ರಾಷ್ಟ್ರೀಯ ವಿಜ್ಞಾನ ದಿನ

ರಾಷ್ಟ್ರೀಯ ವಿಜ್ಞಾನ ದಿನ

ನಮ್ಮ ಜೀವನದ ಮೇಲೆ ಜ್ಞಾನ-ವಿಜ್ಞಾನಗಳು ಸಾಕಷ್ಟು ಪ್ರಭಾವ ಬೀರಿದ ಅಂಶಗಳು. ಒಂದನ್ನೊಂದು ಬಿಟ್ಟಿರಲಾರದ ಬಂಧಗಳು. ‘ಚಂದ್ರಶೇಖರ ವೆಂಕಟರಾಮನ್’- ಸರ್ ಸಿ.ವಿ.ರಾಮನ್ ಅವರು ೧೯೨೮ರ ಫೆಬ್ರವರಿ ೨೮ ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ‘ಬೆಳಕಿನ ಚದುರುವಿಕೆಯ ಪರಿಣಾಮಗಳು’  ಜಗತ್ಪ್ರಸಿದ್ಧವಾಗಿ, ಅದೇ ದಿನವನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ೧೯೮೬ನೇ ಫೆಬ್ರವರಿ ೨೮ನೇ ದಿನವನ್ನು ಘೋಷಿಸಲಾಯಿತು.

ಬೆಳಕಿನ ಚದುರುವಿಕೆಯ ಪರಿಣಾಮಗಳು ಎಂಬ ಸಂಶೋಧನೆಯ ಮೇಲೆ ಸರಿಸುಮಾರು ೫೦೦೦ ಪ್ರಬಂಧಗಳು ಮಂಡನೆಯಾಯಿತು. ದೇಶವಿದೇಶದಲ್ಲೂ ಇದರ ಬಗ್ಗೆ ಸಂಶೋಧನೆಗಳು ಮತ್ತಷ್ಟೂ ನಡೆದು ಪತ್ರಿಕೆಗಳಲ್ಲಿ ಬಿತ್ತರಿಸಲ್ಪಟ್ಟಿತು. ವೈಜ್ಞಾನಿಕ ಪತ್ರಿಕೆಗಳಲ್ಲಿಯೂ ಪ್ರಕಟವಾಯಿತು. ಹಲವಾರು ವರುಷಗಳ ಸತತ ಅಧ್ಯಯನವಾಯಿತು. ಸರ್ ಸಿ.ವಿ.ರಾಮನ್ ಅವರಿಗೆ ೧೯೩೦ ರಲ್ಲಿ ನೊಬೆಲ್ ಪಾರಿತೋಷಕ ಅರಸಿ ಬಂತು.

ವಿಜ್ಞಾನವನ್ನು ಒಳ್ಳೆಯದು ಕೆಟ್ಟದು ಎರಡೂ ರೀತಿಯಲ್ಲಿ ಬಳಸಬಹುದೆಂಬುದನ್ನು ನಾವೆಲ್ಲರೂ ಓದುತ್ತಿದ್ದೇವೆ, ಕಣ್ಣಾರೆ ಕಾಣುತ್ತಿದ್ದೇವೆ, ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಜನರ ಜೀವನಮಟ್ಟ ಸುಧಾರಣೆ, ಮೌಲ್ಯವರ್ಧನೆ, ಇದೆಲ್ಲ ಸರಿ, ಒಪ್ಪೋಣ. ವಿನಾಶ ಯಾಕೆ? ದೇಶ ದೇಶದ ಮೇಲೆ ಕತ್ತಿ ಮಸೆತ ಯಾಕೆ? ಇದಕ್ಕೆ ವೈಜ್ಞಾನಿಕ ಸಂಶೋಧನೆಗಳ ದುರ್ಬಳಕೆ ಆಗಬಾರದು. ಪೀಳಿಗೆಗೆ ಒಳ್ಳೆಯದನ್ನು ದಾಟಿಸುವ ಕೆಲಸವಾಗಬೇಕು. ಹೊಸ ಹೊಸ ದಾರಿಗಳನ್ನು ಸೃ‌ಷ್ಟಿಸಬೇಕು. ದೇಶದ ಅಭಿವೃದ್ಧಿಯೊಂದಿಗೆ ಜನರ ಜೀವನಮಟ್ಟ ಸುಧಾರಿಸಬೇಕು. ಸೃಜನಶೀಲತೆಗೆ ಒತ್ತು ನೀಡುವ ಸಂಶೋಧನೆಗಳು, ಹೊಸ ರೋಗಗಳ ಆಗಮನಕ್ಕೆ ಕಾರಣಗಳು, ಔಷಧ ಕಂಡುಹಿಡಿಯುವುದು, ಬರದಂತೆ ತಡೆಗಟ್ಟುವಿಕೆ ಈ ಕೆಲಸಗಳಾಗಲಿ. ಸಮಾಜದಲ್ಲಿ ವೈಜ್ಞಾನಿಕ ಮನೋಧರ್ಮ ಹೆಚ್ಚು ಪ್ರಚಾರವಾಗುವಂತಿರಬೇಕು. ಬಾಹ್ಯಾಕಾಶ ತಂತ್ರಜ್ಞಾನ ಬೆಳೆಯಲಿ. ಜನರಲ್ಲಿ ಕುತೂಹಲ ಮೂಡಿಸುವ ಸಂಶೋಧನೆಗಳು ನಡೆಯಲಿ. ಜಾಗೃತಿ ಮೂಡಿಸುವ ಮನೋಭಾವ ಬೆಳೆಯಬೇಕು. ಚಿಂತನ-ಮಂಥನಗಳು, ಕಾರ್ಯಾಗಾರಗಳು ನಡೆಯಲಿ. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ರಸಪ್ರಶ್ನೆ, ವೈಜ್ಞಾನಿಕ ಗೋಷ್ಠಿಗಳು, ಪ್ರತಿಭಾ ಪ್ರದರ್ಶನ, ಸಂಶೋಧನೆಗಳ ಗುರುತಿಸುವಿಕೆ, ಸೆಮಿನಾರ್ ಗಳು, ಪ್ರಬಂಧ ಮಂಡನೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲೆಂಬ ಸದಾಶಯ.

-ರತ್ನಾ ಕೆ ಭಟ್ ತಲಂಜೇರಿ

ಆಕರ ಪುಸ್ತಕ:ವೈಜ್ಞಾನಿಕ ದೃಷ್ಟಿಕೋನ