ರಾಮಾಯಣ ಮತ್ತು ಮಹಾಭಾರತ

ರಾಮಾಯಣ ಮತ್ತು ಮಹಾಭಾರತ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ ಎಂ ಕೃಷ್ಣ ಭಟ್
ಪ್ರಕಾಶಕರು
ಕೆ ಎಂ ಕೃಷ್ಣ ಭಟ್, ಪಿಂಟೋ ಲೇನ್, ಕರಂಗಲ್ಪಾಡಿ, ಮಂಗಳೂರು - ೫೭೫೦೦೩
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೧೮

ಕೆ ಎಂ ಕೃಷ್ಣ ಭಟ್ ಇವರು ‘ರಾಮಾಯಣ ಮತ್ತು ಮಹಾಭಾರತ' ಎನ್ನುವ ಕುತೂಹಲ ಕೆರಳಿಸುವ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಕುರಿತಾದ ಕೆಲವು ಸಂಶಯಗಳು, ದೃಷ್ಟಿಕೋನಗಳು, ಅಭಿಪ್ರಾಯ ಭೇದಗಳನ್ನು ವಿಮರ್ಶೆ ಮಾಡುವ ಪ್ರಯತ್ನ ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ. ಲೇಖಕರು ಸ್ವತಃ ಹಿರಿಯ ನ್ಯಾಯವಾದಿಗಳಾಗಿರುವುದರಿಂದ ಪ್ರತಿಯೊಂದು ವಿಷಯಕ್ಕೂ ಇನ್ನೊಂದು ಬಗೆಯ ತರ್ಕವೂ ಇರಬಹುದು ಎನ್ನುವ ಯೋಚನೆ ಮಾಡಿದ್ದಾರೆ. ಅವರೇ ತಮ್ಮ ‘ಒಂದು ಮಾತು' ಎನ್ನುವ ಬರಹದಲ್ಲಿ ಬರೆದಂತೆ “ರಾಮಾಯಣದ ಬಗ್ಗೆ ಪ್ರವಚನ ನೀಡುತ್ತಾ ಸ್ವಾಮೀಜಿಯೊಬ್ಬರು ಕೈಕೇಯಿ , ಮಂಥರೆ ಬಗ್ಗೆ ಬಾಯಿ ತುಂಬಾ ದೂಷಣೆಯ ಮಳೆ ಕರೆದರು. ರಾವಣ ಅತ್ಯಂತ ಕುರೂಪಿ ಎಂದರು. ಸಾಮಾನ್ಯವಾಗಿ ನಮ್ಮಲ್ಲಿ ಇದೇ ನಂಬಿಕೆ ಇದೆ. ರಾಮಾಯಣದ ಉದ್ದೇಶ ಸಾಧನೆಗೆ ಸಾಧನರೂಪವಾದ ಕೈಕೇಯಿ ಮತ್ತು ಮಂಥರೆಯ ಪಾತ್ರದ ಬಗ್ಗೆ ನಿಮಿತ್ತ ಮಾತ್ರರಾದ ಅವರ ಬಗ್ಗೆ ವಾಲ್ಮೀಕಿ ಮಹರ್ಷಿಗಳು ಏನು ಬರೆದಿದ್ದಾರೆ ಎಂದು ತಿಳಿಯುವ ಕುತೂಹಲ ನನ್ನದಾಯಿತು. ಹಾಗೆ ವಾಲ್ಮೀಕಿ ರಾಮಾಯಣವನ್ನು ಓದಿದೆ. ಮಹಾಭಾರತದ ಕಥೆಯನ್ನು ತಕ್ಕಮಟ್ಟಿಗೆ ತಿಳಿದಿದ್ದ ನನಗೆ ಎರಡೂ ಮಹಾನ್ ಗ್ರಂಥಗಳಲ್ಲಿ ಕೆಲವು ಅಂಶಗಳು ಸಮಾನವಾಗಿ (ಒಂದೇ ರೀತಿಯಾಗಿ), ಕೆಲವು ಕಥೆಗಳು ಯಥಾವತ್ತಾಗಿ ಇರುವುದು ಗಮನಕ್ಕೆ ಬಂತು. ಹಾಗೆ ಮಹಾಭಾರತವನ್ನು ಓದಿದೆ. ಇಂತಹ ಅಂಶಗಳನ್ನು ಗುರುತುಹಾಕಿಕೊಂಡೆ. ಇದೇ ಯೋಚನೆ ಮನದಲ್ಲಿ, ತಲೆಯಲ್ಲಿ ತುಂಬಿತು. ಅದನ್ನು ಬರೆಯಲೇ ಬೇಕು ಎಂಬ ಒತ್ತಡ ಮನಸ್ಸಿನಲ್ಲಿ ಕಾಡುತ್ತಿತ್ತು. ಅದುವೇ ಈ ಪುಸ್ತಕ ಬರೆಯುವ 'ಸಾಹಸ'ಕ್ಕೆ ಪ್ರೇರಣೆ" ಎನ್ನುತ್ತಾರೆ.

ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ವಿಮರ್ಶಕರೂ, ಲೇಖಕರೂ ಆದ ಎಸ್ ಆರ್ ವಿಜಯಶಂಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗವನ್ನು ಪುಸ್ತಕದ ಬೆನ್ನುಡಿಯಲ್ಲೂ ಮುದ್ರಿಸಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ..." ಕೃಷ್ಣ ಭಟ್ಟರು ಮಹಾಭಾರತದ ಬಗ್ಗೆ ಒಂದೆರಡು ಮಾತುಗಳನ್ನು ಹೇಳುತ್ತಾ ‘ರಾಮಾಯಣವು ಸೂರ್ಯವಂಶದ ಕಥೆ. ಮಹಾಭಾರತವು ಚಂದ್ರವಂಶದ ಕಥೆ. ಸೂರ್ಯ-ಚಂದ್ರ ಇಬ್ಬರೂ ಲೋಕಕ್ಕೆ ಬೆಳಕು ನೀಡುವಂತೆ, ರಾಮಾಯಣ-ಮಹಾಭಾರತಗಳು ಲೋಕಕ್ಕೆ ಜ್ಞಾನದಬೆಳಕನ್ನು ನೀಡುತ್ತವೆ.’ ಎನ್ನುತ್ತಾರೆ. ತಾವು ಕಂಡ ಜ್ಞಾನದ ಬೆಳಕನ್ನು ನೀವೂ ನೋಡಿ ಎಂದು ಓದುಗರನ್ನು ಪ್ರೇರೇಪಿಸುವ ಕೃತಿ ಇದು... ‘ಅರ್ಥಸ್ಯ ಪುರುಷೋ ದಾಸಃ’ ಲೇಖನದಲ್ಲಿ ..ಗ಼ಣಪತಿಗೆ ಇಲಿ, ಶಿವನಿಗೆ ನಂದಿ... ಧನ ಸಂಪತ್ತಿಗೆ ಅಧಿಪತಿಯಾದ ಕುಬೇರನಿಗೆ ಯಾವ ವಾಹನ? ಎಂದು ಪ್ರಶ್ನಿಸಿ, ಅವರು ಕುಬೇರನ ವಾಹನ ಮನುಷ್ಯ. ‘ನರವಾಹನ' ಎಂಬುದು ಕುಬೇರನ ಹೆಸರುಗಳಲ್ಲಿ ಒಂದು ಎಂಬುದನ್ನು ನೆನಪಿಸುತ್ತಾರೆ. 

ನರವಾಹನ ರೂಪಕದಲ್ಲಿ ಸಾವಿರ ಪುಟಗಳನ್ನು ಅರ್ಥಶಾಸ್ತ್ರ, ತತ್ವಶಾಸ್ತ್ರ ವಿವರಗಳನ್ನು ಬರೆಯಬಹುದೆಂದು ಬೇರೆ ಹೇಳಬೇಕಾಗಿಲ್ಲ. ಕೃಷ್ಣ ಭಟ್ಟರ ಸೂಕ್ಷ್ಮಾವಲೋಕನಕ್ಕೆ ಇದೊಂದು ಉದಾಹರಣೆ. ... ಮಹಾಭಾರತ-ರಾಮಾಯಣಗಳ ಹಲವು ಸಂದರ್ಭಗಳನ್ನು ಜೊತೆಯಾಗಿ ಇರಿಸಿಕೊಂಡು ಹೋಲಿಕೆ ಮೂಲಕ ಹೊಸ ಅಂಶವೊಂದನ್ನು ಗ್ರಹಿಸಿ ವಿವರಿಸುವುದು, ಅವರ ಅಧ್ಯಯನದ ಆಸಕ್ತಿಯ ಜೊತೆಗೆ ಪುರಾಣಗಳ ಬಗೆಗಿನ ಒಳನೋಟಗಳನ್ನು ತೋರಿಸುತ್ತದೆ.

‘ಕೈಕೇಯಿ ಮತ್ತು ಮಂಥರೆ ಅಪರಾಧಿಗಳೇ?’’ದಶಕಂಠನಿಗೆ ಹತ್ತು ತಲೆಗಳೇ?’ ‘ಅಮರತ್ವವು ಒಂದು ವರವೇ?’ ಇಂತಹ ಲೇಖನಗಳಲ್ಲಿ ಮಾಹಿತಿ ಸಂಗ್ರಹ ಹಾಗೂ ಸಮರ್ಥವಾದ ವಾದ - ಪ್ರತಿಪಾದನೆಯಿಂದ ಸತ್ಯದ ಒಂದು ಮುಖವನ್ನು ಕಾಣಿಸುವ ಪ್ರಯತ್ನವಿದೆ. ‘ಲಕ್ಷ್ಮಣ ರೇಖೆ' ಮೊದಲಾದ ಬರಹಗಳಲ್ಲಿ ಲಲಿತ ಪ್ರಬಂಧದ ಶೈಲಿ ಇದೆ. ಇದೊಂದು ಸದಾಶಯದ ಬರಹ.” 

ಈ ಕೃತಿಯ ಅನುಕ್ರಮಣಿಕೆಯನ್ನು ಮೂರು ಭಾಗಗಳಲ್ಲಿ ವಿಂಗಡನೆ ಮಾಡಿದ್ದಾರೆ. ಮೊದಲ ಭಾಗ ರಾಮಾಯಣ, ಎರಡನೇ ಭಾಗ ಮಹಾಭಾರತ ಮತ್ತು ಮೂರನೇ ಭಾಗದಲ್ಲಿ ರಾಮಾಯಣ ಮತ್ತು ಮಹಾಭಾರತ ಬಗ್ಗೆ ವಿಮರ್ಶಾತ್ಮಕ ಪ್ರಬಂಧಗಳನ್ನು ಪ್ರಕಟ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ರಾಮಾಯಣ ಮತ್ತು ಮಹಾಭಾರತದ ಕವಿ, ಕಾಲ ಮತ್ತು ಕಾವ್ಯ, ಹೆಸರು, ರಾಜ್ಯಾಡಳಿತ ಬಗ್ಗೆ ಮಾಹಿತಿ ಇದೆ. ಪುಸ್ತಕದಲ್ಲಿನ ಅಧ್ಯಾಯಗಳು ದೀರ್ಘವಾಗಿರದೆ ಸಣ್ಣದಾಗಿರುವುದರಿಂದ ಸುಲಲಿತವಾಗಿ ಓದಲು ಸಾಧ್ಯ. ೧೨೪ ಪುಟಗಳ ಈ ಕೃತಿಯು ರಾಮಾಯಣ ಮತ್ತು ಮಹಾಭಾರತದ ನಾವು ನೋಡಿರದ ಆಯಾಮಗಳ ಕುರಿತು ಬೆಳಕು ಚೆಲ್ಲುತ್ತದೆ.