆದ್ದರಿಂದ ಇಲ್ಲಿ ರಾಮನೂ, ಬುದ್ಧನೂ ಬಹಳ ಪೂಜ್ಯನೀಯರು.
ಲಾವೋಸ್ : ಥೈಲ್ಯಾಂಡಿನ ಪೂರ್ವದಲ್ಲಿರುವ ಲಾವೋಸಿನಲ್ಲಿ ರಾಮಾಯಣ ಫ್ರ ಲಾಕ್ (ಲಕ್ಷ್ಮಣ) ಫ್ರ ಲಾಮ್ (ರಾಮ). ಥೈ ಮತ್ತು ಲಾವೋಸ್ ಭಾಷೆಯಲ್ಲಿ ‘ರ’ ಅಕ್ಷರ ಇಲ್ಲದ ಕಾರಣ ‘ರಾಮ’-ಲಾಮನಾಗಿದ್ದಾನೆ. ರಾಮಾಯಣ ಮಹಾಕಾವ್ಯ ಬುದ್ಧ ತನ್ನ ಹಿಂದಿನ ಜನುಮದ ಕಥೆಯನ್ನು ತನ್ನ ಅನುಯಾಯಿಗಳಿಗೆ ಹೇಳಿದನೆಂದು ಪ್ರತೀತಿ. ಬುದ್ಧನೇ ರಾಮ, ರಾಮನೇ ಬುದ್ಧ. ಇವರ ರಾಮಾಯಣದಲ್ಲಿ ಮೂರು ಭಾಗಗಳಿವೆ. ಫ್ರ ಲಾಕ್ (ಲಕ್ಷ್ಮಣ) ಫ್ರ ಲಾಮ್ (ರಾಮ) ಮೂಲ ರಾಮಾಯಣ.
ಫ್ರ ಲಾಕ್ (ಲಕ್ಷ್ಮಣ) ಫ್ರ ಲಾಮ್ (ರಾಮ)ವನ್ನು ಹರಿಕಥೆ, ನೃತ್ಯ, ರೂಪಕದಲ್ಲಿ ನಡೆಸುತ್ತರೆ. ಗ್ವಾಯ್ ದ್ವೋರಭಿ ಎಂಬ ಭಾಗವನ್ನು ಉಪದೇಶ ಮತ್ತು ಮನೋರಂಜನೆಯ ಕಾರ್ಯಕ್ರಮಗಳಲ್ಲಿ ನಡೆಸುತ್ತಾರೆ. ತಾಳೇಗರಿಯಲ್ಲಿ ಬರೆದಿರುವ ಗ್ವಾಯ್ ದ್ವೋರಭಿ ಲುವಾಂಗ್ ಪ್ರಭಾಂಗಿನ ಅರಮನೆಯಲ್ಲಿ ಇದೆ. Wat Mai Sumannaphumahamಎಂಬ ಬೌದ್ಧ ದೇಗುಲದಲ್ಲಿ ರಾಮಾಯಣದ ಚಿತ್ರಣಗಳಿವೆ.
ಮಲೇಷಿಯಾ : ಮಲೇಷಿಯಾ ಮುಸ್ಲಿಂ ದೇಶವಾದರೂ ಇಲ್ಲಿನ ಥೈಲ್ಯಾಂಡ್ ಗಡಿಯಲ್ಲಿರುವ ಕೆಲಾಂಟನ್ ಎಂಬಲ್ಲಿ ರಾಮಾಯಣ ಛಾಯಾನಾಟಕ, ಬೊಂಬೆಯಾಟ ಬಹಳ ಪ್ರಸಿದ್ಧಿಯಾಗಿದೆ. ಇಲ್ಲಿ ರಾಮನ ಕುರಿತಾದ Shadow Play, puppet showಗಳು ಆಕರ್ಷಕವಾಗಿವೆ. ಸಾಮಾಜಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಲ್ಲಿ ರಾಮಾಯಣವೇ ಪ್ರಮುಖ.
ಕೆಲಾಂಟನ್ನಲ್ಲಿ ನಡೆಯುವ ಬೊಂಬೆಯಾಟದಲ್ಲಿ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬಂದ ನಂತರ ಒಂದು ದಿನ ಸೀತೆ ರಾವಣನ ಚಿತ್ರ ಬರೆದು ರಾಮನಿಗೆ ತೋರಿಸುತ್ತಾಳೆ. ಇದನ್ನು ಕಂಡು ಕೋಪಗೊಂಡ ರಾಮ ಸೀತೆಯ ಕೆನ್ನೆಗೆ ಬಾರಿಸಿ, ತಾಯಿಯ ಮನೆಗೆ ಅಟ್ಟುತ್ತಾನೆ. ರಾವಣನ ನೀಚತನ ವಿವರಿಸಲು ವಾಸ್ತವವಾಗಿ ಸೀತೆ ಆತನ ಚಿತ್ರವನ್ನು ಬರೆದಿದ್ದಳು. ಆದರೆ ಅದನ್ನರಿಯದೇ ರಾಮ ಶಿಕ್ಷಿಸುತ್ತಾನೆ.
ಹೆಣ್ಣಿನ ಮನದ ಭಾವನೆಯನ್ನು ಅರ್ಥಮಾಡಿಕೊಳ್ಳದೆ, ತಪ್ಪು ತಿಳಿದು ಸಾಮಾನ್ಯನಂತೆ ವರ್ತಿಸಿದೆಯಲ್ಲ ಎಂದು ಬೇಸರಿಸಿ ತಾಯಿಯ ಮನೆಗೆ ಸೀತೆ ಹೋಗುತ್ತಾಳೆ. ತನ್ನ ತಪ್ಪನ್ನು ಅರಿತ ರಾಮ ಸೀತೆಯ ಬಳಿ ಕ್ಷಮೆಯಾಚಿಸುತ್ತಾನೆ. ಹೆಣ್ಣಿನ ಮೇಲೆ ಕೈ ಎತ್ತಬಾರದು, ಶಂಕೆ ಪಡಬಾರದು ಎಂದು ಹಲವು ಶರತ್ತುಗಳನ್ನು ಒಡ್ಡಿ ರಾಮನ ಅರಮನೆಗೆ ಮತ್ತೆ ಬರುತ್ತಾಳೆ ಸೀತೆ. ಮುಂದೆ ಸೀತಾ- ರಾಮರು ಸಂತೋಷದಿಂದ ಇರುತ್ತಾರೆ.
ನ್ಯಾಯಕ್ಕಾಗಿ ಹೋರಾಡಿದ ಸೀತೆ ದಿಟ್ಟ ಹೆಣ್ಣು, ನಾಯಕಿ, ಧೈರ್ಯವಂತೆ, ಸತ್ಯವಂತೆ. ರಾಮ ನಾಯಕನಾದರೂ ಅವನೂ ಒಬ್ಬ ಸಾಮಾನ್ಯ ಮನುಷ್ಯ. ಅವನಲ್ಲೂ ಕೆಲವು ದುರ್ಬಲತೆಗಳಿವೆ ಎಂಬುದನ್ನು ಸಾಬೀತು ಪಡಿಸಲು ಈ ನಿದರ್ಶನ ತೋರಿಸುತ್ತಾರೆ. ರಾಮನಿಗಿಂತ ಸೀತೆಯ ಗುಣಗಾನ ಹೆಚ್ಚು. ಹಾಗೆಯೇ ಲಕ್ಷ್ಮಣನಿಗೆ ಬಹಳ ಪ್ರಾಮುಖ್ಯತೆ. ಅವನು ರಾಮನಿಗಿಂತ ಬಹಳ ಧೀರ, ಶೂರ ಮತ್ತು ಸರ್ವರಿಗೂ ಪ್ರಿಯ.
ಇಂಡೋನೇಷಿಯಾ ಮತ್ತು ಮಲೇಷಿಯಾಗಳ ಭಾಷೆಯಲ್ಲಿ ಸಂಸ್ಕೃತದ ಬಳಕೆ ಹೆಚ್ಚು. ಮಲೇಷಿಯಾದಲ್ಲಿ ಮೂಲ ಮಲಯರನ್ನು ಭೂಮಿಪುತ್ರರು ಎಂದು ಕರೆಯುತ್ತಾರೆ. ಆಡಳಿತ ಪ್ರಧಾನ ಕಚೇರಿಗಳಿರುವ ಜಾಗದ ಹೆಸರು ಪುತ್ರಜಯ. ಥೈಲ್ಯಾಂಡಿನ ಗಡಿಯಲ್ಲಿರುವ-ಕೌಲಲಂಪುರದಿಂದ 250 ಕಿ.ಮಿ. ದೂರದಲ್ಲಿರುವ ಪೆರಾಕ್ ಎಂಬಲ್ಲಿ ರಾಮನ ದೊಡ್ದ ದೇಗುಲವಿದೆ. ಇಲ್ಲಿ ಸುಮಾರು 1001ರಾಮಾಯಣದ ಕೆತ್ತನೆಗಳಿವೆ.
ರಾಮಾಯಣ ಭಾರತೀಯರಿಗೆ ಪೂಜ್ಯ ಗ್ರಂಥ. ಭಾರತದ ಉದ್ದಗಲಕ್ಕೂ ವಾಲ್ಮೀಕಿ ರಾಮಾಯಣದ ಮೂಲ ಕಥೆ ಒಂದೇ ಆದರೂ ವಿವಿಧ ಪ್ರಾಂತ್ಯಗಳ ಕಲಾಚಾರಗಳಿಗೆ ತಕ್ಕಂತೆ ಅನೇಕ ಉಪಕಥೆಗಳು ಮೂಲ ಕಥೆಗೆ ಸೇರಿಕೊಂಡಿವೆ. ನಮ್ಮಲ್ಲೇ ಮೂಲಕಥೆ ಆಧಾರಿತವಾಗಿ ಉಪಕಥೆಗಳು ಬೆರೆತಿರುವಾಗ ಇನ್ನು ವಿಭಿನ್ನ ಸಂಸ್ಕೃತಿ, ಭಾಷೆ, ಪರಿಸರಗಳಿಗೆ ತಕ್ಕಂತೆ ರಾಮಾಯಣದಲ್ಲಿ ಉಪಕಥೆಗಳ ಅಳವಡಿಕೆ, ಅನುಕರಣೆ ಬೇರೆ. ಈ ವಿಷಯಗಳು ಹೊಸರೀತಿಯಲ್ಲಿ ಕಂಡಾಗ ಆಶ್ಚರ್ಯ ಎನಿಸಿತು. ನಮ್ಮ ರಾಮಾಯಣದ ಬಗ್ಗೆ ಇತರ ದೇಶಗಳಲ್ಲಿನ ವ್ಯತ್ಯಾಸ ತಿಳಿದುಕೊಳ್ಳುವ ಕುತೂಹಲವೇ ಈ ಲೇಖನಕ್ಕೆ ನಾಂದಿಯಾಯಿತು.
ರಾಮನವಮಿ, ಹನುಮ ಜಯಂತಿ ಎಂದರೆ ಬಾಯಲ್ಲಿ ನೀರೂರಿಸುವ ಮಜ್ಜಿಗೆ, ಕೋಸಂಬರಿ, ಪಾನಕ, ಪಾಯಸಗಳು. ಹಲವೆಡೆಗಳಲ್ಲಿ ರಾಮಾಯಣ ಪ್ರವಚನ, ಸಂಗೀತ ಕಚೇರಿಗಳ ಸುಗ್ಗಿ. ರಾಮ- ಹನುಮರಿಲ್ಲದ ಸ್ಥಳವೇ ಇಲ್ಲ. ರಾಮನಾಮ ಪಾಯಸದ ಸವಿ ಇರುವೆಡೆಯಲ್ಲಿ ಸವಿಯೋ ಸವಿ...
(ಮಾಹಿತಿ ಸಂಗ್ರಹಣೆ : ಟಿ.ವಿ. ಮಾಧ್ಯಮ, ಅಂತರ್ಜಾಲದಲ್ಲಿ ಸಂಗ್ರಹಿಸಿದ ವಿಷಯಗಳು)