ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

1984 ದಶಂಬರ 2 ರಂದು ನಡೆದ ದುರ್ಘಟನೆ, ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಸುಮಾರು ಐದು ಲಕ್ಷ ಜನರ ಜೀವಕ್ಕೆ ತೊಂದರೆಯಾಗಿ, ಅಂದಾಜು 3,700 ಮಂದಿಯ ಉಸಿರೇ ನಿಂತಿತು. ವಿಶ್ವದಲ್ಲಿಯೇ ಅತಿ ದೊಡ್ಡ ಅನಿಲ ದುರಂತವಿದು. ಕಷ್ಟಕ್ಕೊಳಗಾದವರ, ಮಡಿದವರ ದು:ಖಿತರ ಸ್ಮರಣಾರ್ಥ ಈ ದಿನವನ್ನು (ದಶಂಬರ 2) ‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ’ ಎಂದು ಘೋಷಿಸಲಾಯಿತು.

ಈ ದಿನದಂದು ಮಾಲಿನ್ಯದ ಬಗ್ಗೆ ಎಚ್ಚರಿಕೆ, ಜಾಗ್ರತೆ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು. ಜನಸಂಖ್ಯಾ ಹೆಚ್ಚಳ, ಒಂದೊಂದು ಮನೆಯಲ್ಲಿ ಎರಡು-ಮೂರು ವಾಹನಗಳು, ಕಾಲ್ನಡಿಗೆಯಲ್ಲಿ ಹೋಗುವವರು ಬಹಳ ಕಡಿಮೆ, ಜಲ, ವಾಯು, ಪರಿಸರ ಮಾಲಿನ್ಯದ ಹೆಚ್ಚಳ, ಕಾರ್ಖಾನೆಗಳ ತ್ಯಾಜ್ಯ ಪರಿಸರಕ್ಕೆ, ಕೀಟ ನಿಯಂತ್ರಕಗಳ ಪ್ರಭಾವ, ವಿಪರೀತ ಪ್ಲಾಸ್ಟಿಕ್ ಬಳಕೆ, ಬೆಳೆ ತ್ಯಾಜ್ಯಗಳ ಸುಡುವಿಕೆ ಇದರಿಂದ ಮಾಲಿನ್ಯ ಉಂಟಾಗುತ್ತದೆ. ಚರ್ಮ ರೋಗಗಳು, ಉಸಿರಿನ ತೊಂದರೆಗಳು, ಶ್ವಾಸಕೋಶದ ಕಾಯಿಲೆಗಳು, ಆರೋಗ್ಯ ಕೆಡಿಸುವ ವಿಕಿರಣಗಳು, ಮಾನವನ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಮುಖ್ಯವಾಗಿ ಉಸಿರು ನೀಡುವ ಹಸಿರನ್ನು ಹೆಚ್ಚು ಹೆಚ್ಚು ನೆಟ್ಟು ಬೆಳೆಸಬೇಕು. ‘ಪ್ರಕೃತಿ ರಕ್ಷಣೆ ನಮ್ಮೆಲ್ಲರ  ಹೊಣೆ’ ಆದಷ್ಟೂ ಹತ್ತಿರದ ದಾರಿಯಾದರೆ ಕಾಲ್ನಡಿಗೆ ಮಾಡಬಹುದು. ಉತ್ತಮ ವ್ಯಾಯಾಮ ಸಹ. ಆರೋಗ್ಯವೂ ಸಮತೋಲನದಲ್ಲಿರಬಹುದು. ಉಸಿರಾಟದ ಗಾಳಿಯ ಕೊರತೆ ಪರದಾಟವನ್ನು ಕೊರೋನಾದಲ್ಲಿ ಕಣ್ಣಾರೆ ಕಂಡಿದ್ದೇವೆ. ವಿಷಾನಿಲ ಮಿಶ್ರವಾದ ಗಾಳಿ ಅನೇಕ ರೋಗಗಳಿಗೆ ಮೂಲವಾಗಬಹುದು. ನಮ್ಮ ನಮ್ಮ ಮನೆಯ ಪರಿಸರದಲ್ಲಿ ಹಸಿರು ಸಸ್ಯಗಳನ್ನು ನೆಟ್ಟು ಬೆಳೆಸಿ, ಪ್ರಕೃತಿಗೆ, ಸಮಾಜಕ್ಕೆ, ನಮಗಾಗಿ ಕೈಯಿಂದಾದ ಸಹಕಾರ ಮಾಡೋಣ.

ಶಾಲಾ ಕಾಲೇಜುಗಳಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಶಾಲಾ ಕೈತೋಟಕ್ಕೆ ಸ್ಥಳಾವಕಾಶವಿದ್ದಲ್ಲಿ ಆದ್ಯತೆ ನೀಡಬಹುದು. ಆಮ್ಲಜನಕದ ಕೊರತೆ ಉಸಿರನ್ನೇ ನಿಲ್ಲಿಸಬಹುದೆಂಬ ಅರಿವು ಮೂಡಿಸುವುದು. ರಾ‌ಸಾಯನಿಕಗಳ ಬಳಕೆಯಿಂದ ಬೆಳೆಯೇನೋ ಸಿಗಬಹುದು, ಆದರೆ ಜೀವ ಜಂತುಗಳ ನಾಶಕ್ಕೆ ಕಾರಣ, ಪರಿಸರ ಮಾಲಿನ್ಯ ಉಂಟಾಗುತ್ತದೆಯೆಂಬ ಪ್ರಜ್ಞೆಯೂ ಬೇಕು. ಒಟ್ಟಿನಲ್ಲಿ ಮುಂದಿನ ಪೀಳಿಗೆಗೆ ಪ್ರಕೃತಿ ಮಾತೆಯನ್ನು ಬರಿದು ಮಾಡದೆ, ಬಟ್ಟ ಬಯಲಾಗಿಸದೆ ಹಸಿರಿನಿಂದ ಕಂಗೊಳಿಸುವ ಹಾಗೆ ಎಲ್ಲರೂ ಮನಸ್ಸು ಮಾಡೋಣ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ