ರಾಮಾಯಣದ ಜೀವನ ಪಾಠಗಳು ಮತ್ತು 2024ರ ಲೋಕಸಭಾ ಚುನಾವಣಾ ಫಲಿತಾಂಶಗಳು

ರಾಮಾಯಣದ ಜೀವನ ಪಾಠಗಳು ಮತ್ತು 2024ರ ಲೋಕಸಭಾ ಚುನಾವಣಾ ಫಲಿತಾಂಶಗಳು

ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕರಣೀಯ ಗುಣಗಳೆಲ್ಲವೂ ಮನೆಮಾತಾಗಿವೆ. ಆ ಮಹಾಕಥನದಿಂದ ನಾವು ಕಲಿಯಬೇಕಾದ ಜೀವನ ಪಾಠಗಳು ಹಲವು. ಈಗಿನ ಬದುಕಿಗೆ ಪ್ರಸ್ತುತವಾದ ಒಂದು ಪಾಠವಂತೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ್ದು.

ಅದೇನು? ಮಹಾರಾಜ ದಶರಥನು "ಶ್ರೀ ರಾಮನಿಗೆ ನಾಳೆ ಪಟ್ಟಾಭಿಷೇಕ" ಎಂದು ಘೋಷಿಸಿದ ದಿನ ಏನಾಯಿತೆಂದು ನೆನಪು ಮಾಡಿಕೊಳ್ಳೋಣ. ಭರತನ ತಾಯಿ ಕೈಕೇಯಿಯ ದಾಸಿ ಮಂಥರೆ ಧಾವಿಸಿ ಬಂದು, ಕೈಕೇಯಿಗೆ ಆ ಸುದ್ದಿ ತಿಳಿಸುತ್ತಾಳೆ. "ಹೌದೇನು! ನಾನು ಭರತನಿಗಿಂತಲೂ ಹೆಚ್ಚಾಗಿ ಶ್ರೀ ರಾಮನನ್ನು ಪ್ರೀತಿಸುತ್ತೇನೆ. ಅವನಿಗೆ ನಾಳೆ ಪಟ್ಟಾಭಿಷೇಕ ಆಗುವುದು ಸಂತೋಷದ ಸಂಗತಿ" ಎನ್ನುತ್ತಾಳೆ ಕೈಕೇಯಿ.

ಆದರೆ, ಅದಾಗಲೇ ದುಷ್ಟ ಯೋಚನೆಗಳಲ್ಲಿ ಮುಳುಗಿದ್ದ ಮಂಥರೆ, ಶುದ್ಧ ಮನಸ್ಸಿನ ಕೈಕೇಯಿಯ ತಲೆಯಲ್ಲಿ ಅವನ್ನು ತುಂಬಲು ಶುರು ಮಾಡುತ್ತಾಳೆ. "ಶ್ರೀ ರಾಮ ರಾಜನಾದರೆ, ಅವನ ತಾಯಿ ಕೌಸಲ್ಯೆಯ ದಾಸಿಯರು ನಿನ್ನನ್ನು ಹೀನಾಯವಾಗಿ ಕಾಣುತ್ತಾರೆ. ನಿನ್ನ ಮಗ ಭರತನಿಗಂತೂ ಭವಿಷ್ಯವೇ ಇರುವುದಿಲ್ಲ" ಎಂಬಂತಹ ಮಾತುಗಳಿಂದ ಮತ್ತೆಮತ್ತೆ ಚುಚ್ಚುತ್ತಾಳೆ. ಅವನ್ನು ಕೇಳಿಕೇಳಿ ಕ್ರಮೇಣ ಕೈಕೇಯಿಯ ತಲೆಯಲ್ಲೂ ವಿಷ ತುಂಬಿಕೊಳ್ಳುತ್ತದೆ. "ಹಾಗಾದರೆ ನಾನೀಗ ಏನು ಮಾಡಬೇಕು?" ಎಂದು ಕೇಳುತ್ತಾಳೆ ಕೈಕೇಯಿ.

ಇದೇ ಅವಕಾಶಕ್ಕಾಗಿ ಕಾದಿದ್ದ ಮಂಥರೆ ತಕ್ಷಣವೇ ವಿಷಭರಿತ ಸಲಹೆ ನೀಡುತ್ತಾಳೆ, "ಅಂದೊಮ್ಮೆ ದಶರಥ ಮಹಾರಾಜನಿಗೆ ಯುದ್ಧದಲ್ಲಿ ನೀನು ಸಹಾಯ ಮಾಡಿದ್ದೆ. ಆಗ ನಿನಗೆ ಎರಡು ವರ ನೀಡುವುದಾಗಿ ಮಹಾರಾಜ ಮಾತು ಕೊಟ್ಟಿದ್ದ. ಅವನ್ನು ನೀನು ಈಗ ಕೇಳು. ಮೊದಲನೆಯದು ಭರತನಿಗೆ ನಾಳೆ ಪಟ್ಟಾಭಿಷೇಕ ಮಾಡಬೇಕೆಂದು; ಎರಡನೆಯದು ಶ್ರೀ ರಾಮ ಹದಿನಾಲ್ಕು ವರುಷಗಳ ವನವಾಸಕ್ಕೆ ನಾಳೆಯೇ ಹೊರಡಬೇಕೆಂದು."

ಅದೇ ದಿನ ರಾತ್ರಿ, ದಶರಥ ಮಹಾರಾಜ ಕೈಕೇಯಿಯ ಬಳಿ ಬಂದಾಗ, ಆಕೆ ಇವೆರಡು ವರಗಳನ್ನು ಕೇಳುತ್ತಾಳೆ. ದಶರಥ ಮಹಾರಾಜ ಕುಸಿದು ಬೀಳುತ್ತಾನೆ. ಆತ ಕೈಕೇಯಿಯ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ, "ಭರತನಿಗೆ ಬೇಕಾದರೆ ಪಟ್ಟಾಭಿಷೇಕ ಮಾಡೋಣ. ಆದರೆ, ಶ್ರೀ ರಾಮ ವನವಾಸಕ್ಕೆ ಹೋಗಬೇಕೆಂಬ ಪ್ರಸ್ತಾಪ ಹಿಂತೆಗೆದುಕೊ. ಯಾಕೆಂದರೆ ನಾನು ಶ್ರೀ ರಾಮನನ್ನು ಬಿಟ್ಟು ಬದುಕಿರಲಾರೆ." ಆದರೆ ಕೈಕೇಯಿ ತನ್ನ ಹಠ ಸಾಧಿಸುತ್ತಾಳೆ.

ಮುಂದೇನಾಯಿತೆಂಬುದು ನಮಗೆಲ್ಲರಿಗೂ ಕಣ್ಣಿಗೆ ಕಟ್ಟಿದಂತಿದೆ. ತಂದೆಯ ಮಾತಿನ ಪಾಲನೆಗಾಗಿ ಶ್ರೀ ರಾಮ ವನವಾಸಕ್ಕೆ ಹೊರಡುತ್ತಾನೆ. ಪತ್ನಿ ಸೀತೆ ಅವನನ್ನು ಹಿಂಬಾಲಿಸುತ್ತಾಳೆ. ತಮ್ಮ ಲಕ್ಷ್ಮಣನೂ ಹೋಗುತ್ತಾನೆ. ರಾಜನಾಗಬೇಕಾಗಿದ್ದ ಪುತ್ರ ಶ್ರೀ ರಾಮ ಕಾಡಿನ ಪಾಲಾದ ದುಃಖ ಸಹಿಸಲಾಗದೆ ದಶರಥನ ಮರಣ. ರಾಜ್ಯದ ಸಿಂಹಾಸನವೇರಲು ಸುತಾರಾಂ ಒಪ್ಪದ ಭರತ, ಶ್ರೀ ರಾಮನ ಪಾದುಕೆಗಳನ್ನು ತಂದಿಟ್ಟು, ಶ್ರೀ ರಾಮನ ಹೆಸರಿನಲ್ಲೇ ರಾಜ್ಯವಾಳುತ್ತಾನೆ.  

ಶ್ರೀ ರಾಮ ವನವಾಸಕ್ಕೆ ತೆರಳಿದ ಸಂದರ್ಭವನ್ನು ಪರಿಶೀಲಿಸೋಣ. ಸಂಭ್ರಮ ತುಂಬಿತುಳುಕಾಡುತ್ತಿದ್ದ ಅಯೋಧ್ಯೆ ದುಃಖದ ಕಡಲಿನಲ್ಲಿ ಮುಳುಗುತ್ತದೆ. ಅಯೋಧ್ಯೆಯ ಜನರೆಲ್ಲಾ ಸರಯೂ ನದಿಯ ವರೆಗೆ ಶ್ರೀ ರಾಮನನ್ನು ಹಿಂಬಾಲಿಸುತ್ತಾರೆ. ರಾತ್ರಿ ಕಳೆದು ಬೆಳಗಾಗುವಾಗ ಅಯೋಧ್ಯೆ ಎಂಬ ಸಮೃದ್ಧ ರಾಜ್ಯದ ರಾಜಧಾನಿಯಲ್ಲಿ ಎಲ್ಲವೂ ತಲೆಕೆಳಗಾಗಿತ್ತು. ಗಮನಿಸಿ: ಒಬ್ಬಳು ನೀಚ ಬುದ್ಧಿಯ ದುಷ್ಟ ವ್ಯಕ್ತಿಯ ಕುತಂತ್ರದಿಂದಾಗಿ ಮಹಾಸಾಮ್ರಾಜ್ಯ, ಮಹಾರಾಜ, ಮಹಾಮಂತ್ರಿ, ಮಹಾಸೇನಾನಿ ಸಹಿತ ಸಮಾಜ ಹಾಗೂ ಆಡಳಿತ ವ್ಯವಸ್ಥೆ ಅಸಹಾಯಕವಾಗಿ ತತ್ತರಿಸಿ ಹೋಯಿತು.

ಶ್ರೀ ರಾಮಾಯಣದ ಹತ್ತುಹಲವು ಜೀವನ ಪಾಠಗಳ ಜೊತೆಗೆ ಇಂತಹ ಪಾಠಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ ಅಲ್ಲವೇ? ಅಂದರೆ, ದೊಡ್ಡ ಸಂಸ್ಥೆ, ಕಂಪೆನಿ, ಆಡಳಿತ ವ್ಯವಸ್ಥೆ ಅಥವಾ ದೇಶವನ್ನು ಬುಡಮೇಲು ಮಾಡಲು ವಿಷಪೂರಿತ ಯೋಚನೆ ತುಂಬಿದ ಯಾವುದೇ ಸ್ತರದ ಒಬ್ಬ ವ್ಯಕ್ತಿ ಸಾಕು. ಅಂತಹ ದುಷ್ಟ ಯೋಚನೆಗಳನ್ನು ಶುದ್ಧ ಮನಸ್ಸಿನವರಲ್ಲಿ ತುಂಬಿ, ದುಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸಲು ತಯಾರು ಮಾಡುವ (ಅಂದರೆ ಬ್ರೈನ್ ವಾಷ್ ಮಾಡುವ) ಅಪಾಯಕಾರಿ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ, ಅಲ್ಲವೇ? ಆದ್ದರಿಂದ ಅಂಥವರ ಜೊತೆ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು.

ಈ ಮಾರ್ಗದರ್ಶಿ ಸೂತ್ರವು ಪ್ರತಿಯೊಬ್ಬರೂ ಜೀವಮಾನವಿಡೀ ನೆನಪಿಟ್ಟುಕೊಂಡು ಅನುಸರಿಸಬೇಕಾದ ಸೂತ್ರ ಎಂಬುದಕ್ಕೆ 4 ಜೂನ್ 2024ರಂದು ಪ್ರಕಟವಾದ ಭಾರತದ ಲೋಕಸಭಾ ಚುನಾವಣೆಯ ಫಲಿತಾಂಶಗಳು ಅತಿ ದೊಡ್ಡ ಪುರಾವೆ, ಅಲ್ಲವೇ?

ಫೋಟೋ: ಶ್ರೀರಾಮ ಮತ್ತು ಸೀತಾದೇವಿಯ ಪ್ರಾಚೀನ ಶಿಲ್ಪ … ಕೃಪೆ: ರೆಡ್ಡಿಟ್