ರಾಶಿ ಭವಿಷ್ಯ...

ರಾಶಿ ಭವಿಷ್ಯ...

ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ.

ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ.

ಮಿಥುನ ರಾಶಿ: ನಿಮ್ಮ ಮನೆಯ ಹಿರಿಯರಿಗೆ ಆಗಾಗ ಅನಾರೋಗ್ಯ ಕಾಡುತ್ತದೆ. ಕಾಳಜಿ ವಹಿಸದಿದ್ದರೆ ಅನಾಹುತ ನಿಶ್ಚಿತ.

ಕರ್ಕಾಟಕ ರಾಶಿ: ವಾಹನ ಪ್ರಯಾಣ ಮಾಡುವಾಗ ಅಪಘಾತವಾಗುವ ಸಾಧ್ಯತೆ ಇದೆ. ಪ್ರಯಾಣ ಮುಂದೂಡುವುದು ಉತ್ತಮ.

ಸಿಂಹ ರಾಶಿ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು ಮತ್ತು ಉದ್ಯೋಗ ಹೋಗುವ ಸಾಧ್ಯತೆಯೂ ಇದೆ. ಸ್ವಲ್ಪ ಹುಷಾರು.

ಕನ್ಯಾ ರಾಶಿ: ಅನಿರೀಕ್ಷಿತ ಸುದ್ದಿ ಬರುತ್ತದೆ.  ಕೆಟ್ಟ ವಿಷಯಗಳು ಕೇಳಬೇಕಾಗಬಹುದು. ಮಾನಸಿಕವಾಗಿ ಸಿದ್ದರಾಗಿ.

ತುಲಾ ರಾಶಿ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಬಹುದು.

ವೃಶ್ಚಿಕ ರಾಶಿ: ಮಗ - ಮಗಳ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ವಿಚ್ಛೇದನದ ಸಾಧ್ಯತೆ ಇದೆ.

ಧನು ರಾಶಿ: ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಹೊಂದಿ ಕೆಟ್ಟ ದಾರಿ ಹಿಡಿಯಬಹುದು. ಎಚ್ಚರಿಕೆಯಿಂದ ಇರಿ.

ಮಕರ ರಾಶಿ: ಮನೆಯ ಆರ್ಥಿಕ ಪರಿಸ್ಥಿತಿ ಕುಸಿಯುತ್ತದೆ. ಅನಿರೀಕ್ಷಿತ ಘಟನೆಗಳು ನಡೆದು ಬಹಳ ನಷ್ಟ ಅನುಭವಿಸುವಿರಿ.

ಕುಂಭ ರಾಶಿ: ಕೌಟುಂಬಿಕ ಕಲಹಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡುತ್ತದೆ. ಶಾಂತಿ ಇಲ್ಲವಾಗುತ್ತದೆ.

ಮೀನ ರಾಶಿ: ಅನಿರೀಕ್ಷಿತ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಳೆದುಕೊಂಡಿರುವುದನ್ನು ಮತ್ತೆ ಪಡೆಯುವಿರಿ.

***

ಇದು, ದಿನ ವಾರ ತಿಂಗಳು ವಾರ್ಷಿಕ ಅಥವಾ ಜೀವನಪರ್ಯಂತ ಘಟಿಸಲಿರುವ ನಿಮ್ಮ ಭವಿಷ್ಯ. ದಿನನಿತ್ಯ ಟಿವಿ ಪತ್ರಿಕೆ ಮುಂತಾದ ಎಲ್ಲಾ ಕಡೆಗಳಲ್ಲಿ ನಿಮ್ಮ ಹೆಸರಿನ ಮೇಲೆಯೋ, ಜನ್ಮ ನಕ್ಷತ್ರದ ಮೇಲೆಯೋ, ನಿಮ್ಮ ಹಸ್ತ ರೇಖೆಗಳ ಮೇಲೆಯೋ, ಕವಡೆ ಗಿಣಿ ಮುಂತಾದವುಗಳ ಮೇಲೆಯೋ ಒಟ್ಟಿನಲ್ಲಿ ಆಯಾ ವಿಷಯದ ಪಂಡಿತರು ಈ ಭವಿಷ್ಯ ಹೇಳುತ್ತಾರೆ. ಇದರಲ್ಲಿಯೂ ಹಲವಾರು ವಿಧಾನಗಳು ಇವೆ.

ಹಾಗೆಯೇ ದಿಕ್ಕು, ಬಣ್ಣ, ಸಂಖ್ಯೆ, ಜನ್ಮ ಜಾತಕ, ಇತ್ಯಾದಿ ಅಂಶಗಳ ಮೇಲೆಯೂ ಭವಿಷ್ಯ ನುಡಿಯಲಾಗುತ್ತದೆ. ಕೆಲವರು ಇದೊಂದು ವೈಜ್ಞಾನಿಕ ವಿದ್ಯೆ. ಗ್ರಹಗಳು ನಕ್ಷತ್ರಗಳ ಚಲನವಲನಗಳನ್ನು ಅಭ್ಯಸಿಸಿ ಮನುಷ್ಯ ಇತಿಹಾಸದ ಅನುಭವಗಳ ಆಧಾರದ ಮೇಲೆ ಆತನ ಗುಣ ಸ್ವಭಾವಗಳನ್ನು ಗುರುತಿಸುವ ವಿಜ್ಞಾನವಿದು. ಖಚಿತ ಭವಿಷ್ಯ ಹೇಳುವುದು ಸಾಧ್ಯವಿಲ್ಲವಾದರೂ ಕೆಲವು ನಡೆಗಳನ್ನು ಗುರುತಿಸಬಹುದು. ಈಗಿನ ಅನೇಕ ನಕಲಿ ಜ್ಯೋತಿಷಿಗಳ ವ್ಯಾಪಾರಿ ಮನೋಭಾವದಿಂದ ಇದು ಕಲುಷಿತಗೊಂಡಿದ್ದು ನಿಜವಾದ ಜ್ಯೋತಿಷ್ಯ ಶಾಸ್ತ್ರ ವೈಚಾರಿಕವಾದದ್ದು ಎಂದು ಸಮರ್ಥಿಸಿಕೊಳ್ಳುತ್ತಾರೆ.

ಹೌದು, ಕೆಲವೊಮ್ಮೆ ಅದರಲ್ಲೂ ನಮ್ಮ ಸಂಕಷ್ಟದ ಸಮಯದಲ್ಲಿ ಯಾರೋ ಜ್ಯೋತಿಷಿಗಳು ಮೇಲೆ ತಿಳಿಸಿದ ಅಂಶಗಳ ಆಧಾರದಲ್ಲಿ ಕೆಲವು ಊಹಾತ್ಮಕ ಅಥವಾ ಅವರು ಕಲಿತ ವಿದ್ಯೆಯ ನೆರವಿನಿಂದ ಕೆಲವು ಸಲಹೆ ಸೂಚನೆಗಳನ್ನು ನೀಡಬಹುದು. ಅದು‌ ಹಲವು ಬಾರಿ ನಿಜವೂ ಆಗಬಹುದು. ಅದು ಜ್ಯೋತಿಷ್ಯದ ಮೇಲೆ ನಂಬಿಕೆ ಹೆಚ್ಚಿಸುತ್ತದೆ. ಹಾಗಾದರೆ ಜ್ಯೋತಿಷ್ಯ ನಿಜವೇ ? ಒಣ ವೈಚಾರಿಕ ಪ್ರಜ್ಞೆಯೂ ಬೇಡ ಅಥವಾ ಹಿರಿಯರು ತೋರಿದ ಧರ್ಮ ಸಂಪ್ರದಾಯದ ನಂಬಿಕೆಯ ದಾರಿಯೂ ಬೇಡ. ನಮ್ಮ ಇಂದಿನ ಅರಿವು ಅನುಭವದ ಮಿತಿಯಲ್ಲಿ ಇದನ್ನು ಯೋಚಿಸೋಣ. ಇದು ಸಾರ್ವತ್ರಿಕ ಸತ್ಯವೇ ? 

ವಿಶ್ವದ ಈಗಿನ ಸುಮಾರು 730 ಕೋಟಿ ಜನಸಂಖ್ಯೆಗೂ ಇದು ಅನ್ವಯವಾಗುತ್ತದೆಯೇ ? ಸೃಷ್ಟಿಯ ಎಲ್ಲಾ ಭೂ ಪ್ರದೇಶದಲ್ಲಿಯೂ  ಏಕ ಪ್ರಕಾರವಾಗಿ ಪರಿಣಾಮ ಬೀರುತ್ತದೆಯೇ ? ಮನುಷ್ಯರಿಗೆ ಮಾತ್ರವೇ ಅಥವಾ ಸಕಲ ಚರಾಚರ ಜೀವಿಗಳಿಗೂ ಅನ್ವಯಿಸುತ್ತದೆಯೇ ? ಬಣ್ಣ ದಿಕ್ಕು ಸಂಖ್ಯೆಗಳು ಮನುಷ್ಯನ ವ್ಯಾವಹಾರಿಕ ಅನುಕೂಲಕ್ಕಾಗಿ ಗುರುತಿಸುವಿಕೆಯ ಕಾರಣಕ್ಕಾಗಿ ನೀಡಿದ ಹೆಸರುಗಳಲ್ಲವೇ ? ಸಾರ್ವಜನಿಕವಾಗಿ  ಪ್ರಾಕೃತಿಕ ವಿಕೋಪಗಳನ್ನು, ವೈಯಕ್ತಿಕವಾಗಿ ಮನುಷ್ಯನ ಏಳು ಬೀಳುಗಳನ್ಮು, ಯಶಸ್ಸು ವೈಫಲ್ಯಗಳನ್ನು, ಹುಟ್ಟು ಸಾವುಗಳನ್ನು ಖಚಿತವಾಗಿ ಮೊದಲೇ ಮಾಹಿತಿ ನೀಡಲು ಸಾಧ್ಯವೇ ? ಪ್ರಕೃತಿಯ ಎಲ್ಲಾ ಅಂಶಗಳನ್ನು ಜ್ಯೋತಿಷ್ಯ ಶಾಸ್ತ್ರ ಭೇದಿಸಿದೆಯೇ ?

ಆರೋಗ್ಯವೇ ಇರಲಿ, ಆರ್ಥಿಕ ಪರಿಸ್ಥಿತಿಯೇ ಇರಲಿ, ತಂತ್ರಜ್ಞಾನವೇ ಇರಲಿ, ಮಾನಸಿಕ ಸಮತೋಲನವೇ ಇರಲಿ ಅಥವಾ ವ್ಯವಸ್ಥೆಯ ಯಾವುದೇ ವಿಷಯದಲ್ಲಿ ವಿಜ್ಞಾನ ಮತ್ತು ಜ್ಯೋತಿಷ್ಯದ ಮುಖಾಮುಖಿಯಲ್ಲಿ ಜ್ಯೋತಿಷ್ಯ ಹೆಚ್ಚು ಖಚಿತವಾದದ್ದು ಮತ್ತು ಸಾರ್ವತ್ರಿಕ ಸತ್ಯ ಎಂದು ನಿಮಗನಿಸುತ್ತದೆಯೇ ? ಯಾವುದೋ ನಮ್ಮ ವೈಯಕ್ತಿಕ ನೆಲೆಯಲ್ಲಿ ಕೆಲವು ಘಟನೆಗಳು ಕಾಕತಾಳೀಯ ಅಥವಾ ಸಹಜ ಸ್ವಾಭಾವಿಕವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಜವಾದಲ್ಲಿ ಅದನೇ ಸಂಪೂರ್ಣ ಸತ್ಯ ಎಂದು ಭಾವಿಸಬೇಕೆ ? ಈ ಕ್ಷಣದ ಆಧುನಿಕ ಸಮಾಜವನ್ನು ಗಮನಿಸಿದಾಗ ಇಡೀ ವಿಶ್ವದ ದಿನನಿತ್ಯದ ಹಾಗುಹೋಗುಗಳನ್ನು ಮುನ್ನಡೆಸುತ್ತಿರುವುದು ವಿಜ್ಞಾನವೇ ಅಥವಾ ಜ್ಯೋತಿಷ್ಯವೇ ?

ಸಾವಿನ ಭಯ ಪಡದೆ, ಸೋಲಿನ ಆತಂಕಕ್ಕೆ ಒಳಗಾಗದೆ, ನಿಷ್ಕಲ್ಮಶ ಮನಸ್ಸಿನಿಂದ, ವಿಶಾಲ ಮನೋಭಾವದಿಂದ, ದೀರ್ಘಕಾಲದ ಮೌನದಲ್ಲಿ ಇದರ ಬಗ್ಗೆ ನೀವು ಯೋಚಿಸಿದರೆ ಬಹುಶಃ ವಾಸ್ತವಿಕ ಸತ್ಯ ನಿಮಗೆ ಅರ್ಥವಾಗಬಹುದು. ಬದುಕು ತುಂಬಾ ಸರಳವಾಗಿದ್ದಾಗ, ಮನುಷ್ಯ ಪ್ರಕೃತಿಯೊಂದಿಗೆ ಜೀವಿಸುತ್ತಿದ್ದಾಗ,‌ ಆತನ ಬೇಡಿಕೆಗಳು ಅನ್ನ ಆಹಾರಕ್ಕೆ ಸೀಮಿತವಾಗಿದ್ದಾಗ, ಅಕ್ಷರ ಜ್ಞಾನವಿಲ್ಲದ ಸಮಯದಲ್ಲಿ, ವಿಜ್ಞಾನ ಇನ್ನೂ ಅಸ್ತಿತ್ವವಿಲ್ಲದ ಕಾಲದಲ್ಲಿ ಜ್ಯೋತಿಷ್ಯ ಒಂದು ಸಲಹಾ ರೂಪದ ಮಾರ್ಗದರ್ಶನವಾಗಿ ಇದ್ದಿರಬಹುದು.

ಆದರೆ ಇಂದಿನ ಸಂಕೀರ್ಣ ಆಧುನಿಕ ಸಮಾಜದಲ್ಲಿ ವಿಜ್ಞಾನವನ್ನು ತಿರಸ್ಕರಿಸಿ, ಜ್ಯೋತಿಷ್ಯವನ್ನು ಪುರಸ್ಕರಿಸಿ ನಮ್ಮ ದೇಶದ ಅಭಿವೃದ್ಧಿ ಸಾಧ್ಯವೇ ? ವೈಯಕ್ತಿಕ ಬದುಕಿನ ಯಶಸ್ಸು ನೆಮ್ಮದಿ ಸಾಧ್ಯವೇ ? ಯೋಚಿಸಿ ನಿರ್ಧರಿಸುವ. ಮೇಲಿನ ಪ್ರಶ್ನೆಗಳಿಗೆ  ಉತ್ತರ ಹುಡುಕಿಕೊಳ್ಳುವ, ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯ ನಿಮಗಿದೆ. ಧನ್ಯವಾದಗಳು.

  • 369 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಬೆಂಗಳೂರು ನಗರದ ಪೀಣ್ಯದಿಂದ ಸುಮಾರು18 ಕಿಲೋಮೀಟರ್ ದೂರದ ಯಲಹಂಕ ತಲುಪಿತು. ಇಂದು 5/11/2021 ಶುಕ್ರವಾರ 370 ನೆಯ ದಿನ  ನಮ್ಮ ಕಾಲ್ನಡಿಗೆ ಬೆಂಗಳೂರು ನಗರದ  ಯಲಹಂಕದಿಂದ  ಸುಮಾರು 14 ಕಿಲೋಮೀಟರ್ ದೂರದ ವಿದ್ಯಾನಗರ ಕ್ರಾಸ್ ತಲುಪಲಿದೆ. ನಾಳೆ  6/11/2021 ಶನಿವಾರ 371 ನೆಯ ದಿನ ದೇವನಹಳ್ಳಿ ಮಾರ್ಗದ ವಿದ್ಯಾನಗರ ಕ್ರಾಸ್ ಬಳಿಯೇ ವಾಸ್ತವ್ಯ ಹೂಡಿಲಿದೆ. 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ : ಇಂಟರ್ನೆಟ್ ಕೃಪೆ