ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆನೆಯೋಣ

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆನೆಯೋಣ

ತಾಯೆ ಬಾರ ಮೊಗವ ತೋರ

ಕನ್ನಡಿಗರ ಮಾತೆಯೆ

ಹರಸು ತಾಯೆ ಸುತರ ಕಾಯೆ

ನಮ್ಮ ಜನ್ಮದಾತೆಯೆ

ಈ ಸಾಲುಗಳ ಸಾರ ಎಷ್ಟೊಂದು ಅದ್ಭುತವಲ್ಲವೇ? ಮಂಜೇಶ್ವರ ಗೋವಿಂದ ಪೈಗಳ ಜನ್ಮ ದಿನದ ಸಂದರ್ಭದಲ್ಲಿ ಈ ಪುಟ್ಟ ಬರಹ.(೧೮೮೩ ಮಾರ್ಚ್ ೨೩- ೧೯೬೩ ಸಪ್ಟಂಬರ ೬). ದೇವಕಿ ಅಮ್ಮ, ತಿಮ್ಮಪ್ಪ ಪೈಗಳ ಕುವರ. ಕೃಷ್ಣಾಬಾಯಿಯವರನ್ನು ಪತ್ನಿಯಾಗಿ ಮನೆ ತುಂಬಿಸಿಕೊಂಡವರು. ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ. ಕಾಸರಗೋಡಿನ ಪುಟ್ಟ ಊರಾದ ಮಂಜೇಶ್ವರದ ಹೆಸರನ್ನು ಸಾಹಿತ್ಯದ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿಸಿದವರು. ಚಿಂತಕ, ವಿದ್ವಾಂಸ, ಇತಿಹಾ‌ಸಕಾರ, ಅನುವಾದಕ, ಅನ್ವೇಷಣಾ ಗುಣ, ಸಂಸ್ಕೃತಿ, ಸಾಹಿತ್ಯ ಧರ್ಮವನ್ನು ಕಾಪಾಡಿಕೊಂಡು ಪ್ರತಿಪಾದಿಸಿದವರು.

ಸುಮಾರು ೨೫ ಭಾಷೆಗಳನ್ನು ಕರಗತ ಮಾಡಿಕೊಂಡ ಶ್ರೀಯುತರ ಮಾತೃಭಾಷೆ ಕೊಂಕಣಿ. ಹುಟ್ಟಿ ಬೆಳೆದ ಪರಿಸರದಲ್ಲಿನ ಭಾಷೆ ತುಳು,ಮಲೆಯಾಳ, ಕನ್ನಡ. ಇವರ *ಗಿಳಿವಿಂಡು* ಕವನ ಸಂಕಲನ ಪ್ರಸಿದ್ಧಿ ಪಡೆದಿದೆ. ನಂದಾದೀಪ, ಹೃದಯರಾಗ, ವಿಟಂಕ, ವಿಂಗಡಲು ಕವನಸಂಕಲನಗಳು, ಗೊಲ್ಗೊಥಾ, ವೈಶಾಖಿ ಖಂಡಕಾವ್ಯಗಳು, ಹೆಬ್ಬೆರಳು, ತಾಯಿ, ಚಿತ್ರಭಾನು ನಾಟಕಗಳು, ಗದ್ಯಾನುವಾದ, ಪ್ರಬಂಧ ಸಂಕಲನ, ಉಪನ್ಯಾಸ ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ. ೪೩ ಭಾಷೆಗಳ ಸಾವಿರಾರು ಗ್ರಂಥಗಳು ಇವರ ವಾಚನಾಲಯದಲ್ಲಿದ್ದುವಂತೆ. ಮದ್ರಾಸ್ ರಾಜ್ಯದ ಗವರ್ನರ್ ಅವರಿಂದ ೧೯೪೯ ಆಗಷ್ಟ್.೧೪ರಂದು ಸಾಹಿತ್ಯ ಸೇವೆಗಾಗಿ  ಮೊದಲ *ರಾಷ್ಟ್ರಕವಿ* ಎಂದು ಅಭಿನಂದಿಸಲ್ಪಟ್ಟರು.

ಮೈಸೂರು ವಿ.ವಿಯ ಗೌರವ ಡಾಕ್ಟರೇಟ್ ಪದವಿ ಕೊಡ್ತೇವೆ ಎಂದಾಗ ನಯವಾಗಿ ತಿರಸ್ಕರಿಸಿದ್ದಾರೆಂದು ತಿಳಿದು ಬರುತ್ತದೆ. ಕವನ ರಚನೆಯಲ್ಲಿ ಪ್ರಾಸವೇ ಬೇಕೆಂಬ ಧೋರಣೆಯನ್ನು ಒಪ್ಪುತ್ತಿರಲಿಲ್ಲವಂತೆ. ಕರ್ನಾಟಕ ಕೇರಳ ಎರಡೂ ರಾಜ್ಯಗಳ ಗಡಿಭಾಗದ ಮಂಜೇಶ್ವರದಲ್ಲಿ “ಮಂಜೇಶ್ವರ ಗೋವಿಂದ ಪೈ ಸ್ಮಾರಕ” ಕೇಂದ್ರವಿದೆ. ಇದೊಂದು ಸಂಶೋಧನಾ ಕೇಂದ್ರವಾಗಿ, ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಸಮುಚ್ಚಯವಾಗಿ, ಕವಿಮನೆಯಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.

ಇತರರ ಏಳಿಗೆ ಬಯಸದವ, ಪರರ ಹೊಗೆಯ ನೋಡಲು ಕಾಯುವವ, ಆಸೆ ಮಾತು ನೀಡಿ ಭಾಷೆ ತಪ್ಪುವವ, ಧರ್ಮಾಚರಣೆ ಮಾಡದವ, ತಾನೇ ಮೇಲೆಂದು ಬೀಗುವವ, ಸ್ವಾರ್ಥದ ಬೀಜ ಬಿತ್ತುವವ, ತನ್ನ ರಾಷ್ಟ್ರಕ್ಕೆ ದ್ರೋಹ ಎಸಗುವವ ಮನುಷ್ಯತ್ವ ಇಲ್ಲದವನೆಂದು ತಮ್ಮ ರಚನೆಗಳಲ್ಲಿ ಹೇಳುತ್ತಿದ್ದರು. ಪ್ರಾತಃಸ್ಮರಣೀಯರಾದ ಮಂಜೇಶ್ವರ ಗೋವಿಂದ ಪೈಗಳ ಜನ್ಮ ದಿನದ ಸಂದರ್ಭದ ಒಂದೆರಡು ಮಾತುಗಳು .

-ರತ್ನಾ ಕೆ ಭಟ್, ತಲಂಜೇರಿ

(ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ