ರಾಮ ವಿರಾಜಮಾನ, ರಾಮಾನುಭೂತಿ ಮತ್ತು ರಾಜಕೀಯ
ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದಿಂದ ನಂಬಿಕೊಂಡು ಬಂದಿರುವ ಜಾಗದಲ್ಲಿನ ಸದ್ಯ ವಿರಾಜಮಾನ ಲೋಹದೆರಕದ ರಾಮಮೂರ್ತಿಯನ್ನು ಕದಲಿಸಬಾರದೆಂದು ನ್ಯಾಯಾಂಗ ಹೇಳಿರುವುದು ಆಸ್ತಿಕರಿಗೆ ರೋಮಾಂಚನ ತಂದಿದೆ; ಅಲ್ಲದವರೂ ತಲೆತೂಗಿದ್ದಾರೆ. ಶತಮಾನಗಳ ಐತಿಹಾಸಿಕ ಕಟ್ಟು-ಕುಟ್ಟು-ಕೆಡಹುಗಳಿಂದಾದ ದಶಕಗಳ ನ್ಯಾಯಾಂಗೀಯ ಗೊಜ್ಜು-ಗೋಜಲುಗಳಲ್ಲೂ, ಕೋರ್ಟು, ಆ ಸ್ಥಳ ವಿಶೇಷವನ್ನು “ಹಿಂದೂ ವಾರಸುದಾರರಿಗೆ” ಸಂದಾಯ ಮಾಡಿರುವುದು ಅತ್ಯದ್ಭುತ “ಲೌಕಿಕ” ಪ್ರಕ್ರಿಯೆ.
ನಮ್ಮ ಭಾವಕೋಶದಲ್ಲಿ ದೇವರಾಗಿ, ಮಾನವತಾ ಮೌಲ್ಯಗಳ ಅಮೂರ್ತ ಮೌಲ್ಯಮೇರುವಾಗಿ, ತಂದೆ-ಮಗ, ತಾಯಿ-ಮಗ, ಹಿರಿಯಣ್ಣ, ವಿಧೇಯ ಶಿಷ್ಯ, ಹೊಣೆಗಾರ ಪತಿಯೆಂಬ ಮಾನವ ಸಂಬಂಧಗಳಿಗೆ ಇನ್ನಿಲ್ಲದ ಆದರ್ಶಪುರುಷನಾಗಿ ಮೂರ್ತೀಭವಿಸಿ ಪ್ರತಿಯೊಂದು ಹಿಂದೂ ಜನರ ಮನವನ್ನೂ, ಮನೆಯನ್ನೂ ತುಂಬಿ ನಿಂತಿರುವುದು ಇದೇ ರಾಮಲಾಲಾ ಮೂರ್ತಿಯೇ? ತುಳಸೀದಾಸರು, ಒಳಗೂ-ಹೊರಗೂ ಬೆಳಕು ಚೆಲ್ಲುವಂತೆ ನಾಲಗೆ-ತುಟಿಗಳ ನಡುವೆ ಮಣಿದೀಪವಾಗಿರಿಸಿಕೊಂಡಿದ್ದ, ‘ರಾ’ ಎಂದು ಬಾಯಿತೆರೆದರೆ ಒಳಗಿದ್ದ ಪಾಪಗಳೆಲ್ಲಾ ಹೊರಹೋಗಿ ‘ಮ’ ಎಂದು ತುಟಿ ಮುಚ್ಚಿದಾಗ ಇನ್ನೆಂದೂ ಒಳಬಾರದೆಂದು ಪುರಂದರದಾಸರು ನಂಬಿದ್ದ, ಆತನೊಬ್ಬನಿರುವವರೆಗೆ ನಮಗೆ ಕೊರತೆಯೆನ್ನುವುದಿನ್ನುಂಟೇ? ಎಂದು ರಾಮದಾಸರು ಎದೆ ತುಂಬಿ ಹಾಡಿದ, ತ್ಯಾಗರಾಜರ ಏಕೈಕ ಆಧ್ಯಾತ್ಮಿಕ ಆಸ್ತಿಯಾದ ಆ ಇಡೀ ರಾಮ ಮಸೀದಿಯ ಮಧ್ಯ ಗೋಪುರದಡಿಯ ಬಾಲರಾಮ ವಿಗ್ರಹಕ್ಕೇ ಸೀಮಿತ ಎಂದು ಕೋರ್ಟ್ ತೀರ‍್ಪನ್ನು ಅರ್ಥೈಸಬೇಕಾಗಿಲ್ಲ ತಾನೇ?!
ಹಿಂದೂ ಮಾನಾಭಿಮಾನದ ಕೇಂದ್ರವಾದ ಶ್ರೀರಾಮಚಂದ್ರನ ಹುಟ್ಟುಸ್ಥಳವನ್ನು ಅನ್ಯಮತೀಯರ ಮುಷ್ಟಿಯಿಂದ ಬಿಡಿಸಿ ‘ರಾಮನಿಗೆ ನ್ಯಾಯ’ ಒದಗಿಸುವ ಹಿಂದೂ ಜಾಗೃತಿ, ಐಕಮತ್ಯ ಮೂಡಿಸುವ ಧ್ಯೇಯ ಬರೆದುಕೊಂಡು ಪಶ್ಚಿಮದ ಸೋಮನಾಥದಿಂದ ಅಯೋಧ್ಯಾ ಭೂಮಿಯವರೆಗೆ ಈ ಹಿಂದೆ ರಥಯಾತ್ರೆ ಸಂಕಲ್ಪಿಸಲಾಗಿತ್ತು. ಇದು ದೇಶದ ಬಹುಸಂಖ್ಯಾತರಲ್ಲಿ ಎಚ್ಚರ ಮೂಡಿಸಿತು ಕೂಡ. ಅಭೂತಪೂರ್ವ ಒಗ್ಗಟ್ಟೂ ಕಾಣಿಸಿಕೊಂಡಿತು. ಅರ್ಧದಲ್ಲೇ ಯಾತ್ರೆಗೆ ಅಡ್ಡ ಹಾಕುವಲ್ಲಿ ವಿರೋಧಿಗಳೇನೋ ಯಶಸ್ವಿಯಾದರು. ಆದರೂ ಆಗ ಎರಡೇ ಎರಡು ಲೋಕಸಭಾ ಸ್ಥಾನಬಲ ಹೊಂದಿದ್ದ ಬಿಜೆಪಿ ಮುಂದಿನ ಚುನಾವಣೆಯಲ್ಲಿ 85 ಸೀಟುಗಳನ್ನು ಗೆದ್ದುಕೊಳ್ಳುವಷ್ಟು ಬೆಳೆದಿದ್ದು ರಾಜಕೀಯ ಸತ್ಯ. ಬೆರಕೆ ಸರಕಾರದ ಒತ್ತಡದಿಂದಾಗಿ ಅದು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಸಾಧ್ಯವಾಗಲಿಲ್ಲ; ಅದು ಅಕ್ಷಮ್ಯವೂ ಅಲ್ಲ. ಆದರೆ ರಾಮನಾಮ ಮೂಡಿಸಿದ ಹಿಂದುತ್ವ ಜಾಗೃತಿಯನ್ನು ರಾಜಕೀಯಾತೀತವಾಗಿ ಸಾಮಾಜಿಕ ಸಾಮರಸ್ಯ, ಧಾರ್ಮಿಕ-ಆಧ್ಯಾತ್ಮಿಕ ಏಕತೆ ಹುಟ್ಟಿಸಲು ಇದ್ದ ಅವಕಾಶವನ್ನು ಮಠ-ಮಾನ್ಯಾದಿ ಹಿಂದೂ ಘಟಕಗಳ್ಯಾವವೂ ಬಳಸಿಕೊಳ್ಳಲಿಲ್ಲ!
ಹೈಕೋರ್ಟ್ ತೀರ‍್ಪನ್ನು ಈಗ ಕೋಮು ಸೌಹಾರ್ದಕ್ಕೆ ದ್ಯೋತಕ ಎಂದು ಕೊಂಡಾಡಲಾಗುತ್ತಿದೆ. ಅದೇನೂ ಸುಳ್ಳಲ್ಲ. ಅದಕ್ಕಿಂತಾ ಹೆಚ್ಚಾಗಿ ಇದು ಹಿಂದೂ ಸಮುದಾಯದ ಸಾಮರಸ್ಯ-ಸಮಾನತೆಗಳಿಗೂ ಇಂಬು ನೀಡುವಂತೆ ಬಳಸಿಕೊಳ್ಳುವ ಅವಕಾಶವೂ ಆಗಿದೆ. ತಕ್ಷಣದ ರಾಜಕೀಯ ಹಾಹಾಕಾರವಿಲ್ಲದ ಹಿಂದೂ ಸಂಘಟನೆಗಳಾದರೂ ಅದನ್ನು ಹಾಗೆ ಉಪಯೋಗಿಸಲು ಈಗಲಾದರೂ ಪ್ರಮಾಣಿಕ ಯೋಜನೆ ರೂಪಿಸಬೇಡವೇ? ಇದರಿಂದ ಉತ್ತರೋತ್ತರ ರಾಜಕೀಯ ಪ್ರಯೋಜನವೂ ಸಾಧ್ಯವಾಗದಿರದು.