ರಾಮುಲು ಬಿಜೆಪಿ ಸೇರ್ಪಡೆಯಿಂದ ಯಾರಿಗೆ ಲಾಭ - ಒಂದು ಅವಲೋಕನ
ಲೋಕಸಭಾ ಮಹಾಸಮರ ಸಮಿಪಿಸುತ್ತಿದ್ದಂತೆ ದೇಶದ ರಾಜಕೀಯ ವಲಯದಲ್ಲಿ ಮಿಂಚಿನ ಸಂಚಾರವಾಗುತ್ತಿದೆ. ಮೋದಿ ನೇತೃತ್ವದಲ್ಲಿ ಕೇಸರಿ ಪಡೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತಮ್ಮ ತಮ್ಮ ಅದೃಷ್ಟ ಪರಿಕ್ಷೆಗೆ ಸಿದ್ಧವಾಗುತ್ತಿವೆ. ಈ ಸಲದ ಚುನಾವಣೆ ಹಲವು ಕಾರಣಗಳಿಂದ ಗಮನಸೆಳೆಯುತ್ತಿದೆ. 2002 ರ ಗುಜರಾತ್ ಗಲಭೆಯ ವಿಷಯದಿಂದ ಮಾಧ್ಯಮಗಳ ಮತ್ತು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾದ್ದ ನರೇಂದ್ರ ಮೋದಿ ಹಲವು ಪ್ರಕರಣಗಳಲ್ಲಿ ನಿರ್ಧೋಷಿ ಎಂದು ಸಾಭೀತಾಗಿ ಈಗ ಕೇಸರಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದರೆ, ಅತ್ತ ಗಾಂಧಿ ವಂಶದ ಯುವರಾಜ ಮೋದಿಗೆ ಸವಾಲೊಡ್ಡಲು ಸಿದ್ಧನಾಗಿದ್ದಾನೆ. ಆನೆ ನಡೆದಿದ್ದೆ ದಾರಿ ಎನ್ನುವಂತೆ ಮೋದಿ ಹೊದಲೆಲ್ಲ ಜನಸಾಗರವೇ ನೆರೆಯುತ್ತಿದೆ. ಅತ್ತ ರಾಹುಲ್ ಗಾಂಧಿ ನಡೆಸುವ ಸಭೆಗಳು ಜನರಿಲ್ಲದೆ ಬಣಗುಡುತ್ತಿವೆ. ಆದರೂ ರಾಹುಲ್ ಗಾಂಧಿಯನ್ನು ನಿರ್ಲಕ್ಷಿಸುವಂತಿಲ್ಲ. ಮೋದಿಯನ್ನು ರಾಜಕೀಯವಾಗಿ ಶತಾಯ ಗತಾಯ ಮುಗಿಸಲೇಬೇಕೆಂಬ ಹುನ್ನಾರದೊಂದಿಗೆ ಹಲವರು ಅಪವಿತ್ರ ಮೈತಿಗೆ ಮುಂದಾಗಿರುವುದು ಕಂಡು ಬರುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮೋದಿ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಮೋದಿಗೆ ಸಿಗುತ್ತಿರುವ ಜನಬೆಂಬಲವನ್ನು ಗಮನಿಸಿದರೆ ಎನ್ಡಿಎ 2014ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಇದನ್ನು ಗಮನಿಸಿ ಹಲವಾರು ಪ್ರಾದೇಶಿಕ ಪಕ್ಷಗಳು ಎನ್ಡಿಎನತ್ತ ಮುಖಮಾಡಿವೆ. ಮೋದಿಗೆ ಶಕ್ತಿ ತುಂಬಲು ಹಿಂದೆ ಬಿಜೆಪಿ ತೊರೆದ ಹಲವರು ಮತ್ತೆ ಮಾತೃಪಕ್ಷಕ್ಕೆ ಮರಳುತ್ತಿದ್ದಾರೆ.
ಕರ್ನಾಟದಲ್ಲಿಯೂ ವಿವಿಧ ಲೆಕ್ಕಾಚಾರಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತೊಡಗಿಕೊಂಡಿವೆ. ಮೋದಿಯನ್ನು ಪ್ರಧಾನಿ ಸ್ಥಾನದಲ್ಲಿ ನೋಡಲೇಬೇಕೆಂಬ ಪ್ರಖರ ಸಂಕಲ್ಪದೊಂದಿಗೆ ಹೊಸ ಉತ್ಸಾಹದೊಂದಿಗೆ ಕರ್ನಾಟಕ ಬಿಜೆಪಿ ಘಟಕ ಯುದ್ದವ್ಯೂಹ ರಚನೆಯಲ್ಲಿ ತೊಡಗಿದೆ. 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿಯಲು ಕಾರಣರಾಗಿದ್ದ ಯಡಿಯೂರಪ್ಪ ಬಿಜೆಪಿಗೆ ಮರಳಿದ್ದು, ಬಿಜೆಪಿಗೆ ಭೀಮ ಬಲ ಬಂದಂತಾಗಿದೆ. ಆದರೆ ಬಿಜೆಪಿಗೆ ಇನ್ನೊಬ್ಬ ಮುಖ್ಯ ನಾಯಕನ ಕೊರತೆ ಮುಖ್ಯವಾಗಿ ಎದ್ದು ಕಾಣುತ್ತಿದೆ. ಅದು ಬಳ್ಳಾರಿ ಶಾಸಕ ಶ್ರೀರಾಮುಲುವಿನದ್ದು. 2008ರಲ್ಲಿ ಬಿಜೆಪಿ ಧಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ವಿಜಯಪತಾಕೆ ಹಾರಿಸುವಲ್ಲಿ ಬಳ್ಳಾರಿ ಗಣಿಧಣಿಗಳ ಕೊಡುಗೆ ಮುಖ್ಯವಾದ್ದು. ಜನಾರ್ಧನ ರೆಡ್ಡಿ ನೇತೃತ್ವದ ಗುಂಪಿನ ರಾಜಕೀಯ ತಂತ್ರಗಾರಿಕೆಗಳು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಫಲವಾದವು. ಆದರೆ ಗಣಿ ಹಗರಣದಲ್ಲಿ ಸಿಲುಕಿ ಜನಾರ್ಧನ ರೆಡ್ಡಿ ಜೈಲು ಪಾಲಾದಾಗ ರೆಡ್ಡಿ ಗುಂಪು ಅಕ್ಷರಶಃ ಅನಾತವಾಯಿತು. ಆಗ ಆ ಗುಂಪಿನ ನೇತೃತ್ವ ವಹಿಸಿದವರೇ ಶ್ರೀರಾಮುಲು. ಅಕ್ರಮಗಣಿಗಾರಿಕೆಯಲ್ಲಿ ರಾಮುಲು ಹೆಸರು ನೇರವಾಗಿ ಕೇಳಿ ಬರದಿದ್ದರೂ ಬಿಜೆಪಿ ರಾಮುಲುವನ್ನು ನೇಪತ್ಯಕ್ಕೆ ಸರಿಸಿತು. ಇದರಿಂದ ಮುನಿಸಿಕೊಂಡ ರಾಮುಲು ಬಿಎಸ್ಆರ್ ಕಾಂಗ್ರೆಸ್ ಸ್ಥಾಪಿಸಿ ನಾಲ್ಕು ವಿಧಾನಸಭಾ ಸ್ಥಾನ ಗೆಲ್ಲುವಲ್ಲಿ ಸಫಲರಾದರು.
ಆದರೆ ಇದರ ನೇರ ಹೊಡೆತ ಬಿದ್ದದ್ದು ಬಿಜೆಪಿಗೆ. ಅದೆನೇ ಆಪಾಧನೆಗಳಿದ್ದರೂ ರಾಮುಲುವಿನಲ್ಲಿ ಒಬ್ಬ ಸಮಾಜಮುಖಿ ನಾಯಕನಿದ್ದಾನೆ. ಜನಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯಬಲ್ಲರು ರಾಮುಲು. ಬಡವರ ಬಗ್ಗೆ ಕನಿಕರವಿದೆ. ಯಡಿಯೂರಪ್ಪನವರ ಹಾಗೆ ಶ್ರೀರಾಮುಲುವಿಗೆ ರಾಜ್ಯದಲ್ಲಿ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ವಾಲ್ಮಿಕಿ ಜನಾಂಗದ ಪ್ರಬಲ ನಾಯಕರೂ ಹೌದು. ಆದರೆ ಸ್ವಂತ ಬಲದ ಮೇಲೆ ಲೋಕಸಭಾ ಚುಣಾವನೆಯಲ್ಲಿ ರಾಮುಲು ತಮ್ಮ ಪಕ್ಷವನ್ನು ಮುನ್ನಡೆಸುವುದು ಕಷ್ಟ. ಆದ್ದರಿಂದ ಈಗ ಬಿಜೆಪಿ ಮಾತ್ರ ಅವರಿಗೆ ಆಸರೆಯಾಗಬಲ್ಲದು. ಅದಕ್ಕಿಂತ ಮುಖ್ಯವಾಗಿ ಈಗ ಬಿಜೆಪಿಗೆ ರಾಮುಲುವಿನ ಅವಶ್ಯಕತೆ ಇದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ, ರಾಯಚೂರು, ಗದಗ ಮುಂತಾದ ಕಡೆ ಬಿಜೆಪಿಯ ಸಾಧನೆ ತುಂಭಾ ಕಳಪೆಯಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಮತ್ತೆ ಹಿಡಿತ ಸಾಧಿಸಲು ರಾಮುಲು ಅವಶ್ಯಕತೆ ಇದೆ.
ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಕರ್ನಾಟಕದಲ್ಲಿ ಗೆಲ್ಲಲೇಬೆಕೆಂಬ ಸಂಕಲ್ಪ ಬಿಜೆಪಿಯದ್ದು. ಆದರೆ ಅದು ಅಷ್ಟು ಸುಲಭವಲ್ಲ. ಕರ್ನಾಟಕದಲ್ಲಿ ಬಿಜೆಪಿಗೆ ಹೆಳಿಕೊಳ್ಳುವಂತ ವಿಷಯಗಳಿಲ್ಲ. ಕೇವಲ ಮೋದಿ ಅಲೆಯ ಮೇಲೆ ಮಾತ್ರ ರಾಜ್ಯ ಬಿಜೆಪಿ ಅವಲಂಬಿತವಾಗಿದೆ. ಕರ್ನಾಟಕದಲ್ಲಿ ನಡೆದ ಮೋದಿ ರ್ಯಾಲಿಗಳಲ್ಲಿ ಅಭೂತಪೂರ್ವ ಜನಬೆಂಬಲ ವ್ಯಕ್ತವಾದರೂ ಅವು ಮತಗಳಾಗಿ ಪರಿವರ್ತನೆಯಾಗುತ್ತವೆ ಎಂಬುವುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ. ಮತ ಪರಿವರ್ತನೆ ಮುಖ್ಯವಾಗಿ ಅವಲಂಬಿತವಾಗಿರುವುದು ಸ್ಥಳಿಯ ಪ್ರಾದೇಶಿಕ ನಾಯಕತ್ವದ ಮೇಲೆ. ಹಗರಣಗಳ ಆಪಾಧನೆಯಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಬಿಜೆಪಿ ತೊರೆದಿದ್ದ ಯಡಿಯೂರಪ್ಪನವರನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅದೇ ರೀತಿ ಆಪಾಧನೆಗಳಿಂದಾಗಿ ಬಿಜೆಪಿ ತೊರೆದ ಮತ್ತೊಬ್ಬ ನಾಯಕ ರಾಮುಲು ಬಿಜೆಪಿಗೆ ಬಂದರೆ ಮತ್ತೊಂದು ದೊಡ್ಡ ಶಕ್ತಿ ಬಂದಂತಾಗುತ್ತದೆ.
ರಾಮುಲು ಬಿಜೇಪಿ ಸೇರುವುದು ಇಬ್ಬರಿಗೂ ಲಾಭ. ಬಳ್ಳಾರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಗದಗ, ದಾವಣಗೇರಿ ಮುಂತಾದ ಜಿಲ್ಲೆಗಳಲ್ಲಿ ರಾಮುಲು ಪಡೆ ಇದೆ ಮತ್ತು ದೊಡ್ಡ ಸಂಖ್ಯೆಯಲ್ಲಿರುವ ವಾಲ್ಮಿಕಿ ಜನಾಂಗ ರಾಮುಲು ಹಿಂದೆ ಇದೆ. ಎರಡರಿಂದ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ರಾಮುಲು ಬಿಜೆಪಿಗೆ ಸಹಕಾರಿಯಾಗಬಲ್ಲರು. ಅದೇ ರೀತಿ ರಾಮುಲುವಿಗೂ ಬಿಜೆಪಿಯ ಅವಶ್ಯಕತೆ ಇದೆ. ರಾಜಕೀಯದ ಕವಲು ಧಾರಿಯಲ್ಲಿರುವ ರಾಮುಲುವಿಗೆ ದೊಡ್ಡ ಆಸರೆ ಬಿಜೆಪಿಯಾಗಬಲ್ಲದು. ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ರಾಷ್ಟ್ರ ರಾಜಕಾರಣದ ಅವಕಾಶ ಸಿಗಲಿದೆ. ಮೋದಿ ಸರ್ಕಾರ ರಚನೆಯಾದರೆ ಅದರಲ್ಲಿ ಖಾತೆ ಅಥವಾ ಪಕ್ಷದಲ್ಲಿಯೇ ಉತ್ತಮ ಸ್ಥಾನಮಾನ ದೊರೆಯುವ ಸಂಭವವೂ ಇದೆ. ತಮ್ಮ ನಾಯಕ ಜನಾರ್ಧನ ರೆಡ್ಡಿಯನ್ನು ಸಿಬಿಐ ಕಪಿಮುಷ್ಠಿಯಿಂದ ಹೊರತರಲು ಇದು ಸಹಾಯಕವಾಗಬಹುದು. ಒಟ್ಟಿನಲ್ಲಿ ರಾಜಕೀಯ ಒಂಟಿತನ ಕೊನೆಯಾಗಿ ಮತ್ತೆ ಮುಖ್ಯ ವೇದಿಕೆಗೆ ಬರಬಹುದು.
ರಾಮುಲುವನ್ನು ಬಿಜೆಪಿಗೆ ಬರಮಾಡಿಕೊಳ್ಳಲು ರಾಜ್ಯನಾಯಕರು ಸಿದ್ಧವಾಗಿದ್ದರೂ, ಕೇಂದ್ರ ಬಿಜೆಪಿ ನಾಯಕರ ನಿರ್ಧಾರ ಮಾತ್ರ ಅಂತಿಮ. ರಾಮುಲು ಬಿಜೆಪಿ ಸೇರ್ಪಡೆಯನ್ನು ಮುಖ್ಯವಾಗಿ ವಿರೋಧಿಸುತ್ತಿರುವವರು ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ಯ. ಒಂದು ಕಾಲದಲ್ಲಿ ಗಣಿಧಣಿಗಳ ತಾಯಿಯಂತಿದ್ದ ಸುಷ್ಮಾ, ಅಕ್ರಮ ಗಣಿ ಆರೋಪ ಕೇಳಿ ಬಂದಾಗ ಗಣಿಧನಿಗಳಿಂದ ದೂರವಾಗಿದ್ದರು. ರಾಮುಲು ತಂಡ ಬಿಜೆಪಿಗೆ ಸೇರ್ಪಡೆಗೊಳ್ಳುವುದನ್ನು ಸುಷ್ಮಾ ಸ್ವಾರಾಜ್ಯ ವಿರೋಧಿಸಬಹುದು. ಆದರೆ ಎಲ್ ಕೆ ಅಡ್ವಾಣಿಯವರ ತೀವ್ರ ವಿರೋಧದ ನಡುವೆಯೂ ಯಡಿಯೂರಪ್ಪನವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಎಲ್ ಕೆ ಅಡ್ವಾಣಿಯವರ ಮನವೋಲಿಸುವಲ್ಲಿ ರಾಜ್ಯ ಬಿಜೆಪಿ ನಾಯಕರು ಸಫಲರಾಗಿದ್ದರು. ಈಗ ರಾಮುಲು ವಿಷಯದಲ್ಲಿಯೂ ಕೇಂದ್ರ ನಾಯಕರ ಮನವೊಲಿಸುವಲ್ಲಿ ರಾಜ್ಯ ನಾಯಕರ ಪಾತ್ರ ತುಂಬಾ ಮುಖ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ರಾಮುಲು ಹೇಗೆ ನೆರವಾಗಬಲ್ಲರು ಎಂಬುದನ್ನು ಕೇಂದ್ರ ನಾಯಕರ ಗಮನಕ್ಕೆ ತರಬೇಕಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ರಾಮುಲು ಹೆಸರು ಎಲ್ಲಿಯೂ ನೇರವಾಗಿ ಕೇಳಿ ಬಂದಿಲ್ಲ. ರಾಮುಲುವನ್ನು ಸೇರಿಸಿಕೊಳ್ಳುವುದರಿಂದ ಕಾಂಗ್ರೆಸ್ ಪಕ್ಷದವರ ಬಾಯಿಗೆ ಆಹಾರವಾಗಬೇಕಾಗುತ್ತದೆಂಬ ಹೆದರಿಕೆ ಬೇಡ. ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಡಿ ಕೆ ಶಿವಕುಮಾರ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವುದರಿಂದ ಕಾಂಗ್ರೆಸ್ಸಿಗೆಲ್ಲಿದೆ ನೈತಿಕತೆ?
ಎಲ್ಲ ಒಳ ಜಗಳ, ಗುಂಪುಗಾರಿಕೆ ಮರೆತು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದರೆ ಮಾತ್ರ ಬಿಜೆಪಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯ. ತಡಮಾಡದೆ ರಾಮುಲು ಅವರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡರೆ ಅದು ಬಿಜೆಪಿಗೂ ಲಾಭ, ರಾಮುಲು ಅವರಿಗೂ ಲಾಭ..!
- - ಬಸವರಾಜ ಕುಳಲಿ, ಅಥಣಿ
Comments
ಉ: ರಾಮುಲು ಬಿಜೆಪಿ ಸೇರ್ಪಡೆಯಿಂದ ಯಾರಿಗೆ ಲಾಭ - ಒಂದು ಅವಲೋಕನ
ವಾಸ್ತವಿಕ ವಿಶ್ಲೇಷಣೆ.