ರಾಯನ ಹೆಸರಿನಲ್ಲಿ ರೆಡ್ಡಿ ಸಹೋದರರ ವೈಭವ!
ಹಂಪಿಯ ಕನ್ನಡ ವಿವಿ ಸ್ಥಳದ ಪರಭಾರೆ ವಿಷಯದ ಆಳಕ್ಕೆ ಹೋಗೋಣ.
ಬಳ್ಳಾರಿ ಗಣಿ ದೊರೆಗಳಿಗೆ ಮಂತ್ರಿಪದವಿ ನೀಡಲಾಯಿತು. ಅವರ ಬಂಧುಮಿತ್ರರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಯಿತು. ಗಣಿ ದೊರೆಗಳ ಅಪೇಕ್ಷೆಯಂತೆ ಅಧಿಕಾರಿಗಳ ವರ್ಗಾವಣೆ ನಡೆಯಿತು, ಮಹಿಳಾ ಮಂತ್ರಿಸ್ಥಾನವೂ ಪಲ್ಲಟಗೊಂಡಿತು. ಈ ದೊರೆಗಳ ಗಣಿಗಾರಿಕೆಯ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಸುಭದ್ರ ನೆಲೆಯನ್ನೂ ಕಲ್ಪಿಸಿಕೊಡಲಾಯಿತು. ಈಚೆಗಷ್ಟೇ ಕೃಷ್ಣದೇವರಾಯನ ಹೆಸರಲ್ಲಿ ಈ ಗಣಿ ದೊರೆಗಳ ಮೆರೆದಾಟವೂ ನಡೆಯಿತು. ಇದೀಗ ಕನ್ನಡ ವಿವಿ ಸ್ಥಳಭಾಗವನ್ನು ಈ ಗಣಿ ದೊರೆಗಳ ಇಚ್ಛಾನುವರ್ತಿಗಳ ವಶಕ್ಕೊಪ್ಪಿಸುವ ಕಾರ್ಯ ನಡೆಯುತ್ತಿದೆ. ಹೀಗೇ ಮುಂದುವರಿದರೆ ಕರ್ನಾಟಕದಲ್ಲಿ ಕೃಷ್ಣದೇವರಾಯನ ವೈಭವ ಮರುಕಳಿಸುವುದಲ್ಲ, ಬಳ್ಳಾರಿ ಗಣಿರೆಡ್ಡಿಗಳ ವೈಭವ ತಾಂಡವವಾಡುತ್ತದೆ. ಕೊನೆಗೆ ಆ ವೈಭವಕ್ಕೆ ಕರ್ನಾಟಕವೇ ಬಲಿಯಾದೀತು. ಇದಕ್ಕೆ ತಡೆಯೊಡ್ಡಬೇಕು.
ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕೃಷ್ಣದೇವರಾಯನ ಕಾಲದ ಸಾಂಸ್ಕೃತಿಕ ವೈಭವಕ್ಕೆ ಸರಿಸಾಟಿಯಾಗಿ ಮೆರೆಯುವಂತಾಗಬೇಕೇ ಹೊರತು ಕೃಷ್ಣದೇವರಾಯನ ಹೆಸರಿನಲ್ಲಿ ತನ್ನ ನೆಲ ಕಳೆದುಕೊಂಡು ಕ್ರಮೇಣ ತಾನು ನೆಲಕಚ್ಚಿಬಿಡುವ ದುರಂತಕ್ಕೀಡಾಗಬಾರದು. ಕೃಷ್ಣದೇವರಾಯನ ಹೆಸರಿನಲ್ಲಿ ಈ ನಾಡಿನಲ್ಲಿ ಇನ್ನಾರೋ ಮೆರೆಯುವಂತಾಗಬಾರದು.