ರಾಷ್ಟ್ರೀಯ ವೈದ್ಯರ ದಿನಾಚರಣೆ
ನಮ್ಮ ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನೇ ತಾರೀಕಿನಂದು ‘ರಾಷ್ಟ್ರೀಯ ವೈದ್ಯರ ದಿನ’ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರದ ಅತ್ಯಂತ ಹೆಮ್ಮೆಯ ವೈದ್ಯರೂ, ಪಶ್ಚಿಮ ಬಂಗಾಳದ ೨ನೇ ಮುಖ್ಯಮಂತ್ರಿಗಳೂ ಆಗಿದ್ದ ಡಾ.ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ ಜುಲೈ ಒಂದು. ಶ್ರೀಯುತರು ವೈದ್ಯಕೀಯ ಲೋಕಕ್ಕೆ ನೀಡಿದ ಅಮೂಲ್ಯ ಸೇವೆಗೆ ಈ ಗೌರವ. ನಿಜವಾಗಿ ನೋಡಿದರೆ ಪ್ರತಿದಿನವೂ *ವೈದ್ಯರ ದಿನವೇ.*
ವೈದ್ಯರು ದೇವರ ಅವತಾರವೇ ಎಂಬ ಮಾತಿದೆ. 'ವೈದ್ಯೋ ನಾರಾಯಣೋಹರಿಃ' ಅಕ್ಷರಶಃ ಸತ್ಯ. ರೋಗಿಗಳು, ರೋಗಿಯ ಕುಟುಂಬದವರು ಭಗವಂತನನ್ನು ವೈದ್ಯರಲ್ಲಿ ಕಾಣುತ್ತಾರೆ. ಮತ್ತೆ ‘ನಂಬಿಕೆ’ ಎಂಬ ಮೂರಕ್ಷರದ ಪದವನ್ನು ವೈದ್ಯರ ವಿಷಯವಾಗಿ ನಂಬುತ್ತಾರೆ, ವಿಶ್ವಾಸ ವಿಡುತ್ತಾರೆ.
ನಮಗೆ ತಿಳಿದಿರುವ ಹಾಗೆ ಕಳೆದ ವರ್ಷ 2020 ಮಾರ್ಚ್ ತಿಂಗಳಿನಿಂದ ಕೊರೋನಾ ಎಂಬ ಮಹಾಮಾರಿಯ ಧಾಳಿಗೆ ನಾವೆಲ್ಲರೂ ಸಿಲುಕಿ ನಲುಗುತ್ತಿದ್ದೇವೆ. ನಮ್ಮ ವೈದ್ಯರುಗಳು ಪ್ರಾಣವನ್ನೇ ಪಣಕ್ಕಿಟ್ಟು, ಅನ್ನ, ನೀರು, ವೈಯಕ್ತಿಕ ಕೆಲಸ ಬಿಟ್ಟು, ಅತ್ಯಂತ ಕಷ್ಟದ ಸಂದರ್ಭವನ್ನು ನಿಭಾಯಿಸುತ್ತಾ ಸತತ ಹೋರಾಟ ದಿನದ 24 ಗಂಟೆಯೂ ಮಾಡುತ್ತಿದ್ದಾರೆ. ಅವರೊಂದಿಗೆ ದಾದಿಯರು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸಹ ಹಗಲಿರುಳು ಸಹಕರಿಸುತ್ತಿದ್ದಾರೆ. ಈಗ ಪ್ರಸಕ್ತ ಸವಾಲಿನ ಕೆಲಸವಾಗಿದೆ ವೈದ್ಯರದು. ಹಳ್ಳಿಯಲ್ಲಿ ಒಂದು ಮಾತಿದೆ 'ಕೊಬಳಿನಲ್ಲಿ ಇಟ್ಟ ತೆಂಗಿನಕಾಯಿಯಂತೆ' ಎಂದು . ಆಚೆಯೂ ಈಚೆಯೂ ಎಷ್ಟು ಹೊತ್ತಿಗೆ ಬೇಕಾದರೂ ಉರುಳಬಹುದು. ಅಂಥ ಸಂದಿಗ್ಧ ಸ್ಥಿತಿ ಡಾಕ್ಟರ್ ಗಳದ್ದಾಗಿದೆ.
ಈ ಸೋಂಕು ನಿವಾರಿಸುವಲ್ಲಿ ರೋಗಿಯೊಂದಿಗೆ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ನಮ್ಮ ಬದುಕಿನ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ಗಟ್ಟಿಯಾಗಿ ಉಸಿರಾಡಲು ವೈದ್ಯರಿಗೆ ಆಗ್ತಾ ಇಲ್ಲ. ಆರೋಗ್ಯ ತುರ್ತು ಪರಿಸ್ಥಿಯ ಈ ಕಾಲಘಟ್ಟದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಿರುವ ಎಲ್ಲಾ ವೈದ್ಯ ವೃಂದದವರಿಗೂ ಒಂದು ಸಲಾಂ. ಒಂದನೇ ಅಲೆಯಲ್ಲಿ ಸಿಲುಕಿ, ತಲೆಯೆತ್ತುವಾಗ ಎರಡನೇಅಲೆ, ಮೂರನೇ ಅಲೆಯ ಗುಮ್ಮ ಎಂದರೆ ಹೈರಾಣ ಆಗುವವರು ನಮ್ಮೊಂದಿಗೆ ಡಾಕ್ಟರ್ ಗಳು.
ಮೂಲಸೌಕರ್ಯಗಳ ಕೊರತೆ ಉಂಟಾದಾಗ ವೈದ್ಯರಾದರೂ ಏನು ಮಾಡಲು ಸಾಧ್ಯ? ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ವೈದ್ಯರು ಎಷ್ಟೋ ಮಂದಿ ಇದ್ದಾರೆ. ನೈಜ ಸ್ಥಿತಿ ಬೇರೆಯೇ ಆಗಿರುತ್ತದೆ. ಗರ್ಭಿಣಿ ಯರನ್ನು, ಮಕ್ಕಳನ್ನು, ಮಹಿಳೆಯರನ್ನು, ವೃದ್ಧರನ್ನು, ಇತರ ರೋಗಗಳಿಂದ ಬಳಲುತ್ತಿರುವವರನ್ನು ಅಪರಿಮಿತ ಶ್ರಮವಹಿಸಿ ಕಾಳಜಿಯಿಂದ ನೋಡಿದ ಎಲ್ಲಾ ವೈದ್ಯರನ್ನು ನಾವು ನೆನೆಯಲೇ ಬೇಕು.
ರೋಗಿ ಉಳಿದಾಗ ಎಲ್ಲರಿಗೂ ಸಂತಸ. ಅಳಿದಾಗ ಬೇಸರ. ಮೊದಲು ಕೋಪ ಬರುವುದು ಡಾಕ್ಟರ್ ಮೇಲೆ. ಮೆಚ್ಚುಗೆ ಕೊಟ್ಟವರೇ ತುಚ್ಛೀಕರಿಸುವುದನ್ನು ಮಾಡಲು ಹಿಂಜರಿಯುವುದಿಲ್ಲ. ಏನಾದರೂ ಹಿಗ್ಗದೆ ಕುಗ್ಗದೆ ಸ್ಥಿತಪ್ರಜ್ಞನಾಗಿ ತನ್ನ ಕರ್ತವ್ಯ ಪ್ರಜ್ಞೆಯಿಂದ ದುಡಿಯುವ ವೈದ್ಯರು ಶ್ಲಾಘನೀಯರು. ದೈವೀ ಶಕ್ತಿಯ ಪ್ರತಿಪಾದಕರಂತೆ ಆಗ ನಮಗೆ ಗೋಚರಿಸುವ ಏಕೈಕ ವ್ಯಕ್ತಿ ವೈದ್ಯರು. ಈ ಒಂದು ದಿನ ನಾವು ಅವರನ್ನು ನೆನೆದರೆ ಸಾಲದು.
ನಮ್ಮ ಪೈಕಿ ವೈದ್ಯಕೀಯ ಸೇವೆಯಲ್ಲಿ ತುಂಬಾ ಜನರಿದ್ದಾರೆ. ಇಡೀ ದಿನ ನೀರು ಸಹ ಕುಡಿಯದೆ ಇರುವುದೆಂದರೆ ಅಯ್ಯೋ ಕರುಳೇ ಹಿಂಡಿದ ಹಾಗಾಯಿತು ಹೇಳುವುದು ಕೇಳಿ. ವಿರಾಮ ಎಂಬುವುದು ವೈದ್ಯರಿಗೆ ಕನಸಿನ ಮಾತು. ಅಂದಿನ ಡಾ.ಬಿ.ಸಿ.ರಾಯ್ ಅಂಥವರು ಇಂದು ಸಾವಿರಾರು ಮಂದಿ ನಮ್ಮೆಲ್ಲರ ನಡುವೆ ಇದ್ದಾರೆ.
ಅಲ್ಲಲ್ಲಿ ವೈದ್ಯರು ಅಕಾಲ ಮರಣಕ್ಕೆ ತುತ್ತಾಗಿದ್ದಾರೆ. ತಮ್ಮ ಕುಟುಂಬ ಸದಸ್ಯರ ನೋಡದೆ ,ಇರುವವರೂ ಇದ್ದಾರೆ.
ಈ ತುರ್ತು ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ದುಡಿಯುವ ಇವರನ್ನು ಯೋಧರು ಎಂದರೂ ತಪ್ಪಾಗಲಾರದು. 'ನಮ್ಮನ್ನು ಕಾಪಾಡಿದ, ಕಾಪಾಡುತ್ತಿರುವ ಈ ಎರಡು ಕೈಗಳಿಗೆ, ನಮ್ಮ ಕೈಯೆತ್ತಿ ನಮನ ಸಲ್ಲಿಸಿ ಕೃತಜ್ಞರಾಗೋಣ' ವೈದ್ಯರಲ್ಲಿ ದೇವರನ್ನು ಕಾಣೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ