ರಾಷ್ಟ್ರೀಯ ಅಂಕಿಅಂಶಗಳ ದಿನ
ಸ್ವತಂತ್ರ ಭಾರತದ ಯೋಜನೆಗಳನ್ನು ರೂಪಿಸುವಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್‌ರ (ಪ್ರಸಾಂತ ಚಂದ್ರ ಮಹಾಲನೋಬಿಸ್) ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ. ಮಹಾಲನೋಬಿಸ್‌ರವರು ದೇಶಕ್ಕೆ ನೀಡಿದ ಕೊಡುಗೆಗಳು ಶ್ಲಾಘನೀಯ. ಅವರು ಅಂಕಿ ಅಂಶಗಳ ಮೂಲಕ ಸಮೀಕ್ಷೆ ಮಾಡುವುದನ್ನು ತೋರಿಸಿ ಕೊಟ್ಟವರು. ಮಾದರಿ ಸಮೀಕ್ಷೆ ಅವರ ಅನನ್ಯ ಕೊಡುಗೆಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಅಂಕಿ ಅಂಶಗಳ ಸಮೀಕ್ಷೆಗಳು ಸಹಕಾರಿಯಾಗಿವೆ.
ಸರಕಾರಿ ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಮುಖ್ಯವಾಗಿದೆ. ನಂಬಲರ್ಹ ಅಂಕಿ ಅಂಶಗಳನ್ನು ಕಾಲಮಿತಿಯೊಳಗೆ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಪ್ರಕಟಿಸುವಲ್ಲಿ ಸಾಂಖ್ಯಿಕ ಇಲಾಖೆ ಮತ್ತು ಹಲವಾರು ಅಂಕಿ ಸಂಖ್ಯೆಗಳ ಸಂಗ್ರಹಕ್ಕೆ ಕಾರ್ಯ ನಿರ್ವಹಿಸುವ ಇಲಾಖೆ, ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಸಾಂಖ್ಯಿಕ ದಿನ ಆಚರಿಸುವ ಮೂಲಕ ಯುವಜನರಿಗೆ ಮತ್ತು ಸಾರ್ವಜನಿಕರಿಗೆ ಇದರ ಮಹತ್ವವನ್ನು ತಿಳಿಸಲಾಗುತ್ತಿದೆ.
ಸಾಮಾಜಿಕ ಅಭಿವೃದ್ಧಿ ಎಂದರೆ ಸಮಾಜದಲ್ಲಿಯ ಬಡತನ, ಅನಕ್ಷರತೆ, ನಿರುದ್ಯೋಗ, ಕೊಳಚೆ ಪ್ರದೇಶ ಸಮಸ್ಯೆಗಳನ್ನು ಹೋಗಲಾಡಿಸುವುದಾಗಿದೆ.ಅಂತಹ ಕಾರ್ಯಕ್ಕೆ ಪೂರಕವಾದ ಅಂಕಿಸಂಖ್ಯೆಯ ಸಂಗ್ರಹದ ಸಮೀಕ್ಷೆ ನೀಡಿದವರೇ ಮಹಲನೋಬಿಸ್. ಮೂಲವಿಜ್ಞಾನದಲ್ಲಿ ಹೆಸರು ಪಡೆದು, ಸಂಖ್ಯಾಶಾಸ್ತ್ರದಲ್ಲಿ ಪಿತಾಮಹರಾದ ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ಭಾರತದ ಹತ್ತು ಪ್ರಸಿದ್ಡ ಗಣಿತ ತಜ್ಞರಲ್ಲಿ ಒಬ್ಬರಾಗಿದ್ದಾರೆ.
ಮಹಾಲನೋಬಿಸ್ ಅವರು ೧೯೪೪ ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲದಿಂದ ವೆಲ್‍ಡನ್ ಮೆಮೊರಿಯಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಪ್ರಥಮ ಭಾರತೀಯ ಸಹ ಇವರೇ ಆಗಿದ್ದಾರೆ. ಮಹಾಲನೋಬಿಸ್ ಅವರು ೧೯೪೫ ರಲ್ಲಿ ರಾಯಲ್ ಸ್ಟಾಟ್ಸ್ ಸೊಸೈಟಿಯಿಂದ ಹೆನೊರಿ ಫೆಲೋ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೬೮ ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಡೆದರು ಹಾಗು ಇವರು ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ೧೯೫೭ ರಲ್ಲಿ ಸರ್ ದೇವಿಪ್ರಸಾದ್ ಸರ್ವಾಧಿಕಾರಿ ಚಿನ್ನದ ಪದಕ, ೧೯೬೧ ರಲ್ಲಿ ದುರ್ಗಪ್ರಸಾದ್ ಕೈಟನ್ ಚಿನ್ನದ ಪದಕ ಹಾಗು ೧೯೬೮ ರಲ್ಲಿ ಶ್ರೀನಿವಾಸ ರಾಮಾನುಜಮ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ಭಾರತ ಸರ್ಕಾರದ ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಡೇ ಅವರ ಜನ್ಮದಿನವಾದ ೨೯ ಜೂನ್ ನಲ್ಲಿ ಆಚರಿಸಲು ೨೦೦೬ ರಲ್ಲಿ ನಿರ್ಧರಿಸಿದರು. ಇದರ ಮಹತ್ವ ಅರಿಯಲು ಅವರ ಬಗ್ಗೆ ಅಧ್ಯಯನ,ಯುವ ಸಮುದಾಯದಲ್ಲಿ ಜಾಗೃತಿ, ಈ ದಿನದ ವಿಶೇಷತೆ ಇತ್ಯಾದಿಗಳ ಕುರಿತು ತಿಳುವಳಿಕೆಯ ಆಂದೋಲನ ನಡೆಯಬೇಕಾಗಿದೆ.
(ಆಧಾರ) ಅರುಣ್ ಡಿ'ಸೋಜ, ಶಕ್ತಿನಗರ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ