ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ : ನಮ್ಮ ಕೊಡುಗೆ ಏನು?

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ : ನಮ್ಮ ಕೊಡುಗೆ ಏನು?

ಡಿಸೆಂಬರ್ ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ವಿಶ್ವದಾದ್ಯಂತ ಈಗ ಎದ್ದಿರುವ ಕೂಗು ಕೊರೋನಾ. ಇದರ ಹಾವಳಿಯನ್ನು ತಡೆಯಲು ಸರಕಾರ ತೆಗೆದುಕೊಂಡ ತುರ್ತು ಕ್ರಮವೆಂದರೆ ಲಾಕ್ ಡೌನ್. ಇದರಿಂದಾಗಿ ಭಾರತದಾದ್ಯಂತ ನಗರಗಳ ಹಾಗೂ ಗ್ರಾಮಗಳ ಜನಜೀವನ ಸ್ಥಬ್ಧವಾದವು. ಎಲ್ಲಾ ವಾಹನಗಳು ರಸ್ತೆಗಿಳಿಯದೇ ಇದ್ದುದರಿಂದ ಏರ್ ಕ್ವಾಲಿಟಿ ಇಂಡೆಕ್ಸ್ ತುಂಬಾನೇ ಕಮ್ಮಿ ಆಗಿತ್ತು. ವಾಯು ಮಾಲಿನ್ಯ ಮಟ್ಟ ತುಂಬಾನೇ ಜಾಸ್ತಿ ಇರುವ ನವದೆಹಲಿ, ಮುಂಬಯಿ ಮುಂತಾದ ದೊಡ್ಡ ನಗರಗಳಲ್ಲಿ ಬಹುತೇಕ ಕಮ್ಮಿ ಆಗಿತ್ತು. ಇದರಿಂದ ವ್ಯವಹಾರಿಕವಾಗಿ ನಷ್ಟವಾದರೂ ಆರೋಗ್ಯ ವೆಚ್ಚದಲ್ಲಿ ತುಂಬಾನೇ ಲಾಭವಾಗಿದೆ ಎಂಬುದು ವಿಶ್ಲೇಷಕರ ವರದಿ. 

ಮಾನವನ ನಿರಂತರ ಆಕ್ರಮಣದಿಂದ ವಾಯು, ಜಲ ಹಾಗೂ ಮಣ್ಣು (ಭೂಮಿ) ಕಲುಷಿತಗೊಳ್ಳುತ್ತಲೇ ಇದೆ. ಸಂಬಂಧ ಪಟ್ಟ ಇಲಾಖೆಗಳು ಏನೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜನರ ಬೆಂಬಲವಿಲ್ಲದೇ ಇದರ ಸಫಲತೆ ಸಾಧ್ಯವೇ ಇಲ್ಲ. ಈಗ ನಮಗೆ ಉಚಿತವಾಗಿ ಸಿಗುವ ವಸ್ತು ಎಂದರೆ ಗಾಳಿ ಮಾತ್ರ (ನೀರನ್ನೂ ನಾವು ಬಾಟಲಿಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದೇವೆ). ವಾಯು ಮಾಲಿನ್ಯದಿಂದ ಮಾನವನ ಆರೋಗ್ಯ ಕೆಡುವುದರ ಜೊತೆಗೆ ಪರಿಸರದಲ್ಲಿರುವ ಇತರೆ ಪ್ರಾಣಿ ಪಕ್ಷಿಗಳು ಹಾಗೂ ಗಿಡ ಮರಗಳೂ ಭಾಧೆಗೆ ಒಳಪಡುತ್ತವೆ. ಹೀಗೇ ಮುಂದುವರೆದರೆ ನಾವು ಈಗ ಹೇಗೆ ಮಾಸ್ಕ್ ಹಾಕಿ ತಿರುಗಾಡುತ್ತಿದ್ದೇವೋ, ಅದೇ ರೀತಿ ಆಮ್ಲಜನಕ ಜಾಡಿಗಳನ್ನು ಬೆನ್ನಿಗೆ ಕಟ್ಟಿ ಅದರ ಮಾಸ್ಕ್ ಹಾಕಿ ಶುದ್ಧ ಗಾಳಿ ಸೇವನೆ ಮಾಡಬೇಕಾದ ಪರಿಸ್ಥಿತಿ ಬಂದರೂ ಬರಬಹುದೇನೋ? ಆಗ ನಾವು ಉಸಿರಾಡುವ ಗಾಳಿಗೂ ಹಣ ಕೊಟ್ಟಂತೆ ಆಗುತ್ತದೆ. 

ನಾವಿಂದು ನಗರದ ಸೌಂದರ್ಯದ ಹಾಗೂ ವಿಸ್ತರಣೆಯ ನೆಪದಲ್ಲಿ ಜಲ ಸಂಪನ್ಮೂಲಗಳನ್ನು ಹಾಳು ಮಾಡುತ್ತಾ ಸಾಗಿದ್ದೇವೆ. ಕೆರೆಗಳಿಗೆ ಮಣ್ಣು ತುಂಬಿಸಿ, ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. ಇರುವ ಕೆರೆಗಳು ಹೂಳು ತುಂಬಿ ನೀರು ಮಲಿನವಾಗಿದೆ. ಕುಡಿಯಲು ಅಯೋಗ್ಯವಾಗಿದೆ. ಕೆಲವು ಕೆರೆಗಳ ಹೂಳೆತ್ತಿದ್ದರೆ ಅದರ ನೀರು ಇಡೀ ನಗರಕ್ಕೆ ಸಾಕಾಗಬಹುದೇನೋ ಅಷ್ಟು ದೊಡ್ಡದಾದ ಕೆರೆಗಳು ನಮ್ಮಲ್ಲಿವೆ. ಆದರೆ ಸರಕಾರಕ್ಕೆ ದಿವ್ಯ ನಿರ್ಲಕ್ಷ್ಯ. ಜನರಿಗೆ ಆ ಕೆರೆ ಕಸ ಬಿಸಾಕುವ ಗುಂಡಿಯಾಗಿ ಹೋಗಿದೆ. ನೀರನ್ನು ಹಣ ತೆತ್ತು ಟ್ಯಾಂಕರ್ ಮೂಲಕ ತರಿಸಿಕೊಳ್ಳುತ್ತೇವೆ. ಅದಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತೇವೆ. ನಮ್ಮದೇ ಊರಿನ ಕೆರೆ, ನದಿಗಳನ್ನು ಉಳಿಸಿದರೆ ಎಷ್ಟು ಹಣ ಪೋಲಾಗುವುದನ್ನು ತಡೆಯಬಹುದಲ್ಲವೇ?

ನೀರು, ಗಾಳಿ ಜೊತೆಗೆ ಶಬ್ದ ಮಾಲಿನ್ಯ, ಬೆಳಕಿನ ಮಾಲಿನ್ಯ ಎಲ್ಲವೂ ನಮ್ಮ ಸಮಾಜವನ್ನು ಕಾಡುತ್ತಿದೆ. ಸಂತೆಯೊಳಗೆ ಮನೆಯ ಮಾಡಿ ಶಬ್ದಕ್ಕೆ ಅಂಜಿದರೆ ಹೇಗೆ? ಎಂದು ಸರ್ವಜ್ಞ ಮಹಾಕವಿಯು ಬಹಳ ಹಿಂದೆಯೇ ಬರೆದಿದ್ದಾರೆ. ನಮ್ಮ ಬಹುತೇಕರ ಪರಿಸ್ಥಿತಿ ಹಾಗೇ ಆಗಿದೆ. ನಮಗೆ ಮನೆಯಿಂದ ಕಾಲು ಹೊರಗೆ ಇಟ್ಟ ತಕ್ಷಣ ರಸ್ತೆ ಇರಬೇಕು. ಹೀಗಾಗಿ ಹಗಲು ರಾತ್ರಿ ನಮಗೆ ವಾಹನಗಳದ್ದೇ ಸದ್ದು. ಕೆಲವರಂತೂ ಆ ಶಬ್ದಕ್ಕೇ ದಾಸರಾಗಿ ಹೋಗಿದ್ದಾರೆ. ವಾಹನಗಳ ಶಬ್ದ ಕೇಳದೇ ಇದ್ದರೆ ನಿದ್ರೆನೇ ಬರಲ್ಲ ಅನ್ನುತ್ತಾರೆ. ಹೀಗಾಗಿದೆ ನಮ್ಮ ಸ್ಥಿತಿ. ವಾಹನಗಳ ತೀವ್ರವಾದ ಬೆಳಕು ನಮ್ಮ ಕಣ್ಣಿನ ದೃಷ್ಟಿಗೂ ಮಾರಕ. ಇವೆಲ್ಲವುಗಳು ನಮ್ಮನ್ನು ನಿರಂತರ ವೈದ್ಯರ ಸಂಪರ್ಕದಲ್ಲಿರುವಂತೆ ಮಾಡುತ್ತಿವೆ. ನಗರದಲ್ಲಿರುವವರಿಗೆ ದೃಷ್ಟಿ, ಶ್ರವಣ ದೋಷಗಳೆಲ್ಲಾ ಸಾಮಾನ್ಯವಾಗಿ ಹೋಗಿದೆ. ವಯಸ್ಸು ೪೦ ಆಗುವ ಮೊದಲೇ ಕನ್ನಡಕ ಬಂದಿದೆ. ಭೂಮಿಯ ಮೇಲಿನ ಈ ನಿರಂತರ ದೌರ್ಜನ್ಯವನ್ನು ತಡೆಗಟ್ಟುವ ದೃಷ್ಟಿಯಿಂದ ಡಿಸೆಂಬರ್ ೨ ನ್ನು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಎಂದು ಆಚರಿಸಲಾಗುತ್ತದೆ.

೧೯೮೪ರಲ್ಲಿ ಮಧ್ಯಪ್ರದೇಶದ ಭೋಪಾಲದಲ್ಲಿ ವಿಷಾನಿಲ ದುರಂತ ನಡೆದದ್ದು ಇದೇ ಡಿಸೆಂಬರ್ ೨ ಮತ್ತು ೩ರ ನಡು ರಾತ್ರಿ. ಸಾವಿರಾರು ಜನರ ಬದುಕನ್ನೇ ನಾಶ ಮಾಡಿದ ಈ ದುರಂತ ಜಗತ್ತಿಗೇ ಆಘಾತ ತಂದಿತ್ತು. ಇದರಲ್ಲಿ ಮಡಿದವರ ಸ್ಮರಣಾರ್ಥ ಹಾಗೂ ಜನರಲ್ಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಈ ದಿನ (ಡಿಸೆಂಬರ್ ೨) ವನ್ನು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಎಂದು ಘೋಷಿಸಲಾಗಿದೆ. 

ವಾಯು ಮಾಲಿನಕ್ಕೆ ಬಹಳಷ್ಟು ಕಾರಣಗಳು ನಾವು ಹುಟ್ಟಿ ಹಾಕಿದ್ದೇ ಆಗಿರುತ್ತದೆ. ನಮ್ಮ ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಭರಿತ ಹೊಗೆ, ಗ್ರಾಮಗಳಲ್ಲಿ ಒಲೆ ಉರಿಸಲು ಬಳಸುವ ಕಟ್ಟಿಗೆಗಳಂತಹ ಉರುವಲುಗಳು, ನಾವು ವಾಹನ ಚಲಿಸಲು ಬಳಸುವ ಇಂಧನ, ಒಮ್ಮೆ ಬಳಸಿ ಬಿಸಾಕುವ ಹಾನಿಕಾರಕ ಪ್ಲಾಸ್ಟಿಕ್ ಗಳು ಹಾಗೂ ಅವುಗಳನ್ನು ಉರಿಸುವುದರಿಂದ ಆಗುವ ವಾಯು ಮಾಲಿನ್ಯ ಹೀಗೆ ಹತ್ತು ಹಲವಾರು ಕಾರಣಗಳು ನಮ್ಮ ಬದುಕನ್ನು ಇನ್ನಷ್ಟು ಹಾಳು ಮಾಡುತ್ತಿವೆ. 

ನಾವು ಇನ್ನಾದರೂ ಎಚ್ಚೆತ್ತು ಕೊಳ್ಳಬೇಕಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ವಾಯು ಮಾಲಿನ್ಯಕ್ಕೆ ಒಳಪಟ್ಟ ಬಹುತೇಕ ನಗರಗಳು ಭಾರತ ದೇಶದಲ್ಲಿವೆ ಎಂಬುದೇ ಬೇಸರದ ಸಂಗತಿ. ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ನಾವು ಮಾಲಿನ್ಯವನ್ನು ಕಮ್ಮಿ ಮಾಡಲೇ ಬೇಕು. ನಮ್ಮ ಮುಂದಿನ ಪೀಳಿಗೆಗೆ ವಿಷ ಮುಕ್ತವಾದ ಭೂಮಿಯನ್ನು ಬಿಟ್ಟು ಹೋಗಬೇಕು.   

ಚಿತ್ರ ಕೃಪೆ: ಅಂತರ್ಜಾಲ ತಾಣ