ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕ್ರಾಂತಿಕಾರಿಯನ್ನು ನೆನೆಯುತ್ತಾ...!
ಜೂನ್ ೧೧ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕವಿ, ಮಹಾನ್ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮದ ವೀರನ ಜನ್ಮ ದಿನ. ಕೇವಲ ಕ್ರಾಂತಿಕಾರಿಯಾಗಿ ಅಲ್ಲ ಉತ್ತಮ ವಾಗ್ಮಿ, ಕವಿಯಾಗಿಯೂ ರಾಮ್ ಪ್ರಸಾದ್ ಬಿಸ್ಮಿಲ್ ಇವರು ನಮ್ಮ ಮನದಾಳದಲ್ಲಿ ಅಮರರಾಗಿ ಉಳಿಯುತ್ತಾರೆ. ೧೮೯೭ರಲ್ಲಿ ಷಹಜಹಾನಪುರ ಎಂಬಲ್ಲಿ ಮುರಳೀಧರ ಮತ್ತು ಮೋಲಮತಿ ದಂಪತಿಗಳ ಸುಪುತ್ರರಾಗಿ ಜನಿಸುತ್ತಾರೆ. ತಮ್ಮ ತಂದೆಯವರಿಂದ ಹಿಂದಿ ಭಾಷೆಯಲ್ಲಿ ಪರಿಣತಿಯನ್ನು ಪಡೆದು ತಂದೆಯ ಸಲಹೆಯಂತೆ ಮೌಲ್ವಿಯ ಬಳಿ ಉರ್ದು ಭಾಷೆಯನ್ನು ಕಲಿಯುತ್ತಾರೆ. ಆದರೆ ಬ್ರಿಟೀಷರ ವಿರುದ್ಧ ಅವರಿಗೆ ಇನ್ನಿಲ್ಲದ ಕೋಪ ಇತ್ತು. ಆ ಕಾರಣದಿಂದ ಅವರು ಆಂಗ್ಲ ಭಾಷೆಯನ್ನು ಕಲಿಯಲು ಶಾಲೆಗೆ ಹೋಗು ಎಂಬ ತಮ್ಮ ತಂದೆಯ ಮಾತನ್ನು ಧಿಕ್ಕರಿಸುತ್ತಾರೆ. ಸ್ವಾಮೀ ದಯಾನಂದ ಸರಸ್ವತಿಯವರ ಆರ್ಯ ಸಮಾಜವನ್ನು ಸೇರುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಯವರ ಪುಸ್ತಕ ‘ಸತ್ಯಾರ್ಥ ಪ್ರಕಾಶ’ದಿಂದ ಬಿಸ್ಮಿಲ್ ರು ಪ್ರೇರಣೆ ಪಡೆಯುತ್ತಾರೆ ಮತ್ತು ಹಲವಾರು ಕವನಗಳನ್ನು ಬರೆಯುತ್ತಾರೆ.
ಬ್ರಿಟೀಷ್ ಸರಕಾರ ಓರ್ವ ಪಂಡಿತ, ಭಾಯಿ ಪರಮಾನಂದ್ ಅವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಿದ್ದನ್ನು ಗಮನಿಸಿ ಸಿಟ್ಟಿನಿಂದ ‘ಮೇರಾ ಜನಮ್' ಎಂಬ ಕವನವನ್ನು ರಚಿಸುತ್ತಾರೆ. ಆ ಸಮಯ ರಾಮ್ ಪ್ರಸಾದ್ ಅವರಿಗೆ ೧೮ ವರ್ಷ. ಆ ಸಮಯದಲ್ಲೇ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುವ ನಿರ್ಧಾರ ಮಾಡುತ್ತಾರೆ. ಆರ್ಯ ಸಮಾಜದ ವೇದಿಕೆಯಲ್ಲಿ ಅವರಿಗೆ ಸೋಮದೇವರ ಪರಿಚಯವಾಗುತ್ತದೆ. ಅವರ ಅನುಮತಿ ಪಡೆದು ರಾಮ್ ಪ್ರಸಾದರು ಅಮೇರಿಕಾದ ಸ್ವಾತಂತ್ರ್ಯದ ಇತಿಹಾಸ ತಿಳಿಸುವ ‘ಅಮೇರಿಕಾ ಕಿ ಸ್ವತಂತ್ರ ಕಾ ಇತಿಹಾಸ್' ಎಂಬ ಪುಸ್ತಕವನ್ನು ಹೊರ ತರಲು ಬಯಸುತ್ತಾರೆ. ಆದರೆ ಪ್ರಕಟಣೆಯ ನಂತರ ಬ್ರಿಟೀಷ್ ಸರಕಾರ ಅದನ್ನು ನಿಷೇದಿಸುತ್ತದೆ. ಕ್ರಾಂತಿಕಾರಿಗಳಿಂದಷ್ಟೇ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಸಾಧ್ಯ ಎಂದು ರಾಮ್ ಪ್ರಸಾದ್ ಬಿಸ್ಮಿಲ್ ಇವರು ನಂಬಿರುತ್ತಾರೆ. ಅದಕ್ಕಾಗಿ ಅವರು ಮೈತ್ರಿ ವೇದಿ ಎಂಬ ಒಂದು ಸಂಘಟನೆಯನ್ನು ಹುಟ್ಟುಹಾಕುತ್ತಾರೆ. ಶಾಲಾ ಶಿಕ್ಷಕರಾದ ಪಂಡಿತ್ ಗೇಂಡಾ ಲಾಲ್ ದೀಕ್ಷಿತ್ ಇವರ ಜೊತೆ ಸೇರಿ ತಮ್ಮ ಸಂಘಟನೆಯನ್ನು ಬಲಪಡಿಸುತ್ತಾರೆ. ಗೇಂಡಾ ಲಾಲ್ ಇವರಿಗೆ ಸ್ಥಳೀಯ ಗೂಂಡಾಗಳ ಪರಿಚಯವಿತ್ತು. ಅದನ್ನು ಬಳಸಿಕೊಂಡು ರಾಮ್ ಪ್ರಸಾದ್ ಇವರು ಬ್ರಿಟೀಷರ ವಿರುದ್ಧ ಕಹಳೆ ಮೊಳಗಿಸುತ್ತಾರೆ. ಸರಕಾರದ ವಿರುದ್ಧ ‘ದೇಶವಾಸಿಗಳಿಗೆ ಸಂದೇಶ’ (ದೇಶವಾಸಿಯೋಂಕೆ ನಾಮ್ ಸಂದೇಶ್) ಎಂಬ ಕರಪತ್ರವನ್ನು ಹೊರ ತರುತ್ತಾರೆ. ಸರಕಾರದಿಂದ ಇವರನ್ನು ಬಂಧಿಸುವ ಆಜ್ಞೆ ಬರುತ್ತದೆ. ಇವರು ಬಂಧನಕ್ಕೆ ಪೋಲೀಸರು ಬಂದಾಗ ಯಮುನಾ ನದಿಗೆ ಧುಮುಕಿ ಈಜಾಡಿ ಪಾರಾಗುತ್ತಾರೆ. ಆದರೆ ಅವರು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾರೆ ಎಂದು ಪೋಲೀಸರು ಭಾವಿಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಆಗ್ರಾದಲ್ಲಿ ಅವರು ಬಂಧನಕ್ಕೆ ಒಳಗಾಗುತ್ತಾರೆ. ೧೯೧೮ರಲ್ಲಿ ನಡೆದ ಈ ಘಟನೆಯನ್ನು ‘ಮೈನ್ಪುರಿ ಪಿತೂರಿ'ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ. ರಾಮ್ ಪ್ರಸಾದ್ ಬಿಸ್ಮಿಲ್ ಇವರಿಗೆ ಶಿಕ್ಷೆಯಾಗುತ್ತದೆ ಮತ್ತು ೧೯೨೦ರಲ್ಲಿ ಬಿಡುಗಡೆಯಾಗುತ್ತದೆ.
ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುತ್ತೇನೆ ಎಂಬ ಗಾಂಧೀಜಿಯವರ ನಿಲುವಿಗೆ ರಾಮ್ ಪ್ರಸಾದ್ ಇವರ ವಿರೋಧವಿತ್ತು. ಸ್ವರಾಜ್ಯವನ್ನು ನಾವು ಎಂದಿಗೂ ಅಹಿಂಸಾ ಮಾರ್ಗದಿಂದ ಪಡೆಯಲು ಸಾಧ್ಯವಿಲ್ಲ ಎಂಬ ನಿಲುವಿನಿಂದ ಭಾಷಣಗಳನ್ನು ಮಾಡಿ ರಾಮ್ ಪ್ರಸಾದರು ಜನರನ್ನು ಒಗ್ಗೂಡಿಸುತ್ತಾರೆ. ೧೯೨೨ರಲ್ಲಿ ಚೌರಿ ಚೌರಾ ಎಂಬಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಹತ್ಯೆ ಮಾಡಿದಕ್ಕಾಗಿ ಜನರು ರೊಚ್ಚಿಗೆ ಎದ್ದು ಪೋಲೀಸ್ ಠಾಣೆಗೆ ದಾಳಿ ಮಾಡಿ ಸುಮಾರು ೨೦ ಮಂದಿ ಪೋಲೀಸರನ್ನು ಹತ್ಯೆ ಮಾಡುತ್ತಾರೆ. ಇದನ್ನು ಖಂಡಿಸಿ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ತಡೆಯುತ್ತಾರೆ. ಆದರೆ ಬಿಸ್ಮಿಲ್ ಮತ್ತು ಕೆಲವರಿಗೆ ಇದು ಸಹ್ಯವಾಗುವುದಿಲ್ಲ. ಅವರು ಕಾಂಗ್ರೆಸ್ ನಿಂದ ದೂರ ಉಳಿಯುತ್ತಾರೆ. ೧೯೨೫ರಲ್ಲಿ ಕಾಕೋರಿ ಪಿತೂರಿಯಲ್ಲಿ ಭಾಗಿ ಎಂಬ ಕಾರಣಕ್ಕೆ ರಾಮ್ ಪ್ರಸಾದ್ ಬಿಸ್ಮಿಲ್ ಇವರಿಗೆ ಸರಕಾರ ಮರಣ ದಂಡನೆಯನ್ನು ವಿಧಿಸುತ್ತದೆ. ೧೯೨೭ರ ಡಿಸೆಂಬರ್ ೧೯ರಂದು ಇವರನ್ನು ಕ್ರಾಂತಿಕಾರಿಗಳಾದ ಅಶ್ಫಾಕ್ ಉಲ್ಲಾ ಖಾನ್ ಹಾಗೂ ರೋಶನ್ ಸಿಂಗ್ ಜೊತೆ ಗಲ್ಲಿಗೇರಿಸಲಾಗುತ್ತದೆ. ಇಂತಹ ಕ್ರಾಂತಿಕಾರಿಗಳ ನಿಧನವಾದರೂ ಭಾರತ ಸ್ವಾತಂತ್ರ್ಯ ಸಂಗ್ರಾಮ ಮುಂದುವರೆಯುತ್ತದೆ.
ಇನ್ನೊಬ್ಬ ಕ್ರಾಂತಿಕಾರಿ ಭಗತ್ ಸಿಂಗ್ ಬಿಸ್ಮಿಲ್ ರನ್ನು ತಮ್ಮ ಗುರುಗಳು ಎನ್ನುತ್ತಿದ್ದರು. ರಾಮ, ಅಜ್ಞಾತ್ ಹಾಗೂ ಬಿಸ್ಮಿಲ್ ಎಂಬ ಹೆಸರಿನಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಇವರು ಹಿಂದಿ ಹಾಗು ಉರ್ದು ಭಾಷೆಯಲ್ಲಿ ಹಲವಾರು ಕವಿತೆಗಳನ್ನು ಬರೆದಿದ್ದಾರೆ. ಕ್ರಾಂತಿಕಾರಿಗಳಷ್ಟೇ ಅಲ್ಲ ಸಾಮಾನ್ಯ ಜನರಲ್ಲೂ ಹೋರಾಟದ ಕೆಚ್ಚು ಬಡಿದೆಬ್ಬಿಸಬಲ್ಲ ‘ಸರ್ಫರೋಶಿ ಕಿ ತಮನ್ನ ಅಬ್ ಹಮಾರೆ ದಿಲ್ ಮೆ ಹೈ’ ಎಂಬ ಗೀತೆ ನಾವು ಹೇಗೆ ಮರೆಯಲು ಸಾಧ್ಯ. ಚಲನ ಚಿತ್ರಗಳಲ್ಲಿ ಈ ಗೀತೆಯನ್ನು ಕೇಳುವಾಗ ಮೈಯ ರೋಮಗಳು ಎದ್ದು ನಿಲ್ಲುತ್ತವೆ. ಇಂತಹ ಕವಿತೆ ಬರೆದ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಇವರನ್ನು ನಾವಿಂದು ಅವರ ಜನ್ಮದಿನದಂದು ಮತ್ತೊಮ್ಮೆ ನೆನೆಯೋಣ.
ರಾಮ್ ಪ್ರಸಾದ್ ಇವರ ನೆನಪಿಗಾಗಿ ಉತ್ತರ ಪ್ರದೇಶ ಸರಕಾರ ಒಂದು ಉದ್ಯಾನವನ ಮತ್ತು ರೈಲು ನಿಲ್ದಾಣವನ್ನು ನಿರ್ಮಿಸಿದ್ದಾರೆ. ಜನಮಾನಸದಲ್ಲಿ ಅಮರರಾಗಿದ್ದಾರೆ ರಾಮ್ ಪ್ರಸಾದ್ ಬಿಸ್ಮಿಲ್.
ಚಿತ್ರ: ಅಂತರ್ಜಾಲ ತಾಣ