ರಾಮಾಯಣ : ಸ್ತ್ರೀ ಶೋಷಣೆಯ ಪ್ರತೀಕವೇ ?

ರಾಮಾಯಣ : ಸ್ತ್ರೀ ಶೋಷಣೆಯ ಪ್ರತೀಕವೇ ?

ಬರಹ

ರಾಮಾಯಣವನ್ನು ನೂರಾರು ಕವಿಗಳು ಸಾವಿರಾರು ರೀತಿಯಲ್ಲಿ ಬರೆದಿದ್ದಾರೆ. ಪ್ರತಿ ಕವಿಯ ಬಳಕೆಯಲ್ಲೂ ರಾಮಾಯಣ ಹೊಸ ರೂಪವನ್ನು ಪಡೆದುಕೊಂಡಿದೆ. ಇವಕ್ಕೆಲ್ಲ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ. ಇಲ್ಲಿ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣವನ್ನೇ ಚರ್ಚಿಸುತ್ತೇನೆ.

ರಾಮನಿಗೆ ಸೀತೆಯೆಂದರೆ ತುಂಬಾ ಪ್ರೀತಿಯಂತೆ. ಆಕೆ ಸುಂದರಿ ಎಂಬುದಕ್ಕಿಂತ ತನ್ನ ತಂದೆ ಮೆಚ್ಚಿದ ಸೊಸೆ ಎಂಬುದು ಪ್ರೀತಿಗೆ ಕಾರಣ. ದಿನದಿನಕ್ಕೂ ಸೀತೆಯ ಸೌಂದರ್ಯ ಸದ್ಗುಣಗಳೊಂದಿಗೆ ಉರವಣಿಸುತ್ತಿತ್ತಂತೆ. ರಾಮ ಮತ್ತು ಸೀತೆಯರದು ಭಾರತೀಯ ಪುರಾಣೇತಿಹಾಸಗಳಲ್ಲಿ ಕಂಡುಬರುವ ಏಕೈಕ ಬಾಲ್ಯವಿವಾಹ! ಸೀತೆಗೆ ಮದುವೆಯ ಸಮಯದಲ್ಲಿ ಏಳರಿಂದ ಎಂಟು ವರ್ಷ, ರಾಮನಿಗೆ ಹದಿನಾಲ್ಕೋ ಹದಿನೈದೊ ವಯಸ್ಸು. ಸ್ವಯಂವರದಲ್ಲಿ ಸೀತೆಯನ್ನು ವರಿಸಿದ ಮೇಲೆ ಹನ್ನೆರಡು ವರ್ಷ ಅಯೋಧ್ಯೆಯಲ್ಲಿ ಕಾಲ ಕಳೆದರು. ದಶರಥ ಮಂತ್ರಿಗಳ ಮತ್ತು ಹಿರಿಯರ ಸಮ್ಮತಿ ಪಡೆದು ರಾಮನನ್ನು ಪಟ್ಟಕ್ಕೆ ಏರಿಸುವ ಹೊತ್ತಿಗೆ ಕೈಕೇಯಿಯ ಮಧ್ಯಪ್ರವೇಶವಾಗಿ ರಾಮ ಕಾಡಿಗೆ ಹೋಗಬೇಕಾಗಿ ಬಂತು. ರಾಮನೊಡನೆ ಸೀತೆಯೂ ಹೊರಟು ನಿಂತಾಗ ಕೈಕೇಯಿ ಸೀತೆಯ ಕೈಗೆ ನಾರುಮಡಿಯನ್ನು ತಂದು ಇಡುತ್ತಾಳೆ. ನೆರೆದಿದ್ದ ಎಲ್ಲರಿಗೂ ಇದು ಅಸಹ್ಯವೆನಿಸಿದರೂ ದಶರಥ ಮಹಾರಾಜ ಸುಮ್ಮನಿರಲಾರದೆ "ಕಾಡಿಗೆ ಹೋಗಬೇಕೆಂಬ ಆಜ್ಞೆ ಆಗಿರುವುದು ರಾಮನಿಗೆ ಮಾತ್ರ, ನನ್ನ ಸೊಸೆಗೆ ಆಜ್ಞೆ ಅನ್ವಯಿಸುವುದಿಲ್ಲ. ಆಕೆ ತನಗೆ ಬೇಕಾದ ಸಕಲ ಆಭರಣಗಳನ್ನೂ ಪೀತಾಂಬರಗಳನ್ನೂ ಕೊಂಡೊಯ್ಯಲು ಸ್ವತಂತ್ರಳು" ಎಂದು ಘರ್ಜಿಸುತ್ತಾನೆ. (ಇಂಥ ಘರ್ಜನೆಯನ್ನು ರಾಮನ ವಿಷಯದಲ್ಲಿ ಮೊದಲೇ ಮಾಡಿದ್ದರೆ ರಾಮಾಯಣವೇ ನಡೆಯುತ್ತಿರಲಿಲ್ಲ!)

ರಾವಣನು ಸೋತು ಯುದ್ಧ ಕೊನೆಗೊಂಡಾಗ ವಿಭೀಷಣನು ಸೀತೆಗಾಗಿ ಪುಷ್ಪಕ ವಿಮಾನವನ್ನು ಕಳಿಸಿಕೊಡುತ್ತಾನೆ. ರಾಮನು ಅದನ್ನು ತಿರಸ್ಕರಿಸಿ "ಇಲ್ಲಿರುವ ಲಕ್ಷಾಂತರ ಸೈನಿಕರು ಸೀತೆಗಾಗಿ ಇಲ್ಲಿಯವರೆಗೂ ಬಂದಿದ್ದಾರೆ. ತಾವು ಯಾರಿಗಾಗಿ ಹೊಡೆದಾಡಿದೆವು ಎಂದು ಅವರಿಗೆ ಗೊತ್ತಾಗಬೇಕು. ಅವರೆಲ್ಲಾ ಅವಳನ್ನು ನೋಡಬೇಕು. ಹಾಗಾಗಿ ಅವಳು ಸೈನಿಕರ ಮಧ್ಯೆ ನಡೆದು ಬರಬೇಕು " ಎಂದು ಆದೇಶಿಸುತ್ತಾನೆ. ಸೀತೆ ಹಾಗೆಯೇ ನಡೆದು ರಾಮನನ್ನು ಸೇರುತ್ತಾಳೆ. ತಮ್ಮ ಗುಂಪಿನ ಮಧ್ಯದಲ್ಲಿ ನಡೆದು ಹೋದ ಸೀತೆಗೆ ಭಕ್ತಿಯಿಂದ ಕಪಿಸೈನಿಕರು ನಮಸ್ಕರಿಸುತ್ತಾರೆ. ರಾಮ ತನ್ನ ಬಳಿ ಸೇರಿದ ಸೀತೆಯನ್ನು ಕುರಿತು "ನೀನಿನ್ನು ನನಗೆ ಬೇಕಾಗಿಲ್ಲ. ಹೊರಡು" ಎಂದು ಹೇಳಿಬಿಡುತ್ತಾನೆ. ರಾಮನ ಈ ವರ್ತನೆ ಕಪಿಗಳಲ್ಲಿ ಆಶ್ಚರ್ಯ ಮೂಡಿಸಿದರೆ ಲಕ್ಷ್ಮಣನಿಗೆ ಇಂಗಳದಂತಹ ಕೋಪವನ್ನು ತರಿಸುತ್ತದೆ. ತನ್ನ ಪತಿಗೆ ಬೇಡವಾದ ಮೇಲೆ ನಾನಿನ್ನು ಬದುಕಿರಲಾರೆ ಎಂದು ಸೀತೆ ಅಗ್ನಿಪ್ರವೇಶ ಮಾಡಿ ಆಹುತಿಯಾಗದೇ ಹೊರಬಂದಾಗ ರಾಮ ಅವಳನ್ನು ಸ್ವೀಕರಿಸಿ ಸ್ವದೇಶಕ್ಕೆ ಹಿಂದಿರುಗುತ್ತಾನೆ. ರಾಮನ ಈ ವರ್ತನೆಗೆ ಎರಡು ಕಾರಣಗಳನ್ನು ಕೊಡಲಾಗುತ್ತದೆ.

ಒಂದು; ವಿಷ್ಣುಪುರಾಣ ಹಾಗೂ ಇತರೆ ಪುರಾಣಗಳಲ್ಲಿ ಸೀತೆಯ ಜಾಗೆಯಲ್ಲಿ ಇಂದ್ರನು ಸೀತೆಯ ವೇಷ ಧರಿಸಿ ಕುಳಿತಿದ್ದ. ಸೀತೆ ನಾರದ ಮುನಿಗಳ ಆಶ್ರಮದಲ್ಲಿ ಆಶ್ರಯ ಪಡೆದಿದ್ದಳು ಎಂದು ಬರೆಯಲಾಗಿದೆ. ರಾವಣ ಇನ್ನೊಬ್ಬ ಗಂಡಸಿನೆದುರಿಗೆ ಪ್ರೇಮನಿವೇದನೆ ಮಾಡುವುದು ಎಂಥಾ ರಸಭಂಗವನ್ನುಂಟು ಮಾಡಬಹುದು ಎಂಬ ಕಾರಣದಿಂದ ಕವಿ ಬೇಕೆಂದೇ ಈ ವಿಷಯಯವನ್ನು ಮರೆಮಾಚಿದ್ದಾನೆ. ಅಗ್ನಿದೇವನದು ಒಂದು ರೀತಿಯ ಪೊಸ್ಟ್‍ಮ್ಯಾನ್ ಕೆಲಸ. ಋಷಿಗಳು ಕೊಡುವ ಹವಿಸ್ಸನ್ನು ಅಗ್ನಿದೇವನೇ ತಾನೆ ದೇವತೆಗಳಿಗೆ ತಲುಪಿಸುವುದು? ಇಲ್ಲೂ ಅಗ್ನಿದೇವನದು ಅದೇ ಕೆಲಸ. ಸೀತೆಯ ವೇಷದಲ್ಲಿದ್ದ ಇಂದ್ರನು ಅಗ್ನಿಪ್ರವೇಶ ಮಾಡಿದಾಗ ಅಗ್ನಿಯ ಮೂಲಕ ನಿಜವಾದ ಸೀತೆ ಹೊರಬಂದಳು ಎಂಬ ವಿವರಣೆ ಇತರೆ ಪುರಾಣಗಳಲ್ಲಿದೆ. ನನಗೆ ಈ ವಿವರಣೆ ತೃಪ್ತಿ ತಂದಿಲ್ಲವಾದ್ದರಿಂದ ಇದನ್ನು ನನ್ನ ಮನಸ್ಸೂ ಒಪ್ಪುತ್ತಿಲ್ಲ. ವಿಷಯ ತಿಳಿದಿರಲಿ ಎಂದು ಇಲ್ಲಿ ಪ್ರಸ್ತಾಪಿಸಿದೆ!

ಇನ್ನೊಂದು ಕಾರಣ ರಾಮ ಸೀತೆಯನ್ನು ಕಾಡಿಗಟ್ಟಿದ ನಂತರದ ಕಥೆಯಲ್ಲಿ ದೊರೆಯುತ್ತದೆ. ರಾಮ ಕೇವಲ ಅಗಸನ ಮಾತನ್ನು ಕೇಳಿಕೊಂಡು ಸೀತೆಯನ್ನು ಕಾಡಿಗಟ್ಟಲಿಲ್ಲ. ಅಗಸನ ಮಾತು ಜನರ ನಡುವೆ ಗುಲ್ಲು ಹುಟ್ಟಲು ಕಾರಣವಾಗಿತ್ತು. ಬೀದಿಬೀದಿಗಳಲ್ಲಿ ಜನರು ಸೀತೆಯ ಬಗ್ಗೆ ಮಾತಾಡಿಕೊಳ್ಳತೊಡಗಿದರು. ಇದು ಸೀತೆಯನ್ನು ಕಾಡಿಗೆ ನೂಕಲೇ ಬೇಕಾದ ಪರಿಸ್ಥಿತಿಯನ್ನು ರಾಮನ ಮುಂದೆ ತಂದಿಟ್ಟಿತು. ಈ ರೀತಿಯ ಕಳಂಕ ಸೀತೆಯ ಮೇಲೆ ಬಂದಾಗ ರಾಮನ ಮುಂದೆ ಮೂರು ದಾರಿಗಳಿದ್ದವು. ಒಂದನೆಯದು ಸುಮ್ಮನೆ ಸೀತೆಯನ್ನು ಜೊತೆಗಿಟ್ಟುಕೊಳ್ಲುವುದು. ಇದು ರಾಮ ಮತ್ತು ಸೀತೆಯರಿಗೆ ಇನ್ನೂ ಅಪಕೀರ್ತಿಯನ್ನೆ ತಂದುಕೊಡುತ್ತಿತ್ತು. ಎಂಥ ಭಂಡಜನ್ಮ ಇವರದು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಇನ್ನೊಂದು ಸಿಂಹಾಸನವನ್ನು ತ್ಯಾಗ ಮಾಡಬೇಕಿತ್ತು. ಸಿಂಹಾಸನವನ್ನು ಬಿಟ್ಟ ಆದರೆ ಕಳಂಕಿತ ಹೆಂಡತಿಯನ್ನು ಬಿಡಲಿಲ್ಲ ಎಂಬ ಅಪವಾದ ಬರುತ್ತಿತ್ತು. ಇನ್ನೊಂದು ದಾರಿಯೆಂದರೆ ಸೀತೆಯ ಪಾವಿತ್ರ್ಯ ಸಿದ್ಧವಾಗುವವರೆಗೂ ಆಕೆ ತನ್ನಿಂದ ದೂರ ಇರುವುದು. ರಾಮ ಮೂರನೆಯದನ್ನು ಆರಿಸಿಕೊಂಡ.

ಸೀತೆಯನ್ನು ದೂರ ಕಳಿಸಬೇಕಾದರೂ ರಾಮ ಎಂತಹ ರಾಜಕೀಯದ ಮೊರೆ ಹೋಗಬೇಕಾಯಿತು ಎಂದು ವಾಲ್ಮೀಕಿ ಕವಿ ವಿವರಿಸುತ್ತಾರೆ. ಸೀತೆಯನ್ನು ಲಕ್ಷ್ಮಣ ಕಾನನದ ನಡುವೆ ಬಿಟ್ಟು ಬರಬೇಕಿತ್ತು. ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಸೀತೆಯನ್ನು ಲಕ್ಷ್ಮಣ ಬಿಟ್ಟು ಬರಬೇಕಿತ್ತು ಏಕೆಂದರೆ ವಾಲ್ಮೀಕಿಗಳಿಗೆ ಸೀತೆಯ ಚಾರಿತ್ರ್ಯದ ಬಗ್ಗೆ ಚೆನ್ನಾಗಿ ಗೊತ್ತು. ಸೀತೆಯ ಶುದ್ಧಚಾರಿತ್ರ್ಯವನ್ನು ನಿರೂಪಿಸಬಲ್ಲವರು ಅವರೊಬ್ಬರೇ. ಅವರು ಆಕೆಯನ್ನು ನೋಡಿಕೊಳ್ಳುತ್ತಾರೆ. ಆದರೆ ಲಕ್ಷ್ಮಣ ತನ್ನ ಅತ್ತಿಗೆಯನ್ನು ವಾಲ್ಮೀಕಿಗಳಿಗೆ ಒಪ್ಪಿಸುವಂತಿರಲಿಲ್ಲ. ಮತ್ತೆ ಜನ ಆಡಿಕೊಳ್ಳುತ್ತಾರೆ! ಅರಮನೆಯ ಬದಲು ಹೆಂಡತಿಯನ್ನು ಆಶ್ರಮದಲ್ಲಿ ಇಟ್ಟಿದ್ದಾನೆ ರಾಮ ಎಂಬ ಮಾತು ಬರುತ್ತದೆ. ಲಕ್ಷ್ಮಣ ವಾಲ್ಮೀಕಿಯ ಆಶ್ರಮದ ಬಳಿ ಸೀತೆಯನ್ನು ಬಿಟ್ಟು ಬರುವುದು ಅವಳನ್ನು ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುವುದು ಇವೆಲ್ಲಾ ಒಂದು ಸಹಜ ಪ್ರಕ್ರಿಯೆಯಂತೆ ನಡೆದು ಹೋಗಬೇಕೆಂಬುದು ರಾಮನ ಇಚ್ಛೆಯಾಗಿತ್ತು. ಲಕ್ಷ್ಮಣನು ತಾನು ಮರೆಯಲ್ಲಿ ನಿಂತು ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ಕರೆದುಕೊಂಡು ಹೋದದ್ದನ್ನು ನೋಡಿದ್ದಾಗಿ ವರದಿ ಮಾಡಿದಾಗಲೇ ರಾಮ ನಿಟ್ಟುಸಿರು ಬಿಟ್ಟದ್ದು.

ರಾಮ ತನ್ನ ದುಃಖವನ್ನು ಯಾರ ಮುಂದೆಯೂ ತೋಡಿಕೊಳ್ಳುವಂತಿರಲಿಲ್ಲ. ರಾಕ್ಷಸರನ್ನು ಸಂಹರಿಸಲು ಹೋದಾಗ ರಾಮ ಕಾಡಿನ ಮಧ್ಯೆ ಒಬ್ಬನೇ ಕೂತು ಹೆಂಡತಿಯನ್ನು ನೆನೆಸಿಕೊಂಡು ಅಳುತ್ತಾನೆ. ನಿನ್ನನ್ನು ನೆನೆಸಿಕೊಂಡು ಅಳುವ ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲ, ನಾನೆಂತಹ ನತದೄಷ್ಟ ಎಂದು ರೋಧಿಸುತ್ತಾನೆ. ಜನರೆದುರಿಗೆ ಅತ್ತರೆ ಹೆಂಡತಿಯನ್ನು ನೆನೆದು ಅಳುತ್ತಾನೆ ಹೆಂಡತಿಯ ವ್ಯಾಮೋಹ ಬಿಟ್ಟಿಲ್ಲ ಎಂದು ಜನ ಬಾಯಿಗೆ ಮತ್ತೊಂದು ಆಹಾರ ಸಿಕ್ಕಂತಾಗುತ್ತದೆ. ಇಡೀ ಜಗತ್ತಿಗೇ ನಿನ್ನ ಚಾರಿತ್ರ್ಯ ಎಷ್ಟು ಶುದ್ಧವಾದುದು ಎಂದು ತೋರಿಸಲಿಕ್ಕಾಗಿ ಅಗ್ನಿಪ್ರವೇಶಕ್ಕೆ ಪ್ರಚೋದಿಸಿದೆ. ಅಷ್ಟು ಘಂಟಾಘೋಷವಾಗಿ ನಿರೂಪಿಸಿದರೂ ಜನ ನಿನ್ನನ್ನು ಸಂದೇಹಿಸಿದರಲ್ಲ ಎಂದು ಪ್ರಲಾಪಿಸುತ್ತಾನೆ.

ಇದಾಗಿ ಲವಕುಶರು ರಾಮನ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕಿದಾಗ ಬಿಡಿಸಿಕೊಳ್ಳಲು ರಾಮನೇ ಸ್ವತಃ ಬರುತ್ತಾನೆ. ಅಷ್ಟರಲ್ಲಾಗಲೇ ಅವನ ತಮ್ಮಂದಿರು ಮಕ್ಕಳ ಕೈಯಲ್ಲಿ ಸೋಲನ್ನುಂಡಿರುತ್ತಾರೆ. ರಾಮ ಮತ್ತು ಅವಳಿ ಮಕ್ಕಳ ನಡುವೆ ಸಂಭಾಷಣೆ ನಡೆಯುತ್ತದೆ. "ಸೀತೆಯನ್ನು ಅರಣ್ಯಕ್ಕೆ ನೂಕಿದ್ದು ಯಾಕೆ?" ಎಂದು ಮಕ್ಕಳು ಕೇಳುತ್ತಾರೆ.

ರಾಮ ಹೇಳುತ್ತಾನೆ "ನಾನು ಧರ್ಮವನ್ನು ಪಾಲನೆ ಮಾಡಬೇಕಿತ್ತು"

"ಎಂತಹ ಧರ್ಮ?"

" ರಾಜಧರ್ಮ! ಮೊದಲು ನಾನು ನನ್ನ ಪ್ರಜೆಗಳಿಗೆ ರಾಜ ನಂತರ ಸೀತೆಗೆ ಪತಿ. ತಮ್ಮನ್ನು ಆಳುತ್ತಿರುವವರ ಬಗ್ಗೆ ಪ್ರಜೆಗಳಿಗೆ ನಂಬಿಕೆ ಇಲ್ಲವಾದರೆ ಉತ್ತಮ ಆಡಳಿತವನ್ನು ನೀಡಲಾಗುವುದಿಲ್ಲ. ಸೀತೆಗಾಗಿ ಸಿಂಹಾಸನವನ್ನು ನಾನು ತ್ಯಜಿಸಿದ್ದರೆ ಸೀತೆಯ ಪಾವಿತ್ರ್ಯವನ್ನು ನಿರೂಪಿಸಲು ಸಾಧ್ಯವಾಗುತ್ತಿರಲಿಲ್ಲ."

ಮೇಲೆ ನಾನು ಹೇಳಿರುವುದು ಮೂಲ ವಾಲ್ಮೀಕಿ ರಾಮಾಯಣದ ತುಣುಕುಗಳು. ಕವಿ ವಾಲ್ಮೀಕಿಯ ವೈಶಿಷ್ಟ್ಯವೆಂದರೆ ಕಥೆ ಹೇಳುವುದಲ್ಲದೇ ಪ್ರತಿಯೊಬ್ಬರ ಮನಸ್ಸಿನ ಭಾವನೆಗಳು, ದುಗುಡಗಳು, ಸಮಯ ಸಂದರ್ಭಕ್ಕೆ ಅವರವರ ಸ್ವಭಾವಕ್ಕನುಗುಣವಾಗಿ ಬರುವ ಪ್ರತಿಕ್ರಿಯೆಗಳು ಎಲ್ಲವನ್ನೂ ವಿವರಿಸುತ್ತಾರೆ. ಅಷ್ಟೊಂದು ಜನ, ಅಷ್ಟೊಂದು ಸ್ವಭಾವಗಳು, ಅಷ್ಟೊಂದು ಮನಸ್ಥಿತಿಗಳು, ಪ್ರತೀ ಮನಃಸ್ಥಿತಿಗೂ ಸಂದರ್ಭಕ್ಕೆ ತಕ್ಕ ಯೋಚನೆ ಎಲ್ಲ ಸೇರಿ ರಾಮಾಯಣವನ್ನು ಅದ್ಭುತ ಕೃತಿಯನ್ನಾಗಿ ಮಾಡುತ್ತವೆ.

ಕೃಪೆ : ಬನ್ನಂಜೆ ಗೋವಿಂದಾಚಾರ್ಯರ ಪುಸ್ತಕಗಳು ಮತ್ತು ಪ್ರವಚನಗಳು