ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಹಾಗೂ ನಿಸರ್ಗ ಪ್ರೇಮ
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಮಲೆನಾಡಿನ ಸಿರಿ ತುಂಬಿದ ಪ್ರಕೃತಿ ಚೆಲುವಿನ ಆಗರ-ಸಾಗರ. ಅಂತಹ ಸುಂದರ ಸೊಗದ ಮಧ್ಯೆ ವೆಂಕಟಪ್ಪ ಗೌಡ ಸೀತಮ್ಮ ದಂಪತಿಗಳಿಗೆ ಜನಿಸಿದ ಮಹಾ ಭಾಗ್ಯವಂತ ನಮ್ಮ ಕವಿ ಕೆ.ವಿ.ಪುಟ್ಟಪ್ಪನವರು. ‘ಕುವೆಂಪು’ ಕಾವ್ಯನಾಮದಿಂದ ಜಗತ್ಪ್ರಸಿದ್ಧರಾದರು. ಮಲೆನಾಡಿನ ಹಸಿರು ಗಿಡಮರಗಳು ಶ್ರೀಯುತರ ಬರವಣಿಗೆಗೆ ಸ್ಫೂರ್ತಿಯಾಯಿತು. ಹೆಚ್ಚಿನ ಬರಹಗಳಲ್ಲೂ ಕಾನನ, ಹಸಿರು, ಉಸಿರು, ಪ್ರಕೃತಿ, ಒಲವು, ಚೆಲುವು, ಲತೆ, ಬಳ್ಳಿ, ಉಯ್ಯಾಲೆ, ಕಾಡು, ಬೆಟ್ಟ, ನದಿ, ಝರಿ, ಸಲಿಲ, ನಿಸರ್ಗ ರಮಣೀಯ ಬಂಡೆಗಳು, ಕುಳಿರ್ಗಾಳಿ ಎಲ್ಲವನ್ನೂ ಅಳವಡಿಸಿದ ಪದ ಭಂಡಾರವನ್ನೇ ಓದಬಹುದು. ಪ್ರಕೃತಿಯೊಂದಿಗೆ ಬೆರೆತ ಕಲೆತ ನವಿರಾದ ಬಂಧಗಳ, ಜೀವನ ಮೌಲ್ಯಗಳ ಬೆಸುಗೆಯನ್ನು ಕಾಣಬಹುದು. ಪ್ರಕೃತ, ವಾಸ್ತವಿಕತೆಯ ಸಮನ್ವಯತೆ ಎದ್ದು ಕಾಣುತ್ತದೆ. ಸಂಶೋಧಕ ಪ್ರವೃತ್ತಿಯ ಮಜಲುಗಳನ್ನು ಬರವಣಿಗೆಯ ಉದ್ದಕ್ಕೂ ಹೆಣೆದಿದ್ದಾರೆ. ಭಾಷಾ ಶೈಲಿಯ ಸೊಗಡು ಓದುಗನನ್ನು ಹಿಡಿದಿಡುತ್ತದೆ. ಸಾಮಾಜಿಕ ನ್ಯಾಯ-ಅನ್ಯಾಯಗಳನ್ನು, ಬಡವರು, ನಿರ್ಗತಿಕರನ್ನು ತಮ್ಮ ಲೇಖನ, ಕಾದಂಬರಿಗಳಲ್ಲಿ ಕಾಣಿಸಿದರು.
ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯಲ್ಲಿ ನಿಸರ್ಗದ ಎಲ್ಲಾ ಆಯಾಮಗಳನ್ನೂ ಓದಬಹುದು. ನಮ್ಮ ಕಣ್ಣೆದುರು ಕಾಣುವ ಶೈಲಿಯ ಬಣ್ಣಿಸಲು ಸಾಧ್ಯವಿಲ್ಲ. ಜನಸಾಮಾನ್ಯರ ಸಾಮಾನ್ಯ ಬದುಕನ್ನು ಹತ್ತಿರದಿಂದ ಕಂಡವರು. ‘ಯುಗದ ಕವಿ ಜಗದ ಕವಿ’ ದ.ರಾ.ಬೇಂದ್ರೆಯವರು ೨೦ನೇ ಶತಮಾನದ ವಿಶ್ವಮಾನವ ಸಂದೇಶ ಬೀರಿದವರು ಕುವೆಂಪುರವರು ಎಂದರು.
ಶ್ರೀಯುತರ ಸಾಹಿತ್ಯ ಮಲೆನಾಡಿನ ಹರವಿದ ಬೆಟ್ಟದಂತೆ, ಸೌಂದರ್ಯನಿಧಿಯಂತೆ, ಅಧಮ್ಯ ರಸಪಾಕದಂತೆ, ನಿಸರ್ಗದ ಚೆಲುವ ಕಡಲಂತೆ, ಅರಳಿದ ಸುಮದಂತೆ, ಕರುನಾಡ ಮಣ್ಣಿನ ಶ್ರೀಗಂಧದ ಘಮಲಂತೆ, ಚಂದಿರನ ತಂಪಾದ ಬೆಳದಿಂಗಳಂತೆ, ನೇಸರನ ಪ್ರಖರ ಬೆಳಕ ಕಿರಣದಂತೆ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸೃಜನಶೀಲತೆ ಎದ್ದು ಕಾಣುತ್ತದೆ. ಆಧ್ಯಾತ್ಮಿಕ ಅನ್ವೇಷಣೆ, ಸಾಮಾಜಿಕ ಸ್ಥಿತ್ಯಂತರಗಳು, ಸಾಂಸ್ಕೃತಿಕ ಬದುಕಿನ ಆಯಾಮಗಳು, ನಿಸರ್ಗದೊಂದಿಗಿನ ಜೀವನ ಪ್ರೀತಿ, ಅರಣ್ಯಾನುಭವಗಳು ಸಹ್ಯಾದ್ರಿಯ ಬೆಟ್ಟದೋಪಾದಿಯಲ್ಲಿ ಏರಲ್ಪಟ್ಟ, ಹಬ್ಬಿದ ಕುರುಹಾಗಿದೆ.
ಪ್ರೇಮಕಾಶಿ, ವಿಶ್ವ ಮಾನವ ಸಂದೇಶ, ಜೇನಾಗುವ, ಪಕ್ಷಿಕಾಶಿ ಮುಂತಾದ೨೩ ಕವನ ಸಂಕಲನ, ೧೨ನಾಟಕಗಳು, ೬ ವಿಮರ್ಶೆಗಳು, ಆತ್ಮಕಥೆ, ಶಿಶುಸಾಹಿತ್ಯ, ಜೊತೆಗೆ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ. ಠಾಗೋರ್, ಬಾಪೂಜಿ, ಸ್ವಾಮಿ ವಿವೇಕಾನಂದರ ಪ್ರಭಾವ, ಪ್ರಕೃತಿ, ಆಧ್ಯಾತ್ಮ, ಚಿಂತಕ, ದೇಶಪ್ರೇಮದ ಅರಿವಿನ ತಿಳಿವು. ಪಂಪ, ಜ್ಞಾನಪೀಠ, ಪದ್ಮವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿಯ ಕಿರೀಟಿ. ಅಗ್ರಮಾನ್ಯ ಸಾಹಿತಿ, ಕನ್ನಡದ ಕುವರ ರಸ ಋಷಿ ಕುವೆಂಪುರವರು.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ