ರಾಷ್ಟ್ರೀಯ ಉತ್ಸವಗಳು ಮತ್ತು ನಾವು

ರಾಷ್ಟ್ರೀಯ ಉತ್ಸವಗಳು ಮತ್ತು ನಾವು

     ಇಂದು ಸ್ವಾತಂತ್ರ್ಯ ದಿನೋತ್ಸವವನ್ನು ನಾಡಿನೆಲ್ಲೆಡೆ ಆಚರಿಸುತ್ತಿದ್ದೇವೆ. ಕೆಲವೆಡೆ ಚರ್ವಿತ ಚರ್ವಣದಂತೆ ಕಾರ್ಯಕ್ರಮಗಳು ನಡೆದರೆ, ಕೆಲವು ಕಡೆ ನವೀನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಒಂದಲ್ಲಾ ಒಂದು ರೀತಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಭಾಗಿಗಳಾಗಿರುತ್ತೇವೆ. ರಾಷ್ಟ್ರೀಯ ಉತ್ಸವಗಳಲ್ಲಿ ಅದರಲ್ಲೂ ಸಾರ್ವಜನಿಕವಾಗಿ ಆಚರಿಸಲಾಗುವ - ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಸರ್ಕಾರೀ -  ಕಾರ್ಯಕ್ರಮದಲ್ಲಿ ಭಾಗವಹಿಸುವವರ ಮನೋಭಾವದ ಬಗ್ಗೆ ಬರೆಯಬೇಕೆನ್ನಿಸುತ್ತಿದೆ. ಇಂತಹ ರಾಷ್ಟ್ರೀಯ ಉತ್ಸವಗಳನ್ನು ನಡೆಸುವ ಹೊಣೆಗಾರಿಕೆ ಹೊಂದಿದ್ದ ಅಧಿಕಾರಿಗಳಲ್ಲೊಬ್ಬನಾಗಿ ಈಗ ನಿವೃತ್ತನಾಗಿರುವ ನನಗೆ ಆಗಿರುವ ವಿವಿಧ ಮನೋಭಾವಗಳ ನಿಕಟ ಅನುಭವಗಳು ಇದನ್ನು ಬರೆಯಲು ಪ್ರೇರಿಸಿವೆ. 

     ಮೊದಲು ಸರ್ಕಾರದ ಅಧಿಕಾರಿಗಳ ದೃಷ್ಟಿಯಲ್ಲಿ ನೋಡೋಣ. ಇಂದಿನ ವ್ಯವಸ್ಥೆಯಲ್ಲಿ, ಕಾರ್ಯಕ್ರಮ ಸುಗಮವಾಗಿ ಕಳೆದರೆ ಸಾಕಪ್ಪಾ ಎಂಬ ಭಾವನೆ ನಡೆಸುವ ಹೊಣೆ ಹೊತ್ತವರದ್ದಾಗಿರುತ್ತದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಪೂರ್ವಭಾವಿಯಾಗಿ ಸುಮಾರು ಒಂದು ತಿಂಗಳ ಹಿಂದೆ ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಯವರು, ಉಪವಿಭಾಗ ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರರು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ತಹಸೀಲ್ದಾರರುಗಳು ಕಾರ್ಯಕ್ರಮದ ಹೊಣೆಗಾರಿಕೆ ಹೊರುತ್ತಾರೆ. ಸಾಮಾನ್ಯದ ಅನುಭವವೆಂದರೆ ಸಭೆಗಳಿಗೆ ಕೆಲವು ಅಧಿಕಾರಿಗಳು ಬಂದರೆ ಕೆಲವರು ಬರುವುದಿಲ್ಲ ಅಥವ ಕೈಕೆಳಗಿನ ಅಧಿಕಾರಿಗಳನ್ನು ನಿಯೋಜಿಸಿಬಿಡುತ್ತಾರೆ. ಬಲವಂತದ ಮಾಘಸ್ನಾನದಂತೆ ನಡೆಯುವ ಈ ಸಭೆಯಲ್ಲಿ ವ್ಯವಸ್ಥೆಯ ಬಗ್ಗೆ ವಿವಿಧ ಇಲಾಖೆಗಳಿಗೆ ವಿವಿಧ ರೀತಿಯ ಜವಾಬ್ದಾರಿ ವಹಿಸಿ ನಿರ್ಣಯವಾಗುತ್ತದೆ. ಅವರುಗಳಿಂದ ಬಲವಂತವಾಗಿ ವಹಿಸಿದ ಕೆಲಸಗಳನ್ನು ಮಾಡಿಸುವುದು ಸುಲಭವಲ್ಲ, ಆದರೆ ಕಾರ್ಯಕ್ರಮದ ಯಶಸ್ಸಿಗೆ ಅದು ಅನಿವಾರ್ಯ. ಹಣದ ಕೊರತೆಯೂ ಅಡ್ಡಿಯಾಗುತ್ತದೆ. ಉತ್ಸವಕ್ಕಾಗಿ ಸರ್ಕಾರದಿಂದ ಪಡೆಯಬಹುದಾದ ಮೊಬಲಗು ಎಷ್ಟು ಗೊತ್ತೇ? ಜಿಲ್ಲಾಧಿಕಾರಿಯವರಿಗೆ ರೂ. ೨೫೦/-, ತಹಸೀಲ್ದಾರರಿಗೆ ರೂ. ೭೫/-!! ಈಗ ಇದು ಎಷ್ಟಾಗಿದೆಯೋ ಗೊತ್ತಿಲ್ಲ. ಯಾರೂ ಈ ಹಣವನ್ನು ಡ್ರಾ ಮಾಡುವುದೇ ಇಲ್ಲ. ಕಾರಣ ವಿವರಿಸುವ ಅಗತ್ಯವೇ ಇಲ್ಲ. ಸರ್ಕಾರದ ಸಾಧನೆಗಳನ್ನು ತಮ್ಮ ಪಕ್ಷದ ಸಾಧನೆಗಳೆಂದು ತೋರಿಸುತ್ತಾ ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಜಾಹಿರಾತುಗಳಿಗೆ ಖರ್ಚು ಮಾಡುವವರು ರಾಷ್ಟ್ರೀಯ ಉತ್ಸವಗಳಿಗೆ ಬಿಡುಗಡೆ ಮಾಡುವ ಹಣವಿದು! ನಗರಸಭೆ, ಪಂಚಾಯಿತಿಗಳಿಂದ ಹಣದ ಸಹಕಾರ ಪಡೆಯಲಾಗುತ್ತದೆ. ಸರ್ಕಾರ ನಿಗದಿಪಡಿಸಿದಷ್ಟು ಮೊಬಲಗು ಮಾತ್ರ ಅವರುಗಳೂ ಖರ್ಚು ಮಾಡಬೇಕೆಂದಾದರೆ ಕಾರ್ಯಕ್ರಮ ನಡೆಸಲು ಆಗುವುದೇ ಇಲ್ಲ. ಬೇರೆ ರೀತಿಯಲ್ಲಿ ಖರ್ಚುಗಳನ್ನು ತೋರಿಸಿ ಹೊಂದಾಣಿಕೆ ಮಾಡುತ್ತಾರೆ. ನಮ್ಮನ್ನು ಸಭೆಗೆ ಆಹ್ವಾನಿಸಿಲ್ಲವೆಂದು ಕೆಲವು ಸಂಘ-ಸಂಸ್ಥೆಗಳು ಕಿರಿಕಿರಿ, ಪ್ರತಿಭಟನೆಗಳನ್ನೂ ಮಾಡುವುದುಂಟು. ಅವರುಗಳಿಂದ ಯಾವ ರೀತಿ ಸಹಾಯವಾಗುತ್ತಿತ್ತು ಎಂಬುದು ಅಷ್ಟರಲ್ಲೇ ಇರಲಿ, ಅವರಿಗೆ ಬೇಕಾಗಿರುವುದು ಗುರುತಿಸುವುದು, ಗೌರವಿಸುವುದು ಅಷ್ಟೇ ಮತ್ತು ರಾಜಕೀಯ ಕಾರಣಗಳೂ ಅದರಲ್ಲಿರುತ್ತವೆ. ಆಹ್ವಾನ ಪತ್ರಿಕೆಗಳು ತಲುಪಿಲ್ಲವೆಂದು ರಗಳೆ ಮಾಡುವ ಗಣ್ಯರುಗಳಿಗೆ ಸಹ ಕೊರತೆಯಿರುವುದಿಲ್ಲ. ಸಾಂದರ್ಭಿಕವಾಗಿ ಯಾವುದಾದರೂ ಪ್ರತಿಭಟನೆ, ಚಳುವಳಿಗಳು ನಡೆಯುವ ಸಂದರ್ಭದಲ್ಲಿ ಉತ್ಸವಗಳು ಬಂದರೆ ಅದನ್ನೂ ನಿಭಾಯಿಸಬೇಕು. ಭಾಗವಹಿಸುವ ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ, ಗಣ್ಯರುಗಳಿಗೆ ಸನ್ಮಾನ (ಇದರಲ್ಲೂ ರಾಜಕೀಯ ಬರುತ್ತದೆ), ಇತ್ಯಾದಿ, ಇತ್ಯಾದಿಗಳನ್ನು ಸಂಭಾಳಿಸಬೇಕು. ವೇದಿಕೆಯಲ್ಲಿ ಸರಿಯಾದ ಸ್ಥಾನ ಕೊಡಲಿಲ್ಲವೆಂದು ಸಿಟ್ಟು ಮಾಡಿಕೊಳ್ಳುವ ರಾಜಕೀಯದವರು, ಗಣ್ಯಾತಿಗಣ್ಯರುಗಳ ಕೆಂಗಣ್ಣುಗಳನ್ನು ಎದುರಿಸಬೇಕು. ತಮ್ಮ ತಮ್ಮ ಕಛೇರಿಗಳಲ್ಲಿ ಧ್ವಜ ಹಾರಿಸಿ, ಮುಖ ತೋರಿಸಿದಂತೆ ಮಾಡಿ ಮಾಯವಾಗುವ ಅಧಿಕಾರಿಗಳು ಮತ್ತು ಹೆಚ್ಚಿನ ನೌಕರರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಇರುವುದೇ ಇಲ್ಲ. ಭಾಗವಹಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದೆಂಬ ಎಚ್ಚರಿಕೆ ಮಾಮೂಲಾಗಿದ್ದು, ಅದು ಸಾಮಾನ್ಯವಾಗಿ ಜಾರಿ ಮಾಡುವುದು ಕಷ್ಟವೆಂದು ಎಲ್ಲರಿಗೂ ಗೊತ್ತಿದ್ದದ್ದೇ. ರಾಷ್ಟ್ರೀಯ ಉತ್ಸವದ ಜೊತೆಗೂಡಿ ಭಾನುವಾರ ಮತ್ತು ಇತರ ರಜಾದಿನಗಳು ಬಂದರಂತೂ ಖಾಸಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯಕ್ರಮದ ಕುರಿತು ಲೆಕ್ಕಿಸುವುದೇ ಇಲ್ಲ. ಆದರೂ ಕಾರ್ಯಕ್ರಮದ ಯಶಸ್ಸಿಗೆ ಕಂದಾಯ, ಪೋಲಿಸ್, ಶಿಕ್ಷಣ, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪಾತ್ರ ಮಾತ್ರ ಗಮನಿಸಲೇಬೇಕು ಮತ್ತು ಮೆಚ್ಚಲೇಬೇಕು. [ಇಷ್ಟೆಲ್ಲಾ ಸಂಗತಿಗಳ ನಡುವೆ ರಾಷ್ಟ್ರಧ್ವಜವನ್ನು ಸಾರ್ವಜನಿಕವಾಗಿ ತಾಲ್ಲೂಕು ದಂಡಾಧಿಕಾರಿಯಾಗಿ ಹಾರಿಸುವ ಪುಣ್ಯ ಕೆಲವು ವರ್ಷಗಳಾದರೂ ನನಗೆ ಸಿಕ್ಕಿದ್ದಕ್ಕಾಗಿ ಆ ದೇವರನ್ನು ನೆನೆಯುತ್ತೇನೆ. ಆ ಸಂತಸದ ಘಳಿಗೆಯಲ್ಲಿ ನನ್ನ ಕಷ್ಟಗಳೆಲ್ಲಾ, ಅನುಭವಿಸಿದ ನೋವುಗಳೆಲ್ಲಾ ಮರೆಯಾಗಿಬಿಡುತ್ತಿತ್ತು.] 'ತಾಯಿ ಭಾರತಿ, ನಿನಗೆ ಜಯವಾಗಲಿ.'

     ಇನ್ನು ಸಾಮಾನ್ಯರ ದೃಷ್ಟಿಯಲ್ಲಿ ನೋಡೋಣ. ಕೂಲಿಗಾರರು, ಅಂದಿನ ಊಟವನ್ನು ಅಂದೇ ದುಡಿದು ಗಳಿಸುವ ಸ್ಥಿತಿಯಿರುವವರು ಊಟವನ್ನು ಬಿಟ್ಟು ಭಾಗವಹಿಸಲು ಸಾಧ್ಯವಿದೆಯೇ? ಆದರೆ ಅವರಿಗಿಂತ ಮೇಲಿರುವವರಾದರೂ ಭಾಗವಹಿಸುತ್ತಾರೆಯೇ? ಹೇಗೂ ರಜೆ ಸಿಕ್ಕಿದೆ, ಮಜಾ ಮಾಡೋಣ, ಉಪಯೋಗಿಸಿಕೊಳ್ಳೋಣ ಎಂಬ ಮನೋಭಾವದವರೇ ಜಾಸ್ತಿ. ಇನ್ನು ಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿ ಉತ್ಸವಕ್ಕೆ ಕಳೆ ಕೊಡುತ್ತಿದ್ದಾರೆ. ಕಾಲೇಜು ಮೆಟ್ಟಲು ಹತ್ತಿದವರು ಹೆಚ್ಚಿನವರು ತಮ್ಮ ಹೆತ್ತವರು, ದೊಡ್ಡವರನ್ನು ಅನುಸರಿಸಿ ದೂರ ಉಳಿದುಬಿಡುತ್ತಾರೆ. ಖಾಸಗಿ ಸಂಸ್ಥೆಗಳವರು ಅಂದು ರಜೆ ಘೋಷಿಸಿ ಕರ್ತವ್ಯ ಮುಗಿಯಿತೆಂದುಕೊಳ್ಳುತ್ತಾರೆ. 'ತಾಯಿ ಭಾರತಿ, ನಿನ್ನ ಮಕ್ಕಳು ಇವರಮ್ಮಾ!'

     'ಏನು ಹೇಳುತ್ತಿದ್ದೀರಿ? ಯಾರಿಗೂ ದೇಶಪ್ರೇಮವಿಲ್ಲವೆನ್ನುತ್ತೀರಾ?' ಎಂದು ಸಿಟ್ಟಾಗುತ್ತೀರಿ ಎಂದು ನನಗೆ ಗೊತ್ತು. ಎಲ್ಲರಿಗೂ ದೇಶಪ್ರೇಮವಿದೆ. ಅದನ್ನು ವೈಭವದಿಂದ ತೋರಿಸುತ್ತಲೂ ಇದ್ದಾರೆ. ರಾಜಕೀಯ ಪಕ್ಷಗಳವರು ಪ್ರತ್ಯೇಕವಾಗಿ ತಮ್ಮ ತಮ್ಮ ಕಾರ್ಯಾಲಯಗಳಲ್ಲಿ ಧ್ವಜ ಹಾರಿಸಿ ಸಿಹಿ ಹಂಚಿ ತಿನ್ನುತ್ತಾರೆ. ವಿವಿಧ ಸಂಘಗಳು, ಸಂಸ್ಥೆಗಳು, ಸಂಘಟನೆಗಳು ಸಹ ಪ್ರತ್ಯೇಕವಾಗಿ ಉತ್ಸವಗಳನ್ನು ಜೋರಾಗಿಯೇ ಆಚರಿಸುತ್ತಾರೆ. ಎದ್ದು ಕಾಣುವಂತೆ ಪೆಂಡಾಲು ಹಾಕುತ್ತಾರೆ, ವಿವಿಧ ಆಟೋಟ-ಸ್ಪರ್ಧೆಗಳನ್ನು ನಡೆಸುತ್ತಾರೆ, ರೋಗಿಗಳಿಗೆ ಹಣ್ಣು-ಹಂಪಲು ಹಂಚುತ್ತಾರೆ, ರಕ್ತದಾನ ಮಾಡುತ್ತಾರೆ. ಖಾಸಗಿಯವರು ಖಾಸಗಿಯಾಗಿ ಆಚರಿಸುತ್ತಾರೆ. ಸಮಾನ ಮನೋಭಾವದವರು ಒಟ್ಟಾಗಿ ಸೇರಿ ಜೈ ಎನ್ನುತ್ತಾರೆ. ಎಲ್ಲರೂ ದೇಶಪ್ರೇಮಿಗಳೇ, ಎಲ್ಲರೂ ದೇಶಕ್ಕೆ, ದೇಶವಾಸಿಗಳಿಗೆ ಒಳ್ಳೆಯದಾಗಲಿ ಎನ್ನುವವರೇ. ಆದರೆ ಹಾಗೆ ಅನ್ನುವುದು ಪ್ರತ್ಯೇಕ ಪ್ರತ್ಯೇಕವಾಗಿ! 'ಅಮ್ಮಾ, ನಾನು ನಿನ್ನ ಪ್ರೀತಿಯ ಮಗ' ಎಂದು ಪ್ರತ್ಯೇಕವಾಗಿ ಹೇಳಿದರೆ ತಪ್ಪೇನೂ ಇಲ್ಲ. ಆದರೆ ಅದರೊಂದಿಗೆ ಎಲ್ಲಾ ಮಕ್ಕಳೂ ಒಟ್ಟಾಗಿ ಹೇಳಲು ಇರುವ ಅವಕಾಶವನ್ನೂ ಉಪಯೋಗಿಸಿಕೊಂಡರೆ 'ಅಮ್ಮ'ನಿಗೆ ಹಿತವಾಗುವುದಿಲ್ಲವೇ? ಸರ್ಕಾರೀ ಕಾರ್ಯಕ್ರಮವೆಂದು ಮೂಗು ಮುರಿಯಬೇಕಿಲ್ಲ. ಅಷ್ಟಾಗಿ ಸರ್ಕಾರ ಯಾರದ್ದು? ಅಧಿಕಾರಿಗಳದ್ದೇ? ರಾಜಕಾರಣಿಗಳದ್ದೇ? ನಮ್ಮದೇ ಅಲ್ಲವೇ? ನಮ್ಮ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದರೆ, ಅದರ ಯಶಸ್ಸಿಗೆ ಕೈಜೋಡಿಸಿದರೆ 'ಅಮ್ಮ'ನಿಗೆ ಹಿತವೆನಿಸೀತು.

     ಅವಕಾಶ ಮಾಡಿಕೊಂಡು -ಮನಸ್ಸು ಮಾಡಿದರೆ ಕಷ್ಟವೇನಲ್ಲ- ಸಾರ್ವಜನಿಕವಾಗಿ ಆಚರಿಸುವ ರಾಷ್ಟ್ರೀಯ ಉತ್ಸವಗಳಲ್ಲಿ ಪಾಲುಗೊಳ್ಳೋಣ, ಅದರ ಸವಿಯನ್ನು ಸವಿಯೋಣ, ಇತರರಿಗೂ ಹಂಚೋಣ. ಉತ್ಸಾಹದಿಂದ ಬಣ್ಣ ಬಣ್ಣದ ಉಡುಗೆಗಳು, ಯೂನಿಫಾರಂ ಧರಿಸಿ ಚಟುವಟಿಕೆಯಿಂದ ಪೆರೇಡಿನಲ್ಲಿ ಭಾಗವಹಿಸುವ ಚಂದದ ಪುಟಾಣಿಗಳಲ್ಲಿ ನಮ್ಮ ದೇಶದ ಭವಿಷ್ಯವಿದೆಯೆಂಬುದನ್ನು ಅರಿಯೋಣ. ಭಾಗವಹಿಸುವ ಪೋಲಿಸರು, ಹೋಮ್ ಗಾರ್ಡುಗಳು, ಎನ್‌ಸಿಸಿ, ಮುಂತಾದವರಿಗೆ ಹುರುಪು ಮೂಡುವಂತೆ ಮಾಡೋಣ. ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುವ ಚಿಣ್ಣರನ್ನು ಕಂಡು ಸಂತೋಷಿಸೋಣ, ಪ್ರೋತ್ಸಾಹಿಸೋಣ. ಇಂತಹ ಕಾರ್ಯಕ್ರಮದಲ್ಲಿ ಜಾತೀಯತೆಯ ಸೋಂಕಿರುವುದಿಲ್ಲ, ಭಾಷೆಗಳ ಅಡ್ಡಗೋಡೆಗಳಿರುವುದಿಲ್ಲ, ಅಂತಸ್ತುಗಳ ತಾಕಲಾಟವಿರುವುದಿಲ್ಲ. ನಿಜವಾಗಿ ಆಗಬೇಕಿರುವುದೇನೆಂದರೆ ಸರ್ಕಾರದ ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವುದಲ್ಲ, ಜನರ ಕಾರ್ಯಕ್ರಮದಲ್ಲಿ ಸರ್ಕಾರ ಭಾಗವಹಿಸುವುದು! ಮನಸ್ಸು ಮಾಡೋಣ, ರಾಷ್ಟ್ರೀಯ ಾ

ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸೋಣ, ಭಾಗವಹಿಸದಿರುವುದಕ್ಕೆ ಕಾರಣ ಕೊಡದಿರೋಣ. ಆಗ ಕಾಲೇಜುಗಳಿಗೆ ಹೋಗುವ ನಮ್ಮ ಮಕ್ಕಳೂ ಭಾಗವಹಿಸುತ್ತಾರೆ, ನಮ್ಮ ಸ್ನೇಹಿತರು, ಅಕ್ಕಪಕ್ಕದವರೂ ಭಾಗವಹಿಸುತ್ತಾರೆ, ಚಕ್ಕರ್ ಕೊಡುವ ಅಧಿಕಾರಿಗಳೂ ಭಾಗವಹಿಸುತ್ತಾರೆ. ಸೆಲೆಬ್ರಿಟಿಗಳೂ ಅನಿವಾರ್ಯವಾಗಿ ಭಾಗವಹಿಸಬೇಕಾಗುತ್ತದೆ. ಅಂತಹ ದಿನಗಳು ಬರಲಿ!

"ಎಲ್ಲಾ ಭೇದ ಮರೆತು, ಬನ್ನಿರಿ ನಾವು ಸಮಾನ

ಸಾರುವ ಇಂದು ಎಲ್ಲರೂ ಒಂದು ಇದುವೇ ನವಗಾನ!"

     

 

Comments

Submitted by nageshamysore Thu, 08/15/2013 - 19:47

ಕವಿ ನಾಗರಾಜರೆ, ನೀವು ಭಾಗವಹಿಸುವಿಕೆಯ ಕುರಿತು ಕೊನೆಯಲಿ ಹೇಳಿದ ಅಂಶ ಗಮನಾರ್ಹ. ಭಾಗವಹಿಸುವಿಕೆ ಉತ್ಸಾಹವನ್ನು ಪ್ರತಿಬಿಂಬಿಸುವುದರ ಪ್ರತೀಕ. ಹಾಗಾದಾಗಲೆ ಏಕತೆಯ ಭಾವನೆಗೆ ಹೆಚ್ಚು ಬಲ ಬರುವುದು. ತಮಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು - ನಾಗೇಶ ಮೈಸೂರು
Submitted by partha1059 Thu, 08/15/2013 - 20:10

ಸ್ವಾತಂತ್ರೋತ್ಸವ‌ ಆಚರಿಸುವುದು ಹೇಗಿರಬೇಕೆಂದು ನೀವು ಹಾಗು ವೆಂಕಟೇಶರು ಒಟ್ಟಾಗಿ ಹೇಳಿದ್ದೀರಿ ವಂದನೆಗಳು ಹಾಗು ತಮಗೂ ಸ್ವಾತಂತ್ರೋತ್ಸವದ‌ ಅಭಿನಂದನೆಗಳು
Submitted by makara Thu, 08/15/2013 - 22:27

ಕವಿಗಳೇ, ನಾನೂ ಸ್ವಾತಂತ್ರ‍್ಯ ದಿನೋತ್ಸವದ ಬಗ್ಗೆ ಒಂದು ರೀತಿ ಅಸಡ್ಡೆಯನ್ನೇ ತೆಳೆದಿದ್ದೆ. ವರ್ಷ ವರ್ಷವೂ ಅದೇ ಪುಂಗಿ ಊದುತ್ತಾರೆ ಅಂತಾ. ಆ ಕಾರಣಗಳನ್ನು ಬದಿಗಿಟ್ಟು ನಮ್ಮ ಮಕ್ಕಳ ಭಾಗವಹಿಸುವಿಕೆಯನ್ನಾದರೂ ಪ್ರೋತ್ಸಾಹಿಸಬೇಕೆಂದು ನಿಮ್ಮ ಲೇಖನದಿಂದ ಮನದಟ್ಟಾಯಿತು. ಇಲ್ಲದಿದ್ದರೆ ನಾಳೆಯ ದಿವಸ ಅವರೂ ಸಹ ಸ್ವಾತಂತ್ರೋತ್ಸವದ ಬಗೆಗೆ ಇದೇ ಭಾವನೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ